ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಪ್ರಾಧ್ಯಾಪಕನ ಮನೆಅಂಗಳ ಸಸ್ಯಕಾಶಿ

ಹಳ್ಳಿಖೇಡ(ಬಿ): ಸಾಹಿತಿ ಎಸ್‌.ಎಸ್‌.ಹೊಡ್ಮನಿ ಅವರ ಹಸಿರು ಪರಿಸರ ಕಾಳಜಿ
Last Updated 12 ಫೆಬ್ರುವರಿ 2017, 10:51 IST
ಅಕ್ಷರ ಗಾತ್ರ

ಹುಮನಾಬಾದ್: ಹಳ್ಳಿಖೇಡ(ಬಿ) ಗ್ರಾಮದ ನಿವೃತ್ತ ಪ್ರಾಧ್ಯಾಪಕ ಸುರೇಂದ್ರ ಸಂಗಪ್ಪ ಹೊಡ್ಮನಿ ಅವರು ತಮ್ಮ ಮನೆ ಅಂಗಳವನ್ನೇ ವಿವಿಧ ಹೂವು, ಹಣ್ಣು, ಔಷಧಿ ಗಿಡಗಳ ತೋಟವನ್ನಾಗಿಸಿದ್ದಾರೆ.

90X120 ಅಳತೆ ನಿವೇಶನದಲ್ಲಿ ಮನೆ ಕಟ್ಟಿದ್ದು ಕೇವಲ 30X40ಅಳತೆಯಲ್ಲಿ ಮಾತ್ರ. ಉಳಿದ 60X80ಅಳತೆ ನಿವೇಶನ ಸಂಪೂರ್ಣ ತೋಟಗಾರಿಕೆಗೆ ಮೀಸಲಿಟ್ಟಿದ್ದಾರೆ. ಇದರಲ್ಲಿ ತರಕಾರಿ, ಹೂ, ವಿವಿಧ ಹಣ್ಣು, ಮನೆ ಅಂದ ಹೆಚ್ಚಿಸುವ  ಗಿಡಗಳನ್ನು ನೋಡಿದರೆ ಸಸ್ಯ ಸಂಗ್ರಹಾಲಯದ ಅನುಭವ ನೀಡುತ್ತದೆ.  

101ಕ್ಕೂ ಅಧಿಕ ತಳಿ:  ಮಲ್ಲಿಗೆ, ನಾಗಮಲ್ಲಿಗೆ, ಮೈಸೂರು ಮಲ್ಲಿಗೆ, ಸಣ್ಣ ಮಲ್ಲಿಗೆ, ಸದಾ ಮಲ್ಲಿಗೆ, ಜಾಜಿ ಮಲ್ಲಿಗೆ, ದಾಸವಾಳ, ಕನಕಾಂಬರ, ಬ್ರಹ್ಮಕಮಲ, ಕೃಷ್ಣ ಕಮಲ, ಸಂಪಿಗೆ, ಕಾಕಡಾ ಹೀಗೆ ಒಂದೇ ಎರಡೇ.... ಹೇಳುತ್ತ ಹೋದರೇ ವಿವಿಧ ಜಾತಿ ಹೂವಿನ ಗಿಡಗಳ ಹೆಸರಿನ ಸಾಲು ಬೆಳೆಯುತ್ತದೆ. ಹೀಗೆ ಬೆಳೆದ ಗಿಡಗಳು ಸುವಾಸನೆ , ಆಕರ್ಷಣೆ ಹೆಚ್ಚಿಸಿವೆ.

ತರಕಾರಿಗಳಲ್ಲಿ ಹೀರೇಕಾಯಿ, ತುಪ್ಪದ ಹೀರೇಕಾಯಿ, ಹಾಗಲಕಾಯಿ, ಶಾವಿ ಪಲ್ಲೆ, ಪುದಿನಾ, ನೆಲ್ಲಿಕಾಯಿ, ನುಗ್ಗೆಕಾಯಿ , ನಿಂಬೆ ಒಳಗೊಂಡಂತೆ ನಿತ್ಯ ಬಳಕೆಗೆ ಬೇಕಾಗುವ ವಿವಿಧ ತರಕಾರಿಗಳು.  ಹಣ್ಣಿಗಳಲ್ಲಿ ಅಂಜೂರ,  ಪೇರಲ(ಜಾಪಳ). ಸಪೊಟಾ, ದಾಳಿಂಬೆ, ಮಾವು, ತೆಂಗು, ಸೀತಾಫಲ ಇತ್ಯಾದಿ.

ಔಷಧಿ ಸಸ್ಯಗಳಾದ ಅಂಬೃತ ಬಳ್ಳಿ, ಕರಿಬೇವು, ಹೆಬ್ಬೇವು, ಔಡಲ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಪ್ರವಾಸಕ್ಕೆ ಹೋದಾಗ ಕಾಣುವ ಹೊಸ ಗಿಡಗಳನ್ನು ತಂದು ಮನೆಯಲ್ಲಿ ನೆಡುವುದು ಇವರ ಹವ್ಯಾಸ. 

ಸಾಹಿತ್ಯ ಕೃಷಿ: ಪರಿಸರದಷ್ಟೇ ಸಾಹಿತ್ಯ ಕೃಷಿಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿರುವ ಹೊಡ್ಮನಿ ತಮ್ಮ ಇಳಿವಯಸ್ಸಲ್ಲೂ ಪ್ರೀತಿ, ಪ್ರೇಮ ವಿಷಯ ಅತ್ಯಂತ ಅರ್ಥಪೂರ್ಣ ವಿಶ್ಲೇಷಿಸುತ್ತಾರೆ.

ಮನೆಯಲ್ಲೇ ತಾವೇ ಅತ್ಯಂತ ಪ್ರೇಮದಿಂದ ಬೆಳೆಸಲಾದ ಕೈತೋಟದಲ್ಲಿನ ಹೂವಿನ ಸೌಂದರ್ಯಕ್ಕೆ ಮಾರು ಹೋದ ಅವರ ತಮ್ಮ ಚೊಚ್ಚಿಲ ಕೃತಿ ‘ಪ್ರೇಮದ ಹೂಗಳು’.  ‘ಪ್ರೇಮದ ಗುಚ್ಛಗಳು’ ಕವನ ಸಂಕಲನ 2015ರಲ್ಲಿ ಬಿಡುಗಡೆಯಾಗಿವೆ. ಸಾಹಿತ್ಯ ಕೃಷಿಗೆ ಪ್ರೌಢಶಾಲೆ ಶಿಕ್ಷಕಿಯಾದ ಪತ್ನಿ ಸೂರ್ಯಕಲಾ ಸದಾ ಬೆನ್ನೆಲುಬಾಗಿದ್ದಾರೆ.

ಹೊಡ್ಮನಿ ಅವರೇ ಹೇಳುವಂತೆ ಕೆ.ಎಸ್‌.ನರಸಿಂಹಸ್ವಾಮಿ ಅವರ ಕವಿತೆಗಳು ತಮ್ಮ  ಪ್ರೇಮಕಾವ್ಯ ರಚನೆಗೆ ಪ್ರೇರಣೆ ಎನ್ನುವುದನ್ನು ಮರೆಯುವುದಿಲ್ಲ. ಅವರ ‘ಪ್ರೇಮಿಗಳು ಸೇರಿದಾಗ’ ಹೊಸ ಕಾದಂಬರಿ ಪ್ರಕಟಣೆಗೆ ಸಿದ್ಧವಾಗಿದೆ.

ಭಾಷಣಕಾರರೂ ಆಗಿರುವ ಹೊಡ್ಮನಿ ಉತ್ತಮ ಹಾಡುಗಾರರೂ ಹೌದು. ಹೊಡ್ಮನಿ ದಂಪತಿಗಳ ಪರಿಸರ ಹಾಗೂ ಸಾಹಿತ್ಯ ಕೃಷಿ  ಸರ್ವರಿಗೂ ಮಾದರಿ. 
–ಶಶಿಕಾಂತ ಭಗೋಜಿ

ಪ್ರಕೃತಿ ವಿಕೋಪದಂತಹ ಪ್ರಕರಣಗಳು ಸಂಭವಿಸುತ್ತಿರುವ ಈ ಸಂದಭರ್ದಲ್ಲಿ ಪ್ರತಿಯೊಬ್ಬರೂ  ತಮ್ಮ  ಮನೆ ಮುಂದೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು.

ಎಸ್‌.ಎಸ್‌.ಹೊಡ್ಮನಿ, ನಿವೃತ್ತ ಪ್ರಾಧ್ಯಾಪಕ, ಹಳ್ಳಿಖೇಡ(ಬಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT