ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯದ ಭವ್ಯ ಮೆರವಣಿಗೆ, ಆಕರ್ಷಕ ಜನಪದ ವೇಷ

Last Updated 12 ಫೆಬ್ರುವರಿ 2017, 10:56 IST
ಅಕ್ಷರ ಗಾತ್ರ

ಬೀದರ್: ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆದ ‘ವಚನ ವಿಜಯೋತ್ಸವ’`ದ ನಿಮಿತ್ತ ಶನಿವಾರ ನಗರದಲ್ಲಿ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಿತು.

ಸೊಲ್ಲಾಪುರದ ನಂದಿಕೋಲು, ಹೊಸೂರಿನ ಝಾಂಜ್‌ಮೇಳ, ಮಂಡ್ಯದ ಪೂಜಾ ಕುಣಿತ–ತಮಟೆ ತಂಡ, ಬರೂರಿನ ಚಿಟಕಿ ಭಜನೆ–ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ, ಸ್ಥಳೀಯ ಕೋಲಾಟ, ವಿದ್ಯಾರ್ಥಿನಿಯರ ಲೇಜಿಮ್‌, ಭಜನಾ ತಂಡಗಳು, ವಚನ ಉಡುಪು, ಛತ್ರಚಾಮರ, ಕೇಸರಿ ಧ್ವಜ, ಗೊಂಬೆಗಳು, ವೀರಗಾಸೆ, ಮರಗಾಲು ಕುಣಿತ  ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಮೆರವಣಿಗೆಯಲ್ಲಿ ವಚನ ಸಾಹಿತ್ಯ, ವಿವಿಧೆಡೆಯಿಂದ ಬಂದಿದ್ದ ಬಸವ ಜ್ಯೋತಿ ತಂಡಗಳು, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತ ನೂರಾರು ಶರಣ, ಶರಣೆಯರು ಭಕ್ತಿ ಭಕ್ತಿಭಾವ ಮೆರೆದರು. ಡಾಲ್ಬಿಗಳಲ್ಲಿ ಮೂಡಿ ಬರುತ್ತಿದ್ದ ‘ಅಂಗದ ಮೇಲೆ ಲಿಂಗವ ಕೊಟ್ಟ.....’, ‘ವಿಜಯೋತ್ಸವ, ವಚನ ವಿಜಯೋತ್ಸವ....’  ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದರೆ, ಯುವಕರು ಕುಣಿದು ಕುಪ್ಪಳಿಸಿದರು.

ಕುದುರೆ ಮೇಲೆ ಕುಳಿತಿದ್ದ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ ಹಾಗೂ ಶರಣರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಹಾಗೂ ವೃದ್ಧರೂ ಸಹ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಹಿಳಾ ಕೋಲಾಟದ ಗುಂಪು ಹಾಗೂ ಭಜನಾ ತಂಡಗಳು ಸಮವಸ್ತ್ರ ಮಾದರಿಯಲ್ಲಿ ಒಂದೇ ಬಗೆಯ ವಸ್ತ್ರಗಳನ್ನು ಧರಿಸಿದ್ದರು. ಮೆರವಣಿಗೆ ಮಾರ್ಗದಲ್ಲಿ ಕಮಾನುಗಳನ್ನು ನಿರ್ಮಿಸಲಾಗಿತ್ತು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆಯಾಸ ನೀಗಿಸಿಕೊಳ್ಳಲು ವೃದ್ಧರು ಹಾಗೂ ಮಹಿಳೆಯರಿಗೆ ಬಾಳು ಹಣ್ಣು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT