ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಕಲಿಕೆಗಾಗಿ ಸಾಹಸ ಪ್ರದರ್ಶನ

ಹೊಳೆ ಆಲೂರು ಅಂಗವಿಕಲ ಮಕ್ಕಳ ಮೈನವಿರೇಳಿಸುವ ಸಾಹಸಕ್ಕೆ ಮನಸೋತ ಜನ
Last Updated 12 ಫೆಬ್ರುವರಿ 2017, 12:45 IST
ಅಕ್ಷರ ಗಾತ್ರ

ಕಾರಟಗಿ: ಅಂಗವಿಕಲತೆ ಇದ್ದರೂ ಮಕ್ಕಳು ಪಟಪಟನೇ ಸಾಹಸ ಪ್ರದರ್ಶನಕ್ಕೆ ಸಿದ್ಧರಾಗುತ್ತಾರೆ. ಮಲ್ಲಗಂಬ ಕ್ರೀಡೆಗೆ ಸಜ್ಜಾಗಿ ನಾನಾ ಮಾದರಿಯ, ನೋಡಲು ಇಟ್ಟು, ಕೂಡಿಸಿದ್ದಾರೆಂಬ ಭಂಗಿಯಲ್ಲಿ ಕ್ಷಣಾರ್ಧದಲ್ಲೇ ಇರುತ್ತಾರೆ. ಮಕ್ಕಳ ಸಾಹಸ ಪ್ರದರ್ಶನವನ್ನು ಜನರು ಅಚ್ಚರಿ, ಕುತೂಲಹದಿಂದ ವೀಕ್ಷಿಸುತ್ತಾರೆ. ಎಲ್ಲಾ ಅಂಗಗಳಿದ್ದವರೂ ಮಾಡದ ಭಾರಿ ಸಾಹಸವನ್ನು ಅಂಗವಿಕಲ ಮಕ್ಕಳು ಮಾಡುತ್ತಾರೆ.

ಸಮೀಪದ ಬಸವಣ್ಣಕ್ಯಾಂಪ್‌ನಲ್ಲಿ ಉಣ್ಣಿ ಬಸವೇಶ್ವರ ದೇವಾಲಯ ಸಮಿತಿಯಿಂದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಉತ್ಸವದ ನಿಮಿತ್ತ ಈಚೆಗೆ ನಡೆದ ನಾನಾ ಕಾರ್ಯಕ್ರಮದಲ್ಲಿ ಮಲ್ಲಗಂಬದ ವಿಶಿಷ್ಟ ಪ್ರದರ್ಶನವೂ ನಡೆಯಿತು.

ಗದಗ ಜಿಲ್ಲೆಯ ರೋಣ ತಾಲ್ಲೂಕು ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಸಹಿತ ಪ್ರಾಥಮಿಕ ಶಾಲೆಯ 47 ಮಕ್ಕಳಲ್ಲಿ ಅನೇಕರು ವಿಶಿಷ್ಟ, ಸಾಹಸದ ಪ್ರದರ್ಶನ ನಡೆಸಿ, ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದರು. ಮಕ್ಕಳು ಇದೊಂದೇ ಅಲ್ಲ, ಯೋಗ, ಸಂಗೀತ, ನೃತ್ಯ ಮೊದಲಾದವುಗಳಲ್ಲಿ ಪಳಗಿದ್ದಾರೆ.

‘ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಅಂಗವಿಕಲ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಅವರವರ ಆಸಕ್ತಿಗೆ ತಕ್ಕಂತೆ ತರಬೇತಿ ನೀಡಲಾಗುತ್ತದೆ. ಅವರು ಪ್ರಬುದ್ಧಾವಸ್ಥೆಗೆ ಬಂದಿದ್ದು ಖಚಿತವಾಗುತ್ತಿದ್ದಂತೆಯೇ ಸಾರ್ವಜನಿಕವಾಗಿ ವಿವಿಧ ಪ್ರದರ್ಶನದಲ್ಲಿ ತೊಡಗಿಸಲಾಗುತ್ತದೆ.

ಶಾಲೆಗೆ ಸರ್ಕಾರದ ಅನುಮತಿ ದೊರೆತಿದೆಯೇ ಹೊರತು ಅನುದಾನವಿಲ್ಲ. ಶಾಲೆಯ ಮಕ್ಕಳ ಸಾಹಸ ಪ್ರದರ್ಶನದಿಂದ ಸಂಗ್ರಹಗೊಂಡ ಹಣದಲ್ಲೇ ಶಾಲೆ ನಡೆಸುತ್ತಿದ್ದೇವೆ’ ಎಂದು ಜ್ಞಾನಸಿಂಧು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕೆಲೂರು ತಿಳಿಸುತ್ತಾರೆ.

‘ಶಾಲೆಯಲ್ಲಿ ಅಕ್ಷರಭ್ಯಾಸದ ಜೊತೆಗೆ ನಮಗೆ ಆಸಕ್ತಿ ಇರುವ ರಂಗದಲ್ಲೂ ಪಳಗಿಸಿ, ವಿವಿಧೆಡೆ ಪ್ರದರ್ಶನ ನೀಡಿಸುತ್ತಾರೆ. ಶಾಲೆಯಲ್ಲಿ ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಾರೆ’ ಎಂದು ವಿದ್ಯಾರ್ಥಿಗಳಾದ ಮಣಿಕಂಠ, ಹನುಮಂತ ಹೇಳಿದರು.

ಮಕ್ಕಳ ಸಾಹಸ ಪ್ರದರ್ಶನಕ್ಕೆ ಅನೇಕ ಪ್ರಶಸ್ತಿಗಳು ಬಂದಿವೆ. 2012ರಲ್ಲಿ ರಾಜ್ಯ, ರಾಷ್ಟ್ರಮಟ್ಟದ ಯೋಗ ಸ್ಫರ್ಧೆಯಲ್ಲಿ ಅಂಗಗಳಿದ್ದವರೊಂದಿಗೆ ಸ್ಫರ್ಧಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. 2011ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್‌ ನೀಡುವ ರಾಷ್ಟ್ರೀಯ ಪ್ರಶಸ್ತಿ, 2010ರಲ್ಲಿ ಯೋಗಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಸ್ಫರ್ಧೆಗಳಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಮಕ್ಕಳು ಯಶಸ್ವಿಯಾಗಿದ್ದಾರೆ.

‘ಅಂಗವಿಕಲರು ಬೇಡುತ್ತಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮಾದರಿಯ ಕಾರ್ಯಕ್ಕೆ ಸಮಾಜದ ಎಲ್ಲಾ ವರ್ಗದಿಂದಲೂ ಮಾನವೀಯತೆಯ ನೆರವು ದೊರೆಯುವ ಅವಶ್ಯಕತೆ ಇದೆ. ಸರ್ಕಾರವೂ ಪ್ರೋತ್ಸಾಹ ನೀಡಬೇಕು’ ಎಂಬುದು ಸಾರ್ವಜನಿಕರ ಒತ್ತಾಯ.
–ಕೆ.ಮಲ್ಲಿಕಾರ್ಜುನ

* ಅಂಗವಿಕಲ ಮಕ್ಕಳಿಗೆ ಸಹಾಯವಾಗಲೆಂದು ಪ್ರತಿ ವರ್ಷ ಅವರನ್ನು ಕರೆಸಲಾಗುವುದು.  ಕ್ಯಾಂಪ್‌ನ ಜನರು ಬೇಕಾದ ನೆರವು ನೀಡುತ್ತಾರೆ.

ಎನ್. ಮೋಹನರಾವ್, ಉದ್ಯಮಿ, ಬಸವಣ್ಣಕ್ಯಾಂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT