ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಕ್ಕೆ ಸಿಗದ ಹೆಚ್ಚಿನ ಸೌಲಭ್ಯ

ವಾಲ್ಮೀಕಿ ನಾಯಕ ವಕೀಲರ ರಾಜ್ಯಮಟ್ಟದ 3ನೇ ವಾರ್ಷಿಕ ಸಮ್ಮೇಳನದಲ್ಲಿ ಆರೋಪ
Last Updated 12 ಫೆಬ್ರುವರಿ 2017, 11:18 IST
ಅಕ್ಷರ ಗಾತ್ರ

ರಾಯಚೂರು:  ಸರ್ಕಾರದ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ದಿಂದ ವಾಲ್ಮೀಕಿ ನಾಯಕ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸಂಸದ ಬಿ.ವಿ.ನಾಯಕ ಆರೋಪಿಸಿದರು.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ವಕೀಲರ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ವಕೀಲರ ರಾಜ್ಯ ಮಟ್ಟದ ಮೂರನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಅನೇಕ ಯೋಜನೆಗಳಿವೆ. ಆದರೆ, ಅಧಿಕಾರಿಗಳ ಅಸಡ್ಡೆಯಿಂದಾಗಿ ಅವು ನಿರರ್ಥಕವಾಗುತ್ತಿವೆ ಎಂದು ದೂರಿದರು.

ಸಮುದಾಯದವನ್ನು ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಜಾಗೃತಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ವಕೀಲರು ವೃತ್ತಿಯ ಸಮಸ್ಯೆಗಳ ಜೊತೆಗೆ ಸಮುದಾಯದ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಬೇಕು ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಎನ್‌.ಎಸ್‌.ಬೋಸರಾಜು ಮಾತನಾಡಿ, ಪ್ರಭಾವಶಾಲಿಯಾದ ವಕೀಲರ ಸಮುದಾಯವು ಶೋಷಣೆಗೆ ಒಳಗಾದ ಜನರ ಪರವಾಗಿ ಹೋರಾಟ ಮಾಡುವುದರ ಜೊತೆಗೆ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದರು.

ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಳ ಮಾಡುವುದಕ್ಕಾಗಿ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು. ಮುಂದಿನ ಬಜೆಟ್‌ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವಕೀಲರ ವೇದಿಕೆಯು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಸತೀಶ ಜಾರಕಿಹೊಳಿ ಅವರು ತಿದ್ದುಪಡಿಗಳನ್ನು ಒಳಗೊಂಡ ಸಿಆರ್‌ ಪಿಸಿ ಪುಸ್ತಕವನ್ನು ಬಿಡುಗಡೆ ಮಾಡಿದರು. ವಾಲ್ಮೀಕಿ ನಾಯಕ ವಕೀಲರ ವೇದಿಕೆ ಅಧ್ಯಕ್ಷ ಕೆ.ಎಚ್‌. ಮಲ್ಲೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಸುಪ್ರೀಂಕೋರ್ಟ್‌ ವಕೀಲ ರಾಜಾ ವೆಂಕಟಪ್ಪ ನಾಯಕ, ಪ್ರೊ.ಹವಾಲ್ದಾರ ಅವರು ವಿಷಯ ಮಂಡಿಸಿದರು.

ವೇದಿಕೆಯಲ್ಲಿ ವಾಲ್ಮೀಕಿ ನಾಯಕ ವಕೀಲರ ವೇದಿಕೆ ಪದಾಧಿಕಾರಿಗಳಾದ ಬಿ.ಶಿವಪ್ಪ, ಎಚ್‌.ದೇವೇಂದ್ರಪ್ಪ, ಶಾಸಕ ರಾದ ಬಸವರಾಜ ಪಾಟೀಲ ಇಟಗಿ, ಡಾ.ಎಸ್‌.ಶಿವರಾಜ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

* ವಕೀಲರು ತಮ್ಮ ಸಮಸ್ಯೆಗಳಿಗೆ ಸೀಮಿತರಾಗದೆ ಸಮಾಜ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ದೊರಕಿಸಿಕೊಡಲು ಶ್ರಮಿಸಬೇಕು
ಡಾ. ಎಸ್.ಶಿವರಾಜ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT