ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗ ಬದಲಾವಣೆ; ಹೆಚ್ಚಿದ ಸಂಚಾರ ದಟ್ಟಣೆ!

ಹಳೆಯ ಮಾರ್ಗವನ್ನೇ ಅನುಸರಿಸಲು ನಾಗರಿಕರ ಒತ್ತಾಯ l ಬಸ್ಸುಗಳ ನಗರ ಪ್ರವೇಶ ನಿರ್ಬಂಧಕ್ಕೂ ಆಕ್ಷೇಪ
Last Updated 13 ಫೆಬ್ರುವರಿ 2017, 7:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಒಂದೇ ಸಮಯಕ್ಕೆ ಎರಡು ಕಡೆಯಿಂದಲೂ ನುಗ್ಗಿ ಬರುವ ನಾಲ್ಕಾರು ಬಸ್ಸುಗಳು, ಎಡ–ಬಲ ಭಾಗಗಳಲ್ಲಿ ಆಟೊಗಳು, ಜತೆಗೆ ಸರ್ರನೆ ಬರುವ ದ್ವಿಚಕ್ರ ವಾಹನಗಳು, ರಸ್ತೆಯ ಇಕ್ಕೆಲಗಳಲ್ಲೂ ರಸ್ತೆ ಒತ್ತುವರಿ ಮಾಡಿರುವ ಪೆಟ್ಟಿಗೆ ಅಂಗಡಿಗಳು, ತರಕಾರಿ ತುಂಬಿದ ಗಾಡಿಗಳು. ಇವುಗಳ ಮಧ್ಯೆ ಸಾಹಸ ಮಾಡಿಕೊಂಡು ಸಂಚರಿಸುವ ಪಾದಚಾರಿಗಳು...

ನಗರದ ಪ್ರಮುಖ ಬಿ.ಡಿ ರಸ್ತೆ, ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ನಿಲ್ದಾಣದ ರಸ್ತೆ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ನಿತ್ಯವೂ ಕಂಡುಬರುವ ಟ್ರಾಫಿಕ್ ಕಿರಿಕಿರಿಯ ದೃಶ್ಯಗಳಿವು.

ಇದು ಹೊಸ ಸಮಸ್ಯೆಯಲ್ಲ, ಮೊದಲಿನಿಂದಲೂ ಇದೆ. ಹೊಸದಾಗಿ ಮಾರ್ಗ ಬದಲಾಯಿಸಿ, ಏಕಮುಖ ಮಾರ್ಗಗಳನ್ನು ಅದಲು ಬದಲು ಮಾಡಿದ ನಂತರ ಈ ಟ್ರಾಫಿಕ್ ಸಮಸ್ಯೆ ದುಪ್ಪಟ್ಟಾಗಿದೆ’ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹೆಚ್ಚಿದ ಟ್ರಾಫಿಕ್:  ‘ಮೊದಲು ಗಾಂಧಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಗೆ ಏಕಮುಖ ಸಂಚಾರ ವಿತ್ತು. ಆಗ ಬೆಂಗಳೂರು ಕಡೆಯಿಂದ ಬರುವ ವಾಹನಗಳೆಲ್ಲ ಹೊಳಲ್ಕೆರೆ ರಸ್ತೆಗೆ ಬಂದು, ಅಂಚೆ ಇಲಾಖೆ ಮುಂಭಾಗದ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣ ತಲುಪುತ್ತಿದ್ದವು. ಈ ಹಳೆಯ ವ್ಯವಸ್ಥೆ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ ಎಂದು ಸಂಚಾರ ಪೊಲೀಸರು ವಿಭಾಗ ಏಕಮುಖ ಸಂಚಾರವನ್ನು ಅದಲು ಬದಲು ಮಾಡಿದರು. ಆದರೆ, ಇದರಿಂದ ಸಮಸ್ಯೆ ಬಗೆಹರಿಯುವುದರ ಬದಲಿಗೆ ಬಸ್ ನಿಲ್ದಾಣ ವೃತ್ತದಲ್ಲಿ ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಿದೆ’ ಎನ್ನುತ್ತಾರೆ ಉದ್ಯಮಿ ಜೆ.ಎಂ. ಜಯಕುಮಾರ್.

‘ಹೊಸ ಮಾರ್ಗ ಬದಲಾವಣೆಯಿಂದ ಬಿ.ಡಿ.ರಸ್ತೆ ಕಡೆಯಿಂದ ಬರುವ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ದಾವಣಗೆರೆ ಕಡೆಯಿಂದ ಬರುವಂತಹ ಬಸ್ಸು ಮತ್ತಿತರ ವಾಹನಗಳು ಏಕಕಾಲಕ್ಕೆ ಬಸ್ ನಿಲ್ದಾಣದ ವೃತ್ತಕ್ಕೆ ತಲುಪುವುದರಿಂದ ಟ್ರಾಫಿಕ್ ಸಮಸ್ಯೆ ಮೊದಲಿಗಿಂತಲೂ ಹೆಚ್ಚಾಗಿದೆ’ ಎನ್ನುತ್ತಾರೆ ಅವರು.

‘ಬಸ್ ನಿಲ್ದಾಣದಿಂದ ಬೆಂಗಳೂರು, ದಾವಣಗೆರೆ, ಹೊಳಲ್ಕೆರೆ, ಶಿವಮೊಗ್ಗ ಕಡೆಗೆ ಹೊರಡುವ ಎಲ್ಲ ಬಸ್ಸುಗಳು ಒಂದೇ ರಸ್ತೆಯಲ್ಲಿ ಸಂಚರಿಸಿದರೆ, ಟ್ರಾಫಿಕ್ ಒತ್ತಡ ಹೆಚ್ಚದೇ ಇನ್ನೇನಾಗುತ್ತದೆ ಎನ್ನುವ ಅವರು, ‘ಹಳೇ ವ್ಯವಸ್ಥೆ ಮರು ಜಾರಿಯಾದರೆ ಮಾತ್ರ ಟ್ರಾಫಿಕ್ ತುಸು ಕಡಿಮೆಯಾಗಬಹುದು’ ಎಂದು ಅಭಿಪ್ರಾಯಪಡುತ್ತಾರೆ.

ಬಸ್ಸುಗಳ ಸಂಚಾರಕ್ಕೆ ನಿರ್ಬಂಧ: ಮಾರ್ಗ ಬದಲಾವಣೆ ಜತೆಗೆ ಬೆಂಗಳೂರು, ಚಳ್ಳಕೆರೆ, ಹಿರಿಯೂರು ಕಡೆಗೆ ಸಂಚರಿಸುವ ಬಸ್ಸುಗಳಿಗೂ ಬೆಳಗಿನ ವೇಳೆ ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವುದಕ್ಕೆ ಹಿರಿಯ ನಾಗರಿಕ ಎಸ್‌.ಜಿ.ಕರಿಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮೊದಲು ಐ.ಬಿ.ಯಿಂದ ಮೆಜೆಸ್ಟಿಕ್ ವೃತ್ತ, ಜಿಲ್ಲಾ ಆಸ್ಪತ್ರೆ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ, ಪೊಲೀಸ್‌ ಇಲಾಖೆ ಈಚೆಗೆ ಅವೈಜ್ಞಾನಿಕ ಒನ್‌ವೇ ಮಾಡಿರುವುದರಿಂದ ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎನ್ನುತ್ತಾರೆ ಅವರು.

‘ಬಸ್ ಸಂಚಾರ ಹಾಗೂ ಬಸ್ ನಿಲ್ದಾಣವನ್ನು ಗುರಿಯಾಗಿಟ್ಟುಕೊಂಡು ಸಮೀಪದಲ್ಲಿ ಮನೆ ಮಾಡಿರುತ್ತೇವೆ. ಹೀಗೆ ಏಕಾಏಕಿ ಬದಲಾಯಿಸಿದರೆ ಎಲ್ಲರೂ ಚಳ್ಳಕೆರೆ ಗೇಟ್‌ಗೆ ಹೋಗಿ ಬಸ್ ಹತ್ತಲು ಸಾಧ್ಯವೇ’ ಎನ್ನುವುದು ಹಿರಿಯ ನಾಗರಿಕರ ಪ್ರಶ್ನೆಯಾಗಿದೆ. 

ಮೈಕ್‌ಗೂ ಆಕ್ಷೇಪ: ‘ಪ್ರಮುಖ ವೃತ್ತಗಳಲ್ಲಿ ಸಂಚಾರ ನಿಯಮ ಸೂಚನೆ ನೀಡಲು ಹಾಗೂ ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೊಲೀಸ್ ವಿಭಾಗದಿಂದ ಮೈಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೀಗೆ ಪ್ರಕಟಣೆ ನೀಡುವುದರಿಂದ ಅಕ್ಕಪಕ್ಕದ ಅಂಗಡಿಗಳವರಿಗೆ ತುಂಬಾ ಕಿರಿಕಿರಿಯಾಗುತ್ತಿದೆ’ ಎನ್ನುತ್ತಾರೆ ಜಯಕುಮಾರ್.

ಆದರೆ, ಆಟೊ ಚಾಲಕರು ‘ಮೈಕ್್ ಪ್ರಕಟಣೆ’ ಕುರಿತು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ‘ಮೈಕ್’ ಮೂಲಕ ಸೂಚನೆ ನೀಡುವುದರಿಂದ ನಮಗೇನೂ ತೊಂದರೆಯಾಗಿಲ್ಲ. ಆದರೆ, ಒನ್ ವೇ ಬದಲಾಯಿಸಿದ್ದರಿಂದ ನಗರದಲ್ಲಿ ಇನ್ನೂ ಸಂಚಾರ ದಟ್ಟಣೆ ಹೆಚ್ಚಾಗಿರುವುದಂತೂ ನಿಜ’ ಎಂದು ಕೆಲವು ಆಟೊ ಚಾಲಕರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT