ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಲಯ ಸುಧಾರಣೆಗೆ ಸಚಿವಾಲಯ ಸಮಿತಿ ನಿರ್ಧಾರ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಕೃಷಿ ವಲಯದಲ್ಲಿ ವ್ಯಾಪಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು  ಕೇಂದ್ರ ಸರ್ಕಾರ ರಚಿಸಿರುವ ಅಂತರ್‌ ಸಚಿವಾಲಯ ಸಮಿತಿಯು ಉದ್ದೇಶಿಸಿದೆ.

2022ರಷ್ಟೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು  ರಚಿಸಲಾಗಿರುವ ಈ ಸಮಿತಿಯು, ಲಾಭವೇ ಮುಖ್ಯವಾಗಿರುವ ಕೃಷಿ ವಿಧಾನ, ಗರಿಷ್ಠ ಉತ್ಪಾದನೆ ಮತ್ತು ಸಾಗುವಳಿ ವೆಚ್ಚ ಕಡಿತದಂತಹ ಹೊಸ ಉಪಕ್ರಮಗಳನ್ನು ಜಾರಿಗೆ ತರಲು ಆಲೋಚಿಸುತ್ತಿದೆ.

ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ಸುಧಾರಣಾ ಕ್ರಮಗಳನ್ನೂ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲು ಸಲಹೆ ನೀಡಲಿರುವ ಸಮಿತಿಯು, ಕೃಷಿಯ ಪೂರಕ ಚಟುವಟಿಕೆಗಳಾದ ಪಶುಸಂಗೋಪನೆ, ಕೋಳಿ ಸಾಕಾಣಿಕೆ ಮತ್ತು ಮೀನುಗಾರಿಕೆಗೂ  ಹೆಚ್ಚು ಗಮನ ನೀಡಲೂ ಆಲೋಚಿಸುತ್ತಿದೆ.

‘ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲು ಸಾಧ್ಯವಿರುವ ಸುಧಾರಣಾ ಕ್ರಮಗಳ ಬಗ್ಗೆ ಸಲಹೆ ನೀಡುವುದು ಸಮಿತಿಯ ಉದ್ದೇಶವಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿಯೂ ಸುಲಭವಾಗಿ ಜಾರಿಗೆ ತರುವಂತಹ ಸುಧಾರಣಾ ಕ್ರಮಗಳು ಇರಲಿವೆ’ ಎಂದು ಸಮಿತಿಯ ಅಧ್ಯಕ್ಷ  ಅಶೋಕ ದಳವಾಯಿ  ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ  ಸಮಿತಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವಿಜ್ಞಾನಿಗಳು, ರೈತರು ಮತ್ತು ವೃತ್ತಿಪರ ಸಂಸ್ಥೆಗಳ ಸಲಹೆ ಪಡೆಯಲಿದೆ.  ಈ ವರ್ಷದ ಏಪ್ರಿಲ್‌ನಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಕೇಂದ್ರ ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯೂ ಆಗಿರುವ ದಳವಾಯಿ ತಿಳಿಸಿದ್ದಾರೆ.

‘ದೇಶದಲ್ಲಿ ಸಣ್ಣ ರೈತರ ಸಂಖ್ಯೆಯೇ ಹೆಚ್ಚಿಗೆ ಇದೆ. ಕೃಷಿಯು ಹೆಚ್ಚು ಲಾಭದಾಯಕವಾಗುವಂತೆ ಮಾಡುವುದೂ ಅತಿದೊಡ್ಡ ಸವಾಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT