ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲೂ ಆಲ್‌ರೌಂಡರ್

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಶಿಸ್ತಿನ ಸಿಪಾಯಿ ಅಪ್ಪನ ಬಳಿ ಕ್ರಿಕೆಟ್ ತನಗಿಷ್ಟ ಎಂದು ಹೇಳಲು ರವೀಂದ್ರ ಜಡೇಜಾಗೆ ಭಯ. ಅಮ್ಮನ ಬೆನ್ನ ಹಿಂದೆ ಅಡಗಿ, ಅವರ ಬಾಯಿಯಿಂದಲೇ ಅದನ್ನು ಹೇಳಿಸಿದ್ದಾಯಿತು. ಮಧ್ಯಮ ವರ್ಗದ ಕುಟುಂಬ. ಮಗ ಸೇನಾ ಶಾಲೆಯಲ್ಲಿ ಓದಿ, ಸೇನೆಯಲ್ಲೇ ಅಧಿಕಾರಿ ಆಗಲೆಂಬ ಆಸೆ ಅಪ್ಪನಿಗೆ. ಕ್ರಿಕೆಟ್ ಗೀಳಿಗೆ ಬಿದ್ದ ಹುಡುಗನ ಕನಸಿಗೆ ನೀರೆರೆದದ್ದು ಅಮ್ಮ.

ಅಮ್ಮ ನರ್ಸ್ ಆಗಿದ್ದರು. ಮಗನ ಆಟಕ್ಕೆ ಅವರದ್ದು ಸಂಪೂರ್ಣ ಬೆಂಬಲ. ‘ಕೇಳಿದ್ದಕ್ಕೆಲ್ಲ ಹೌದು’ ಎಂದ ಉದಾರಿ. ರವೀಂದ್ರ 17ರ ತರುಣನಾಗಿದ್ದಾಗ ಅವರು ಕೊನೆಯು ಸಿರೆಳೆದರು. ಆಮೇಲೆ ಹಿರಿಯಕ್ಕ ನಯನ, ತಮ್ಮನ ಕನಸಿನ ಗಿಡಕ್ಕೆ ಪೋಷಕಾಂಶ ಒದಗಿಸಿದರು. ಅವರೂ ಅಮ್ಮನಂತೆ ನರ್ಸ್ ಆದರು. ಅವರು ಮಗನ ಪೊರೆದಂತೆಯೇ ಆರೈಕೆ ಮಾಡಿದರು. ಕ್ರಿಕೆಟ್ ಕನಸುಗಳ ನನಸಾಗಿಸುವಲ್ಲಿ ಅವರ ಕಾಣ್ಕೆ ದೊಡ್ಡದು.

ಈಗ ಜಡೇಜ ಕ್ರಿಕೆಟ್ ತಾರೆ. ಟೆಸ್ಟ್ ಸ್ಪಿನ್ ಬೌಲರ್‌ಗಳಲ್ಲಿ ಆರ್. ಅಶ್ವಿನ್ ಜತೆ ದೇಶದ ಅಗ್ರಪಟ್ಟದ ಪೈಪೋಟಿಯಲ್ಲಿರುವ ವರು. ಬಟ್ಟೆ, ಬೂಟುಗಳೆಂದರೆ ಅವರಿಗೆ ಬಲು ಇಷ್ಟ. ಮೊದಲು ಅಕ್ಕ ಆ ಬಯಕೆ ತೀರಿಸುತ್ತಿದ್ದರು. ಈಗ ರವೀಂದ್ರ ಅವರೆಲ್ಲರ ಪಾಲಿಗೂ ಪ್ರೀತಿಯ ‘ಜಡ್ಡು’ ಆಗಿದ್ದಾರೆ.

‘ಜಡ್ಡು’ ಎಂಬ ಅಡ್ಡ ಹೆಸರಿಟ್ಟಿದ್ದು ಮಹೇಂದ್ರ ಸಿಂಗ್ ಧೋನಿ. ಆದರೆ, ಕಾಲೆಳೆಯಲೆಂದು ‘ಸರ್ ರವೀಂದ್ರ ಜಡೇಜ’ ಎಂದು ಅದೇ ಧೋನಿ ಕರೆದದ್ದು ದೀರ್ಘಕಾಲ ಉಳಿದುಬಿಟ್ಟಿತು. ಎಷ್ಟೋ ಸಂದರ್ಶನಗಳಲ್ಲಿ ತಾನು ‘ಸರ್ ಅಲ್ಲ’ ಎಂದು ಜಡೇಜ ಹೇಳಿಕೊಂಡಿದ್ದಿದೆ.

ರವೀಂದ್ರ ತಾನಾಗಿಯೇ ಕಲಿತ ವಿದ್ಯೆಗಳು ಹಲವು. ಕುದುರೆ ಸವಾರಿ ಅದರಲ್ಲಿ ಮುಖ್ಯವಾದುದು. ಅವರು ತೋಟದ ಮನೆಯೊಂದನ್ನು ಖರೀದಿಸಿದ್ದೇ ಕುದುರೆಗಳನ್ನು ಸಾಕಲು. ಅಲ್ಲಿನ ಕಾಲು ಡಜನ್ ಕುದುರೆಗಳಲ್ಲಿ ಎಲ್ಲವುಗಳ ಮೇಲೆಯೂ ಅವರು ಸವಾರಿ ಮಾಡಬಲ್ಲರು. ಕುದುರೆ ಸವಾರಿಯನ್ನು ಅವರು ತಾವಾಗಿಯೇ ಕಲಿತದ್ದನ್ನು ಅವರ ಅಕ್ಕ ನಯನ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲರು.

ಗುಜರಾತ್‌ನ ಜಾಮ್‌ನಗರದ ರಜಪೂತ ಕುಟುಂಬದವರಾದ ರವೀಂದ್ರ ಜಡೇಜ ಕತ್ತಿ ಝಳಪಿಸುವುದನ್ನು ಕೂಡ ಸ್ವಪ್ರಯತ್ನ ದಿಂದಲೇ ಕಲಿತದ್ದು. ಒಂದೊಮ್ಮೆ ಕ್ರಿಕೆಟ್ ಶತಕ ಹೊಡೆದಾಗ ಅವರು ಬ್ಯಾಟನ್ನು ಕೂಡ ಕತ್ತಿಯಂತೆಯೇ ಆಡಿಸಿದ್ದನ್ನು ಕಂಡು ಅವರ ಮನೆಯವರೆಲ್ಲ ನಕ್ಕಿದ್ದರು.

ಕಾರು-ಬೈಕ್ ಮೋಹವೂ ಅವರಿಗಿದೆ. ಆಡಿ 4ರ ಸವಾರಿ ಇಷ್ಟವಾದರೂ ಭದ್ರತೆಯ ದೃಷ್ಟಿಯಿಂದ ಹೆಚ್ಚು ಓಡಿಸಲಾಗದು. ‘ಹಯಾಬೂಸಾ’ ಬೈಕ್ ಮೇಲೆ ಮಡದಿಯನ್ನು ಕೂರಿಸಿಕೊಂಡು ಆಗೀಗ ರೌಂಡ್ ಹೋಗುತ್ತಾರೆ.

ಸಂಕೋಚ ಸ್ವಭಾವದ ರವೀಂದ್ರ ಆಮೇಲೆ ಆ ಮೇಲೆ ಅದನ್ನು ಮೀರಿದ್ದು ಬೇರೆಯದೇ ಕಥೆ. ರಾಜ್‌ಕೋಟ್‌ನಲ್ಲಿ ‘ಜಡ್ಡೂಸ್ ಫುಡ್ ಫೀಲ್ಡ್’ ಎಂಬ ಕ್ರಿಕೆಟ್ ಥೀಮ್ ಆಧರಿಸಿದ ರೆಸ್ಟೊರೆಂಟನ್ನು ಕೂಡ ತೆರೆದಿದ್ದಾರೆ.

ಕ್ರಿಕೆಟ್‌ಗೆಂದು ಯಾವುದೋ ಊರಿನಲ್ಲಿರುವಾಗ ರವೀಂದ್ರ ಮನೆಯವರ ಜತೆ ಫೋನ್‌ನಲ್ಲಿ ಸಾಕಷ್ಟು ಹೊತ್ತು ಮಾತನಾಡುತ್ತಾರೆ. ಕ್ರಿಕೆಟ್ ಬಗ್ಗೆ ಮಾತನಾಡುವುದು ಕಡಿಮೆ. ತೋಟದ ಮನೆಯಲ್ಲೇ ಹೆಚ್ಚಾಗಿರುವ ಅಪ್ಪನ ಜತೆಗಂತೂ ಹಿತಮಿತ ನುಡಿ ವಿನಿಮಯವಷ್ಟೆ.

‘ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲದೆ, ಬದುಕಿನಲ್ಲಿಯೂ ಆಲ್‌ರೌಂಡರ್’ ಎಂದು ಯಾರಾದರೂ ತಮ್ಮನನ್ನು ಹೊಗಳಿದರೆ ನಯನ ಅವರ ಹೃದಯ ತುಂಬುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT