ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಅಧ್ಯಯನ ತಂಡಕ್ಕೆ ಬರ ದರ್ಶನ

ಕೊಪ್ಪಳ, ಕುಷ್ಟಗಿ, ಯಲಬುರ್ಗದ ಬರಪೀಡಿತ ಪ್ರದೇಶಗಳಿಗೆ ತಂಡ ಭೇಟಿ, ವಸ್ತುಸ್ಥಿತಿ ದಾಖಲು
Last Updated 13 ಫೆಬ್ರುವರಿ 2017, 8:43 IST
ಅಕ್ಷರ ಗಾತ್ರ

ಕೊಪ್ಪಳ:  ಹಿಂಗಾರು ಮಳೆಯ ವೈಫಲ್ಯದಿಂದ ಹಾನಿಯಾಗಿರುವ ಕುರಿತು ಪರಿಶೀಲನೆಗೆ ಬಂದಿದ್ದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಭಾನುವಾರ ಜಿಲ್ಲೆಯಲ್ಲಿನ ಭೀಕರ ಬರದ ದರ್ಶನವಾಯಿತು.

ಕೇಂದ್ರ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದಿನ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ ಹಾಗೂ ಕೇಂದ್ರ ಪಶುಸಂಗೋಪನೆ ಇಲಾಖೆ ಮೇವು ಬೇಸಾಯ ವಿಭಾಗದ ದೆಹಲಿ ಅಧಿಕಾರಿ ವಿಜಯ ಥಾಕರೆ ಮತ್ತು ಭಾರತೀಯ ಆಹಾರ ನಿಗಮ ಬೆಂಗಳೂರು ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಎಲ್. ಚತ್ರು ನಾಯಕ್ ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ,  ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಹಿಂಗಾರು ಬೆಳೆ ಹಾನಿ, ಬರಿದಾದ ಕೃಷಿ ಹೊಂಡಗಳು, ಉದ್ಯೋಗಖಾತ್ರಿ ಯೋಜನೆಯ ಪ್ರಗತಿ, ಜಾನುವಾರುಗಳ ರಕ್ಷಣೆಗಾಗಿ ತೆರೆದಿರುವ ಗೋಶಾಲೆ ಸ್ಥಳಗಳಿಗೆ ಭೇಟಿ ನೀಡಿ, ಬರದ ದರ್ಶನ ಪಡೆಯಿತು.

ಯಲಬುರ್ಗಾ ತಾಲ್ಲೂಕು ತಳಕಲ್ ಗ್ರಾಮದ ಬಳಿ ಶಿವಪ್ಪ ಆದಾಪುರ ರೈತನ ಹೊಲಕ್ಕೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ 12 ಎಕರೆ ಕಡಲೆ ಬೆಳೆ ಒಣಗಿಹೋಗಿರುವುದನ್ನು ಪರಿಶೀಲಿಸಿತು. ನಂತರ ಬನ್ನಿಕೊಪ್ಪ ಬಳಿಯ ಚನ್ನಪ್ಪ ಗೊಂಡಬಾಳ ಎಂಬುವರ ಜಮೀನಿಗೆ ಭೇಟಿ ನೀಡಿದ ತಂಡ, ಇಲ್ಲಿ ಜೋಳ ಬೆಳೆ ಸಂಪೂರ್ಣ ನೆಲಕಚ್ಚಿರುವುದನ್ನು ಕಂಡು, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಂಡಿತು. ಈ ರೈತ ತನ್ನ 13 ಎಕರೆ ಜಮೀನಿನಲ್ಲಿ ಬೆಳೆದಿರುವ ಜೋಳದ ಬೆಳೆ ಸಂಪೂರ್ಣ ಹಾನಿಯಾಗಿದೆ.

ಬಳಿಕ ತಂಡದ ಮುಖ್ಯಸ್ಥ ಡಾ. ಕೆ.ಪೊನ್ನುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯದಲ್ಲಿ ತೀವ್ರ ಬರ ತಲೆದೋರಿದ್ದು, ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬರದ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ 3 ತಂಡಗಳನ್ನು ರಚಿಸಿಕೊಂಡು ಬಂದಿದ್ದೇವೆ.

ಜಿಲ್ಲೆಯ ಪರಿಸ್ಥಿತಿಯನ್ನು ಕಂಡಿದ್ದೇವೆ.  ಹತ್ತು ವರ್ಷಗಳಿಂದ ನಿರಂತರ ಬರ ಪರಿಸ್ಥಿತಿಯನ್ನು ಜಿಲ್ಲೆ ಎದುರಿಸುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದ್ದಾರೆ. ಫೆ.13 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸುತ್ತೇವೆ. ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರ ಸಲ್ಲಿಸುತ್ತೇವೆ. ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರ ಪರಿಹಾರ ಅನುದಾನ ಬಿಡುಗಡೆ ಮಾಡಲಿದೆ ಎಂದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 1.55 ಲಕ್ಷ ಹೆಕ್ಟರ್‌ ಹಿಂಗಾರು ಬಿತ್ತನೆ ಗುರಿಯ ಬದಲಿಗೆ 1.03 ಲಕ್ಷ ಹೆ. ಹಿಂಗಾರು ಬಿತ್ತನೆಯಾಗಿತ್ತು.  ಆದರೆ ಹಿಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣ 95,726 ಹೆ. ಪ್ರದೇಶದಲ್ಲಿ ಶೇಕಡ 33 ಕ್ಕಿಂತ ಹೆಚ್ಚು ಹಾನಿಯಾಗಿದೆ.

ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಜಿಲ್ಲೆಗೆ ₹61 ಕೋಟಿ ಅನುದಾನ ಒದಗಿಸುವಂತೆ ವರದಿ ಸಲ್ಲಿಸಿದ್ದೇವೆ. ಮುಂಗಾರು ಹಂಗಾಮಿನ ₹121 ಕೋಟಿ  ಹಾಗೂ ಹಿಂಗಾರು ಹಂಗಾಮಿನ ₹61 ಕೋಟಿ ಸೇರಿದಂತೆ ಒಟ್ಟು ₹182 ಕೋಟಿ  ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಜಂಟಿಕೃಷಿ ನಿರ್ದೇಶಕ ಡಾ.ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಶೀಲ್ದಾರ್ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ್ ರಮೇಶ್ ಅಳವಂಡಿಕರ್ ಇದ್ದರು.

* ಮುಂಗಾರು ಹಂಗಾಮಿನ ₹121 ಕೋಟಿ ಹಾಗೂ ಹಿಂಗಾರು ಹಂಗಾಮಿನ 61 ಕೋಟಿ ಸೇರಿದಂತೆ ಒಟ್ಟು ₹182 ಕೋಟಿ ಬರ ಅನುದಾನವನ್ನು ಜಿಲ್ಲೆಗೆ ಒದಗಿಸುವಂತೆ ವರದಿ ಸಲ್ಲಿಸಿದ್ದೇವೆ.
ಎಂ.ಕನಗವಲ್ಲಿ, ಜಿಲ್ಲಾಧಿಕಾರಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT