ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತೋಟ ಉಳಿಸಿಕೊಳ್ಳಲು ಪರದಾಟ

ಚಿಕ್ಕಜಾಜೂರು: ಬರದ ಹೊಡೆತಕ್ಕೆ ಒಣಗುತ್ತಿರುವ ತೋಟಗಳು, ಕಂಗಾಲಾದ ಬೆಳೆಗಾರರು
Last Updated 13 ಫೆಬ್ರುವರಿ 2017, 7:14 IST
ಅಕ್ಷರ ಗಾತ್ರ

ಚಿಕ್ಕಜಾಜೂರು:  ಎರಡು ಹಿಂಗಾರು ಮತ್ತು ಒಂದು ಮುಂಗಾರು ಮಳೆ ಕೈಕೊಟ್ಟ ಕಾರಣ ಬಿ. ದುರ್ಗ ಹೋಬಳಿ ಯಲ್ಲಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ ನೂರಾರು ಅಡಿಕೆ ತೋಟಗಳು ಒಣಗಿವೆ.

ಸಮೀಪದ ಹೊಸಹಳ್ಳಿ ಗ್ರಾಮದ ಕೆಲವು ಅಡಿಕೆ ತೋಟಗಳು ಸಂಪೂರ್ಣವಾಗಿ ಒಣಗಿಹೋಗಿದ್ದರೆ, ಮತ್ತೆ ಕೆಲವು ಇನ್ನೇನು ಒಣಗುವ ಹಂತದಲ್ಲಿವೆ. ಇದು  ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.ಗ್ರಾಮದ ಪಂಚಾಕ್ಷರಿ ಎಂಬ ರೈತ 22 ವರ್ಷಗಳ ಹಿಂದೆ ಎರಡು ಎಕರೆ ಜಮೀನಿನಲ್ಲಿ ಸುಮಾರು 900 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು.

‘ಜಮೀನಿನಲ್ಲಿದ್ದ ಕೊಳವೆಬಾವಿಯಲ್ಲಿ ಎರಡು ಇಂಚು ನೀರು ಬರುತ್ತಿತ್ತು. ಫಸಲಿಗೆ ಬಂದ ನಂತರ ತೋಟದಿಂದ ಪ್ರತಿವರ್ಷ ₹ 4–5 ಲಕ್ಷ ಆದಾಯ ಬರುತ್ತಿತ್ತು. ಆದರೆ, ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೊಳವೆಬಾವಿಗಳಲ್ಲಿನ ನೀರು ಸಂಪೂರ್ಣವಾಗಿ ಬತ್ತಿಹೋಯಿತು. ತೋಟವನ್ನು ಉಳಿಸಿ
ಕೊಳ್ಳಲು ಭೂತಜ್ಞರಿಂದ ಪರೀಕ್ಷೆ ಮಾಡಿಸಿ, 600 ಅಡಿ ಆಳದ ಮತ್ತೊಂದು ಕೊಳವೆಬಾವಿ ಕೊರೆಯಿಸಿದೆ.

ಆದರೆ ಅದರಲ್ಲಿ ಒಂದು ಹನಿಯೂ ನೀರು ಬರಲಿಲ್ಲ’ ಎಂದು ಹತಾಶೆಯಿಂದ ನುಡಿಯುತ್ತಾರೆ ಪಂಚಾಕ್ಷರಪ್ಪ.ಗ್ರಾಮದ ತಿಪ್ಪೇಸ್ವಾಮಿ, ಜಯರಾಮಪ್ಪ, ಬಸಪ್ಪ, ಚಂದ್ರಪ್ಪ, ಶ್ರೀಕಾಂತ್, ಚೌಡಪ್ಪ, ನಿಂಗಪ್ಪ ಇನ್ನಿತರ ರೈತರಿಗೆ ಸೇರಿದ್ದ ಸುಮಾರು 45–50 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ತೋಟಗಳು ಭಾಗಶಃ ಒಣಗುತ್ತಿವೆ. ಅಲ್ಲದೆ, ಫೆಬ್ರುವರಿ ತಿಂಗಳ ಅಂತ್ಯಕ್ಕೆ ಅಥವಾ ಮಾರ್ಚ್‌/ಏಪ್ರಿಲ್‌ ವೇಳೆಗೆ ಒಣಗುವ ತೋಟಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮದ ರೈತರು.

ಬರಿದಾಗುತ್ತಿರುವ ಕೊಳವೆಬಾವಿಗಳು:  ಬಿ.ದುರ್ಗ ಹೋಬಳಿಯ ಅನೇಕ ಗ್ರಾಮಗಳಲ್ಲಿ ಜನವರಿ ತಿಂಗಳ ಆರಂಭದಿಂದಲೂ ಕೊಳವೆಬಾವಿಗಳಲ್ಲಿನ ನೀರು ಬರಿದಾಗುತ್ತಿದ್ದು, ರೈತರು ತಮ್ಮ ಫಸಲಿಗೆ ಬಂದಿರುವ ತೋಟಗಳನ್ನು ಉಳಿಸಿಕೊಳ್ಳಲು ಹೊಸದಾಗಿ ಕನಿಷ್ಠ 500– 800 ಅಡಿ ಆಳದವರೆಗೆ ಹೊಸ ಕೊಳವೆಬಾವಿಗಳನ್ನು ಕೊರೆಯಿಸುವ ಯತ್ನ ನಡೆಸಿದ್ದಾರೆ. ಪ್ರತಿ ಗ್ರಾಮದಲ್ಲೂ ದಿನ ನಿತ್ಯ 6–10 ಕೊಳವೆಬಾವಿಗಳನ್ನು ಕೊರೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆದರೆ, ಇದರಲ್ಲಿ ಒಂದು ಅಥವಾ ಎರಡು ಕೊಳವೆಬಾವಿಗಳಲ್ಲಿ ಸಾಧಾರಣ ನೀರು ಕಾಣಿಸಿಕೊಂಡರೆ, ಉಳಿದವುಗಳಲ್ಲಿ ಬರಿ ದೂಳು ಕಾಣಿಸಿಕೊಳ್ಳುತ್ತಿದೆ. ಹೊಸದಾಗಿ ಕೊರೆಯಿಸಿರುವ ಕೊಳವೆಬಾವಿಯಲ್ಲಿನ ನೀರು ವಾರ–ಹದಿನೈದು ದಿನಗಳೊಳಗೆ ಸಂಪೂರ್ಣವಾಗಿ ನಿಂತುಹೋಗುತ್ತಿದೆ.

ಇದು ಬಹುತೇಕ ರೈತರಲ್ಲಿ ನಿರಾಸೆ ಮೂಡಿಸಿದೆ.ಸಾಲ ಬಾಧೆಯೂ ಕಾಡಲಾರಂಭಿಸಿದೆ. ಇದರಿಂದಾಗಿ ಬಹುತೇಕ ರೈತರು ತೋಟಗಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಳೆಗಾಲ ಆರಂಭವಾಗುವ ವೇಳೆಗೆ ಬಹುತೇಕಅಡಿಕೆ ತೋಟಗಳಿದ್ದ ಜಮೀನುಗಳುಬೆದ್ದಲು ಜಮೀನುಗಳು ಆಗುವುದರಲ್ಲಿ ಸಂದೇಹವಿಲ್ಲ.

– ಜೆ.ತಿಮ್ಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT