ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮಂಜೂರಾತಿಗೆ ಲಂಚ ಪಡೆದರೆ ಕ್ರಮ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್‍ಎಫ್‌ಸಿಎಸ್‌ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ
Last Updated 12 ಫೆಬ್ರುವರಿ 2017, 13:07 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್‌ನ ಆಧಾರ ಸ್ತಂಭವಾಗಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವಲ್ಲಿ ಲಂಚ ಪಡೆದ ದೂರು ಕೇಳಿಬಂದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸೇವಾ ಸಹಕಾರ ಸಂಘ (ಎಸ್‍ಎಫ್‌ಸಿಎಸ್‌) ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್‌ನ ಮೇಲ್ವಿಚಾರಕಿ ಸುವರ್ಣ ಮುಖಿ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ  ಪರಗೋಡು ಎಸ್‍ಎಫ್‌ಸಿಎಸ್‌ ವ್ಯಾಪ್ತಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಪ್ರತಿ ಸಂಘದಿಂದ ತಲಾ ₹ 2 ಸಾವಿರ ಲಂಚ ಪಡೆದಿದ್ದಾರೆ’ ಎಂದು ಬ್ಯಾಂಕ್‌ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಸಭೆಯಲ್ಲಿ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡ, ಲಂಚ ಪಡೆದ ಆರೋಪ ಎದು ರಿಸುತ್ತಿರುವ ಸುವರ್ಣಮುಖಿ ಅವರನ್ನು ಸೇವೆಯಿಂದ ಕೂಡಲೇ ಅಮಾನತು ಮಾಡಿ. ಜತೆಗೆ ಅವರ ವಿರುದ್ಧ ತನಿಖೆ ನಡೆಸಿ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪಗೆ ಸೂಚಿಸಿ‌ದರು.

ಈ ವೇಳೆ ಸಭೆಯಲ್ಲೇ ಹಾಜರಿದ್ದ ಸುವರ್ಣಮುಖಿ ಅವರನ್ನು ತರಾಟೆಗೆ ತೆಗೆದುಕೊಂಡ ಗೋವಿಂದಗೌಡ, ‘ಮಹಿಳೆಯರು ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿಸುವ ಮೂಲಕ ಬ್ಯಾಂಕ್ ಉಳಿಯಲು ನೆರವಾಗಿದ್ದಾರೆ. ಇಂಥವರಿಂದ ಲಂಚ ಪಡೆದರೆ ನೀವು  ನಾಶವಾಗುತ್ತೀರಿ’ ಎಂದರು.

ಸಾಲ ಮರುಪಾವತಿಯಲ್ಲಿ ಶೇ 100ರಷ್ಟು ಸಾಧನೆಯ ಮೂಲಕ ಬ್ಯಾಂಕ್‌ನ ಹಿರಿಮೆ ಎತ್ತಿ ಹಿಡಿದಿರುವ ಮಹಿಳೆಯರಿಗೆ ಸಾಲ ನೀಡಲು ಲಂಚ ಕೇಳಿದರೆ ಅಂತಹ ನೌಕರರನ್ನು  ಮುಲಾಜಿಲ್ಲದೆ ಅಮಾನತು ಮಾಡು ತ್ತೇವೆ ಎಂದು  ಎಚ್ಚರಿಕೆ ನೀಡಿದರು.

₹10 ಕೋಟಿ: ಬ್ಯಾಂಕ್‌ಗೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದಂತೆ ಎಚ್ಚರ ವಹಿಸಲಾಗಿದೆ. ಈ ವರ್ಷ ಸಹಕಾರ ಸಂಘಗಳಿಂದ ₹ 10 ಕೋಟಿ ಷೇರು ಬಂಡವಾಳ ಸಂಗ್ರಹಿಸಿ ಅಪೆಕ್ಸ್ ಬ್ಯಾಂಕ್‌ಗೆ ಪಾವತಿಸಬೇಕು. ಬ್ಯಾಂಕ್ ವ್ಯಾಪ್ತಿಯಲ್ಲಿ 200 ಸಹಕಾರ ಸಂಘಗಳಿದ್ದು, ಪ್ರತಿ ಸಂಘದಿಂದ ₹1ಲಕ್ಷ ಷೇರು ಹಣವನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಈಗಾಗಲೇ ₹ 400 ಕೋಟಿ ಸಾಲ ವಿತರಿಸಲಾಗಿದೆ. ಇದರ ಶೇ 9ರಷ್ಟು ಷೇರು ಬಂಡವಾಳ ಅಪೆಕ್ಸ್ ಬ್ಯಾಂಕ್‌ನಲ್ಲಿ ಇರಬೇಕು. ಅಂದರೆ ₹ 36 ಕೋಟಿ ಬ್ಯಾಂಕ್‌ನ ಷೇರು ಇರಬೇಕಿದ್ದು, ಈಗ ₹ 21 ಕೋಟಿ ಮಾತ್ರ ಇದೆ. ಹೀಗಾಗಿ ₹ 15 ಕೋಟಿ ಕೊರತೆಯಾಗಿದೆ. ಸಚಿವ ರಮೇಶ್‌ಕುಮಾರ್‌ ಶಿಫಾರಸಿನ ಮೇರೆಗೆ ಸರ್ಕಾರದಿಂದ ಬ್ಯಾಂಕ್‌ಗೆ ₹ 5 ಕೋಟಿ ಬಿಡುಗಡೆಯಾಗಲಿದೆ. ಬ್ಯಾಂಕ್‌ಗೆ ಸುಮಾರು ₹ 3 ಕೋಟಿ ಆದಾಯ ತೆರಿಗೆ ಬಂದಿದ್ದು, ಹೆಚ್ಚಿನ ಹೊರೆ ತಪ್ಪಿದೆ ಎಂದರು.

ಅಪೆಕ್ಸ್‌ ಬ್ಯಾಂಕ್‌ನ ವಾರ್ಷಿಕ ಬಡ್ಡಿ ಶೇ 10ರಷ್ಟಿದೆ. ಬೇರೆ ಬ್ಯಾಂಕ್‌ಗಳಲ್ಲಿ ಶೇ 15 ಬಡ್ಡಿ ಪಡೆಯಲಾಗುತ್ತಿದೆ. ಆದರೆ, ತಮ್ಮ ಬ್ಯಾಂಕ್‌ ಗ್ರಾಹಕರಿಂದ ಶೇ 7.5 ಬಡ್ಡಿ ಪಡೆಯುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ. ಸ್ವಸಹಾಯ ಗುಂಪುಗಳಿಗೆ ವಿತರಿಸುವ ಸಾಲದಲ್ಲಿ ಶೇ 2.5ರಷ್ಟು ತೆರಿಗೆ ಪಾವತಿಸಬೇಕು. ಮಾ.25ರೊಳಗೆ ಷೇರುಗಳನ್ನು ಸಂಗ್ರಹಿಸಿ ಪಾವತಿಸಬೇಕು. ಏಪ್ರಿಲ್ ನಂತರ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬ್ಯಾಂಕ್ ಉಳಿಯ ಬೇಕಾದರೆ ನಿಯಮ ನಿಬಂಧನೆ ಪಾಲಿಸು ವುದು ಅನಿವಾರ್ಯ. ಈ ವರ್ಷ ಬ್ಯಾಂಕ್‌ಗೆ ಲಾಭ ಇಲ್ಲವಾಗಿದೆ.  ಸ್ವಸಹಾ ಯ ಗುಂಪುಗಳಿಗೆ ನೀಡಿರುವ ಸಾಲದ ಬಡ್ಡಿಗೆ ಹಣ ಹೊಂದಿಸಲಾಗಿದೆ ಎಂದರು.

ವಿವಿಧೆಡೆ ಸಭೆ: ಷೇರು ಸಂಗ್ರಹ ಪ್ರಗತಿ ಕುರಿತು ಫೆ.18ರಂದು ಬಾಗೇಪಲ್ಲಿ ಮತ್ತು ಗುಡಿಬಂಡೆ, ಫೆ.19ರಂದು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು, ಫೆ.20ರಂದು ಶಿಡ್ಲಘಟ್ಟ ಮತ್ತು ಚಿಂತಾಮಣಿ, ಫೆ.21ರಂದು ಮುಳಬಾಗಿಲು ಮತ್ತು ಕೆಜಿಎಫ್, ಫೆ.22ಕ್ಕೆ ಬಂಗಾರಪೇಟೆ ಮತ್ತು ಮಾಲೂರು, ಫೆ.23ಕ್ಕೆ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಸಭೆ ನಡೆಸಲಾಗುತ್ತದೆ.

ಈ ಸಭೆಗೆ ಸಂಬಂಧಪಟ್ಟ ತಾಲ್ಲೂಕಿನ ಎಲ್ಲಾ ಸೊಸೈಟಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಾಗಿ ದಾಖಲೆಪತ್ರಗಳೊಂದಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಬ್ಯಾಂಕ್‌ ನಿರ್ದೇಶಕರಾದ ಶ್ರೀರಾಮರೆಡ್ಡಿ, ಸೋಮಣ್ಣ, ಕೆ.ವಿ.ದಯಾನಂದ್, ಹನುಮೇಗೌಡ, ವೆಂಕಟರಮಣಪ್ಪ, ಹನುಮಂತರೆಡ್ಡಿ, ನರಸಿಂಹರೆಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಂಕಿ ಅಂಶ

₹3ಕೋಟಿ ಆದಾಯ ತೆರಿಗೆ

200 ಸಹಕಾರ ಸಂಘಗಳು

₹15ಕೋಟಿ ಕೊರತೆಯಾಗಿರುವ ಷೇರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT