ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರ ಶಾಲೆಗೆ ‘ಪರಿಸರ ಮಿತ್ರ’ ಗರಿ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗೌರವ, ಶಿಕ್ಷಕರ ಶ್ರಮದಿಂದ ಶಾಲೆ ಹಸಿರು
Last Updated 13 ಫೆಬ್ರುವರಿ 2017, 13:43 IST
ಅಕ್ಷರ ಗಾತ್ರ

ಮಾಲೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ 2016–17 ನೇ ಸಾಲಿನ ‘ಪರಿಸರ ಮಿತ್ರ ಪ್ರಶಸ್ತಿ’ಗೆ ತಾಲ್ಲೂಕಿನ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾಜನವಾಗಿದೆ.ಶಾಲೆಯ ಈ ಸಾಧನೆಯ ನೆಲೆಗಳನ್ನು ಗಮನಿಸಿದರೆ ನಿಜಕ್ಕೂ ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಮೆಚ್ಚುಗೆಯಾಗುತ್ತದೆ.

ಎಚ್.ಎಸ್.ಕೋಟೆ ಗ್ರಾ.ಪಂ ವ್ಯಾಪ್ತಿಯ ಪುರ ಗ್ರಾಮದಲ್ಲಿ 400 ಕ್ಕೂ ಹೆಚ್ಚು ಕುಟುಂಬಗಳಿವೆ. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಗ್ರಾಮದ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ. 1 ರಿಂದ 5ನೇ ತರಗತಿಯ ಶಾಲೆಯಲ್ಲಿ 62 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಖ್ಯ ಶಿಕ್ಷಕ ಎಂ.ರಮೇಶ್, ಸಹಶಿಕ್ಷಕರಾದ ಕೆ.ಶ್ರೀದೇವಿ ಹಾಗೂ ಜೆ.ಮಮತಾ ಕೆಲಸ ನಿರ್ವಹಿಸುತ್ತಿದ್ದಾರೆ.

19 ವರ್ಷಗಳ ಹಿಂದೆ ಶಿಕ್ಷಕರಾಗಿ ಬಂದ ಎಂ.ರಮೇಶ್ ಅವರ ಪರಿಶ್ರಮದ ಕಾರಣಕ್ಕೆ ಶಾಲೆಯ ಆವರಣ ಇಂದು ನಳನಳಿಸುತ್ತಿದೆ. ರಮೇಶ್ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರ ಪಡೆದು ಸೌಲಭ್ಯ ವಂಚಿತವಾಗಿದ್ದ ಶಾಲೆಯನ್ನು ಯಶಸ್ಸಿನ ದಾರಿಗೆ ತಂದರು. ಮಕ್ಕಳ ದಾಖಲಾತಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಒಟ್ಟು ಶಾಲೆಯಲ್ಲಿ ಆರು ಕೊಠಡಿಗಳಿದ್ದು ಆಸ್ಟ್ರೇಲಿಯಾದ ರೋಡ್ ಸೈನ್ ರೋಟರಿ ಸಂಸ್ಥೆ ಇದರಲ್ಲಿ ಮೂರು  ಕೊಠಡಿಗಳನ್ನು ನಿರ್ಮಿಸಿದೆ. ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಸುಸಜ್ಜಿತ ಶಾಚಾಲಯ ಸಹ ಇದೆ. ಸರ್ಕಾರದ ಸೌಲಭ್ಯಗಳ ಜತೆಗೆ ದಾನಿಗಳು, ಸಂಘ ಸಂಸ್ಥೆಗಳು ಹಾಗೂ ಮುಖಂಡರ ಸಹಕಾರದಿಂದ ಪ್ರತಿ ವರ್ಷ ಹಲವು ರೀತಿಯ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ.

ಸುಂದರ ಪರಿಸರ: ಶಾಲೆ ಪ್ರವೇಶಿಸುತ್ತಿದ್ದಂತೆ ಸುಂದರ ಪರಿಸರ ಸ್ವಾಗತಿಸುತ್ತದೆ. ಶಾಲೆಗೆ ಗ್ರಾಮ ಪಂಚಾಯಿತಿ  ಅಳವಡಿಸಿರುವ ನಲ್ಲಿಯಿಂದ ದೊರೆಯುವ ಅಲ್ಪಸ್ವಲ್ಪ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ನಂತರ ಹನಿ ನೀರಾವರಿ ಪದ್ಧತಿ ಮೂಲಕ ತರಕಾರಿ, ಗಿಡ ಮರಗಳು, ಔಷಧಿ ಸಸ್ಯಗಳಿಗೆ ಹರಿಸಲಾಗುತ್ತಿದೆ. 

ಕಸ ವಿಂಗಡಣೆ: ಹಸಿ, ಒಣಕಸ ಹಾಗೂ ‘ಇ’ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕವಾದ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಗೊಬ್ಬರವನ್ನು ತಯಾರಿಸಿ ಶಾಲೆ ಆವರಣದಲ್ಲಿರುವ ಗಿಡಗಳಿಗೇ ಬಳಸಲಾಗುತ್ತಿದೆ. ಶಾಲೆಯ ಆವರಣದಲ್ಲಿ 61 ಜಾತಿಯ ಗಿಡ–ಮರಗಳನ್ನು ಬೆಳೆಸಲಾಗಿದೆ. ಗಿಳಿ ,ಗೊರವಂಕ, ಕೋಗಿಲೆ, ಅಳಿಲುಗಳು ಶಾಲಾ ಆವರಣಕ್ಕೆ ಸೊಬಗು ತುಂಬಿವೆ. ಪಕ್ಷಿಗಳಿಗೆ ಪ್ರತಿ ದಿನ ಆಹಾರ, ನೀರು ಪೂರೈಸಲಾಗುತ್ತಿದೆ.

ಜಿಲ್ಲಾ ವೀಕ್ಷಕ ತಂಡ ಹಾಗೂ ಸ್ವಚ್ಛ ಭಾರತ ಮಿಷನ್ ತಂಡದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ  ಪರಿಸರ  ಗಮನಿಸಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಈಗಾಗಲೇ ‘ಕಿತ್ತಳೆ ಶಾಲೆ’ ಪ್ರಶಸ್ತಿ, ‘ಹಸಿರು ಶಾಲೆ’ ಪ್ರಶಸ್ತಿ ಮತ್ತು 2016–17 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಮಟ್ಟದ ಪ್ರಶಸ್ತಿಗೆ ಶಾಲೆ ಭಾಜನವಾಗಿದೆ. 

‘ಎಂ. ರಮೇಶ್ ಮುಖ್ಯ ಶಿಕ್ಷಕರಾಗಿ ಬಂದ ನಂತರ ಶಾಲೆ ವಾತಾವರಣ ಬದಲಾವಣೆಯಾಗಿದೆ. ಉತ್ತಮ ಪರಿಸರ ನಿರ್ಮಿಸಿದ ಕಾರಣ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಆಯ್ಕೆಗೊಂಡು ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ಬಂದಿದೆ’ ಎಂದುಎಸ್‌ಡಿಎಂಸಿ ಅಧ್ಯಕ್ಷ ಸ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

– ವಿ.ರಾಜ್ ಗೋಪಾಲ್
 

ಪ್ರಥಮ ಸ್ಥಾನ

ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ (ಫೆ.10) ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 70 ಶಾಲೆಗಳ ಪೈಕಿ ಪುರ   ಸರ್ಕಾರಿ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು. ₹ 30 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.

ಅಂಕಿ–ಅಂಶ

450 - ಶಾಲಾ ಆವರಣದಲ್ಲಿರುವ ಗಿಡ–ಮರಗಳು

58    - ಬಗೆಯ ಔಷಧ ಸಸ್ಯಗಳು

12    - ಬಗೆಯ ಬಳ್ಳಿಗಳು

4      - ಬಗೆಯ ಹುಲ್ಲು ,ಹಣ್ಣು ,ತರಕಾರಿ ಗಿಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT