ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿದು ಬೆಳೆದ ಪ್ರಕೃತಿ ಪೂಜೆ

Last Updated 12 ಫೆಬ್ರುವರಿ 2017, 13:11 IST
ಅಕ್ಷರ ಗಾತ್ರ

ಪೂರ್ವಜರು ಆರಂಭಿಸಿದ ಧಾರ್ಮಿಕ ಆಚರಣೆಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದುಕೊಂಡು ಬರುತ್ತಿವೆ. ಇಂಥ ಆಚರಣೆಗಳಲ್ಲಿ ಪ್ರಮುಖವಾ ದುದು ಮರಗಳ ಪೂಜೆ.

ನಾಗರಿಕತೆ ಆರಂಭದಿಂದಲೂ ಜನರು ನಿಸರ್ಗದ ಆರಾಧಕರಾಗಿದ್ದಾರೆ. ವಿವಿಧ ಬಗೆಯ ಮರಗಳ ಪೂಜೆ ಮನೆಯ ಆಚರಣೆಯಂತೆ ಬೆಳೆದು ಬಂದಿದೆ. ದೈವಿಕ ನಂಬಿಕೆಯಾಗಿ ಮರ, ಗಿಡ, ಬೆಟ್ಟ, ಕಲ್ಲು, ಮಣ್ಣು, ನೀರು ಮೊದ ಲಾದ ಪ್ರಾಕೃತಿಕ ಸಂಪನ್ಮೂಲಗಳನ್ನು ಪೂಜಿಸಲಾಗುತ್ತಿದೆ. ಇದೇ ಪರಿಪಾಠ ಮುಳಬಾಗಿಲು ತಾಲ್ಲೂಕಿನ ಕೊತ್ತ ಮಂಗಲ ಸುತ್ತಮುತ್ತ ಪ್ರಚಲಿತದಲ್ಲಿದೆ.

ಕೊತ್ತಮಂಗಲ ಬಳಿಯ ಮುನೇಶ್ವರಸ್ವಾಮಿ ಆಲದ ಮರವನ್ನು ಸುತ್ತಮುತ್ತಲ ಜನ ದೇವರು ಎಂದು ಪೂಜಿಸುವರು. ಆಲದ ಮರದಂತೆಯೇ ಅಶ್ವತ್ಥ ಕಟ್ಟೆ ಮೇಲಿನ ಅರಳಿ ಮರ, ಮತ್ತಿ ಮರ, ಹೊಂಗೆ ಮರ, ಬೇವು, ಬಿಲ್ವ ಪತ್ರೆ, ಬಿಳಿ ಎಕ್ಕದ ಗಿಡವನ್ನು ಪೂಜಿಸಲಾಗುತ್ತದೆ. ಸರ್ಪ ದೋಷ ನಿವಾರಣೆ, ಮದುವೆ, ಸಂತಾನ ಭಾಗ್ಯದ ಕಾರಣಕ್ಕಾಗಿ ಮರಗಳನ್ನು ಪೂಜಿಸುವ ಪರಿಪಾಠವಿದೆ.

ಪಚ್ಚೆ ಪದ್ಧತಿ: ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಕಾಯಿಲೆಯಾದರೆ ಅವರು ಗುಣಮುಖರಾಗಲೆಂದು ಮುನೇಶ್ವರಸ್ವಾಮಿಗೆ ಪಚ್ಚೆ ಇಡುವ ಪದ್ಧತಿ ಇದೆ. ಪಚ್ಚೆ ಇಡುವುದರಲ್ಲಿ ಎರಡು ವಿಧಗಳಿವೆ. ಹೂ ಪಚ್ಚೆಯಲ್ಲಿ ಹೊಂಗೆ ಮರದ ಕೆಳಗೆ ಹೂ, ಹಣ್ಣು ಇಟ್ಟು ಪೂಜೆ ಮಾಡಿ ಪ್ರಸಾದ ವಿತರಿಸುವುದು ಮತ್ತು ಮುನೇಶ್ವರ ದೇವರಿಗೆ ಕೋಳಿ ಬಲಿ ಕೊಟ್ಟು ಕಾಯಿಲೆ ವಾಸಿಯಾಗಲೆಂದು ಪ್ರಾರ್ಥಿಸುವುದು ಈ ಎರಡು ವಿಧಗಳು.

‘ಮರಗಳ ಆರಾಧನೆಯಿಂದ ಕಾಯಿಲೆಗಳು ವಾಸಿಯಾಗಿ ಒಳ್ಳೆಯದಾಗುತ್ತದೆ ಎಂಬ ಭಾವನೆ ಜನರಲ್ಲಿ ಇದೆ. ಮರದ ಕೆಳಗಿನ ಬುದ್ಧನ ಜೀವಗಾಥೆ ಇಡೀ ಮನುಕುಲಕ್ಕೆ ಪ್ರೇರಣೆ. ಗೌತಮ ಬುದ್ಧನಿಗೆ ಅರಳಿ ಮರದ ಕೆಳಗೆ ಜ್ಞಾನೋದಯವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಮರಗಳು ಧಾರ್ಮಿಕ ಮಹತ್ವ ಪಡೆದುಕೊಂಡಿವೆ’ ಎಂದು ಇತಿಹಾಸ ಪ್ರಾಧ್ಯಾಪಕ ಜಿ.ಶಿವಪ್ಪ ಅರಿವು ಹೇಳುವರು.

ಕಾಗೆ, ಕೊಕ್ಕರೆ, ಹದ್ದು, ಬಾವಲಿ, ಗುಬ್ಬಚ್ಚಿಗಳು ಈ ಆಲದ ಮರದಲ್ಲಿ ಗೂಡು ಕಟ್ಟಿಕೊಂಡಿವೆ. ಕೊತ್ತಮಂಗಲ ಅಕ್ಕಪಕ್ಕದ ಜನರಿಗೆ ಧಾರ್ಮಿಕ ತಾಣವಾಗಿರುವ ಈ ಆಲದ ಮರವು ಪಕ್ಷಿಗಳಿಗೆ ಜೀವ ತಾಣವಾಗಿದೆ.
–ಎಸ್.ಸುಬ್ರಮಣಿ

ಮುನಿದ್ಯಾವರ

ಜನಿಸಿದ ಮಗುವಿಗೆ ಮೂರು ವರ್ಷದ ಆರಂಭದಲ್ಲಿ ಮತ್ತು ಐದು ವರ್ಷದ ಅಂತ್ಯದಲ್ಲಿ ಮುನೇಶ್ವರ ದೇವರ ಹೆಸರಿನಲ್ಲಿ ಆಲದ ಮರದ ಕೆಳಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಕಾರಣಕ್ಕಾಗಿಯೇ ಈ ಮರಕ್ಕೆ ಮುನೇಶ್ವರಸ್ವಾಮಿ ಆಲದ ಮರವೆಂಬ ಹೆಸರು ಬಂದಿದೆ. ಪೂಜೆಗೆ ಸ್ಥಳೀಯರು ಮುನಿದ್ಯಾವರ ಎಂದು ಕರೆಯುತ್ತಾರೆ. 50ಕ್ಕೂ ಹೆಚ್ಚು ಕುಟುಂಬಗಳು ಈ ಮರದ ಬಳಿ ಸಾಮೂಹಿಕ ಪೂಜೆ ಸಲ್ಲಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT