ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯ ಸಾಕಾರಕ್ಕೆ ಮನಸ್ಸು ಬದಲಾಗಲಿ

ರಾಮಕೃಷ್ಣ ಮಿಶನ್‌ನ 200ನೇ ಸ್ವಚ್ಛತಾ ಅಭಿಯಾನಕ್ಕೆ ನಾನಾ ಪಾಟೇಕರ್ ಚಾಲನೆ
Last Updated 13 ಫೆಬ್ರುವರಿ 2017, 10:36 IST
ಅಕ್ಷರ ಗಾತ್ರ

ಮಂಗಳೂರು:  ಸ್ವಚ್ಛತೆ ಎಂಬುದು ಮನಸ್ಸಿನಿಂದ ಬರಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡಲ್ಲಿ, ಆರೋಗ್ಯವೂ ಸದೃಢವಾಗುತ್ತದೆ ಎಂದು ಖ್ಯಾತ ಹಿಂದಿ ಚಿತ್ರನಟ ನಾನಾ ಪಾಟೇಕರ್ ಹೇಳಿದರು.

ಭಾನುವಾರ ರಾಮಕೃಷ್ಣ ಮಿಶನ್‌ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಮಂಗಳೂರು ಅಭಿಯಾನದ 200ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಸ್ವಚ್ಛತೆಯ ಕುರಿತು ಮಾತ ನಾಡುತ್ತೇವೆ. ಆದರೆ ನಮ್ಮ ಜವಾ ಬ್ದಾರಿಯನ್ನು ಮರೆಯುತ್ತಿದ್ದೇವೆ. ಸ್ವಚ್ಛತೆ ಎಂಬುದು ನಮ್ಮ ಮೂಲ ಅಗತ್ಯತೆ ಯಾಗಿದೆ. ಪರಿಸರ ಸ್ವಚ್ಛವಾಗಿದ್ದರೆ, ಮನಸ್ಸಿನ ಕಲ್ಮಶಗಳು ದೂರವಾಗುತ್ತವೆ. ಒಳ್ಳೆಯ ಮನಸ್ಸಿದ್ದರೆ, ಆರೋಗ್ಯವೂ ಸದೃಢವಾಗುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದಾರೆ. ಆದರೆ, ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ದೇಶ ವನ್ನು ಸ್ವಚ್ಛವಾಗಿ ಇರಿಸಲು ಸ್ವಚ್ಛ ಭಾರತ ಅಭಿಯಾನದಂತಹ ಆಂದೋಲನ ನಡೆಸುವ ಸ್ಥಿತಿ ಎದುರಾಗಿರುವುದು ಬೇಸರದ ಸಂಗತಿ ಎಂದರು.

ಸ್ವಚ್ಛ ಭಾರತ ಅಭಿಯಾನ ಕೇವಲ ಕಾರ್ಯಕ್ರಮ ಆಗಬಾರದು. ಇದು ನಮ್ಮ ಜೀವನ ಶೈಲಿಯಾಗಬೇಕು. ರಾಮಕೃಷ್ಣ ಮಿಶನ್ ಸ್ವಚ್ಛ ಮಂಗಳೂರು ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸು ತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ಹಣ ಮಾಡುವುದರಲ್ಲಿ ನಿರತರಾಗಿದ್ದು, ನಮ್ಮ ಸಮಾಜವನ್ನು ಮರೆಯುತ್ತಿದ್ದೇವೆ. ಕೇವಲ ಪರಿವಾರ, ಹಣದ ಬಗ್ಗೆ ಯೋಚನೆ ಮಾಡುವ ಮೂಲಕ ಸ್ವಾರ್ಥಿಗಳಾಗುತ್ತಿದ್ದೇವೆ. ದೇಶ, ಸಮಾಜದ ಬಗ್ಗೆ ಯೋಚಿಸಲು ಆರಂಭಿ ಸಿದಾಗ, ದೇಶವು ಸ್ವಚ್ಛವಾಗಲಿದ್ದು, ಸಮೃದ್ಧ ರಾಷ್ಟ್ರ ನಿರ್ಮಾಣವಾಗಲಿದೆ ಎಂದರು.

ಇದಕ್ಕೂ ಮೊದಲು, ಹಂಪನ ಕಟ್ಟೆಯ ಗೋಡೆಗಳ ಮೇಲೆ ರಚಿಸಿರುವ ಚಿತ್ರಗಳಿಗೆ ಬಣ್ಣ ತುಂಬುವ ಮೂಲಕ ನಾನಾ ಪಾಟೇಕರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ವಿದ್ಯಾರ್ಥಿ ಗಳೊಂದಿಗೆ ಜಾಥಾದ ಮೂಲಕ ಸಂಚ ರಿಸಿ, ಸ್ವಚ್ಛತೆಯ ಜಾಗೃತಿ ಮೂಡಿಸಿದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಎದುರು ನಿರ್ಮಿಸಲಾದ ಅಟೋ ರಿಕ್ಷಾ ನಿಲ್ದಾಣವನ್ನು ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಉದ್ಘಾಟಿಸಿದರು.

ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಚಿದಂಬರಾನಂದಜಿ ಮಹಾರಾಜ್, ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಇತರರು ಇದ್ದರು.

ಕಾನೂನು ಪಾಲಿಸಿ: ವಿದೇಶಗಳಿಗೆ ಹೋದಾಗ ಅಲ್ಲಿನ ಸ್ವಚ್ಛತೆ, ಪರಿಸರ ಸೌಂದರ್ಯವನ್ನು ಹಾಡಿ ಹೊಗಳುತ್ತೇವೆ. ಅಲ್ಲಿನ ಕಾನೂನು, ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಆದರೆ, ನಮ್ಮ ದೇಶಕ್ಕೆ ಬಂದಾಗ ಮಾತ್ರ ಇದೆಲ್ಲ ಮರೆತು ಹೋಗುತ್ತದೆ ಎಂದು ನಾನಾ ಪಾಟೇಕರ್ ಹೇಳಿದರು.

ನಮ್ಮ ದೇಶದ ಕಾನೂನು, ವಿದೇಶಿ ಕಾನೂನಿನಷ್ಟು ಕಟ್ಟು ನಿಟ್ಟಾಗಿ ಇಲ್ಲದೆ ಇರುವುದರಿಂದ, ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದ ಪ್ರಜೆಗಳಿಗೂ ಜವಾಬ್ದಾರಿಗಳಿವೆ. ಅವುಗಳನ್ನು ಅರಿತು, ಕಾನೂನು ಪಾಲನೆ ಮಾಡಿದಲ್ಲಿ, ನಮ್ಮ ದೇಶವೂ ಸುಂದರವಾಗಿ ಕಾಣುತ್ತದೆ ಎಂದರು.ಜನರು ತಮ್ಮ ಮೂಲ ಸೌಕರ್ಯದ ಬಗ್ಗೆ ಯೋಚಿಸಬೇಕು. ಸ್ವಯಂಪ್ರೇರಿತರಾಗಿ ಸ್ವಚ್ಛತೆಗೆ ಮುಂದಾಗಬೇಕು.
ನಾನಾ ಪಾಟೇಕರ್, ಖ್ಯಾತ ಹಿಂದಿ ಚಿತ್ರನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT