ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ರೈತ

ಮಸಬಹಂಚಿನಾಳ: ಪ್ರತಿದಿನಕ್ಕೆ ₹2,100 ಆದಾಯ ಗಳಿಸುವ ಸುಧೀಂದ್ರ ದೇಸಾಯಿ
Last Updated 12 ಫೆಬ್ರುವರಿ 2017, 12:55 IST
ಅಕ್ಷರ ಗಾತ್ರ

ಕುಕನೂರು: ಮನುಷ್ಯ ಪರಿಶ್ರಮದ ಮೂಲಕ ತನ್ನ ಭಾಗ್ಯವನ್ನು ಬದಲಿಸಿಕೊಳ್ಳಬಲ್ಲ ಎಂಬ ಮಾತಿಗೆ ತಕ್ಕಂತೆ ಪರಿಶ್ರಮದಿಂದ ದುಡಿದು ಒಂದು ಹಸುವಿನಿಂದ 15 ಹಸುಗಳನ್ನು ಸಾಕಿರುವ ಸಮೀಪದ ಮಸಬಹಂಚಿನಾಳ ಗ್ರಾಮದ ಯುವಕ ಸುಧೀಂದ್ರ ರಾಘವೇಂದ್ರರಾವ್‌ ದೇಸಾಯಿ ಉತ್ತಮ ನಿದರ್ಶನ.

‘ಗ್ರಾಮದ ಮುಖಂಡ ಹಾಲಪ್ಪ ಆಚಾರ ಎಂಬುವರು ಹೈನುಗಾರಿಕೆಗೆ ಉತ್ತೇಜನ ನೀಡಿ ಬ್ಯಾಂಕ್‌ನಿಂದ ₹5 ಲಕ್ಷ ಸಾಲ ಕೊಡಿಸಿದರು. ಇದರಿಂದ ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಸುಧೀಂದ್ರ.

12ನೇ ವಯಸ್ಸಿನಲ್ಲಿದ್ದಾಗಲೇ ಹೈನುಗಾರಿಕೆ ಮೇಲೆ ಆಸಕ್ತಿ ಉಂಟಾಗಿತ್ತು. ಅದರ ಫಲವಾಗಿ ಈಗ ಯುವ ಕೃಷಿಕರಾಗಿ ಹೈನುಗಾರಿಕೆಯಿಂದ ಸತತ ಲಾಭ ಗಳಿಸುತ್ತಿದ್ದಾರೆ. 15 ಹಸುಗಳಿಂದ ಪ್ರತಿನಿತ್ಯ ಸರಾಸರಿ 100 ಲೀಟರ್ ಹಾಲು ಮಾರಾಟ ಮಾಡುತ್ತಾರೆ.

‘ಲೀಟರ್‌ ಹಾಲಿಗೆ ₹29ರಂತೆ ದೊಡ್ಲ ಹಾಲು ಕಂಪೆನಿಗೆ ಕೊಡುತ್ತೇನೆ. ಖರ್ಚು ತೆಗೆದು ಪ್ರತಿದಿನ ₹2,100 ಆದಾಯ ಬರುತ್ತದೆ’ ಎಂದು ಸಂತದಿಂದ ತಿಳಿಸುತ್ತಾರೆ ಅವರು.

ಇದರ ಜೊತೆಗೆ ಕರುಗಳನ್ನು ಉತ್ತಮವಾಗಿ ಬೆಳೆಸಿ ಪ್ರತಿವರ್ಷ 3ರಿಂದ 4 ಹಸು ಮಾರಾಟ ಮಾಡುತ್ತಾರೆ. ಇದರಿಂದ ₹70ರಿಂದ ₹80 ಸಾವಿರ ಆದಾಯ ಗಳಿಸುತ್ತಾರೆ. ಅಷ್ಟೇ ಅಲ್ಲದೆ, ಗೋಮೂತ್ರವನ್ನು ಹೊಂಡದಲ್ಲಿ ಮಿಶ್ರಣ ಮಾಡಿ, ಪೈಪ್‌ ಮೂಲಕ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹರಿಸುತ್ತಾರೆ. ಇದರಿಂದ ಸಹಜವಾಗಿಯೇ ಸಮೃದ್ಧ ಫಸಲು ಪಡೆಯುತ್ತಿದ್ದಾರೆ. ಹಸುವಿನಂದ ಸುಮಾರು 10 ಲೋಡ್‌ನಷ್ಟು ಗೊಬ್ಬರ ಕೂಡ ದೊರೆಯುತ್ತದೆ. ಇದನ್ನು ತಮ್ಮ ತೋಟಕ್ಕೆ ಮಾತ್ರವಲ್ಲದೇ ಮಾರಾಟ ಮಾಡಿಯೂ ಲಾಭ ಗಳಿಸುತ್ತಿದ್ದಾರೆ.

ಪ್ರೀತಿಯ ಆರೈಕೆ: ಜೀವನಕ್ಕೆ ಆಧಾರವಾಗುವ ಹಸುಗಳಿಗೆ ಪ್ರೀತಿಯ ಆರೈಕೆ ಹಾಗೂ ಕೊಟ್ಟಿಗೆಯ ಸ್ವಚ್ಛತೆಯೇ ಮುಖ್ಯವೆಂದು ಅರಿತಿರುವ ದೇಸಾಯಿ, ಸಗಣಿ ತೆಗೆದು ಹಸುಗಳಿಗೆ ಸ್ನಾನ ಮಾಡಿಸುವುದೂ ಇವರ ಕಾರ್ಯವೇ.

ತಮ್ಮ ಹೊಲದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ ಹುಲ್ಲನ್ನು ಬೆಳೆಸಿದ್ದಾರೆ. ಈ ಹುಲ್ಲಿನ ಹೊಲವನ್ನು 4 ವಿಭಾಗ ಮಾಡಿ 3 ತಿಂಗಳಿಗೆ ಒಂದು ಭಾಗದಲ್ಲಿ ನಾಟಿ ಮಾಡುತ್ತಾರೆ. ಇದರಿಂದ ಒಂದು ಕಡೆ ಕಟಾವು ಆಗುತ್ತಿದ್ದಂತೆ ಇನ್ನೊಂದು ಕಡೆ ಹುಲ್ಲು ಬೆಳೆಯುತ್ತದೆ. ಇದರಿಂದ ವರ್ಷವಿಡೀ ಕಡಿಮೆ ವೆಚ್ಚದಲ್ಲಿ ಮೇವಿಗೆ ಹಸಿರು ಹುಲ್ಲು ಲಭ್ಯವಾಗುತ್ತದೆ.

ಹಾಲು ಕರೆಯುವ ಯಂತ್ರ, ಮೇವಿನ ಹುಲ್ಲು ಕತ್ತರಿಸಿ ಪುಡಿಮಾಡುವ ಯಂತ್ರ, ಜನರೇಟರ್ ಇತ್ಯಾದಿ ಆಧುನಿಕ ವ್ಯವಸ್ಥೆಗಳನ್ನು ಬಳಸುವ ಇವರು ಪ್ರತಿ ಹಂತದಲ್ಲೂ ಅಚ್ಚುಕಟ್ಟುತನ ರೂಢಿಸಿಕೊಂಡಿದ್ದಾರೆ.

* ‘ಜಾನುವಾರುಗಳಿಗೆ ಬರುವ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಕೊಡಿಸುವುದು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗರುಕತೆಯಿಂದ ಇರಬೇಕು’ ಎನ್ನುವುದು ದೇಸಾಯಿ ಅವರ ಸಲಹೆ.
–ಮಂಜುನಾಥ ಎಸ್‌.ಅಂಗಡಿ

* ನಾಲ್ಕು ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಿದ್ದೇನೆ. ಇದರಿಂದ ಕುಟಂಬದಲ್ಲಿ ನೆಮ್ಮದಿ ನೆಲೆಸಿದೆ. ಅಲ್ಲದೆ, ಆರ್ಥಿಕ ತೊಂದರೆ ನೀಗಿದೆ.
ಸುಧೀಂದ್ರ ದೇಸಾಯಿ,  ರೈತ

ಆಹಾರ ಕ್ರಮ ಅಗತ್ಯ: ಸಲಹೆ

‘ಸಾಮಾನ್ಯವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ಹೆಚ್ಚಿನ ರೈತರು, ಹೆಚ್ಚು ಹೆಚ್ಚು ಆಹಾರ ನೀಡಿದರೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಎಂಬ ನಂಬಿಕೆ ಇರುತ್ತದೆ. ಆದರೆ, ಈ ರೀತಿಯ ವಿಧಾನವನ್ನು ಅಳವಡಿಸಿಕೊಂಡರೆ ಹಸುವಿಗೆ ಅಜೀರ್ಣವಾಗಿ ಆರೋಗ್ಯ ಹದಗೆಟ್ಟು ಹೈನುಗಾರಿಕೆ ಮಾಡುವವರು ನಷ್ಟ ಅನುಭವಿಸಬೇಕಾಗುತ್ತದೆ’ ಎನ್ನುವುದು ಸುಧೀಂದ್ರ ಅನುಭವದ ನುಡಿ.

‘ಆದ್ದರಿಂದ ದಿನಕ್ಕೆ 25–30 ಕೆ.ಜಿ ಹಸಿರು ಹುಲ್ಲು, 8 ಕೆ.ಜಿ ಬೈಪಾಸ್ ಪ್ರೊಟೀನ್, 2 ಕೆ.ಜಿ ಒಣ ಹುಲ್ಲು ಹಾಕಬೇಕು. ಸಾಕಷ್ಟು ನೀರು ಕೊಡಬೇಕು. ಗಾಳಿ, ಬೆಳಕು ಇರುವ ಕಡೆ ಹಸುಗಳಿಗೆ ಜಾಗ ಮಾಡುವುದು ಮುಖ್ಯ. ಹಸುಗಳನ್ನು ಒಂದೇ ಕಡೆ ಕಟ್ಟಿ ಹಾಕಿ ಸಾಕಬಾರದು. ಕೊಟ್ಟಿಗೆ ಮತ್ತು ಹಸುಗಳ ಸ್ವಚ್ಛತೆಗೆ ಪ್ರಾಮುಖ್ಯ ನೀಡಬೇಕು. ಅವುಗಳು ಆರೋಗ್ಯದಿಂದ ಇದ್ದರಷ್ಟೇ ಚೆನ್ನಾಗಿ ಹಾಲು ಕೊಡುತ್ತವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT