ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು, ಜೀವ ನಶ್ವರ: ಸಿದ್ದೇಶ್ವರ ಸ್ವಾಮೀಜಿ

ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ನಡೆದ ಬಸವತತ್ವ ಸಮ್ಮೇಳನ
Last Updated 13 ಫೆಬ್ರುವರಿ 2017, 6:27 IST
ಅಕ್ಷರ ಗಾತ್ರ

ಚನ್ನಗಿರಿ: ‘ಮನುಷ್ಯನ ಬದುಕು ಹಸನಾಗಲು ಹಾಗೂ ಅರಳಲು ವಚನಗಳು ಬೇಕೇ ಬೇಕು. ಉತ್ತಮ ಬದುಕು ಸಾಗಿಸಲು ಸ್ವಚ್ಛತೆ ಅವಶ್ಯ. ಜೀವನವನ್ನು ಸದಾ ಸಂತೋಷದಿಂದ ನಡೆಸುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಸಂಪತ್ತು ಹಾಗೂ ನಮ್ಮ ಜೀವ ನಶ್ವರ ಎನ್ನುವುದನ್ನು ಮನಗಾಣಬೇಕು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ನಡೆದ ಬಸವ ತತ್ವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಮನೆ, ಸಂಪತ್ತು ಗಳಿಸಿ ಇಟ್ಟರೆ ಜೀವನದಲ್ಲಿ ನೆಮ್ಮದಿ, ಶಾಂತಿ ಲಭಿಸುವುದಿಲ್ಲ. ಮನುಷ್ಯ ಸದಾ ದುಃಖಿಯಾಗಿ ಬದುಕಬಾರದು. ದೇವರು ನಮ್ಮನ್ನು ಕರೆಯಬೇಕೇ ವಿನಾ ನಾವು ದೇವರನ್ನು ಕರೆಯಬಾರದು.

ಸಂಪತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಮಾನಿನಂತೆ. ಇರುವುದನ್ನು ಒಪ್ಪಿಕೊಳ್ಳುವುದೇ ಜೀವನ. ತತ್ ಎನ್ನುವುದು ಮಾಸದ ಸತ್ಯವಾಗಿದೆ. ಸಿರಿಯನ್ನು ನೆಚ್ಚಿಕೊಂಡು ಎಂದಿಗೂ ಬದುಕಬಾರದು. ನಮ್ಮ ಜೀವ ಶಾಶ್ವತ ಎಂದುಕೊಂಡು ಬದುಕಿದರೆ ನಾವು ಎಲ್ಲವನ್ನು ಮರೆಯುತ್ತೇವೆ’ ಎಂದರು.

ಬೆಂಗಳೂರಿನ ವೀಣಾ ಬನ್ನಂಜೆ ಮಾತನಾಡಿ, ‘ಶರಣ, ಶರಣೆ ಎನ್ನುವ ಶಬ್ದ ಅಥವಾ ಪದವನ್ನು ನಮ್ಮ ಹೆಸರಿನ ಹಿಂದೆ ಇಡಬಾರದು. ಏಕೆಂದರೆ ಶರಣ, ಶರಣೆ ಅತ್ಯಂತ ದೊಡ್ಡ ಪದಗಳು. ಅವನ್ನು ನಮ್ಮ ಹೆಸರಿನ ಹಿಂದೆ ಬಳಸುವಷ್ಟು ದೊಡ್ಡವರು ನಾವು ಆಗಿರುವುದಿಲ್ಲ.

ನಾವೆಲ್ಲಾ ಇಂದು ಸದಾ ಅತೃಪ್ತಿಯಿಂದ ಜೀವನ ನಡೆಸುತ್ತಿದ್ದೇವೆ. ಅತೃಪ್ತಿಯ ಶೋಧನೆಯಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಸದಾ ತಿದ್ದಿಕೊಳ್ಳುವುದೇ ಅಧ್ಯಾತ್ಮ. ಇದುವರೆಗೆ ಸಾಹಿತ್ಯ ಪ್ರಕಾರಗಳಲ್ಲಿ ವಚನಗಳನ್ನು ಸೇರಿಸಲು ಸಾಧ್ಯವಾಗಿಲ್ಲ. ಏಕೆಂದರೆ ವಚನಗಳು ಅತ್ಯಂತ ಉತ್ಕೃಷ್ಟವಾದ ಸಾಹಿತ್ಯವಾಗಿವೆ’ ಎಂದು ಹೇಳಿದರು.

ಶಾಸಕ ವಡ್ನಾಳ್‌ ರಾಜಣ್ಣ ಮಾತನಾಡಿ, ಜನರಲ್ಲಿರುವ ಕಂದಾಚಾರ, ಮೂನಂಬಿಕೆಗಳನ್ನು ಹೋಗಲಾಡಿಸಲು ಮಠಗಳು ಉತ್ತಮ ಕಾರ್ಯ ಮಾಡುತ್ತಿವೆ. ಬಸವ ತತ್ವ ಪ್ರಚಾರ ಮಾಡುವುದೇ ಈ ವಿರಕ್ತ ಮಠದ ಪ್ರಮುಖ ಧ್ಯೇಯ. ಕ್ಷೇತ್ರದ ನಾರಶೆಟ್ಟಿಹಳ್ಳಿ, ಹಲಕನಾಳ್, ದಿಗ್ಗೇನಹಳ್ಳಿ ಹಾಗೂ ಪಾಂಡೋಮಟ್ಟಿ ಗ್ರಾಮದ ಭೋವಿ ಕಾಲೊನಿಯಲ್ಲಿರುವ ಕೆರೆಗಳನ್ನು ಮಳೆಗಾಲದಲ್ಲಿ ಹರಿದ್ರಾವತಿ ಹಳ್ಳದ ನೀರಿನಿಂದ ತುಂಬಿಸುವ ಕಿರು ಏತ ನೀರಾವರಿ ಯೋಜನೆಗೆ ₹ 2 ಕೋಟಿ ಅನುದಾನ ಬಿಡುಗಡೆಯಾಗಿದೆ.

ಅದೇ ರೀತಿ ತಾಲ್ಲೂಕಿನ ಕಸಬಾ ಹಾಗೂ ಸಂತೇಬೆನ್ನೂರು ಹೋಬಳಿಗಳ 90 ಕೆರೆಗಳನ್ನು ತುಂಬಿಸುವ ₹ 446 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ. ಹಾಗೆಯೇ ಸೂಳೆಕೆರೆಯಿಂದ ಕ್ಷೇತ್ರದ 113 ಗ್ರಾಮಗಳಿಗೆ ಕುಡಿಯುವ
ನೀರು ಪೂರೈಸುವ ₹ 70 ಕೋಟಿ ವೆಚ್ಚದ ಕಾಮಗಾರಿಗೂ ಇನ್ನೊಂದು ವಾರದಲ್ಲಿ ಮಂಜೂರಾತಿ ದೊರಕಲಿದೆ ಎಂದರು.

ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಡಿ.ಎಂ. ರವಿಚಂದ್ರ, ರಾಜ್ಯ ಪ್ರಜಾಶಕ್ತಿ ಸಮಿತಿ ಅಧ್ಯಕ್ಷ ಜಿ.ಪಿ. ವಿಶ್ವನಾಥ್, ಚಲನಚಿತ್ರ ನಟಿ ಮೀನಾಕ್ಷಿ, ಹಿನ್ನೆಲೆ ಗಾಯಕಿ ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.

ತಿಪಟೂರಿನ ಮಠದ ರುದ್ರಮುನಿ ಸ್ವಾಮೀಜಿ, ಅರಸಿಕೆರೆ ಮಾಡಾಳು ಮಠದ ರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಚಲನಚಿತ್ರ ನಟ ಡಾ. ರಾಜೇಶ್, ಎಚ್.ಪಿ. ರಾಜಗೋಪಾಲ್‌ ರೆಡ್ಡಿ, ಎಚ್. ವೆಂಕಟೇಶ್, ಯುವರಾಜ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎಂ.ಯು. ಚನ್ನಬಸಪ್ಪ ಸ್ವಾಗತಿಸಿದರು. ಧನಂಜಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT