ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿ.ಜಿ ವುಮೆನ್ಸ್‌’ ಕಾಲೇಜಿಗೆ ಸುವರ್ಣ ಸಂಭ್ರಮ

ಹೈ.ಕ ಮಹಿಳೆಯರ ಆಶಾಕಿರಣವಾಗಿ ಬೆಳೆದ ಕಲಬುರ್ಗಿಯ ವಿ.ಜಿ ಮಹಾವಿದ್ಯಾಲಯ
Last Updated 12 ಫೆಬ್ರುವರಿ 2017, 10:34 IST
ಅಕ್ಷರ ಗಾತ್ರ

ಕಲಬುರ್ಗಿ:  ಯಾವುದೇ ಸಾರ್ವಜನಿಕ ಕ್ಷೇತ್ರವನ್ನು ಮಹಿಳೆಯರು ಇಲ್ಲದೆ ಮುನ್ನಡೆಸಲು ಸಾಧ್ಯವಿಲ್ಲ. ಮಹಿಳೆಯ­ರನ್ನು ನಾನಾ ನೆಪವೊಡ್ಡಿ ಹಿಂದೆ ಸರಿಸಲಾಗಿದೆ. ಆದರೆ, ಮಹಿಳೆ ದುರ್ಬಲ­ಳಲ್ಲ. ಕರ್ನಾಟಕದ ಬೇರೆ ಪ್ರಾಂತ್ಯಗಳು ಸ್ವಾತಂತ್ರ್ಯಪೂರ್ವ­ದಲ್ಲಿಯೇ ಸ್ತ್ರೀಯರ ಶಿಕ್ಷಣಕ್ಕೆ ಒಡ್ಡಿಕೊಂ­ಡವು. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಔಪಚಾರಿಕ ಶಿಕ್ಷಣ ದೂರದ ಮಾತಾಗಿತ್ತು. ಈ ಕೂಗಿಗೆ ದನಿಯಾಗಿದ್ದೆ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು.

ಈ ಭಾಗದಲ್ಲಿ ಪುರುಷರೇ ಶಿಕ್ಷಣ ಪಡೆಯಲು ದುಸ್ತರವಾಗಿದ್ದ ಕಾಲವೊಂ­ದಿತ್ತು. ಇನ್ನು ಸ್ತ್ರೀ ಶಿಕ್ಷಣವಂತೂ ಕಲ್ಪಿಸಿಕೊಳ್ಳಲು ಸಾಧ್ಯವೆ ಇರಲಿಲ್ಲ. ಇಂಥ ಸಂದಿಗ್ಧತೆಯಲ್ಲಿ ‘ವಿ.ಜಿ ವುಮೆನ್ಸ್‌’ ಕಾಲೇಜಿಗೆ ಸುವರ್ಣ ಸಂಭ್ರಮಕಲಬುರ್ಗಿಯಲ್ಲಿ ಹೈದರಾ ಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು.

ಇಲ್ಲಿ ಬಾಲಕಿಯರಿಗಾಗಿ ಕೆಲವು  ಶಾಲೆಗಳಿದ್ದದವು. ಅವು ಪ್ರಾಥಮಿಕ ಹಂತಕ್ಕೆ ಸೀಮಿತವಾಗಿ ದ್ದವು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾ­ಗಿದ್ದ ಮಹಾದೇವಪ್ಪ ರಾಂಪುರೆ ಮತ್ತು ಅಂದಿನ ಆಡಳಿತ ಮಂಡಳಿ ಸದಸ್ಯರು ಮಹಿಳೆಯರಿಗಾಗಿ 1965ರಲ್ಲಿ ನಗರ ದಲ್ಲಿ ಗಂಗಸಿರಿ ಮನೆತನದ ವೀರಮ್ಮ ಅವರ ಹೆಸರಲ್ಲಿ ಪ್ರಥಮ ಮಹಿಳಾ ಮಹಾವಿದ್ಯಾಲಯ ತೆರೆದರು.

35 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಈ ಕಾಲೇಜಿನಲ್ಲಿ ಈಗ ಎರಡು ಸಾವಿರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕಲಾ ಮತ್ತು ಗೃಹವಿಜ್ಞಾನ ವಿಭಾಗದಿಂದ ಪ್ರಾರಂಭ­ವಾಗಿದ್ದು ಈಗ ವಿಜ್ಞಾನ, ವಾಣಿಜ್ಯ ಪದವಿ ವಿಭಾಗಗಳನ್ನು ತೆರೆಯಲಾಗಿದೆ. ರಸಾಯನವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಹ ಇದೆ.

ಕಲೆಯಲ್ಲಿ 12, ವಿಜ್ಞಾನದಲ್ಲಿ 10, ವಾಣಿಜ್ಯದಲ್ಲಿ 2 ವಿಭಾಗಗಳಿವೆ. ಕ್ರಿಯಾಶೀಲ ಎನ್.ಸಿ.ಸಿ, ಎನ್.ಎಸ್.ಎಸ್ ಘಟಕಗಳ ಮಾತ್ರವ­ಲ್ಲದೆ ಸಾಮಾಜಿಕ ಹೊಣೆಗಾರಿಕೆಗಾಗಿ ವಿದ್ಯಾರ್ಥಿನಿಯರ ವೇದಿಕೆ, ಕಲಿಕೆಯೊಂದಿಗೆ ಗಳಿಕೆ ಗುಂಪು, ಕರಾಟೆ ಗುಂಪು, ಮಹಿಳಾ ಆಪ್ತಸಮಾಲೋ­ಚನಾ ಕೇಂದ್ರ, ಹತ್ತು–ಹಲವು ಚಟುವಟಿಕೆಗಳು ಇಲ್ಲಿ ನಿತ್ಯ, ನಿರಂತರ.

ಕಾಲೇಜು ಈವರೆಗೂ ವಿವಿಧ ವಿಷಯಗಳಲ್ಲಿ ನಡೆಸಿದ ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ, ಸಮಾವೇಶಗಳಿಗೆ ಲೆಕ್ಕವೆ ಇಲ್ಲ. 80-90ರ ದಶಕದಲ್ಲಿಯೇ ‘ಮಿಸ್ ಗುಲ್ಬರ್ಗಾ‘ ಸ್ಪರ್ಧೆ ಆಯೋಜಿದ್ದು ಸಂಚಲನ ಉಂಟು ಮಾಡಿತ್ತು. ಅರ್ಧ ಶತಮಾನದ ದಾರಿ ಕ್ರಮಿಸಿರುವ ಮಹಾವಿದ್ಯಾಲಯ ‘ಸುವರ್ಣಸಿರಿ‘ಯ ಸಂಭ್ರಮದಲ್ಲಿ ಮುಂದೆ ಸಾಗುತ್ತಿದೆ.

ವೀರಮ್ಮ ಗಂಗಸಿರಿ ಕಾಲೇಜು ‘ವಿ.ಜಿ ವುಮೆನ್ಸ್‌’ ಕಾಲೇಜು ಎಂದೇ ಜನಜನಿತ. ಈ ಅಕ್ಷರ ದೇಗುಲವು ಪ್ರಗತಿಪರತೆಗೆ ಒಂದು ಸಂಕೇತವಾಗಿ ನಿಂತಿದೆ. ಮೊಘಲಾಯಿ ಮಹಿಳೆಯರು ಎಂದರೆ ಹಿಂದುಳಿದವರು ಎಂದು ಉಪೇಕ್ಷೆಗೆ ಒಳಗಾಗಿದ್ದ ಆ ಕಾಲದಲ್ಲಿಯೇ ಇಲ್ಲಿ ಕಲಿತವರು ರಾಜ್ಯ, ರಾಷ್ಟ್ರ ಮಟ್ಟದ ಸಾಂಸ್ಕೃತಿಕ ವಿದ್ಯಮಾನಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.  ಅಕಾಡೆಮಿಕ ವಿಷಯದಲ್ಲಿ ಈವರೆಗೆ 115ಕ್ಕೂ ಹೆಚ್ಚು ರ್‍ಯಾಂಕ್‌ಗ ಳನ್ನು ಪಡೆದು ದಾಖಲೆ ನಿರ್ಮಿಸಿದೆ.

ಪ್ರತಿವರ್ಷವೂ ಕ್ರೀಡೆಯಲ್ಲಿ ವಿಶ್ವವಿದ್ಯಾಲಯಗಳ ಸ್ಟಾರ್‌ಗಳಾಗಿ ಈವರೆಗೂ 200ಕ್ಕೂ ಹೆಚ್ಚು ಹುಡುಗಿಯರು ವಿಕ್ರಮ ಸಾಧಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದವರು ದೇಶ, ವಿದೇಶಗಳಲ್ಲಿ ಹರಡಿಕೊಂಡಿದ್ದಾರೆ. ವೈದ್ಯರು, ಎಂಜಿನಿಯರ್, ಶಿಕ್ಷಕರು, ಉಪನ್ಯಾಸಕರು, ವಿಜ್ಞಾನಿಗಳು, ತಂತ್ರಜ್ಞರು, ವಸ್ತ್ರವಿನ್ಯಾಸಕಿಯರು, ಆಡಳಿತಗಾರರು, ರಾಜಕಾರಣಿಗಳು, ಗಗನಸಖಿಯರು, ಕ್ರೀಡಾಪಟುಗಳು, ವಕೀಲರು, ಸಿನಿಮಾ ನಟರು, ಶಿಕ್ಷಣ ತಜ್ಞರೂ ಆಗಿದ್ದಾರೆ.

ಈ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿನಿಧಿಸದ ಕಾರ್ಯಕ್ಷೇತ್ರವೇ ಇಲ್ಲ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಪ್ರಥಮ ಮತ್ತು ಉತ್ತರ ಕರ್ನಾಟಕದಲ್ಲಿ ದ್ವಿತೀಯ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಇದಕ್ಕಿದೆ. ಈ ಭಾಗದ ಶೈಕ್ಷಣಿಕ ರಂಗದ ಚರಿತ್ರೆಯಲ್ಲಿ ವಿ.ಜಿ. ಮಹಿಳಾ ಕಾಲೇಜಿನದು ಅಳಿಸಲಾಗದ ಹೆಜ್ಜೆಯ ಗುರುತು.
–ಡಾ.ಮೀನಾಕ್ಷಿ ಬಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT