ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣದ ನಿರೀಕ್ಷೆ

ನಾಯಕನಹಟ್ಟಿ ಹಳೆ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ: ಪ್ರಯಾಣಿಕರ ಪರದಾಟ
Last Updated 12 ಫೆಬ್ರುವರಿ 2017, 10:00 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಇಲ್ಲದಿರುವುದರಿಂದ ನಿತ್ಯ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಪಟ್ಟಣದ ಘನತೆಗೆ ಕುಂದು ಉಂಟಾಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಿಪ್ಪೇರುದ್ರಸ್ವಾಮಿ ದೇವಾಲಯದಿಂದ ಪ್ರಸಿದ್ಧವಾಗಿರುವ ಪಟ್ಟಣವು, ಕುದಾಪುರದ ಬಳಿ ನಿರ್ಮಾಣವಾಗುತ್ತಿರುವ ವಿಜ್ಞಾನ ಸಂಸ್ಥೆಗಳು, ನೂತನ ಪಟ್ಟಣಪಂಚಾಯ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಒಂದು ವರ್ಷದಿಂದ ವೇಗವಾಗಿ ಬೆಳೆಯುತ್ತಿದೆ.

ಪಟ್ಟಣವು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಆದರೆ, ಪಟ್ಟಣದಲ್ಲಿ ವ್ಯವಸ್ಥಿತ ಬಸ್‌ ನಿಲ್ದಾಣವಿಲ್ಲದಿರುವುದು ಕಪ್ಪುಚುಕ್ಕೆಯಂತಾಗಿದೆ ಎನ್ನುತ್ತಾರೆ ನಾಗರಿಕರು.

ಕೊಳಕು ತುಂಬಿದ ಬಸ್ ನಿಲ್ದಾಣ: ಪಟ್ಟಣದ ಚಿಕ್ಕಕೆರೆ ಪಕ್ಕ 20 ವರ್ಷಗಳ ಹಿಂದೆ ಭೂಸೇನಾ ನಿಗಮ ನಿರ್ಮಾಣ ಮಾಡಿರುವ ಬಸ್‌ ನಿಲ್ದಾಣವು ಇಂದು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ.

‘ನಿಲ್ದಾಣದಲ್ಲಿ ಯಾವಾಗಲೂ ಕಸದ ರಾಶಿ ತುಂಬಿರುತ್ತದೆ. ನಿರ್ವಹಣೆಯ ಕೊರತೆಯಿಂದ ಬೀಡಾಡಿ ದನಗಳ, ಬೀದಿನಾಯಿಗಳ, ಹಂದಿಗಳ ವಾಸಸ್ಥಾನವಾಗಿದೆ. ಇದರಿಂದ ಸಾರ್ವಜನಿಕರು ರಸ್ತೆಯ ಬದಿಯಲ್ಲೇ ನಿಂತು ಬಸ್‌ಗಳಿಗೆ ಕಾಯಬೇಕಾಗಿದೆ’ ಎಂದು ಕಾಂಗ್ರೆಸ್‌ ಯುವ ಮುಖಂಡ ಪಿ.ಬಿ.ತಿಪ್ಪೇಸ್ವಾಮಿ, ಕರವೇ ಹೋಬಳಿ ಘಟಕ ಅಧ್ಯಕ್ಷ ಕಾಟಯ್ಯ ಹೇಳುತ್ತಾರೆ.

ಜನಪ್ರತಿನಿಧಿಗಳ ಮೌನ: ‘ಹಲವು ಕಾರಣಗಳಿಂದ ಮುಖ್ಯಕೇಂದ್ರ ಪಟ್ಟಣದಲ್ಲಿ ಉತ್ತಮ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು ಆಸಕ್ತಿ ತೋರಿಸದಿರುವುದು ಬೇಸರ ತರಿಸಿದೆ’ ಎಂದು ನಿವೃತ್ತ ಶಿಕ್ಷಕರಾದ ಪ.ಮ.ಗುರುಲಿಂಗಯ್ಯ, ಬಿ.ಎಂ. ತಿಪ್ಪೇಸ್ವಾಮಿ ಹೇಳುತ್ತಾರೆ.
– ವಿ.ಧನಂಜಯ

ಸಾರ್ವಜನಿಕ ಶೌಚಾಲಯವಿಲ್ಲ

ಪಟ್ಟಣದಲ್ಲಿ ಎಲ್ಲೂ ಸಾರ್ವಜನಿಕ ಶೌಚಾಲಯವಿಲ್ಲ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಹಳೆಯ ಬಸ್‌ನಿಲ್ದಾಣದಲ್ಲಿರುವ ಶೌಚಾಲಯ ಹಲವು ವರ್ಷಗಳಿಂದ ದುರಸ್ತಿಯಾಗಿಲ್ಲ. ಹಾಗಾಗಿ ಪಟ್ಟಣದಲ್ಲಿ ವ್ಯವಸ್ಥಿತ ಬಸ್‌ನಿಲ್ದಾಣ ಹಾಗೂ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಬೇಕು’ ಎಂಬುದು ಪಟ್ಟಣದ ನಾಗರಿಕರ ಆಗ್ರಹವಾಗಿದೆ.

‘ಮನವಿ ಬಂದಿಲ್ಲ’

‘ನಾಯಕನಹಟ್ಟಿ ಪಟ್ಟಣದಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಮನವಿ ಬಂದಿಲ್ಲ. ನಿಗಮದಿಂದ ಮಂಜೂರಾತಿ ಸಿಕ್ಕಿದರೆ ಬಸ್‌ ನಿಲ್ದಾಣ ಸ್ಥಾಪಿಸಲಾಗುವುದು’ ಎಂದು ದಾವಣಗೆರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಕೆ.ಎಚ್.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟಣಕ್ಕೆ ನೂತನ ಬಸ್‌ ನಿಲ್ದಾಣದ ವ್ಯವಸ್ಥೆ ಕಲ್ಪಿಸಲು ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ನೀಡಬೇಕು.
ಜೆ.ಆರ್.ರವಿಕುಮಾರ್, ಪ.ಪಂ. ಸದಸ್ಯ

ಪಟ್ಟಣದಲ್ಲಿ ಬಸ್‌ನಿಲ್ದಾಣಕ್ಕೆ ಸ್ಥಳವಿಲ್ಲ. ಶೀಘ್ರವಾಗಿ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಸರ್ಕಾರಿ ಬಸ್‌ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.
ಎಸ್.ತಿಪ್ಪೇಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT