ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳಿಗೆ ವಿಮರ್ಶಾ ಮನ್ನಣೆ ದೊರೆಯಲಿ: ಕುಂ.ವೀ

Last Updated 13 ಫೆಬ್ರುವರಿ 2017, 6:34 IST
ಅಕ್ಷರ ಗಾತ್ರ

ಶಿವಮೊಗ್ಗ:  ‘ಸಾಹಿತ್ಯ ಲೋಕದಲ್ಲಿ ನಾನ್ ಅಕಾಡೆಮಿಕ್ ಆಗಿರುವಂತಹ ಲೇಖಕರ ಕಥೆ, ಕಾದಂಬರಿಗಳಿಗೆ ಸೂಕ್ತ ವಿಮರ್ಶಾ ಮನ್ನಣೆ ದೊರೆಯುತ್ತಿಲ್ಲ’ ಎಂದು ಸಾಹಿತಿ ಡಾ. ಕುಂ. ವೀರಭದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಶಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಜಿ.ವಿ. ಸಂಗಮೇಶ್ವರ ರಚಿಸಿರುವ ‘ಮಹಾವೀರ ಮಡಿವಾಳ ಮಾಚಿದೇವ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾರತದ ಬಗ್ಗೆ ಬೆಳಕು ಚೆಲ್ಲುವ ಸಾಹಿತ್ಯದ ಮೇಲೆ ವಿಮರ್ಶಕರು ಹೆಚ್ಚಿನ ಅಧ್ಯಯನ ನಡೆಸಬೇಕು. ನಾನ್ ಅಕಾಡೆಮಿಕ್ ಲೇಖಕರ ಕೃತಿಗಳಿಗೂ ವಿಮರ್ಶಾ ಮನ್ನಣೆ ದೊರೆಯಬೇಕು’ ಎಂದು ಒತ್ತಾಯಿಸಿದರು. ಪದವೀಧರರಲ್ಲದ ಬರಹಗಾರರು ಕನ್ನಡದಲ್ಲಿ ಉತ್ತಮ ಕೃತಿ ರಚನೆಯಲ್ಲಿ ತೊಡಗಿದ್ದಾರೆ. ಮುಖ್ಯವಾಹಿನಿಯಲ್ಲಿ ಇಲ್ಲದೇ ಇರುವ  ಲೇಖಕರ ಕೃತಿಗಳ  ಬಗ್ಗೆ ಸಂಶೋಧನೆ ನಡೆಯಬೇಕು’ ಎಂದರು.

‘ಜಿ.ವಿ. ಸಂಗಮೇಶ್ವರ ಅವರು ರಚಿಸಿದ ಮಹಾವೀರ ಮಡಿವಾಳ ಮಾಚೀದೇವ ಕಾದಂಬರಿ 12ನೇ ಶತಮಾನದ ಚಿತ್ರಣವನ್ನು ಕಣ್ಣೆದುರಿಗೆ ತಂದಿಡುತ್ತದೆ. ಇದೊಂದು ಉತ್ತಮ ಕೃತಿ’ ಎಂದು ಶ್ಲಾಘಿಸಿದರು.

ಸಾಹಿತಿ ನಾ.ಡಿಸೋಜ ಮಾತನಾಡಿ, ಮಹಾವೀರ ಮಡಿವಾಳ ಮಾಚಿದೇವ ಕೃತಿಯಲ್ಲಿ 12ನೇ ಶತಮಾನದ ಬದುಕು, ರಾಜಮಹಾರಾಜರ ಚರಿತ್ರೆ,  ಜೀವನ ಕ್ರಮವನ್ನು ಸಂಪೂರ್ಣವಾಗಿ ಕಟ್ಟಿಕೊಡಲಾಗಿದೆ’ ಎಂದು ಅಭಿಪ್ರಾಯಪಟ್ಟರು. 

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜಿ.ವಿ. ಸಂಗಮೇಶ್ವರ, ಗೀತಾಂಜಲಿ ಪ್ರಕಾಶನದ ಮೋಹನ್, ರತ್ನವ್ವ ಚಕ್ರಸಾಲಿ ಉಪಸ್ಥಿತರಿದ್ದರು.

‘ಗೊಂದಲ ಸೃಷ್ಟಿ’ 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿದ್ದಾಗ ಪ್ರತಿ ವರ್ಷ ಲೆಕ್ಕ ಸಲ್ಲಿಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಕಸಾಪ  ಲೆಕ್ಕ ಪತ್ರ ನೀಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗುವುದಾಗಿ ಕೆಲವರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ನಿಂತ ತಕ್ಷಣ ಅಪರಾಧಿಗಳಾಗುವುದಿಲ್ಲ. ಕೆಲವರು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT