ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಿಂದ ವಿಶ್ವದೆತ್ತರಕ್ಕೆ...

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಲಕ್ಷ್ಯ ಪ್ರತಿಭಾವಂತ ಆಟಗಾರ. ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಕ್ರೀಡೆಯ ಬಗ್ಗೆ ಆತನಲ್ಲಿರುವ ಶ್ರದ್ಧೆ ಮತ್ತು ಬದ್ಧತೆ ಅವನನ್ನು ವಿಶ್ವದೆತ್ತರಕ್ಕೆ ಬೆಳೆಯುವಂತೆ ಮಾಡಿದೆ. ಆತ  ಇದೇ ಸಾಮರ್ಥ್ಯವನ್ನು ಮುಂದುವರಿಸಿಕೊಂಡು ಸಾಗಿದರೆ ಸೀನಿಯರ್‌ ವಿಭಾಗದ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರುವುದರಲ್ಲಿ ಸಂದೇಹವಿಲ್ಲ’...

ಉತ್ತರಾಖಂಡದ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್‌ ಕುರಿತು ಭಾರತದ ಬ್ಯಾಡ್ಮಿಂಟನ್‌ ದಿಗ್ಗಜ ಪ್ರಕಾಶ್‌ ಪಡುಕೋಣೆ ಹೇಳಿದ್ದ ಮೆಚ್ಚುಗೆಯ ನುಡಿಗಳಿವು. ಕರ್ನಾಟಕದ ಪ್ರಕಾಶ್‌ ಅವರ ಗರಡಿಯಲ್ಲಿ ಪಳಗಿರುವ ಲಕ್ಷ್ಯ ಈಗ ಗುರುವಿನ ಸಾಧನೆಯನ್ನೇ ಮೀರಿ ನಿಲ್ಲುವ ಭರವಸೆ ಮೂಡಿಸಿದ್ದಾರೆ.

ಲಕ್ಷ್ಯ ಅವರು ಜೂನಿಯರ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ  ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. 15ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಅವರದ್ದಾಗಿದೆ. 

2014ರಲ್ಲಿ ಆದಿತ್ಯ ಜೋಶಿ ಮತ್ತು 2016ರಲ್ಲಿ ಸಿರಿಲ್‌ ವರ್ಮಾ ಅವರೂ ಕಿರಿಯರ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದರು. ಆಗ ಅವರಿಗೆ ಕ್ರಮವಾಗಿ 18 ಮತ್ತು16ವರ್ಷ ವಯಸ್ಸಾಗಿತ್ತು.

ಬ್ಯಾಡ್ಮಿಂಟನ್‌ನಲ್ಲಿ ಎತ್ತರದ ಸಾಧನೆ ಮಾಡುವ ಮಹದಾಸೆ ಹೊತ್ತು ಈ ರಂಗಕ್ಕೆ ಅಡಿಯಿಟ್ಟ ಲಕ್ಷ್ಯ ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಕಠಿಣ ಅಭ್ಯಾಸ ಮತ್ತು ಅರ್ಪಣಾ ಭಾವದೊಂದಿಗೆ ಹಂತ ಹಂತವಾಗಿ ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸುತ್ತಿರುವ ಅವರು 15ರ ಹರೆಯದಲ್ಲೇ ವಯಸ್ಸಿಗೂ ಮೀರಿದ ಸಾಧನೆಗಳನ್ನು ಮಾಡಿ ಬ್ಯಾಡ್ಮಿಂಟನ್‌ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಿದ್ದಾರೆ.

2014ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನ ವಿಂಬಲ್ಡನ್‌ ರ್‍ಯಾಕೆಟ್‌ ಆ್ಯಂಡ್‌ ಫಿಟ್ನೆಸ್‌ ಕ್ಲಬ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಂಬಲ್ಡನ್‌ ಚಾಂಪಿ ಯನ್‌ಷಿಪ್‌ನಲ್ಲಿ ಆಡಿ 13ನೇ ವಯಸ್ಸಿನಲ್ಲೇ  ಪ್ರಶಸ್ತಿ ಎತ್ತಿ ಹಿಡಿದಿದ್ದ ಭಾರತದ ಆಟಗಾರ  ಅದೇ ವರ್ಷ ಸ್ವಿಸ್‌ ಓಪನ್‌ ಜೂನಿಯರ್‌ ಟೂರ್ನಿಯಲ್ಲೂ ಚಾಂಪಿಯನ್‌ ಆಗಿದ್ದರು.

ಡೆನ್ಮಾರ್ಕ್‌ನಲ್ಲಿ ನಡೆದಿದ್ದ 15 ವರ್ಷದೊಳಗಿನವರ ಅರೊಸ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲೂ ಪ್ರಶಸ್ತಿಗೆ ಮುತ್ತಿಕ್ಕಿದ್ದ ಲಕ್ಷ್ಯ,  ಹೋದ ವರ್ಷದ ಜುಲೈನಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿ ಈ ಕ್ರೀಡೆಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದರು.

2016ರಲ್ಲಿ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದಿದ್ದ ಅಖಿಲ ಭಾರತ ಸೀನಿಯರ್‌ ಟೂರ್ನಿಯಲ್ಲಿ ಕಣಕ್ಕಿಳಿದು ಕಿರೀಟ ಮುಡಿಗೇರಿಸಿಕೊಂಡಿದ್ದ ಅವರು ಈ ಸಾಧನೆ ಮಾಡಿದ ಭಾರತದ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ  ಇಂಡಿಯಾ ಇಂಟರ್‌ನ್ಯಾಷನಲ್‌ ಸೀರಿಸ್‌ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ್ದ ಅವರು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌, ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ಗಳಲ್ಲೂ ಆಡಿ ಡೆನ್ಮಾರ್ಕ್‌, ಹಾಂಕಾಂಗ್‌, ಮಲೇಷ್ಯಾ, ಕೊರಿಯ ಮತ್ತು ಚೀನಾ ದೇಶಗಳ ಘಟಾನುಘಟಿ ಆಟಗಾರರಿಗೆ ಸೋಲಿನ ರುಚಿ ತೋರಿಸಿದ್ದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೋಡಿ
ಹೋದ ವಾರ ಪಟ್ನಾದಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಲಕ್ಷ್ಯ ಸೇನ್‌, ಮೋಡಿ ಮಾಡಿದರು. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದ ಎಚ್‌.ಎಸ್‌. ಪ್ರಣಯ್‌ ಮತ್ತು ಹರ್ಷಿಲ್‌ ದಾನಿ ಅವರಿಗೆ ಆಘಾತ ನೀಡಿದ್ದ ಅವರು ಫೈನಲ್‌ ಪ್ರವೇಶಿಸಿದ ಭಾರತದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಈ ಮೂಲಕ ಪ್ರಕಾಶ್‌ ಪಡುಕೋಣೆ ಅವರ ಹೆಸರಿನಲ್ಲಿದ್ದ ದಾಖಲೆ ಮೀರಿ ನಿಂತರು. ಪ್ರಕಾಶ್‌ 16ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಪ್ರಶಸ್ತಿ  ಸುತ್ತಿನಲ್ಲಿ ಲಕ್ಷ್ಯ, 24 ವರ್ಷದ ಸೌರಭ್‌  ವರ್ಮಾ ವಿರುದ್ಧ ಶರಣಾದರು. ಹೀಗಾಗಿ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿದು ಹೊಸ ಭಾಷ್ಯ ಬರೆಯುವ ಅವಕಾಶ ಕೈತಪ್ಪಿತು.

ಬ್ಯಾಡ್ಮಿಂಟನ್‌ ಕುಟುಂಬ
ಲಕ್ಷ್ಯ ಅವರದ್ದು ಕ್ರೀಡಾ ಕುಟುಂಬ.  ತಂದೆ ಡಿ.ಕೆ.ಸೇನ್‌ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಬ್ಯಾಡ್ಮಿಂಟನ್‌ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಹೋದರ ಚಿರಾಗ್ ಸೇನ್‌ ಕೂಡಾ ಬ್ಯಾಡ್ಮಿಂಟನ್‌ ಆಟಗಾರನಾಗಿದ್ದು, ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ಮಿಂಚುತ್ತಿದ್ದಾರೆ. ಅವರು ಸದ್ಯ ಭಾರತದ ಸೀನಿಯರ್‌ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನ ಹೊಂದಿದ್ದಾರೆ.

ಪಡುಕೋಣೆ ಅಕಾಡೆಮಿಯ ಪ್ರತಿಭೆ
ಮಗನನ್ನು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪ್ರಕಾಶ್‌ ಪಡುಕೋಣೆ ಅವರಂತೆ   ಬ್ಯಾಡ್ಮಿಂಟನ್‌ ಆಟಗಾರ ಮಾಡಬೇಕೆಂಬ ಕನಸು ಹೊತ್ತಿದ್ದ ಡಿ.ಕೆ. ಸೇನ್‌ ಅವರು 10ನೇ ವಯಸ್ಸಿನಲ್ಲಿಯೇ ಲಕ್ಷ್ಯ ಅವರನ್ನು ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಗೆ ಸೇರಿಸಿದರು. ಲಕ್ಷ್ಯ ಅವರಲ್ಲಿ ಹುದುಗಿದ್ದ ಪ್ರತಿಭೆಯನ್ನು ಹೆಕ್ಕಿ ತೆಗೆದ ಪ್ರಕಾಶ್‌ ಮತ್ತು ಯು. ವಿಮಲ್‌ ಕುಮಾರ್‌ ಅವರು ಅದಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಿದರು.

ವಿಮಲ್‌ ಅವರ ಬಳಿ ತರಬೇತಿ ಪಡೆಯುತ್ತಿರುವ ಒಲಿಂಪಿಕ್ಸ್‌ ಪದಕ ವಿಜೇತೆ ಸೈನಾ ನೆಹ್ವಾಲ್‌ ಅವರೂ ಲಕ್ಷ್ಯಾಗೆ ಅನೇಕ ಕೌಶಲಗಳನ್ನು ಹೇಳಿಕೊಟ್ಟಿದ್ದಾರೆ. ಲಕ್ಷ್ಯ ಅವರ ಸಾಧನೆಯ ಹಿಂದೆ ಇವರ ಶ್ರಮವೂ ಇದೆ ಎಂಬುದು ಗಮನಾರ್ಹ.

ಚಿಯಾ ಹಾವೊ ಹಿಂದಿಕ್ಕಿದ ಆಟಗಾರ
2016ರಲ್ಲಿ ಅಮೋಘ ಆಟ ಆಡಿದ್ದ ಲಕ್ಷ್ಯ ಅವರು ಚೀನಾ ತೈಪೆಯ ಚಿಯಾ ಹಾವೊ ಲೀ ಅವರನ್ನು ಹಿಂದಿಕ್ಕಿ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಆಟಗಾರನ ಖಾತೆಯಲ್ಲಿ ಒಟ್ಟು 16, 903 ಪಾಯಿಂಟ್ಸ್‌ ಇದ್ದರೆ, ಎರಡನೇ ಸ್ಥಾನದಲ್ಲಿರುವ ಹಾವೊ 16, 091 ಪಾಯಿಂಟ್ಸ್‌ ಹೊಂದಿದ್ದಾರೆ.

*
ಲಕ್ಷ್ಯ ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿರುವುದು ಸಂತಸದ ವಿಚಾರ. ಹಾಗಂತ ಖುಷಿಯಲ್ಲಿ ಮೈಮರೆಯುವಂತಿಲ್ಲ. ಆತ ಸಾಧ್ಯವಾದಷ್ಟು ಹೆಚ್ಚು ಇಂಟರ್‌ನ್ಯಾಷನಲ್‌ ಚಾಲೆಂಜ್‌ , ಗ್ರ್ಯಾನ್‌ ಪ್ರಿ ಮತ್ತು ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಗಳಲ್ಲಿ ಆಡುವತ್ತ ಚಿತ್ತ ಹರಿಸಬೇಕು. ಆ ನಿಟ್ಟಿನಲ್ಲಿ ಆತನನ್ನು ಸಜ್ಜುಗೊಳಿಸಬೇಕಿದೆ.
–ಪ್ರಕಾಶ್‌ ಪಡುಕೋಣೆ, ಭಾರತದ ಮಾಜಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT