ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಬಾಲಕರ ಆಶ್ರಯತಾಣ ‘ಬಸವ ನೆಲೆ’

ಧಾರ್ಮಿಕ ಕಾರ್ಯಕ್ರಮಗಳ ಮಧ್ಯೆ ಬಸವ ಕೇಂದ್ರದ ಸದ್ದಿಲ್ಲದ ಸಮಾಜಸೇವೆ
Last Updated 13 ಫೆಬ್ರುವರಿ 2017, 6:45 IST
ಅಕ್ಷರ ಗಾತ್ರ

ಶಿವಮೊಗ್ಗ: ತುಳಿತಕ್ಕೆ ಒಳಗಾದವರು, ಅನಾಥರು, ನಿರ್ಲಕ್ಷಿತರ ಕುರಿತು ಸಮಾಜದ ಅನುಕೂಲಸ್ಥ ಜನರು ದಿನದ ಅರ್ಧ ಗಂಟೆ ಯೋಚಿಸಿದರೂ, ತಾವು ದುಡಿದ ಹಣದಲ್ಲಿ ಒಂದು ಚಿಕ್ಕ ಭಾಗ ವ್ಯಯಿಸಿದರೂ ಅಂಥವರ ಬಾಳು ಹಸನಾಗದೇ ಇರುತ್ತದೆಯೇ?

ಸಮಾಜ ಸೇವೆಯ ಮನೋಭಾವದ ಒಂದಿಷ್ಟು ಜನರ ಗುಂಪು ಹೀಗೆ ಯೋಚಿಸಿದ್ದರ ಫಲವಾಗಿ ಅಸ್ತಿತ್ವಕ್ಕೆ ಬಂದದ್ದೇ ‘ಬಸವ ನೆಲೆ’

‘ಅನ್ನದೇವರ ಮುಂದೆ ಇನ್ನು ದೇವರು ಉಂಟೆ? ಅನ್ನವನು ಕೊಡು ಮೊದಲು’  ಎಂದು ನಂಬಿದ್ದ ಸಮಾಜ ಸೇವಕ ಜಿ.ಬೆನಕಪ್ಪ, ಉದ್ಯಮಿಗಳಾದ ಎನ್‌.ಕೆ.ದಾನಪ್ಪ, ಎಂ.ಹಾಲಪ್ಪ ಮಜ್ಜಿಗೆ, ಎಸ್‌.ರುದ್ರೇಗೌಡ, ಪ್ರೊ.ಎ.ಎಸ್‌. ಚಂದ್ರಶೇಖರ್, ಕೆ.ಸಿ.ಬಸವರಾಜು ಸೇರಿದಂತೆ ಹಲವು ಸಮಾನ ಮನಸ್ಕರು ಸೇರಿಕೊಂಡು ಅನಾಥ, ನಿರ್ಗತಿಕ ಮಕ್ಕಳಿಗೆ ಅನ್ನ, ಆಶ್ರಯ, ಶಿಕ್ಷಣ ನೀಡಲು 2007–08ನೇ ಸಾಲಿನಲ್ಲಿ ‘ಬಸವನೆಲೆ ಬಾಲಕಾಶ್ರಮ ಟ್ರಸ್ಟ್‌’ ಸ್ಥಾಪಿಸಿದ್ದರು.

ಅತ್ಯಂತ ಬಡತನದಲ್ಲಿ ಇರುವವರು, ತಾಯಿ ಇದ್ದೂ ತಂದೆ ಇಲ್ಲದ, ತಂದೆ ಇದ್ದೂ ತಾಯಿ ಇಲ್ಲದ ಅಥವಾ ಇಬ್ಬರೂ ಇಲ್ಲದೇ ಅನಾಥರಾಗಿರುವ ಬಾಲಕರಿಗೆ ಆಶ್ರಯ ಕಲ್ಪಿಸಲಾಗಿದೆ. ಮೂರು ಹೊತ್ತು ಊಟ–ತಿಂಡಿ ನೀಡುವ ಜತೆಗೆ, ಅವರಿಗೆ ಬಟ್ಟೆ, ಪುಸ್ತಕ, ಸೋಪು, ಪೆನ್ನು, ಹಾಳೆ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನೂ ಕೊಡಿಸಲಾಗುತ್ತಿದೆ. ಉತ್ತಮ ಶಾಲೆಗಳಲ್ಲಿ ಅವರಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

1ರಿಂದ 7ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ, 7ರ ನಂತರ ಖಾಸಗಿ ಶಾಲೆಗಳಲ್ಲಿ ಓದಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲ ಶುಲ್ಕ, ಆರೋಗ್ಯದ ಖರ್ಚು–ವೆಚ್ಚಗಳನ್ನೂ ಬಸವ ನೆಲೆಯೇ ಭರಿಸುತ್ತಿದೆ. ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವವರೆಗೂ ಆಸರೆಯಾಗಿ ನಿಂತಿದೆ.

ನಗರದ ಕೆಇಬಿ ವೃತ್ತದ ಈಗಿನ ರೈಸ್‌ ಬೌಲ್‌ ಹೋಟೆಲ್‌ ಜಾಗದ ಹಳೆಯ ಮನೆಯಲ್ಲಿ ಬಸವ ನೆಲೆಯನ್ನು ಆರಂಭಿ ಸಲಾಗಿತ್ತು. ನಂತರ ಆ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ಜಾಗದ ಮಾಲೀಕರು ನಿರ್ಧರಿಸಿದಾಗ ‘ನೆಲೆ’ಯನ್ನು ವೆಂಕಟೇಶ್ವರ ನಗರದ ಬಸವ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

‘ಬಸವ ನೆಲೆ’ಗೆ ಇಂತಿಷ್ಟೇ ಬಾಲಕರು ಇರಬೇಕು ಎಂದೇನೂ ಇಲ್ಲ. ಆಶ್ರಯ, ಶಿಕ್ಷಣದ ತೀರ ಅಗತ್ಯ ಇರುವವರಿಗೆ ಪ್ರವೇಶ ನೀಡಲಾಗುತ್ತದೆ. ನಗರದ ಕೆಲವು ದಿನಸಿ ವ್ಯಾಪಾರಿಗಳು, ಉದ್ಯಮಿಗಳು, ರೈಸ್‌ಮಿಲ್‌ ಮಾಲೀಕರು ಮಕ್ಕಳಿಗೆ ಅಗತ್ಯವಾದ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ಸಾಮಗ್ರಿ ಪೂರೈಸುತ್ತಾರೆ. ಆದರೆ, ಯಾವ ದಾನಿಗಳೂ ಹೆಸರು ಬಹಿರಂಗ ಮಾಡಬಾರದು ಎಂದು ಷರತ್ತು ಹಾಕುತ್ತಾರೆ.

ತಾವು ಮಾಡಿದ ದಾನವನ್ನು ಎಲ್ಲೂ ಹೇಳಿಕೊಳ್ಳುವುದಿಲ್ಲ. ಟ್ರಸ್ಟಿಗಳು, ದಾನಿಗಳ ನೆರವಿನಿಂದ ಇಂತಹ ಕಾರ್ಯ ಸಾಕಾರವಾಗಿದೆ’ ಎನ್ನುತ್ತಾರೆ ಬಸವ ನೆಲೆಯ ಗೌರವಾಧ್ಯಕ್ಷ ಬಸವ ಮರುಳಸಿದ್ದ ಸ್ವಾಮೀಜಿ.

ವಚನ ಪುಸ್ತಕಗಳ ಭಂಡಾರ: ಬಸವಕೇಂದ್ರ–ಬಸವನೆಲೆಯಲ್ಲಿ 12ನೇ ಶತಮಾನದ ಶರಣರ ವಚನಗಳ ಭಂಡಾರ ಇದೆ.  ಬಸವಾದಿ ಶರಣರ ವಚನಗಳ ಸುಮಾರು 3 ಸಾವಿರ ಪುಸ್ತಕಗಳು ಇಲ್ಲಿವೆ. ಹಲವು ಅಧ್ಯಯನಗಾರರು ಇಲ್ಲಿಗೆ ಭೇಟಿ ನೀಡಿ, ಅಧ್ಯಯನ ನಡೆಸುತ್ತಾರೆ. ನೆಲೆಗೆ ಬಂದ ಹಲವು ಬಾಲಕರು ಪಿಯು, ಪದವಿ ಪೂರೈಸಿದ್ದಾರೆ.

ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಅಲ್ಲಿನ ಮಕ್ಕಳೇ ಅಭಿನಯಿಸಿದ, ಮಾರಶೆಟ್ಟಿಹಳ್ಳಿ ಕಿರಣ್‌ ನಿರ್ದೇಶಿಸಿದ, ಚಂದ್ರಶೇಖರ ಕಂಬಾರರ ‘ಕಿಟ್ಟಿ ಕಥೆ’ ಕೇರಳದ ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಪ್ರಸ್ತುತ ಎಂ.ಹಾಲಪ್ಪ (ಅಧ್ಯಕ್ಷ) ಎಸ್‌.ಚಂದ್ರಶೇಖರಪ್ಪ (ಉಪಾಧ್ಯಕ್ಷ), ಎಚ್‌.ಡಿ. ನಾಗರಾಜ್‌ (ಕಾರ್ಯದರ್ಶಿ) ಎಚ್‌.ಜಿ.ಬಸವರಾಜಪ್ಪ (ಖಜಾಂಚಿ) ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಸವ ನೆಲೆಯ ‘ಬಸವ ಕೇಂದ್ರ’

ಶಿವಮೊಗ್ಗ ನಗರದ ಧಾರ್ಮಿಕ ಆಸಕ್ತಿಯ ಎನ್‌.ಕೆ.ದಾನಪ್ಪ, ಜಿ. ಬೆನಕಪ್ಪ, ಡಾ.ಮರಿಗೇಂದ್ರಪ್ಪ, ನಾಗರಾಜಪ್ಪ, ಪಂಚಣ್ಣ, ವೀರೇಶಪ್ಪ, ಸಂತೇಕಡೂರು ನವಿಲಪ್ಪ, ಎ.ಎಸ್‌.ಚಂದ್ರಶೇಖರ್‌ ಮತ್ತಿತರರು ಸೇರಿಕೊಂಡು ಪ್ರಭುದೇವ ಜ್ಞಾನ ಕೇಂದ್ರ ಸ್ಥಾಪಿಸಿದ್ದರು.  ಇದು 1997ರಿಂದ ಚಿತ್ರದುರ್ಗದ ಮುರುಘಾ ಶರಣರ ಮಾರ್ಗದರ್ಶನದಲ್ಲಿ ಬಸವ ಕೇಂದ್ರವಾಗಿ ಮುಂದುವರಿದಿದೆ.

ಮಾಸಿಕ ಶಿವಾನುಭವ, ಶರಣ ಸಂಗಮ, ವಿಚಾರ ಗೋಷ್ಠಿಗಳು, ಗಾನ, ಗಮಕ, ಕೀರ್ತನಾ, ವಚನ ಶ್ರಾವಣ, ಬಸವ ಜಯಂತಿ ಮತ್ತಿತರ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ಬಸವ ಜಯಂತಿ ಶತಮಾನೋತ್ಸವದ ನೆನಪಿಗಾಗಿ ವೆಂಕಟೇಶ್ವರ ನಗರದ ಬಸವಕೇಂದ್ರದಲ್ಲೇ ಈಚೆಗೆ ‘ಸ್ಮಾರಕ ಭವನ’ ನಿರ್ಮಿಸಲಾಗಿದೆ.

* ದುಡಿಯಲು ಶಕ್ತಿ ಇಲ್ಲದ ಕುಟುಂಬಕ್ಕೂ ಅವಕಾಶ ಮಾಡಿಕೊಡಲಾಗಿದೆ. ಕೆಲವರು ಆರ್ಥಿಕವಾಗಿ ಶಕ್ತರಾದ ಮೇಲೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.
–ಎಂ.ಹಾಲಪ್ಪ, ಅಧ್ಯಕ್ಷರು, ಬಸವನೆಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT