ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಜೋಡಣೆಗಾಗಿ ಬದುಕು ನಿತ್ರಾಣ!

‘ಬದುಕು ಭಾರವಾಗಿಸಿರುವ ಆಧಾರ್ ಲಿಂಕ್‌!
Last Updated 13 ಫೆಬ್ರುವರಿ 2017, 9:56 IST
ಅಕ್ಷರ ಗಾತ್ರ

ಯಾದಗಿರಿ: ಆಧಾರ್ ಜೋಡಣೆ ಮಾಡಿದ ಪಡಿತರ ಚೀಟಿಗೆ ಕೂಪನ್‌ ನೀಡುವ ಪದ್ಧತಿ ಜಾರಿಗೊಂಡ ಮೇಲೆ ಜಿಲ್ಲೆಯ ಬಿಪಿಎಲ್‌ ಫಲಾನುಭವಿಗಳು ಆಧಾರ್‌ ಜೋಡಣೆಗಾಗಿ ಸರತಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದಾರೆ.

ನಿಧಾನವಾಗಿ ಬೇಸಿಗೆಯ ಬಿಸಿಲು ಹೆಚ್ಚುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 36 ಡಿಗ್ರಿಯಷ್ಟು ಉಷ್ಣಾಂಶ ಮುಟ್ಟಿದೆ. ಬದುಕಿಗೆ ಆಧಾರವಾಗಿರುವ ಕೂಲಿ ಬಿಟ್ಟು ನಿತ್ಯ ಸುಡುಬಿಸಿಲಿನಲ್ಲಿ ಆಧಾರ್‌ ಜೋಡಣೆಗಾಗಿ ನಿಲ್ಲುವಂತಹ ಸಂಕಷ್ಟವನ್ನು ಬಡಜನರು ನಿತ್ಯ ಎದುರಿಸುವಂತಾಗಿದೆ.

‘ಆಧಾರ್‌್’ ಕಡ್ಡಾಯ ಏಕೆ ಎಂಬುದಾಗಿ ಈಚೆಗೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ‘ಆಧಾರ ಕಡ್ಡಾಯ ಇಲ್ಲ’ ಎಂಬುದಾಗಿ ವಿವರಣೆ ನೀಡಿದೆ. ಆಧಾರ್ ಕಾರ್ಡ್‌ ವ್ಯಕ್ತಿ ನಿರ್ದಿಷ್ಟ ವಿಳಾಸದ ಗುರುತು ಸೂಚಕ ಸಾಂಕೇತಿಕ ಪ್ರಮಾಣಪತ್ರ ಎಂಬುದಾಗಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದೆ.

ಆದರೆ, ಈ ಸಂಗತಿ ರಾಜ್ಯ ಸರ್ಕಾರಕ್ಕೆ ಮನವರಿಕೆಯಾದಂತಿಲ್ಲ. ಬಿಪಿಎಲ್‌ ಪಡಿತರದಾರರು ಆಧಾರ್ ಜೋಡಣೆ ಮಾಡುವಂತೆ ಆಹಾರ ಇಲಾಖೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಕೇಂದ್ರ ಕಚೇರಿ ಮುಂದೆ ಫಲಾನುಭವಿಗಳ ಸರತಿ ಸಾಲು ನಿತ್ಯ ನಿರ್ಮಾಣಗೊಳ್ಳುತ್ತಿದೆ. ಆದರೆ, ಆಧಾರ್‌ಜೋಡಣೆ ಮಾಡುವ ಕಾರ್ಯ ಮಾತ್ರ ಆಮೆಗತಿಯಾಗಿದೆ.

ಜಿಲ್ಲೆಯಲ್ಲಿನ ಸಮಸ್ತ ಬಿಪಿಎಲ್‌ ಫಲಾನುಭವಿಗಳು ನಗರದ ಆಹಾರ ಇಲಾಖೆ ಕಚೇರಿಯಲ್ಲಿಯೇ ಆಧಾರ್‌ ಜೋಡಣೆ ಮಾಡಿಸಬೇಕಿರುವುದು ಸಮಸ್ಯೆ ಮತ್ತಷ್ಟೂ ಜಟಿಲಗೊಳ್ಳಲು ಕಾರಣ. ಜಿಲ್ಲೆಯಲ್ಲಿರುವ 6,84,772 ಕುಟುಂಬಗಳಿಗೆ 2,03,366 ಪಡಿತರ ಚೀಟಿ ವಿತರಣೆ ಮಾಡಲಾಗಿದೆ. 2 ಲಕ್ಷ ಪಡಿತರದಾರರಿಗೆ ಆಧಾರ್‌ ಜೋಡಣೆ ಮಾಡಿಸಲು ಇರುವುದು ನಗರದ ಏಕೈಕ ಕೇಂದ್ರ ಮಾತ್ರ. ಅಲ್ಲೂ ಕೂಡ ಸಿಬ್ಬಂದಿ ಕೊರತೆ ಇದೆ.

ಅಲ್ಲದೇ ಇಲಾಖೆಗೆ ಕಾಯಂ ಅಧಿಕಾರಿ ಕೂಡ ಇಲ್ಲ. ಕಲಬುರ್ಗಿಯ ಅಧಿಕಾರಿಯ ಹೆಗಲಿಗೆ ಇಲ್ಲಿನ ಇಲಾಖೆಯ ಹೊಣೆ ವಹಿಸಲಾಗಿದೆ. ಕಾರಣ ಆಹಾರ ಇಲಾಖೆಯ ಹೆಚ್ಚುವರಿ ಅಧಿಕಾರಿ ಅರುಣಕುಮಾರ್‌ ಸಂಗಾವಿ ಯಾದಗಿರಿ ನಗರದತ್ತ ಕಣ್ಣು ಹಾಯಿಸುವುದು ಕಡಿಮೆ’ಎಂದು ಪಡಿತರ ಫಲಾನುಭವಿಗಳಾದ ಮರೆಪ್ಪ ಕಾಳೆಬೆಳಗುಂದಿ,ಬಳಿಚಕ್ರದ ಅಯ್ಯಣ್ಣ ದೂರುತ್ತಾರೆ.

ಸರ್ವರ್‌ ಸಮಸ್ಯೆ; ನಿತ್ಯ ಗೋಳು: ಒಬ್ಬ ವ್ಯಕ್ತಿಯ ಆಧಾರ್‌ ಸಂಖ್ಯೆ ಜೋಡಣೆ ಅನ್ನು ಪಡಿತರ ಚೀಟಿ ನಂಬರ್‌ಗೆ ಸಂಪರ್ಕಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪ್ರತಿ ಕುಟುಂಬದ ಆಧಾರ ಸಂಖ್ಯೆ ಜೋಡಣೆ ಮಾಡಲು ಕನಿಷ್ಠ 20 ನಿಮಿಷ ಸಮಯ ವ್ಯಯವಾಗುತ್ತದೆ. ಸರ್ವರ್ ಸಮಸ್ಯೆ ಇದ್ದರಂತೂ ಸಾಲು ಜನರ ಶಾಪ ಅಲ್ಲಿನ ತಾಂತ್ರಿಕ ಸಿಬ್ಬಂದಿ ಎದುರಿಸಬೇಕಾಗುತ್ತದೆ. ಸರ್ವರ್‌ ಸಮಸ್ಯೆಯಿಂದಾಗಿ ತಿಂಗಳಿಂದ ಸರತಿ ಸಾಲು ಕರಗುತ್ತಿಲ್ಲ. ಇದರಿಂದಾಗಿ ಜನರು ನಸುಕಿನ 4ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲಲು ಪೈಪೋಟಿಗಿಳಿದಿದ್ದಾರೆ.

ಶೇ 99.09ರಷ್ಟು ಪ್ರಗತಿ: 11,74,271ರಷ್ಟಿರುವ ಜನಸಂಖ್ಯೆಯಲ್ಲಿ 11,63,582 ರಷ್ಟು ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಅಂದರೆ ಶೇ 99.09ರಷ್ಟು ಮಂದಿಗೆ ಆಧಾರ್ ಕಾರ್ಡ್ ಇದೆ. ಶೇ 99.09ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ವರದಿ ಒಪ್ಪಿಸಿದರು.

ಸ್ಪಂದಿಸದ ಅಧಿಕಾರಿ

ಆಧಾರ್‌ ಜೋಡಣಾ ಕೇಂದ್ರಗಳನ್ನು ಜಿಲ್ಲೆಯಲ್ಲಿ ಹೆಚ್ಚು ತೆರೆಯುವಂತೆ ಅಧಿಕಾರಿಗೆ ಮನವಿ ಸಲ್ಲಿಸಲು ಆಹಾರ ಇಲಾಖೆ ಉಪನಿರ್ದೇಶಕ ಅರುಣಕುಮಾರ್ ಸಂಗಾವಿ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್‌ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.  ಈ ಸಂಬಂಧ ಆಧಾರ್‌ ಜೋಡಣಾ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಾಬಣ್ಣ ಮಡಿವಾಳ, ಸೋಮಶೇಖರ್ ಭಾನಾ, ಬಸವರಾಜ ಗೊಂದೆನೂರ್, ಅಯ್ಯಣ್ಣ ಅಳ್ಳಳ್ಳಿ ಹೇಳಿದರು.

ಫಲಾನುಭವಿಗಳ ಕಿಸೆಗೆ ಕತ್ತರಿ

ಆಧಾರ್‌ ಜೋಡಣೆ ಅನ್ನುವುದು ಕೇವಲ ಒಂದು ದಿನದಲ್ಲಿ ಆಗುವಂಥದ್ದಲ್ಲ. ಎರಡು ವಾರಗಳಿಂದ ಗುರುಮಠಕಲ್‌ ಹೋಬಳಿಯಿಂದ ಕೆಲವರು ಯಾದಗಿರಿ ನಗರದ ಕಚೇರಿ ಓಡಾಡುತ್ತಿದ್ದಾರೆ. ಆದರೂ ಅವರ ಸರತಿ ಇನ್ನೂ ಬಂದಿಲ್ಲ. ಈ ಎರಡು ವಾರದಲ್ಲಿ ಊಟ, ತಿಂಡಿ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚಾಗಿದೆ. ಕೂಲಿ ಕೂಡ ಇಲ್ಲ. ಅತ್ತ ಕೂಲಿಯೂ ಇಲ್ಲ ಇತ್ತ ಆಧಾರ್‌ ಜೋಡಣೆಯ ಕೆಲಸವೂ ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಕೆಲವರು ಸಾಲ ಮಾಡಿ ಸರತಿ ಸಾಲಿನಲ್ಲಿ ನಿಲ್ಲುವಂಥ ಪರಿಸ್ಥಿತಿ ಎದುರಾಗಿದೆ ಎಂದು ಸೈದಾಪುರದ ಸಾಬಣ್ಣ ಬೇಸರ ವ್ಯಕ್ತಪಡಿಸಿದರು .

ಪಡಿತರ ಫಲಾನುಭವಿಗಳು

6.85 ಲಕ್ಷ - ಜಿಲ್ಲೆಯಲ್ಲಿನ ಒಟ್ಟು ಪಡಿತರ ಕುಟುಂಬಗಳು

ಯಾದಗಿರಿಯಲ್ಲೇ ಅಧಿಕ- ಯಾದಗಿರಿ ತಾಲ್ಲೂಕಿನಲ್ಲಿ  12,796 ಬಿಪಿಎಲ್ ಕಾರ್ಡ್‌  ಕುಟುಂಬಗಳಿವೆ. ಜಿಲ್ಲೆಯಲ್ಲಿ ಇದೇ ಅಧಿಕ.

2ಲಕ್ಷ - ಪಡಿತರದಾರರಿಗೆ ಏಕೈಕ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT