ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ‘ಮಿಂಚಿನ ಓಟ’ಕ್ಕೆ ಆಕ್ರೋಶ

ತೆಂಗು, ಅಡಿಕೆ ತೋಟಗಳಿಗೆ ಭೇಟಿ l ಗೋಶಾಲೆ, ಮೇವು ಬ್ಯಾಂಕ್‌ಗೆ ಅನುದಾನಕ್ಕೆ ಮನವಿ
Last Updated 13 ಫೆಬ್ರುವರಿ 2017, 11:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹಿಂಗಾರು ಬೆಳೆ ನಷ್ಟ ಅಧ್ಯಯನ ನಡೆಸಲು ಕೇಂದ್ರದಿಂದ ಬಂದಿರುವ ಅಧಿಕಾರಿಗಳ ತಂಡವು ತಾಲ್ಲೂಕಿನ ಬರಪೀಡಿತ ಪ್ರದೇಶಗಳಲ್ಲಿ ಭಾನುವಾರ ಪ್ರವಾಸ ನಡೆಸಿ ಹಿಂಗಾರು ಬೆಳೆ ನಷ್ಟದ ಮಾಹಿತಿ ಕಲೆಹಾಕಿತು.

ಕೇಂದ್ರದ ಕೃಷಿ ಸಹಕಾರ ಮತ್ತು ರೈತ ಕ್ಷೇಮಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಜಲಜ್‌ ಶ್ರೀವಾಸ್ತವ ನೇತೃತ್ವದ ತಂಡ ಬೆಳಿಗ್ಗೆ ಬೇಲೂರು ಯಗಚಿ ಜಲಾಶಯದಲ್ಲಿನ ನೀರಿನ ಲಭ್ಯತೆ ಅವಲೋಕಿಸಿ ಜಿಲ್ಲೆಗೆ ಬಂದಿತ್ತು. ಕೇಂದ್ರದ ಅಧಿಕಾರಿಗಳು ಕಳಸಾಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ, ಮೇವು ಕೊರತೆ ಹಾಗೂ ಹಿಂಗಾರು ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದರು.

‘ಅಧಿಕಾರಿಗಳು ಕೇಂದ್ರ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದು, ವಾರಕ್ಕೆ ಒಮ್ಮೆ ಒಂದು ಬ್ಯಾರೆಲ್‌ ಮಾತ್ರ ನೀರು ಕೊಡುತ್ತಿದ್ದಾರೆ. ಇಷ್ಟು ಕಡಿಮೆ ನೀರಿನಲ್ಲಿ ಜನ ಮತ್ತು ಜಾನುವಾರು ಜೀವ ಉಳಿಸಿಕೊಳ್ಳಲು ಸಾಧ್ಯವೇ? ಮುಂಗಾರು ಕೈಕೊಟ್ಟಿದ್ದರಿಂದ ಹಿಂಗಾರಿಗೆ ಮೆಕ್ಕೆಜೋಳ ಬಿತ್ತಿದ್ದೆವು. ಮಳೆ ಇಲ್ಲದೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಪರಿಹಾರಕ್ಕೆ ಮೆಕ್ಕೆಜೋಳ ಪರಿಗಣಿಸುತ್ತಿಲ್ಲ?’ ಎಂದು ರೈತರು ಕೇಂದ್ರ ತಂಡದ ಎದುರು ಅಳಲು ತೋಡಿಕೊಂಡರು.

‘ಗ್ರಾಮದ ಪ್ರತಿ ವಾರ್ಡ್‌ಗೆ ವಾರಕೊಮ್ಮೆ ಮಾತ್ರ ನೀರು ಕೊಡುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಅಧಿಕಾರಿಗಳಿಗೆ ನೀಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಮತ್ತು ಜಿಲ್ಲಾ ಪಂಚಾಯಿತಿ ಡಾ.ಆರ್‌. ರಾಗಪ್ರಿಯಾ ರೈತರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು.

ಕಳಸಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಲಿಸಿದ ಕೇಂದ್ರ ತಂಡ ಕಾರು ಹತ್ತಿ ಮಿಂಚಿನ ವೇಗದಲ್ಲಿ ಮುಂದಿನ ಊರುಗಳಿಗೆ ಹೊರಟಿತು. ಇತ್ತ ಗ್ರಾಮಸ್ಥರು ‘ಯಾರೂ ಬಂದರೂ ಇಷ್ಟೆ, ನಮ್ಮ ಸಮಸ್ಯೆಯನ್ನು ಸಮಾಧಾ ನದಿಂದ ಆಲಿಸುವ ವ್ಯವಧಾನ ಕೇಂದ್ರದ ಅಧಿಕಾರಿಗಳಿಗೂ ಇಲ್ಲ, ಜನಪ್ರತಿನಿಧಿಗಳಿಗೂ ಇಲ್ಲ’ವೆಂದು ಗೊಣಗುತ್ತಿದ್ದರು.

ಕಳಸಾಪುರದ ಮೇವು ಬ್ಯಾಂಕಿಗೆ ಭೇಟಿ ನೀಡಿದ ತಂಡವು, ಮೇವು ದಾಸ್ತಾನು ಮತ್ತು ವಿತರಣೆ ಬಗ್ಗೆ ಮಾಹಿತಿ ಪಡೆಯಿತು. ಮೇವು ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿತು.

‘ಜಿಲ್ಲಾಡಳಿತ ಗುಣಮಟ್ಟದ ಮೇವು ಖರೀದಿಸಿಲ್ಲ. ಜಾನುವಾರು ಸಂಖ್ಯೆಗೆ ಅನುಗುಣವಾಗಿ ಮೇವು ಪೂರೈ ಸುತ್ತಿಲ್ಲ’ವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ‘ಪಶು ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿಲ್ಲ. ವೈದ್ಯರೇ ಬೀಜ ಹೊಡೆದಿರುವ 8 ಹೋರಿಗಳು ಅಸುನೀಗಿವೆ’ ಎಂದು ರೈತರೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ ಪ್ರಸಂಗವೂ ನಡೆಯಿತು.

ಬರಗಾಲದಿಂದ ಒಣಗಿರುವ ತೆಂಗು, ಅಡಿಕೆ ತೋಟಗಳಿಗೆ ಭೇಟಿ ನೀಡಿದ ಕೇಂದ್ರದ ಅಧಿಕಾರಿಗಳು, ಫಸಲಿಗೆ ಬಂದಿದ್ದ ಅಡಿಕೆ, ತೆಂಗಿನ ಮರಗಳು ನೀರಿಲ್ಲದೆ ಒಣಗಿ ಧರೆಗುರುಳಿರುವುದನ್ನು ಕಂಡು ಮರುಗಿದರು.

ಅಧ್ಯಯನ ತಂಡದಲ್ಲಿ ಎನ್‌ಐಟಿಐ ಆಯೋಗದ ಸಂಶೋಧನಾ ಅಧಿಕಾರಿ ಅನುರಾಧಾ, ಕೇಂದ್ರ ಜಲ ಸಂಪನ್ಮೂಲ ಆಯೋಗದ ಸೂಪರಿಂಡೆಂಟೆಂಟ್‌ ಎಂಜಿನಿಯರ್‌ ವಿ.ಮೋಹನ ಮುರಳಿ, ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶಕ ಸಚ್‌ದೇವ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ.ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕೇಂದ್ರ ತಂಡಕ್ಕೆ ಮಾಹಿತಿ ಒದಗಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್.ಮಹೇಶ್‌ ಇದ್ದರು.

ಕಡೂರಿಗೆ  ತಂಡದ ಭೇಟಿ

ಕಡೂರು: ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಲಜ್ ಶ್ರಿವಾಸ್ತವ್ ಅವರ ಬರ ಅಧ್ಯಯನ ತಂಡ ಭಾನುವಾರ ತಾಲ್ಲೂಕಿನ ಕೆಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಾಲ್ಲೂಕಿನ ಬರ ಪರಿಸ್ಥಿತಿ ತೀವ್ರವಾಗಿದ್ದು, ಸಿಆರ್‍ಎಫ್ ಅನುದಾನದಲ್ಲಿ ₹70 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿಗಳ ಫ್ಲೆಷಿಂಗ್ ಮುಂತಾದವುಗಳಿಗೆ ಉಪಯೋಗಿಸಲಾಗಿದೆ.

₹60 ಲಕ್ಷವನ್ನು ಕೊಳವೆ ಬಾವಿಗಳನ್ನು ಕೊರೆಯಲು ಬಳಸಿದ್ದು, ಕೊಳವೆ ಬಾವಿಗಳ ಬೇಡಿಕೆ ಅತೀ ಹೆಚ್ಚಾಗಿದೆ. ಇದಕ್ಕಾಗಿ ಕನಿಷ್ಠ ₹2 ಕೋಟಿ ಅಗತ್ಯವಿದೆ. 30 ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ಬೇಸಿಗೆ ಕಳೆಯುವ ವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದ್ಧು, ಇದಕ್ಕಾಗಿ ಕನಿಷ್ಠ 1 ಕೋಟಿ ಅಗತ್ಯವಿದೆ.

ಜಾನುವಾರುಗಳಿಗೆ ಹೋಬಳಿಗೊಂದು ಗೋಶಾಲೆಯ ಅಗತ್ಯವಿದೆ. 4533 ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಷ್ಟವಾಗಿದ್ದು, ಪರಿಹಾರಕ್ಕಾಗಿ ₹30ಕೋಟಿ ಅಗತ್ಯವಿದೆ. ಬರದ ಪರಿಸ್ಥಿತಿ ತೀವ್ರವಾಗಿದ್ದು, ಕಳೆದೆರಡು ವರ್ಷದಲ್ಲಿ ಸುಮಾರು 60 ಜನ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂಬುದು ಇಲ್ಲಿನ ಬರ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದು ವಿವರಿಸಿ ಬರೆದ ಮನವಿ ಯನ್ನು ಶಾಸಕ ವೈ.ಎಸ್.ವಿ ದತ್ತ ಅವರು ಶ್ರೀವಾಸ್ತವ್ ಅವರಿಗೆ ಸಲ್ಲಿಸಿದರು

ಈ ಕುರಿತು ಮಾತನಾಡಿದ ಶ್ರೀವಾಸ್ತವ್, ಕಡೂರು ತಾಲ್ಲೂಕಿನ ಬರ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಈ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಅಧ್ಯಯನ ತಂಡದ ಸದಸ್ಯೆ ಅನುರಾಧ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆರ್.ರಾಗಪ್ರಿಯಾ, ಉಪ ವಿಭಾಗಾಧಿಕಾರಿ ಬಿ.ಸರೋಜ, ತಹಶೀಲ್ದಾರ್ ಎಂ.ಭಾಗ್ಯ,  ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ನಯನಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಉಮೇಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ ಸೇರಿದಂತೆ ತಾಲ್ಲೂಕು ಕೃಷಿ,ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

50 ನಿಮಿಷಗಳಲ್ಲಿ ಬರ ಅಧ್ಯಯನ!

ಕಡೂರು: ಬರ ತಾಲ್ಲೂಕಿನ ಸೀಗೇಹಡ್ಲು ಗ್ರಾಮಕ್ಕೆ ಮಧ್ಯಾಹ್ನ 12.30ಕ್ಕೆ ಬಂದ ಕೇಂದ್ರ ಬರ ಅಧ್ಯಯನ ತಂಡವನ್ನು ಶಾಸಕ ವೈ.ಎಸ್.ವಿ ದತ್ತ ಸ್ವಾಗತಿಸಿದರು. ನಂತರ ಅಲ್ಲಿನ ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿಯನ್ನು ವೀಕ್ಷಿಸಿದ ತಂಡ ನಂತರ ಕಾಮನಕೆರೆ ಬಳಿಯ ನರಸೀಪುರದಲ್ಲಿ ಒಣಗಿದ ಹೊಲವೊಂದನ್ನು ವೀಕ್ಷಿಸಿ ಕೇದಿಗೆರೆಗೆ ಭೇಟಿ ನೀಡಿತು. ಅಲ್ಲಿ ಹುರುಳಿ ಬೆಳೆ ಒಣಗಿರುವುದನ್ನು ನೋಡಿದ ನಂತರ ಬಾಸೂರು ಮಾರ್ಗವಾಗಿ ಕಡೂರಿನ ಎಪಿಎಂಸಿ ಗೆ ಭೇಟಿ ನೀಡಿ ಅಲ್ಲಿನ ಮೇವುಬ್ಯಾಂಕ್ ಗೆ ಭೇಟಿ ನೀಡಿತು.

ತಾಲ್ಲೂಕಿನ ಬರ ಪರಿಸ್ಥಿತಿ ವೀಕ್ಷಣೆಯನ್ನು ಕೇವಲ 50 ನಿಮಿಷದಲ್ಲಿ ಮುಗಿಸಿದ್ದಕ್ಕೆ ಜನರು ಆಕ್ಷೇಪ ವ್ಯಕ್ತಪಡಿಸಿದರು. ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಪರಿಸ್ಥಿತಿ ಇಷ್ಟು ಕ್ಲುಪ್ತ ಸಮಯದಲ್ಲಿ ಈ ತಂಡಕ್ಕೆ ಅರಿವಾಗುವುದು ಹೇಗೆಂಬ ಮಾತು ಸಾರ್ವಜನಿಕರಲ್ಲಿ ಕೇಳಿಬಂತು.

ಬರ ಅಧ್ಯಯನ ತಂಡಕ್ಕೆ ಮತ್ತು ಅವರೊಂದಿಗಿದ್ದ ಅಧಿಕಾರಿಗಳ ತಂಡಕ್ಕೆ ಪ್ರವಾಸಿ ಮಂದಿರದಲ್ಲಿ ಹೋಳಿಗೆ ಊಟ ಏರ್ಪಡಿಸಲಾಗಿತ್ತು. ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಸರಬರಾಜು ಇರಲಿಲ್ಲ. ಕನಿಷ್ಠ  ಯುಪಿಎಸ್ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಈ ಕುರಿತು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರನ್ನು ಜಿಲ್ಲಾಧಿ ಕಾರಿಗಳು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಅಂಕಿ ಅಂಶ

₹35.57ಕೋಟಿ - ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ

9354.54       - ಕ್ಟೇರ್‌ನಲ್ಲಿ ಬೆಳೆ ನಷ್ಟ

ಪರಿಹಾರಕ್ಕೆ  ಪ್ರಸ್ತಾವನೆ

ಜಿಲ್ಲೆಯಲ್ಲಿ ಬರಗಾಲದಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ಹಿಂಗಾರು ಬೆಳೆ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೇಂದ್ರ ತಂಡಕ್ಕೆ ನೀಡಿದ್ದೇವೆ. ಸುಮಾರು ₹35.57 ಕೋಟಿ ಪರಿಹಾರ ಕೊಡುವಂತೆ ಕೇಂದ್ರ ತಂಡಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ಹಿಂಗಾರಿನಲ್ಲಿ 9258.40 ಹೆಕ್ಟೇರ್‌ ಕೃಷಿ ಬೆಳೆ ಮತ್ತು 96.14 ಹೆಕ್ಟೇರ್‌ ತೋಟಗಾರಿಕೆ ಬೆಳೆ ಸೇರಿದಂತೆ ಸುಮಾರು 9354.54 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ಪರಿಹಾರ ನೀಡಲು, ಗೋಶಾಲೆ, ಮೇವು ಬ್ಯಾಂಕ್‌ ಪ್ರಾರಂಭಿಸಲು ಮತ್ತು ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲು ಅನುದಾನ ಕೊಡಿಸುವಂತೆ ಮನವಿ ಮಾಡಿದ್ದೇವೆ ಎಂದರು.

* ಕಡೂರು ತಾಲ್ಲೂಕಿನ ಬರ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಈ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ
ಜಲಜ್ ಶ್ರೀವಾಸ್ತವ್, ರೈತ ಕ್ಷೇಮಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT