ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡ ನೀರಿಗಾಗಿ ರಾತ್ರಿಯಿಡೀ ಜಾಗರಣೆ

ಬಿಳಿಚೋಡು: ಕುಸಿದ ಅಂತರ್ಜಲ, ಬತ್ತಿದ ಕೊಳವೆ ಬಾವಿಗಳು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ
Last Updated 13 ಫೆಬ್ರುವರಿ 2017, 6:18 IST
ಅಕ್ಷರ ಗಾತ್ರ

ಜಗಳೂರು: ತೀವ್ರ ಬರಗಾಲದ ಪರಿಣಾಮ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಬಿಳಿಚೋಡು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ.

ಗ್ರಾಮದಲ್ಲಿ 8ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಎಲ್ಲಾ ವಿಫಲವಾಗಿವೆ. ಪಕ್ಕದ ಬೆಂಚಿಕಟ್ಟೆ ಗ್ರಾಮದಲ್ಲೂ ಒಂದು ವರ್ಷದಿಂದ ಗ್ರಾಮಕ್ಕೆ ನೀರು ಪೂರೈಸುವ ಎಲ್ಲಾ ಕೊಳವೆಬಾವಿಗಳು ಬರಿದಾಗಿದ್ದು, ನೀರಿನ ಸಮಸ್ಯೆ ಉಲ್ಬಣಿಸಿದೆ.

ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ಬಿಳಿಚೋಡಿನಲ್ಲಿ ಜಿಲ್ಲಾ ಪಂಚಾಯ್ತಿಯ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ಸತತವಾಗಿ ಕೊಳವೆಬಾವಿ ಕೊರೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಪಂಚಾಯ್ತಿ ಸದಸ್ಯೆ ಉಮಾ ವೆಂಕಟೇಶ್‌ ಹಾಗೂ ಗ್ರಾಮ ದವರೇ ಆದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಮತ್ತು ಗ್ರಾಮಸ್ಥರು ಒಗ್ಗೂಡಿ ನೀರಿನ ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ, ಕೊರೆದ ಎಲ್ಲಾ ಕೊಳವೆಬಾವಿಗಳು ವಿಫಲವಾಗುತ್ತಿರುವುದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳನ್ನು ಚಿಂತೆಗೀಡುಮಾಡಿದೆ.

800 ಜನಸಂಖ್ಯೆಯನ್ನು ಹೊಂದಿರುವ ಪಕ್ಕದ ಬೆಂಚಿಕಟ್ಟೆ ಗ್ರಾಮದಲ್ಲಿ ಸತತ ಒಂದು ವರ್ಷದಿಂದ ನೀರಿನ ಕೊರತೆಯಿಂದ ಜನರು ನಲುಗಿದ್ದಾರೆ. ಇದುವರೆಗೆ 10 ಕೊಳವೆಬಾವಿಗಳನ್ನು ಕೊರೆದರೂ ನೀರು ಲಭ್ಯವಾಗಿಲ್ಲ. ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ನೀರು ಪೂರೈಕೆ ಇಲ್ಲದೇ ಘಟಕಗಳು ಸ್ಥಗಿತವಾಗುವ ಸ್ಥಿತಿ ಎದುರಾಗಿದೆ.

‘ಗ್ರಾಮದಲ್ಲಿ ನೀರಿಲ್ಲದ ಕಾರಣ ಸಮೀಪದ ಖಾಸಗಿ ಪಂಪ್‌ಸೆಟ್‌ ಮಾಲೀಕರಿಂದ ಬಾಡಿಗೆ ರೂಪದಲ್ಲಿ ನೀರು ಪಡೆಯಲಾಗುತ್ತಿದೆ. ಆದರೆ, ಸಕಾಲಕ್ಕೆ ಜಿಲ್ಲಾ ಆಡಳಿತದಿಂದ ಪಂಪ್‌ಸೆಟ್‌ ಮಾಲೀಕರಿಗೆ ಹಣ ಪಾವತಿಯಾಗದ ಕಾರಣ 3 ದಿನಗಳಿಂದ ನೀರು ಸರಬರಾಜು ನಿಲ್ಲಿಸಲಾಗಿದೆ.

ಹನಿ ನೀರಿಗಾಗಿ ಮಹಿಳೆಯರು, ಮಕ್ಕಳು ಕೊಡಗಳನ್ನು ಹೊತ್ತುಕೊಂಡು ಸುಡು ಬಿಸಿಲಿನಲ್ಲಿ ಮೈಲುಗಟ್ಟಲೆ ದೂರ ನಡೆದುಹೋಗುವ ದಾರುಣ ಸ್ಥಿತಿ ಇದೆ’ ಎಂದು ಬೆಂಚಿಕಟ್ಟೆ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ದ್ಯಾಮೇಶಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಬಿಳಿಚೋಡು ಗ್ರಾಮಸ್ಥರು ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಿದ್ದ ಮಾರಮ್ಮ ಹಬ್ಬವನ್ನು ನೀರಿನ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಮುಂದೂಡ ಲಾಗಿದೆ. ಈ ಗ್ರಾಮದಲ್ಲೂ ಖಾಸಗಿ ಪಂಪ್‌ಸೆಟ್‌ ಮಾಲೀಕರಿಂದ ನೀರು ಪಡೆದು ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್‌ ಬರುತ್ತಿದ್ದಂತೆ ಮಹಿಳೆಯರು, ಮಕ್ಕಳು ನೂಕುನುಗ್ಗಲಿನಲ್ಲಿ ನೀರು ಹಿಡಿಯುತ್ತಿ ರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.

‘ಹನಿ ನೀರಿಗಾಗಿ ದಿನಗಟ್ಟಲೆ ಇಲ್ಲಿ ಕಾದು ಕುಳಿತುಕೊಳ್ಳಬೇಕು. ಐದಾರು ಮನೆಯವರು ಒಟ್ಟಾಗಿ ಹತ್ತಾರು ಮೈಲಿ ದೂರದ ಊರುಗಳಿಗೆ ತೆರಳಿ ಡ್ರಮ್‌ಗಳಲ್ಲಿ ಸ್ವಂತ ಖರ್ಚಿನಲ್ಲಿ ನೀರು ತರುತ್ತಿದ್ದಾರೆ. ನೀರಿನ ಕೊರತೆಯಿಂದ ಸ್ನಾನ ಮಾಡುವುದನ್ನೇ ಮರೆತಿದ್ದಾರೆ. ಇಷ್ಟೊಂದು ದುರ್ಗತಿ ಎಂದೂ ಕಂಡಿರಲಿಲ್ಲ’ ಎಂದು ಗ್ರಾಮಸ್ಥ ಬಿ.ಪಂಪಣ್ಣ ಹೇಳುತ್ತಾರೆ.

* ‘ಮನುಷ್ಯರಿಗೆ ಕುಡಿಯುವ ನೀರಿಲ್ಲ. ಇನ್ನು ದನಕರುಗಳಿಗೆ ನೀರು ತರುವುದು ದೊಡ್ಡ ಸವಾಲಾಗಿದೆ. ಒಂದು ತಿಂಗಳ ಹಿಂದೆ ತುಂಗಭದ್ರಾ ನದಿಯಿಂದ ಕೆರೆಗೆ ಸ್ವಲ್ಪ ನೀರು ಬಂದಿತ್ತು. ಜಾನುವಾರು ಗಳಿಗೆ ಅನುಕೂಲ ಆಗಬಹುದು ಎಂದುಕೊಂಡಿದ್ದೆವು. ಆದರೆ, ಆ ನೀರು ಈಗ ನಿಂತುಹೋಗಿದ್ದು, ಪ್ರತಿದಿನ ನೀರಿನದೇ ಚಿಂತೆಯಾಗಿದೆ’ ಎಂದು ಗ್ರಾಮಸ್ಥರು ತಮ್ಮ ಆತಂಕ ವ್ಯಕ್ತಪಡಿಸುತ್ತಾರೆ.
– ಡಿ. ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT