ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ಮೂರ್ತಿ ಪ್ರತಿಷ್ಠಾಪನೆ ಪೂರ್ಣ

ಅಮೃತಶಿಲಾಮಯ ಮಂದಿರದ ಗೋಪುರಕ್ಕೆ ಕಳಸಾರೋಹಣ
Last Updated 12 ಫೆಬ್ರುವರಿ 2017, 8:33 IST
ಅಕ್ಷರ ಗಾತ್ರ

ದಾವಣಗೆರೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರತಿಷ್ಠಾಪನೆಗೊಂಡ ಶಿರಡಿ ಸಾಯಿಬಾಬಾ ಅಮೃತಶಿಲಾ ಮೂರ್ತಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆ ರಸ್ತೆಯಲ್ಲಿ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್‌ ನಿರ್ಮಿಸಿರುವ ಅಮೃತಶಿಲಾ ಮಂದಿರದಲ್ಲಿ ಸಂಪ್ರದಾಯದಂತೆ ಸಾಯಿ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ಕೆ ವಿಜೃಂಭಣೆಯ ತೆರೆ ಎಳೆಯಲಾಯಿತು.

ಇದಕ್ಕೂ ಮುನ್ನ ಮಂಗಳವಾದ್ಯ ಹಾಗೂ ಭಕ್ತರ ಹರ್ಷೋದ್ಗಾರದೊಂದಿಗೆ ದೇಗುಲದ ಗೋಪುರಕ್ಕೆ ಕಳಸಾರೋಹಣ ಕಾರ್ಯವನ್ನು ಪೂರ್ಣಗೊಳಿಸಲಾಯಿತು.

ಬಂಗಾರಮಕ್ಕಿ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಾರುತಿ ಗುರೂಜಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸೇವೆಯಿಂದ ಹಣಕ್ಕೆ ಮೌಲ್ಯ:  ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಬಹಳಷ್ಟು ಜನರಲ್ಲಿ ಹಣವಿರುತ್ತದೆ. ಆದರೆ, ಅದನ್ನು ಸೇವೆಗೆ ಬಳಸುವವರು ಕಡಿಮೆ. ಸೇವೆಯ ಉದ್ದೇಶಕ್ಕೆ ಬಳಸಿದರೆ ಮಾತ್ರ ಸಂಪಾದಿಸಿ ಕೂಡಿಟ್ಟ ಹಣಕ್ಕೆ ಮೌಲ್ಯ ದೊರಕುತ್ತದೆ ಎಂದು ಹೇಳಿದರು.

ಇಲ್ಲಿ ಸಾಯಿ ಮಂದಿರ ನಿರ್ಮಿಸುತ್ತಿರುವುದು ಹಾಗೂ ಸಮುದಾಯ ಭವನವನ್ನೂ ಕಟ್ಟುತ್ತಿರುವುದು ಈ ಭಾಗದ ಭಕ್ತರಿಗೆ ಮತ್ತು ನಾಗರಿಕರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಮಳೆ ಇಲ್ಲದೇ ಜಲಾಶಯಗಳು ಬರಿದಾಗಿವೆ. ಬೆಳೆ ಇಲ್ಲದಾಗಿದೆ. ಹೀಗಾಗಿ ದೇವರ ಸೇವೆ ಮಾಡುವ ಮೂಲಕ ಮಳೆ, ಬೆಳೆ ಕರುಣಿಸುವಂತೆ ಪ್ರಾರ್ಥಿಸೋಣ ಎಂದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ‘ದುಡ್ಡು, ದುಡ್ಡು... ಎಂದು ಜೀವನದಲ್ಲಿ ಹಣದ ಹಿಂದೆ ಓಡುವುದಕ್ಕಿಂತ ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕು. ಇದರಿಂದ ದೇವರು ಇನ್ನಷ್ಟು ಒಳ್ಳೆಯದನ್ನು ಕರುಣಿಸುತ್ತಾನೆ’ ಎಂದರು.

ಮಾಜಿ ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ದಾವಣಗೆರೆ ಮೂಲದ ಸಾಯಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಂಜು ನಾಥ ಆಚಾರ್ಯ ಅವರು 30 ವರ್ಷ ಗಳಿಂದ ಮುಂಬೈನಲ್ಲಿ ನೆಲೆಸಿದ್ದರೂ ತಮ್ಮ ಊರಿನಲ್ಲಿ ಸಾಯಿಮಂದಿರ, ಸಮು ದಾಯ ಭವನ ನಿರ್ಮಿಸುತ್ತಿರುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ಭಾರತ ಧರ್ಮದ ತಳಹದಿಯಲ್ಲಿ ನಿಂತಿರುವ ದೇಶ. ಇಲ್ಲಿ ನಂಬಿಕೆಯೇ ಶಕ್ತಿ. ದೇವ ರನ್ನು ಕಂಡವರಿಲ್ಲ. ಆದರೂ ಜನ ದೇವ ರನ್ನು ನಂಬುತ್ತಾರೆ. ಅವರವರ ಧರ್ಮಕ್ಕೆ ತಕ್ಕಂತೆ ದೇವರನ್ನು ಆರಾದಿಸುತ್ತಾರೆ. ಮನಸ್ಸಿಗೆ ನೆಮ್ಮದಿ, ಆತ್ಮಸ್ಥೈರ್ಯ ತುಂಬುವ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸುವುದು ಒಳ್ಳೆಯ ಕೆಲಸ ಎಂದರು.

ಸಾಯಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸಾಯಿಮಂದಿರ ನಿರ್ಮಾಣಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ ಆಚಾರ್ಯ, ಭಾಗ್ಯಮ್ಮ, ಮೇಯರ್‌ ರೇಖಾ ನಾಗರಾಜ್, ಪಾಲಿಕೆ ಸದಸ್ಯ ಗುರುರಾಜ್, ಮಾಜಿ ಮೇಯರ್ ಉಮಾ ಪ್ರಕಾಶ್, ಚಿತ್ರನಟ ಟೆನಿಸ್‌ ಕೃಷ್ಣ, ಆರ್.ಎಸ್.ಶೇಖರಪ್ಪ, ನಾಗಭೂಷಣ್, ಬಸವರಾಜ್ ಪೂಜಾರ್, ಎ.ನಾಗರಾಜ್, ಡಿ.ಕೆ.ರಮೇಶ್, ಕಲ್ಲಪ್ಪ ಜಂಬಿಗಿ, ಸಾಲಿಂಗಯ್ಯ, ಹುಲ್ಲುಮನಿ ಗಣೇಶ್, ಮಹದೇವಪ್ಪ ಮತ್ತಿತರರು ಇದ್ದರು. ಪತ್ರಕರ್ತ ಮಲ್ಲಿಕಾರ್ಜುನ ಕಬ್ಬೂರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT