ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕಿಗೆ ಕೊಳ್ಳಿ ಇಡುತ್ತಿರುವ ಸರ್ಕಾರಗಳು

ರಾಷ್ಟ್ರೀಯ ಹೆದ್ದಾರಿ- 75ಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ತಾಲ್ಲೂಕು ಮಟ್ಟದ ಸಮಾವೇಶ
Last Updated 12 ಫೆಬ್ರುವರಿ 2017, 13:20 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೈಗಾರಿಕೆ, ರಸ್ತೆ ಹಾಗೂ ರೈಲ್ವೆ ಅಭಿವೃದ್ಧಿಯ ಸೋಗಿನಲ್ಲಿ ಸುಮಾರು 50 ಸಾವಿರ ಹೆಕ್ಟೇರ್‌ ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅವಣಿಸುತ್ತಿವೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಉಪಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಹೆದ್ದಾರಿ- 75ಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಸರ್ಕಾರಗಳು ರೈತರನ್ನು ನಾಶ ಮಾಡಲು ಹೊರಟಿವೆ. ದೇಶಕ್ಕೆ ಅನ್ನ ಕೊಡುವ ರೈತರು ಸರ್ಕಾರ ಗಳ ದುರಾಡಳಿತದಿಂದ ಸರ್ವ ನಾಶವಾ ಗುತ್ತಾರೆ ಎಂದು ಕಿಡಿ ಕಾರಿದರು.

ಭೂ ತಾಯಿಯನ್ನು ನಂಬಿ ಬೆವರು ಸುರಿಸಿ ಬದುಕು ಸಾಗಿಸುತ್ತಿರುವ ರೈತರ ಜಮೀನುಗಳನ್ನು ಸರ್ಕಾರಗಳು ಅಭಿವೃದ್ಧಿಯ ಸೋಗಿನಲ್ಲಿ ಸ್ವಾಧೀನಪಡಿಸಿಕೊಂಡು ಬಹುರಾಷ್ಟ್ರೀಯ ಕಂಪೆನಿಗಳು, ಬಂಡವಾಳಶಾಹಿಗಳಿಗೆ ಕೊಡುತ್ತಿವೆ. ರೈತರ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಧೋರಣೆ ಒಂದೇ ಆಗಿದೆ. ಈ ಪಕ್ಷಗಳ ನಡುವೆ ವ್ಯತ್ಯಾಸವೇನೂ ಇಲ್ಲ. ಈ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಟೀಕಿಸಿದರು.

ಸರ್ಕಾರಗಳು ಬಂಡವಾಳಶಾಹಿಗಳನ್ನು ಉದ್ಧಾರ ಮಾಡುವ ಆತುರದಲ್ಲಿ ರೈತರ ಬದುಕಿಗೆ ಕೊಳ್ಳಿ ಇಡುತ್ತಿವೆ. ಆಳುವ ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ದೇಶದಲ್ಲಿ ಈವರೆಗೆ ಸುಮಾರು 3.60 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಂಡ ಕಾರಿದರು.

ಜಿಲ್ಲೆಯ ನರಸಾಪುರ, ವೇಮಗಲ್ ಮತ್ತು ಮಾಲೂರು ತಾಲ್ಲೂಕಿನಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಹೆಕ್ಟೇರ್ ಜಮೀನು ವಶಪಡಿಸಿಕೊಳ್ಳಲಾಗುತ್ತಿದೆ. ಅಲ್ಲದೇ, ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್, ರೈಲು ಮಾರ್ಗ ಮತ್ತು ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಗಳಿಗೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅಭಿವೃದ್ಧಿ ವಿರೋಧಿಸುವುದಿಲ್ಲ. ಆದರೆ, ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂದಿಗೂ ಬ್ರಿಟಿಷರ ಕಾಲದ 1894ರ ಕಾಯ್ದೆ ಅನುಸಾರವೇ ಭೂಸ್ವಾಧೀನ ಮಾಡುತ್ತಿವೆ. ರೈತರ ಅನುಮತಿ ಇಲ್ಲದೆ ಇಷ್ಟ ಬಂದಂತೆ ಭೂಪರಿಹಾರ ಕೊಡುವುದು ರೈತ ವಿರೋಧಿ ನೀತಿ. ಇದನ್ನು ಒಪ್ಪುವುದಿಲ್ಲ. 2013ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಅನುಮತಿ ಇಲ್ಲದೆ ಯಾವುದೇ ಜಮೀನನ್ನು ವಶಪಡಿಸಿಕೊಳ್ಳಬಾರದು ಮತ್ತು ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿಗೆ ಭೂಪರಿಹಾರ ಕೊಡಬೇಕೆಂದು ಕಾಯ್ದೆ ರೂಪಿಸಲಾಗಿದೆ. ಆದರೆ, ಅಧಿಕಾರಿಗಳು ಈ ಕಾಯ್ದೆ ಪಾಲಿಸುತ್ತಿಲ್ಲ ಎಂದು ದೂರಿದರು.

ಕೈ ತೊಳೆದುಕೊಂಡಿದೆ: ರಾಷ್ಟ್ರೀಯ ಹೆದ್ದಾರಿ 75ರ ವಿಸ್ತರಣೆಗಾಗಿ ರೈತರಿಂದ ಭೂಮಿ ವಶಪಡಿಸಿಕೊಂಡು 8 ವರ್ಷ ಕಳೆದಿದೆ. ಕೋಲಾರದ ಗಡಿಯಿಂದ ನಂಗಲಿವರೆಗಿನ ರಸ್ತೆ ಅಗಲೀಕರಣಕ್ಕೆ ಸುಮಾರು 1,500 ರೈತರ ಭೂಮಿ ವಶಡಿಸಿಕೊಳ್ಳಲಾಗಿದೆ. ಆರಂಭದಲ್ಲಿ ಪ್ರತಿ ಹೆಕ್ಟೇರ್‌ಗೆ ಸುಮಾರು 4 ಲಕ್ಷ ಭೂಪರಿಹಾರ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉಳಿದ ಪರಿಹಾರದ ಹಣಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಕೊಡುವಂತೆ ಹೇಳಿ ಕೈ ತೊಳೆದುಕೊಂಡಿದೆ ಎಂದು ಹೇಳಿದರು.

ಕಳೆದ 8 ವರ್ಷಗಳಲ್ಲಿ 5 ಜಿಲ್ಲಾಧಿಕಾರಿ ಬದಲಾಗಿದ್ದಾರೆ. ಆದರೆ, ಯಾವ ಜಿಲ್ಲಾಧಿಕಾರಿಯೂ ಭೂಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ. ಈ ಹಿಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಕೆಂದಟ್ಟಿ ಭಾಗದ ಕೆಲ ರೈತರಿಗೆ ಪರಿಹಾರ ಮಂಜೂರು ಮಾಡಿಸಿದ್ದರು. ಆದರೆ, ಈ ಮೊತ್ತ ಒಪ್ಪದ ಪ್ರಾಧಿಕಾರವು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿತ್ತು. ಈಗಿನ ಜಿಲ್ಲಾಧಿಕಾರಿ ಭೂಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಹೆದ್ದಾರಿ ಬಂದ್: ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಭೂಪರಿಹಾರ ಕೊಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ವಿಚಾರದಲ್ಲೂ ರೈತರನ್ನು ಗಣನೆಗೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಧೋರಣೆ ಅನುಸರಿಸಿ ಸಲೀಸಾಗಿ ಭೂಮಿ ಕಬಳಿಸುವ ಸಂಚು ನಡೆಯುತ್ತಿದೆ. ಆದರೆ, ಇದಕ್ಕೆ ಅವಕಾಶ ಕೊಡುವುದಿಲ್ಲ. ಸೂಕ್ತ ಭೂಪರಿಹಾರ ನೀಡದಿದ್ದರೆ ಯೋಜನೆಗೆ ಒಂದಿಂಚೂ ಭೂಮಿ ಕೊಡುವುದಿಲ್ಲ.

ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯಯುತ ಬೇಡಿಕೆಗಳಿಗೆ ಬಗ್ಗದಿದ್ದರೆ ರೈತರೆಲ್ಲಾ ಒಗ್ಗಟ್ಟಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತರಲ್ಲಿ ಒಗ್ಗಟ್ಟು ಇಲ್ಲದಿರುವುದನ್ನು ನೋಡಿ ಸರ್ಕಾರಗಳು ಅನ್ನದಾತರನ್ನು ಇಷ್ಟ ಬಂದಂತೆ ನಡೆಸಿಕೊಳ್ಳುತ್ತಿವೆ. ರೈತರು ಜಾಗೃತರಾಗಬೇಕು ಮತ್ತು ಸಂಘಟಿತರಾಗಬೇಕು. ಸರ್ಕಾರದ ಯಾವುದೇ ಬೆದರಿಕೆಗೆ ಬಗ್ಗಬಾರದು, ರೈತರ ನ್ಯಾಯಯುತ ಹೋರಾಟಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎಂದು ಭರವಸೆ ನೀಡಿದರು.

ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ಕೆಂದಟ್ಟಿ ಗ್ರಾಮದ ಸಂತ್ರಸ್ತ ರೈತ ಬೈರೇಗೌಡ ಸಮಾವೇಶದಲ್ಲಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಭೂಮಿ ಕಳೆದುಕೊಂಡಿರುವ ತಾಲ್ಲೂಕಿನ ಕೊಂಡರಾಜನಹಳ್ಳಿ, ಚೌಡದೇನಹಳ್ಳಿ, ಬೆತ್ತನಿ, ಮಡೇರಹಳ್ಳಿ, ಚುಂಚದೇನಹಳ್ಳಿ, ಅರಾಭಿಕೊತ್ತನೂರು, ಕೆಂದಟ್ಟಿ, ಬೆಳ್ಳೂರು ರಾಮಸಂದ್ರ, ಕುರ್ಕಿ ಭಾಗದ ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT