ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಕ್ಷಕ ಹೊಸದನ್ನೇ ಬಯಸುತ್ತಾನೆ’

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಿಮಾ ಟಿಕೆಟ್‌ ಬೆಲೆ ₹250 ದಾಟಿರುವಾಗ ಪ್ರೇಕ್ಷಕನೂ ಕಾಸಿಗೆ ತಕ್ಕ ಮನರಂಜನೆಯನ್ನೇ ಬೇಡುತ್ತಾನೆ, ಅವನಿಗೆ ಅದೇ ಹಳೇ ರಾಜ ರಾಣಿ ಕತೆಗಳು ಹಿಡಿಸುತ್ತಿಲ್ಲ. ಹೊಸ ಪ್ರೇಕ್ಷಕನಿಗೆ ಟ್ವಿಸ್ಟ್‌ಗಳು ಬೇಕು. ರಾಣಿಗೆ ಒಂದು ಅಫೇರ್‌ ಇದ್ದರೆ...! ಎಂಥ ಟ್ವಿಸ್ಟ್‌ ಅಲ್ಲವೇ...’ –ಹೀಗೆ ಹೊಸ ಪ್ರೇಕ್ಷಕರ ನಾಡಿ ಮಿಡಿತವನ್ನು ಸರಳವಾಗಿ ವಿವರಿಸುತ್ತಾರೆ ಬಾಲಿವುಡ್ ನಟ ಅಕ್ಷಯ್‌ಕುಮಾರ್‌.

ಈ ವಾದಕ್ಕೆ ಅವರು ಉದಾಹರಣೆ ನೀಡುವುದು ಶುಕ್ರವಾರವಷ್ಟೇ ಬಿಡುಗಡೆಯಾಗಿರುವ ತಮ್ಮ ‘ಜಾಲಿ ಎಲ್‌ಎಲ್‌ಬಿ2’ ಚಿತ್ರದ ನಾಯಕಿಯ ಪಾತ್ರವನ್ನು.
‘ಗಂಡ ತನಗೆ ವಿಸ್ಕಿ ಸರ್ವ್ ಮಾಡಬೇಕು ಎಂದು ಚಿತ್ರದ ನಾಯಕಿ ಬಯಸುತ್ತಾಳೆ. ಆತನನ್ನು ಅನ್ಯಾಯದ ಪರ ವಕಾಲತ್ತಿಗೆ ಪ್ರೇರೇಪಿಸುತ್ತಾಳೆ.

ನಾಯಕಿ ಪಾತ್ರವೊಂದರ ಈ ರೀತಿಯ ವರ್ತನೆ ಇಲ್ಲಿಯವರೆಗೆ ನಾವು ನೋಡಿದ ಸಿದ್ಧ ಮಾದರಿಯದ್ದಲ್ಲ. ಆದರೆ ಇದು ಪ್ರೇಕ್ಷಕರಿಗೆ ಹೊಸದಾಗಿ ಕಾಣುತ್ತಿದೆ. ಅವರೂ ಹೊಸದನ್ನೇ ನೋಡಲು ಬಯಸುತ್ತಿದ್ದಾರೆ’ ಎನ್ನುವುದು ಅಕ್ಷಯ್ ನೀಡುವ ವಿವರಣೆ.

28 ವರ್ಷಗಳ ಕಾಲ ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕಿರುವ ಅಕ್ಷಯ್‌ಗೆ ಈ ರೀತಿಯ ವಿಮರ್ಶೆ ಬಹಳ ಸುಲಭ. ಕಾಲಕ್ಕೆ ತಕ್ಕಂತೆ ಸಿನಿಮಾದಲ್ಲಿ ಆದ ಬದಲಾವಣೆಗಳನ್ನು ತಮ್ಮ ಅನುಭವದ ಉದಾಹರಣೆ ಮೂಲಕ ವಿವರಿಸಬಲ್ಲರು ಅವರು.

ಇಂತಿಪ್ಪ ಅಕ್ಷಯ್‌ಗೆ ಸಿನಿಮಾ ಕೇವಲ ಹವ್ಯಾಸವಲ್ಲ. ಅದು ಪಾಠಶಾಲೆಯೂ ಹೌದು. ಹಾಗಾಗಿ ಅವರು ಬಹಳ ಶ್ರದ್ಧೆಯಿಂದ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ. 28 ವರ್ಷಗಳ ಹಿಂದೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಇದ್ದ ಶ್ರದ್ಧೆಯೇ ಇಂದಿಗೂ ಅವರ ಜೊತೆಗೆ ಇದೆ.
ಬಾಲಿವುಡ್‌ನಲ್ಲಿ ನಿರ್ದೇಶಕರ ನಟ ಎನಿಸಿಕೊಂಡಿರುವ ಅಕ್ಷಯ್‌ ನಿರ್ದೇಶಕರ ಅಣತಿ ಮೀರುವುದಿಲ್ಲ. ಇಂತಹುದೇ ಸಹನಟಿ, ಇಂತಹುದೇ ಕೋರಿಯಾಗ್ರಫರ್‌ ಬೇಕೆನ್ನುವ ದಾರ್ಷ್ಟ್ಯ ಅವರದ್ದಲ್ಲ.

ಬಹುಕೋಟಿ ಗಳಿಕೆಯ ಚಿತ್ರಗಳನ್ನೂ ನೀಡಿದರೂ ಬಾಲಿವುಡ್‌ನ ‘ಎ’ ಗ್ರೇಡ್‌ ಹೀರೊಯಿನ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಇಲಿಯಾನ, ತಾಪ್ಸಿ ಪನ್ನು, ಆ್ಯಮಿ ಜಾಕ್ಸನ್‌, ಭೂಮಿ ಫೆಡ್ನೆಕರ್  ಅವರೊಂದಿಗೆ ಯಾವುದೇ ಗೊಣಗಾಟಗಳಿಲ್ಲದೇ ತೆರೆ ಹಂಚಿಕೊಳ್ಳುತ್ತಾರೆ.

‘ಚಿತ್ರದ ನಾವಿಕ ನಿರ್ದೇಶಕನೇ. ಅವನ ಮಾತೇ ಅಂತಿಮ. ನಾನೊಬ್ಬ ನಟ ಮಾತ್ರ. ಇಂಥ ನಟಿಯರೇ ಬೇಕು ಎಂಬ ಹಠ ಎಂದಿಗೂ ನನಗೆ ಇಲ್ಲ’ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ.

51 ವರ್ಷದ ಅಕ್ಷಯ್‌ ತಮ್ಮ ವೃತ್ತಿ ಜೀವನದ ಮೊದಲಲ್ಲಿ ಮಾರ್ಷಲ್‌ ಆರ್ಟ್ಸ್‌, ಸ್ಟಂಟ್ಸ್‌ ಮೂಲಕ ಜನಪ್ರಿಯರಾದರು. ಈಗಲೂ ಲೀಲಾಜಾಲವಾಗಿ ಆ್ಯಕ್ಷನ್‌ ದೃಶ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಇದಕ್ಕೆ ಕಾರಣ ಅವರ ಫಿಟ್‌ನೆಸ್‌.

ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಗೆ ಏಳುವ ಅಕ್ಷಯ್‌ ಸತತ 3 ಗಂಟೆ ವ್ಯಾಯಾಮ ಮಾಡುತ್ತಾರಂತೆ. ಇದಕ್ಕಾಗಿಯೇ ಅವರು ಹಲವು ಬಾಲಿವುಡ್‌ ಸ್ಟಾರ್‌ಗಳ ಪಾರ್ಟಿಗಳನ್ನೂ ಮಿಸ್‌ ಮಾಡಿಕೊಳ್ಳುತ್ತಾರೆ. ಆದರೆ ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳುವುದಿಲ್ಲ.

ಈ ಹಿಂದೆ ಬಿಡುಗಡೆಯಾಗಿದ್ದ ‘ಜಾಲಿ ಎಲ್‌ಎಲ್‌ಬಿ–1’ ಚಿತ್ರದಲ್ಲಿ  ಜಾಲಿ ಪಾತ್ರ ನೀರ್ವಹಿಸಿದ್ದ ಅರ್ಷದ್‌ ವಾರ್ಸಿಯ ಬಗ್ಗೆ ಕೇಳಲಾದ ಪ್ರಶ್ನೆಗೆ  ‘ಅರ್ಷದ್‌ ವಾರ್ಸಿಯ ಬದಲು ನನ್ನನ್ನು ಏಕೆ ಆಯ್ಕೆ ಮಾಡಿದರೆಂದು ತಿಳಿಯುತ್ತಿಲ್ಲ. ಆದರೆ ಅವರು ತಮ್ಮ ನಟನೆಯ ಮೂಲಕ ನನಗೊಂದು ಗುರಿ ನೀಡಿದ್ದಾರೆ ಅದನ್ನು ದಾಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ವಿನಯಪೂರ್ವಕವಾಗಿ ಉತ್ತರಿಸುತ್ತಾರೆ. ಇಂಥ ವಿನಯವಂತಿಕೆಯ ಕಾರಣದಿಂದಲೇ ಅವರಿಗೆ ಬಾಲಿವುಡ್‌ನ ಅಜಾತಶತ್ರು ಎಂಬ ಅಭಿದಾನ ಸಿಕ್ಕಿದೆ.

ತಮ್ಮ ಚಿತ್ರಗಳಿಗೆ ನೀಡುವ ಮಹತ್ವವನ್ನೇ ಅವರು ತಮ್ಮ ಕುಟುಂಬಕ್ಕೂ ನೀಡುತ್ತಾರೆ. ‘ಕುಟುಂಬವೇ ಮೊದಲು. ಅಲ್ಲಿ ನೆಮ್ಮದಿ ಹಾಳಾದರೆ ಇನ್ನೆಲ್ಲೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ’ ಎಂಬುದು ಅಕ್ಷಯ್ ಕಂಡುಕೊಂಡ ಸತ್ಯ. ಕುಟುಂಬಕ್ಕೆ ಸಮಯ ನೀಡಬೇಕೆಂಬ ಕಾರಣದಿಂದಲೇ ಅವರು ದೀರ್ಘ ಶೂಟಿಂಗ್ ಶೆಡ್ಯೂಲ್‌ಗಳನ್ನು ಒಪ್ಪಿಕೊಳ್ಳುವುದಿಲ್ಲವಂತೆ.

ಶುಕ್ರವಾರವಷ್ಟೆ ಬಿಡುಗಡೆಯಾಗಿರುವ ‘ಜಾಲಿ ಎಲ್‌ಎಲ್‌ಬಿ-2’ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಡಿರುವ ಅಕ್ಷಯ್‌ ಉತ್ತಮ ಚಿತ್ರಕ್ಕೆ ಜನರ ಬೆಂಬಲ ಸದಾ ಇದ್ದೇ ಇರುತ್ತದೆ ಎನ್ನುತ್ತಾರೆ.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT