ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಂಸ್ಕೃತಿ ಜೀವಪರ ಸಂಸ್ಕೃತಿ

ಜಿಲ್ಲಾ ಯುವಜನ ಮೇಳದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅಭಿಪ್ರಾಯ
Last Updated 13 ಫೆಬ್ರುವರಿ 2017, 13:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜನಪದ ಸಂಸ್ಕೃತಿಯು ಜೀವಪರ ಕಾಳಜಿಯುಳ್ಳ ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ  ನಡೆಯಬೇಕಿದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಅನಕ್ಷರಸ್ಥ ಜನರು ಹಿಂದಿನಿಂದ ಬಂದ ಅಪರಿಮಿತ ಜ್ಞಾನವನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುವ ವಾಹಕಗಳಾಗಿದ್ದಾರೆ. ಅವರಲ್ಲಿ ಅಡಗಿರುವ ಕಲೆ, ಸಂಸ್ಕೃತಿ, ವೈದ್ಯಪದ್ಧತಿ ಮುಂದಾದ ಅಮೂಲ್ಯ ವಿಚಾರಗಳು ಇಂದು ಆಧುನಿಕತೆಯ ಭರಾಟೆಗೆ ಸಿಕ್ಕು ನಶಿಸುತ್ತಿವೆ. ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ತಿಳಿಸಿದರು.

‘ಜನಪದ ಸಂಸ್ಕೃತಿಯ ಭಾಗವಾಗಿರುವ ಜನಪದ ಕ್ರೀಡೆ, ಕಲೆ, ರಂಗಭೂಮಿ, ವೀರಗಾಸೆ, ಡೊಳ್ಳುಕುಣಿತ ಮುಂತಾದ ಗ್ರಾಮೀಣ ಕಲೆಗಳನ್ನು ತಿಳಿದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ನಡೆಯುತ್ತಿರುವ ಯುವಜನ ಮೇಳಗಳನ್ನು ಮಾಡುತ್ತಿದೆ. ಅವುಗಳನ್ನು ಸುದುಪಯೋಗಪಡಿಸಿಕೊಂಡು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕಿದೆ’ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ‘ನಾವು ಮಕ್ಕಳಾಗಿದ್ದಾಗ ಯಾವುದೇ ಆಧುನಿಕ ಸಮೂಹ ಮಾಧ್ಯಮಗಳು ಇರಲಿಲ್ಲ. ಅಂತಹ ದಿನಗಳಲ್ಲಿ ಹಿರಿಯರ ಕಥೆ, ಗ್ರಾಮೀನ ಕ್ರೀಡೆಗಳನ್ನು ಆಡುತ್ತಾ ಬೆಳೆದಿದ್ದೇವೆ. ಆದರೆ ಆಧುನಿಕ ತಂತ್ರಜ್ಞಾನದ ದಾಳಿಯಿಂದ ಇಂದಿನ ಮಕ್ಕಳಲ್ಲಿ ಗ್ರಾಮೀಣ ಕ್ರೀಡೆಗಳಾಗಲಿ, ಕಲೆಗಳ ಬಗ್ಗೆಯಾಗಲಿ ಆಸಕ್ತಿಯೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಅಜ್ಜಿಯ ಕಥೆಗಳಲ್ಲಿ ಸಮಾಜಕ್ಕೆ ಬೇಕಾದ ನೀತಿಯಿತ್ತು, ತಾತನ ಮಾತುಗಳನ್ನು ಬದುಕು ರೂಪಿಸಿಕೊಳ್ಳಲು ಬೇಕಾದ ಮಾರ್ಗದರ್ಶನವಿತ್ತು. ಬದುಕುವ ಮೂಲಕವೇ ಇತರರಿಗೆ ಮಾರ್ಗದರ್ಶನವಿತ್ತ ನಮ್ಮ ಜನಪದರು, ನಗರೀಕರಣದ ಕಾರಣದಿಂದ ಮಾನವೀಯತೆಯನ್ನೇ ಮರೆತಿದ್ದಾರೆ. ಜನಪದ ಕಲೆಗಳು ಆ ಮಾನವೀಯತೆಯನ್ನು ಕಲಿಸುತ್ತದೆ. ಆ ಕಾರಣಕ್ಕೆ ಇಂದು ಜನಪದರಲ್ಲಿ ಉಳಿದುಕೊಂಡಿರುವ ಕಲೆಗಳನ್ನು ಓರೆಗೆ ಹಚ್ಚಿ ನೋಡುವ ಕೆಲಸ ನಡೆಯಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಆಧ್ಯಕ್ಷ ಎಸ್.ಎಂ.ಮುನಿಯಪ್ಪ, ಪೆರೇಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಚನ್ನಕೃಷ್ಣಾರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ಹಾಕಿ ತರಬೇತಿದಾರ ಮುಸ್ತಾಕ್ ಅಹಮ್ಮದ್ ಮುಂತಾದವರು ಕಾರ್ಯಕ್ರಮದಲ್ಲಿದ್ದರು.

ಗ್ರಾಮೀಣ ಆಚರಣೆಗಳು ಜೀವನ ಪ್ರೀತಿಯನ್ನು ಕಲಿಸಿಕೊಡುವಂತವು. ಅವುಗಳನ್ನು ನಾವು ಉಳಿಸಿಕೊಳ್ಳಬೇಕಿದೆ. ಯುವಜನ ಮೇಳಗಳು ಆ ಕೆಲಸವನ್ನು ಮಾಡಲಿ.
- ಯಲುವಹಳ್ಳಿ ಎನ್.ರಮೇಶ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT