ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ, ಫುಟ್‌ಬಾಲ್‌ಗೆ ಹೊಸ ದಿಸೆ...

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಈ ಭಾಗದಲ್ಲಿ ಅನೇಕ ಕ್ರೀಡೆಗಳಿಗೆ ಹೊಸ ಚೇತನ ತುಂಬಲು ನೆರವಾಗಲಿದೆ. ಈ ಭಾಗಕ್ಕೆ ಅಪರೂಪವಾದ ಆರ್ಚರಿ, ಫೆನ್ಸಿಂಗ್‌ನಂಥ ಕ್ರೀಡೆಗಳನ್ನು ಆಸ್ವಾದಿಸಲು ಅವಕಾಶ ಲಭಿಸಿದ್ದು, ಬಾಕ್ಸಿಂಗ್‌, ವುಶುವಿನಂಥ ಆಟಗಳಿಗೆ ಸಾಕ್ಷಿಯಾ ದದ್ದು ಇಲ್ಲಿನ ಕ್ರೀಡಾ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ.

ಇದರಿಂದ ಹಾಕಿ ಮತ್ತು ಫುಟ್‌ಬಾಲ್‌ ಹೊಸ ದಿಸೆಯನ್ನು ಕಂಡುಕೊಳ್ಳಲಿದೆ ಎಂಬ ಲೆಕ್ಕಾಚಾರದ ಮಾತುಗಳು ಉತ್ತರ ಕರ್ನಾಟಕದಲ್ಲಿ ಕೇಳಿ ಬರುತ್ತಿವೆ. ಒಲಿಂಪಿಕ್ಸ್‌ನಲ್ಲಿ ಸುದೀರ್ಘವಾಗಿ ನಡೆದ ಇವೆರಡು ಕ್ರೀಡೆಗಳು ಇಲ್ಲಿನ ನೆಲದಲ್ಲಿ ದೀರ್ಘ ಕಾಲ ಪರಿಣಾಮ ಬೀರುವಷ್ಟು ಪ್ರಭಾವ ಉಂಟು ಮಾಡಿವೆ.

ಮೊದಲ ದಿನವೇ ಆರಂಭಗೊಂಡ ಹಾಕಿ ಒಟ್ಟು ಆರು ದಿನ ನಡೆದಿತ್ತು. ಎರಡನೇ ದಿನದಿಂದ ಕೊನೆಯ ದಿನದವರೆಗೆ ಒಟ್ಟು ಏಳು ದಿನ ಫುಟ್‌ಬಾಲ್ ‘ಹಬ್ಬ’ ಇತ್ತು. ಎರಡೂ ಸ್ಪರ್ಧೆಗಳಲ್ಲಿ ಹೆಸರಾಂತ ತಂಡಗಳು ಮತ್ತು ಖ್ಯಾತ ಆಟಗಾರರು ಇಲ್ಲದಿ ದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆಟಗಾರರ ಸಂಗಮವಿತ್ತು. ಸ್ಥಳೀಯ ಯುವ, ಹೊಸ ತಲೆಮಾರಿನ ಆಟಗಾರರ ಮೇಲೆ ಅವರು ಬೀರಿದ ಪ್ರಭಾವದ ಫಲ ಸಿಗದೇ ಇರದು ಎಂಬುದು ಇಲ್ಲಿನ ಕೋಚ್‌ಗಳು ಮತ್ತು ಕ್ರೀಡಾ ಸಂಘಟಕರ ಅನಿಸಿಕೆ.

ಹಾಕಿ ಮತ್ತು ಫುಟ್‌ಬಾಲ್ ಉತ್ತರ ಕರ್ನಾ ಟಕಕ್ಕೆ ಹೊಸದೇನಲ್ಲ. ಹುಬ್ಬಳ್ಳಿ–ಧಾರವಾಡ, ಗದಗ, ಬೆಳಗಾವಿ, ಬಳ್ಳಾರಿ ಮುಂತಾದ ಕಡೆಗಳಲ್ಲಿ ಇವೆರಡು ಕ್ರೀಡೆಗಳ ಟೂರ್ನಿಗಳು ಆಗಾಗ ನಡೆಯು ತ್ತಿರುತ್ತವೆ. ಸುಲಭವಾಗಿ ಆಡಬಹುದಾದ, ಹಣ ಗಳಿಕೆಯೇ ಮುಖ್ಯವಾದ ‘ಫೈವ್‌ ಎ ಸೈಡ್’ ಫುಟ್‌ಬಾಲ್‌ಗೆ ಇತ್ತೀಚೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಈ ಭಾಗದವರನ್ನು ಮತ್ತೆ ನಿಜವಾದ ಆಟಕ್ಕೆ ಕರೆದು ಕೊಂಡು ಬರಲು ಒಲಿಂಪಿಕ್ಸ್ ನೆರ ವಾಗಲಿದೆ.

ಮೈದಾನ, ಸಾಮಗ್ರಿ ಇತ್ಯಾದಿಗಳ ಕೊರತೆಯ ನಡುವೆಯೂ ಉತ್ತಮ ಹಾಕಿಪಟು ಗಳನ್ನು ಬೆಳೆಸುತ್ತಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿ, ಗದಗ, ಬಳ್ಳಾರಿ, ರಾಯಚೂರು ಮುಂತಾದ ಪ್ರದೇಶಗಳಿಗೆ ರಾಜ್ಯ ಒಲಿಂಪಿಕ್ಸ್‌ ಹೊಸ ಚೇತನ ತುಂಬಲಿದೆ. ಬೆಂಗಳೂರಿನಿಂದ ಬಂದ ಆಡಳಿತ ಗಾರರ ಜೊತೆಗಿನ ಸಂವಾದ ಇಲ್ಲಿನ ಹಾಕಿ ಆಡಳಿತ ಸುಧಾರಣೆಗೂ ನವಚೇತನ ತುಂಬಲಿದೆ.

ಹುಬ್ಬಳ್ಳಿ ಹಾಗೂ ಗದಗ ಸೆಟ್ಲ್‌ಮೆಂಟ್ ಮೈದಾನದಲ್ಲಿ ಹಾಕಿ ಟೂರ್ನಿಗಳು ನಡೆದರೆ ಸಾವಿರಾರು ಪ್ರೇಕ್ಷಕರು ಸೇರುತ್ತಾರೆ. ಆದರೆ ರಾಜ್ಯ ಒಲಿಂಪಿಕ್ಸ್ ಹಾಕಿ ನೋಡಲು ಜನರೇ ಇರಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಪಂದ್ಯಗಳು ನಡೆದದ್ದು ಇದಕ್ಕೆ ಕಾರಣ ಎಂಬುದು ಸಂಘಟಕರ ಉತ್ತರ. ಫುಟ್‌ಬಾಲ್‌ ವೀಕ್ಷಿಸಲು ಜನರು ಕಿಕ್ಕಿರಿದು ತುಂಬಿದ್ದರು. ನಗರ ಮಧ್ಯದ ಕೆಸಿಡಿ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಿದ್ದೇ ಇದಕ್ಕೆ ಕಾರಣ.

‘ಹಾಕಿ ವೀಕ್ಷಿಸುವುದಕ್ಕೂ ಇಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಕೆಸಿಡಿ ಮೈದಾನದಲ್ಲಿ ಧ್ಯಾನ್‌ ಚಂದ್ ಸ್ಮಾರಕ ಟೂರ್ನಿಯನ್ನು ಆಯೋಜಿಸುವಾಗ ಮೈದಾನದ ನಾಲ್ಕೂ ಭಾಗಗಳಲ್ಲಿ ಪ್ರೇಕ್ಷಕರು ತುಂಬಿ ರುತ್ತಾರೆ’ ಎಂದು ಹೇಳುತ್ತಾರೆ ಧಾರವಾಡದವರೇ ಆದ ಮೈಸೂರು ವಿವಿ ಹಾಕಿ ಕೋಚ್ ಪುಲಕೇಶಿ ಶೆಟ್ಟಪ್ಪನವರ.

‘ಈ ಭಾಗದಲ್ಲಿ ಹಾಕಿ ತುಂಬ ಹೆಸರು ಮಾಡಿದೆ. ಆದರೆ ಒಲಿಂಪಿಕ್ಸ್‌ನ ಪಂದ್ಯಗಳನ್ನು ವೀಕ್ಷಿಸಲು ಜನರು ಬಾರದೇ ಇದ್ದದ್ದು ಅಚ್ಚರಿ ತಂದಿದೆ. ತಂಡ ಗಳ ಬೆಂಬಲಿಗರು ಅಥವಾ ಆಟಗಾರರ ಪಾಲಕರಾ ದರೂ ಬರಬೇಕಿತ್ತು’ ಎಂದವರು ರಾಜ್ಯ ಒಲಿಂಪಿಕ್ಸ್ ಹಾಕಿ ಪಂದ್ಯಗಳ ನಿರ್ದೇಶಕಿ ಹಾಗೂ ಮಾಜಿ ರಾಷ್ಟ್ರೀಯ ಆಟಗಾರ್ತಿ ರೋಹಿಣಿ ಬೋಪಣ್ಣ.

ಫುಟ್‌ಬಾಲ್‌ ಪಥ ಬದಲಿಗೆ ಸಾಧ್ಯತೆ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗ ‘ಚುಟುಕು ಫುಟ್‌ಬಾಲ್’ ಜನಪ್ರಿಯ ಆಗುತ್ತಿದೆ. ಇದ ರಿಂದ ಹೊರಬಂದು ನಿಜವಾದ ರುಚಿ ಇರುವ ಆಟ ವನ್ನು ಅಳವಡಿಸಿಕೊಳ್ಳಲು ಒಲಿಂಪಿಕ್ಸ್‌ನಲ್ಲಿ ಫುಟ್‌ ಬಾಲ್‌ಗೆ ಜನರು ನೀಡಿದ ಬೆಂಬಲ ನೆರವಾಗಲಿದೆ.

‘ಉದ್ಯೋಗ ಮತ್ತಿತರ ಅನುಕೂಲ ಇಲ್ಲದ ಕಾರಣ ಫೈವ್‌ ಎ ಸೈಡ್‌ನಂಥ ಟೂರ್ನಿಗಳಲ್ಲಿ ಆಡಿ ಹಣ ಗಳಿಸಲು ಆಟಗಾರರು ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ ಒಲಿಂಪಿಕ್ಸ್ ಕ್ರೀಡಾಕೂಟದಿಂದಾಗಿ ಅನೇಕ ರಿಗೆ ನಿಜವಾದ ಫುಟ್‌ಬಾಲ್‌ನ ರುಚಿ ಹತ್ತಿದೆ. ಆದ್ದರಿಂದ ಈ ಭಾಗದಲ್ಲಿ ಫುಟ್‌ಬಾಲ್‌ನ ಪಥ ಬದಲಾಗುವ ಸಾಧ್ಯತೆ ಇದೆ’ ಎಂಬುದು ಕೋಚ್‌ ಇರ್ಷಾದ್ ಅಹಮ್ಮದ್ ಮಕ್ಕೂಬಾಯಿ ಅವರ ಅನಿಸಿಕೆ.

*
ಇನ್ನಷ್ಟು ಸಾಧ್ಯತೆಗಳಿವೆ
ಹುಬ್ಬಳ್ಳಿ–ಧಾರವಾಡ, ಗದಗ ಮುಂತಾದ ಪ್ರದೇಶಗಳು ಈಗಾಗಲೇ ಹಾಕಿಯಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿರುವ ಪ್ರದೇಶ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದವರು ಬಹಳಷ್ಟು ಜನರು ಅಲ್ಲಿದ್ದಾರೆ. ಈಗಲೂ ಉತ್ತಮ ಆಟಗಾರರು ಅಲ್ಲಿ ಬೆಳೆಯುತ್ತಿದ್ದಾರೆ. ನಿತ್ಯವೂ ಟರ್ಫ್‌ನಲ್ಲಿ ಆಡುವ ತಂಡಗಳ ವಿರುದ್ಧ ಮಣ್ಣಿನಲ್ಲಿ ಆಡುವ ಆಟಗಾರರು ನೀಡಿದ ಸಾಮರ್ಥ್ಯ ಅಮೋಘವಾಗಿತ್ತು. ಇದು ಭರವಸೆಯನ್ನು ಮೂಡಿಸಿದೆ. ಇಲ್ಲಿ ಹಾಕಿ ಇನ್ನಷ್ಟು ಬೆಳೆಯಬೇಕಾದರೆ ಪಾಲಕರು ಮನಸ್ಸು ಮಾಡಬೇಕು. ಪಾಠದ ಹೊರೆಯೊಂದಿಗೆ ಆಟವನ್ನು ಪ್ರೀತಿಸುವ ಮನೋಭಾವ ಮೂಡಿಸಬೇಕು.  
-ವಿಜಯಕೃಷ್ಣ ಮೈಸೂರು ಕ್ರೀಡಾನಿಲಯದ ಹಾಕಿ ಕೋಚ್‌

*
ಧಾರವಾಡದಲ್ಲಿ ಸಾಕಷ್ಟು ಮೈದಾನಗಳಿವೆ. ಹುಬ್ಬಳ್ಳಿಯಲ್ಲಿಯೂ ಈ ಸೌಲಭ್ಯ ಇದ್ದರೆ ಫುಟ್‌ಬಾಲ್‌ ಬೆಳವಣಿಗೆಗೆ ಅನುಕೂಲ ಆಗಲಿದೆ. ರಾಜ್ಯ ಒಲಿಂಪಿಕ್ಸ್‌ನಿಂದಾಗಿ ಇದು ಸಾಧ್ಯವಾದರೆ ಅದು ಈ ಭಾಗಕ್ಕೆ ದೊಡ್ಡ ಕೊಡುಗೆಯೇ ಸರಿ.
-ಇರ್ಷಾದ್ ಅಹಮ್ಮದ್ ಮಕ್ಕೂಬಾಯಿ,
ಧಾರವಾಡ ಜಿಲ್ಲಾ ಫುಟ್‌ಬಾಲ್ ಕೋಚ್‌

*
ಸೂಪರ್ ಡಿವಿಷನ್ ಟೂರ್ನಿಗಳಲ್ಲಿ ಆಡುವ ತಂಡಗಳ ವಿರುದ್ಧ ರಾಜ್ಯ ಒಲಿಂಪಿಕ್ಸ್‌ನಲ್ಲಿ ಸ್ಥಳೀಯ ತಂಡಗಳು  ಉತ್ತಮವಾಗಿ ಆಡಿವೆ. ಅಭ್ಯಾಸ ನಡೆಸಿದರೆ ಸಾಧನೆ ಆಗಬಹುದು ಎಂಬ ಭಾವನೆ ಅವರಲ್ಲಿ ಮೂಡಲು ಒಲಿಂಪಿಕ್ಸ್ ನೆರವಾಗಿದೆ.
-ರಾಮು ಭಜಂತ್ರಿ, ಹುಬ್ಬಳ್ಳಿಯ ಹಾಕಿ ಕೋಚ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT