ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಸಮೂಹದ ಹೊಸವ್ಯಸನ ಅಂತರ್ಜಾಲ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿಶ್ವದಲ್ಲೇ ಅತಿ ಹೆಚ್ಚು ಯುವಸಮೂಹವನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆ ಭಾರತದ್ದು. ಅಂತಹ ಯುವಸಮೂಹ ವಿವಿಧ ಕೌಶಲಗಳನ್ನು ಸಿದ್ಧಿಸಿಕೊಂಡು ವೈಯಕ್ತಿಕಾಭಿವೃದ್ಧಿಯ ಜೊತೆಗೆ ರಾಷ್ಟ್ರಾಭಿವೃದ್ಧಿಗೂ ಕೊಡುಗೆ ನೀಡಬಲ್ಲದ್ದು. ಆದರೆ ಅಂತಹ ಬಹುಪಾಲು ಯುವಜನತೆ ವಿವಿಧ ಕೌಶಲಗಳನ್ನು ಕಲಿಯದೆ ‘ಇಂಟರ್‌ನೆಟ್’ ಎಂಬ ಮಾಯೆಯಲ್ಲೇ ಮುಳುಗೇಳುತ್ತಾ, ಅತಿ ಬಳಕೆ ಮಾಡಿಕೊಂಡು ಅದೊಂದು ವ್ಯಸನವನ್ನಾಗಿ ಮಾಡಿಕೊಂಡಿದೆ.

ಇಂಟರ್‌ನೆಟ್ ಎಂಬುದು ಒಂದು ವಾಸ್ತವ ಜಗತ್ತೂ ಹೌದು; ಹಾಗೆಯೇ ಇದೊಂದು ಭ್ರಮೆಯ ಪ್ರಪಂಚವೂ ಹೌದು. ಇದಕ್ಕೆ ಬಲಿಯಾಗುತ್ತಿರುವುದು ಯುವಸಮೂಹ. ಈ ವ್ಯಸನ ಇಂದು ವಿಶ್ವವ್ಯಾಪಿಯಾಗುತ್ತಿದೆ.

ಅನಗತ್ಯ ಬಳಕೆಯ ದುಷ್ಪರಿಣಾಮಗಳು
ಅತಿಯಾದರೆ ಅಮೃತವೂ ವಿಷ. ಎಲ್ಲವೂ ಒಂದು ಮಿತಿಯಲ್ಲಿದ್ದರೇನೇ ಚೆನ್ನ, ಇಲ್ಲವಾದರೆ ಅಮೃತವೂ ಹಾಲಾಹಲವಾದೀತು. ಹಾಗೆಯೇ ಇಂಟರ್‌ನೆಟ್ ಬಳಕೆ ಕೂಡ. ಇದನ್ನು ಬಳಸುವುದು ತಪ್ಪೆಂದು ಯಾರೂ ಹೇಳುವುದಿಲ್ಲ. ಇಂದಿನ ಆಧುನಿಕ ಜಗತ್ತಿನ ಅಗತ್ಯಗಳಲ್ಲಿ ಇದೂ ಒಂದು. ಆದರೆ ಅದರ ಅತಿ ಮತ್ತು ಅನಗತ್ಯ ಬಳಕೆ ಹಲವು ದುಷ್ಪರಿಣಾಮಗಳನ್ನು ಉಂಟುಮಾಡುವುದರಲ್ಲಿ ಸಂದೇಹವಿಲ್ಲ.

ಹಲವು ಮುಂದುವರೆದ ದೇಶಗಳಲ್ಲಿ ಈಗಾಗಲೇ ಈ ಸಮಸ್ಯೆ ವ್ಯಾಪಕವಾಗುತ್ತಿದೆ. ಅಮೆರಿಕ, ಜಪಾನ್, ಕೊರಿಯಾ ಮೊದಲಾದ ದೇಶಗಳು ಇಂಟರ್‌ನೆಟ್‌ನ ಅತಿ ಬಳಕೆಯಿಂದ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರತವೂ ಈಗ ಇದೇ ಸಾಲಿನಲ್ಲಿದೆ. ಹಲವು ಅಧ್ಯಯನ ಹೇಳುವಂತೆ ಅತಿ ಬಳಕೆಯಿಂದ ಸೃಜನಾತ್ಮತೆ, ಸಹನೆ, ಸ್ಮರಣಶಕ್ತಿ ಕುಸಿಯುತ್ತದೆ. ಅತಿ ಉದ್ವೇಗ, ಒತ್ತಡ, ತಳಮಳಕ್ಕೆ ಒಳಗಾಗುತ್ತಾರೆ.

ಬೌದ್ಧಿಕ ಮತ್ತು ಭಾವನಾತ್ಮಕ ಸಮಸ್ಯೆಗಳೂ ತಲೆದೋರುತ್ತವೆ. ಅಮೆರಿಕೆಯ ಅಧ್ಯಯನವೊಂದರ ಪ್ರಕಾರ ಅಂತರ್ಜಾಲ ವ್ಯಸನಿಗಳ ಮತ್ತು ಹೆರಾಯಿನ್ ಮಾದಕವಸ್ತು ವ್ಯಸನಿಗಳ ಮೆದುಳಿನ ಸ್ಕ್ಯಾನ್ ಚಿತ್ರಣಗಳು ಒಂದೇ ರೀತಿಯಾಗಿವೆ ಎಂದು ತಿಳಿಸಿದೆ. ಈ ಅಂಶ ಇಂಟರ್‌ನೆಟ್ ವ್ಯಸನದ ಪರಿಣಾಮಕ್ಕೆ ಹಿಡಿದ ಕನ್ನಡಿಯೇ ಸರಿ.

ಕೆಲವು ಅಂಕಿ-ಅಂಶಗಳು
ಭಾರತ ಸುಮಾರು 50 ಕೋಟಿ ಅಂತರ್ಜಾಲ ಬಳಕೆದಾರರನ್ನು ಹೊಂದಿದೆ. ಈ ಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. ಹಾಗೆಯೇ ಮೊಬೈಲ್ ಡೇಟಾ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ರಿಲಯನ್ಸ್ ಜಿಯೋ ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ 2–3 ತಿಂಗಳಲ್ಲಿ ಏಳು ಕೋಟಿಗೂ ಹೆಚ್ಚು ಸಂಪರ್ಕಗಳನ್ನು ನೀಡಿದೆ. ಇಂಟರ್‌ನೆಟ್‌ಅನ್ನು ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ, ಪ್ರೌಢಶಾಲಾ ಮಕ್ಕಳೂ ವ್ಯಾಪಕವಾಗಿ ಬಳಸತೊಡಗಿದ್ದಾರೆ.

ಕೆಲವು ಅಧ್ಯಯನಗಳು ಹೇಳುವಂತೆ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಇಂಟರ್‌ನೆಟ್ ಬಳಕೆಗೆಂದೇ ದಿನಕ್ಕೆ ಒಂದು ಅಂದಾಜು 5–6 ಗಂಟೆ ಮೀಸಲಿಡುತ್ತಿದ್ದಾರೆ. ಈ ವ್ಯಸನಕ್ಕಾಗಿ ಹಲವು ಬಾರಿ ಶಾಲಾ-ಕಾಲೇಜುಗಳಿಗೆ ಗೈರಾಗುತ್ತಿದ್ದಾರೆ. ಆದರೂ ಹಲವು ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ರಾಷ್ಟ್ರದಲ್ಲಿನ ಇಂಟರ್‌ನೆಟ್ ಬಳಕೆಯ ಪ್ರಮಾಣ ಕಡಿಮೆಯೇ.

ಭಾರತದಲ್ಲಿ ಮೊಬೈಲ್ ಡೇಟಾ ಬಳಕೆ ಈಗ ಅಮೆರಿಕೆಯಲ್ಲಿನ ಬಳಕೆಯ 2/10ಕ್ಕಿಂತ ಹೆಚ್ಚಿಲ್ಲ. ಒಂದು ವರದಿಯ ಪ್ರಕಾರ ’ಇಂಟರ್‌ನೆಟ್‌ ಅಡಿಕ್ಷನ್‌ಡಿಸಾರ್ಡರ್’ ಸಮಸ್ಯೆಗೆ  ಶೇ. 25ರಷ್ಟು ಕಿಶೋರಾವಸ್ಥೆಯ ಮಕ್ಕಳು ತುತ್ತಾಗಿದ್ದಾರೆ. 12ರಿಂದ 18ರ ವಯಸ್ಸಿನ ಸಾಕಷ್ಟು ಮಕ್ಕಳು ಈ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ.

ಈ ವ್ಯಸನದಿಂದ ಯುವಜನತೆಯನ್ನು ಹೊರತರುವುದು ಹಲವು ರಾಷ್ಟ್ರಗಳಿಗೆ ಒಂದು ಸವಾಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವು ರಾಷ್ಟ್ರಗಳು ಈಗಾಗಲೇ ಕಾರ್ಯತತ್ಪರವಾಗಿವೆ.

ತಂತ್ರಜ್ಞಾನದಲ್ಲಿ ಮುಂದುವರೆದಿರುವ ದಕ್ಷಿಣ ಕೊರಿಯಾದಲ್ಲಿ ಈ ವ್ಯಸನ ಸಮಸ್ಯೆ ನಿವಾರಣೆಗೆ ‘ಐ ವಿಲ್’ ಎಂಬ ಕೇಂದ್ರಗಳನ್ನು ಸ್ಥಾಪಿಸಿದರೆ, ಜಪಾನ್ ‘ಅಂತರ್ಜಾಲ ವರ್ಜನ ಶಿಬಿರ’ಗಳನ್ನು ಪ್ರಾರಂಭಿಸಿದೆ. ಭಾರತದಲ್ಲಿ ನಿಮ್ಹಾನ್ಸ್ ಈಗಾಗಲೇ ಅಂತರ್ಜಾಲ ವ್ಯಸನ ಮುಕ್ತ ಕೇಂದ್ರ ತೆರೆದಿದೆ. ರಾಷ್ಟ್ರದ ಇತರೆಡೆಗಳಲ್ಲೂ ಇಂತಹ ಪ್ರಯತ್ನಗಳಾಗುತ್ತಿವೆ.

ಅರಿವು ಬೆಳೆಯಬೇಕು
ಅಂತರ್ಜಾಲದ ಅತಿ ಬಳಕೆ ಒಂದು ವ್ಯಸನ, ಸಮಸ್ಯೆ ಎಂಬ ಅರಿವು ಮೂಡಿಸಬೇಕು. ವ್ಯಸನದ ಲಕ್ಷಣಗಳನ್ನು ಮಕ್ಕಳಿಗೆ, ಯುವಕರಿಗೆ, ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು. ಅಶ್ಲೀಲ ವೆಬ್‌ಸೈಟ್‌ಗಳಿಗೆ ಸರ್ಕಾರ ನಿಯಂತ್ರಣ ಹೇರಬೇಕು. ಅಂತರ್ಜಾಲದ ಮೂಲಕವೂ ಅರಿವು ಮೂಡಿಸುವ ಕಾರ್ಯವಾಗಬೇಕು.

ಪೋಷಕರನ್ನು ಈ ವಿಷಯದಲ್ಲಿ ಸುಶಿಕ್ಷಿತರನ್ನಾಗಿಸಬೇಕು. ಮಾನವಿಕ ಸಂಬಂಧಗಳ ಮಹತ್ವ ಮನವರಿಕೆ ಮಾಡಿಕೊಡಬೇಕು. ಸಮಸ್ಯೆಯ ಅರಿವು ಮತ್ತು ನಿವಾರಣೆಯ ಕುರಿತು ಶಿಕ್ಷಕರು, ಉಪನ್ಯಾಸಕರಿಗೆ ತರಬೇತಿ ನೀಡಬೇಕು.

ಅಂತರ್ಜಾಲ-ವರ್ಜನ ಶಿಬಿರಗಳನ್ನು ನಡೆಸಿ ಅಂತಹ ಮಕ್ಕಳು ವ್ಯಸನದಿಂದ ಹೊರಬರುವಂತೆ ಮಾಡಲು ಪ್ರಯತ್ನಿಸಬೇಕು. ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದ ಇತರ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಬೇಕು. ಪೋಷಕರು, ಶಿಕ್ಷಕರು ಎಚ್ಚರ ವಹಿಸಿ ಅರಿವು ಮೂಡಿಸಬೇಕು. ಸಂಘ-ಸಂಸ್ಥೆಗಳು, ಸರ್ಕಾರಗಳೂ ಇಂಥ ಅರಿವಿನ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಬೇಕು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ರಾಜ್ಯ ಶಿಕ್ಷಣ ಇಲಾಖೆಗಳು, ದೂರ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳೂ ಪರಸ್ಪರ ಕೈಜೋಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು.

ಇಂಟರ್‌ನೆಟ್ ಬಳಕೆ ಬೇಡವೆಂದಲ್ಲ; ಆದರೆ ಜವಾಬ್ದಾರಿಯುತ ಬಳಕೆ ಅಗತ್ಯ. ಅಗತ್ಯವಿರುವಷ್ಟನ್ನು, ಅಗತ್ಯವಿರುವೆಡೆ, ಅಗತ್ಯ ಸಮಯದಲ್ಲಿ ಬಳಸಿದರೆ ತಪ್ಪೇನಿಲ್ಲ. ಆದರೆ ಅತಿ ಮತ್ತು ಅನಗತ್ಯ ಬಳಕೆ ಖಂಡಿತ ಅಪಾಯಕಾರಿ.

ಇದು ಯುವಸಮೂಹಕ್ಕೂ, ಸಮಾಜಕ್ಕೂ, ರಾಷ್ಟ್ರಕ್ಕೂ ಮಾರಕವಾಗಬಲ್ಲದು. ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು. ಆರೋಗ್ಯಕರ ಬಳಕೆಯ ಅರಿವು ಮೂಡಿಸಬೇಕು. ಮಾಹಿತಿ-ಆಪ್ತಸಲಹೆ-ಶಿಕ್ಷಣ ಕೊಡಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತಲ್ಲವೆ?
ನಟರಾಜ ಮಧೂಡಿ (ಲೇಖಕರು ಸಹಾಯಕ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT