ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳ ಆರೋಗ್ಯಕ್ಕೆ ಸೊಳ್ಳೆ ಪರದೆ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ರಾತ್ರಿಯೆಲ್ಲ ಭೇಷ್ ಮಲಗ್ತವೆ ಸರ್, ಇಲ್ಲಾಂದ್ರೆ ಈ ಚುಕ್ಕಾಡಿ ಕಾಟಕ್ಕೆ ಕುರಿಗಳು ಪುಷ್ಟಿನೇ ಆಗಲ್ಲ...’ ಸಂಜೆ ಹೊತ್ತಿನಲ್ಲಿ ಕುರಿ ಮಂದೆಯನ್ನು ವಿಶಾಲ ಸೊಳ್ಳೆ ಪರದೆಯೊಂದರಡಿ ನಿಲ್ಲಿಸುತ್ತಿದ್ದುದನ್ನು ಕುತೂಹಲದಿಂದ ನೋಡುತ್ತಿದ್ದ ನಮಗೆ ಕುರಿಗಾರ ರಾಮಪ್ಪ ಪ್ರತಿಕ್ರಿಯಿಸಿದ್ದು ಹೀಗೆ.

ಬಳ್ಳಾರಿಯನ್ನು ಅನಂತಪುರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಮರಾಪುರದ ಬಳಿಯ ಹೊಲವೊಂದರಲ್ಲಿ ಆತ ಸುಮಾರು 350 ಕುರಿಗಳಿರುವ ಮಂದೆಯೊಂದಿಗೆ ತಂಗಿದ್ದ. ಕುರಿಗಳನ್ನೆಲ್ಲ ಸೊಳ್ಳೆ ಪರದೆಯ ಮರೆಯೊಳಗೆ ಸೇರಿಸಿ, ಪರದೆಯು ಗಾಳಿಗೆ ಆಚೀಚೆ ಸರಿಯದಂತೆ ಅದು ನೆಲ ತಾಕುವ ಅಂಚಿಗೆ ಕೋಲುಗಳನ್ನು ಅಡ್ಡಲಾಗಿಟ್ಟು ಸರಿಪಡಿಸಿದ.

ಇದರ ಔಚಿತ್ಯವನ್ನು ಅವನಿಗೆ ಕೇಳಿದಾಗ, ‘ಕುರಿ ಅಲೆಸೋ ಕಸುಬು ನಮ್ಮ ತಾತ ಮುತ್ತಾತನ ಕಾಲದಿಂದ ಬಂದದ್ರಿ. ಆದರೆ ಈ ಚುಕ್ಕಾಡಿ ಪರದಿ ಬಳಸೋಕೆ ಶುರುಮಾಡಿರೋದು ಇತ್ಲಾಗೆ ಆರೇಳು ವರುಷದಿಂದ’ ಎಂದ. ಬೆಳಗ್ಗಿನಿಂದ ಸಂಜೆವರೆಗೂ ತಿರುಗಾಡಿ ದಣಿದ ಕುರಿಗಳು, ಮೇಯಲು ತಮ್ಮೊಂದಿಗೆ ಬಾರದೆ ಪರದೆಯ ಬಳಿಯೇ ಉಳಿದಿದ್ದ ಮರಿಗಳೊಂದಿಗೆ ಸೇರಿಕೊಂಡು ನೆಮ್ಮದಿಯ ರಾತ್ರಿಗೆ ಅಣಿಯಾದವು.

ಮೆಲುಕಿಗೆ ಸೊಳ್ಳೆ ಪರದೆ: ಬೆಳಗಿನಿಂದ ಸಂಜೆವರೆಗೂ ಮೇವನ್ನು ಅರಸುತ್ತಾ ತಿರುಗುವ ಕುರಿಗಳಿಗೆ ಸಂಜೆಯಿಂದ ಮರುದಿನದ ನಸುಕಿನವರೆಗೂ ವಿಶ್ರಾಂತಿಯ ಸಮಯ. ಆ ಸಮಯದಲ್ಲಿ ಅವು ನಿದ್ರಿಸಬೇಕು. ಅಲ್ಲದೇ, ಬೆಳಗಿನಿಂದ ತಿಂದ ಮೇವನ್ನು ತಮ್ಮ ಮೆಲುಕು ಚೀಲದಿಂದ ಪುನಃ ಬಾಯಿಗೆ ತಂದು ಚೆನ್ನಾಗಿ ಜಗಿದು ಲಾಲಾರಸದೊಂದಿಗೆ ಮತ್ತೆ ನುಂಗಬೇಕು. ಮೆಲುಕು ಹಾಕುವ ಈ ಕ್ರಿಯೆ ಪ್ರಾಣಿಗಳಿಗೆ ಬಹು ಮುಖ್ಯ ಸಹಜ ಶಾರೀರಿಕ ಕ್ರಿಯೆ.

ತಿಂದ ಆಹಾರ ಜೀರ್ಣಗೊಂಡು, ಪೋಷಕಾಂಶಗಳೆಲ್ಲ ರಕ್ತಗತವಾಗಿ ದೇಹಕ್ಕೆ ಪುಷ್ಟಿ ನೀಡುವಲ್ಲಿ ಈ ಕ್ರಿಯೆ ಅತ್ಯಗತ್ಯ. ವಿರಮಿಸುವ ವೇಳೆಯೇ ಈ ಕ್ರಿಯೆ ಸಾಕಾರಗೊಳ್ಳುವ ಸಮಯ.

ಮೆಲುಕು ಹಾಕುವ ಸಮಯದಲ್ಲಿ ಪ್ರಾಣಿಗಳಿಗೆ ಕಿಂಚಿತ್‌ ತೊಂದರೆಯಾದಲ್ಲಿ ಮೆಲುಕು ಹಾಕಲಾಗದ ಒತ್ತಡದಲ್ಲಿ ಸಿಲುಕುತ್ತವೆ. ಇದು ಪ್ರತಿದಿನವೂ ಮುಂದುವರೆದರೆ ಸೇವಿಸುವ ಆಹಾರದ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲೆದಾಟ ಮತ್ತು ಅಪೌಷ್ಟಿಕ ಮೇವಿನ ಒತ್ತಡಗಳೂ ಇದರೊಟ್ಟಿಗೆ ಸೇರಿದರೆ ಆಂತರಿಕ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ರೋಗಾಣುಗಳು ಸುಲಭದಲ್ಲಿ ದೇಹವನ್ನು ಮಣಿಸತೊಡಗುತ್ತವೆ. ಈ ಕಾರಣದಿಂದ ಎಲ್ಲಾ ಮೆಲುಕು ಹಾಕುವ ಪ್ರಾಣಿಗಳಿಗೆ ರಾತ್ರಿಯ ನೀರವತೆಯಲ್ಲಿ ನೆಮ್ಮದಿ ಅಗತ್ಯ.

ಆದರೆ ಅಲೆಮಾರಿ ಕುರಿಗಳಿಗೆ ಈ ನೆಮ್ಮದಿಯ ಸಾಧ್ಯತೆಗಳು ಕಡಿಮೆ. ಕಾರಣ ಅವು ತಂಗುವುದು ಬಯಲಿನಲ್ಲಿ. ಬಯಲೆಂದಾಕ್ಷಣ ಸೊಳ್ಳೆ ಮತ್ತು ಕೀಟಗಳ ಕಾಟ. ವಿರಮಿಸಲೂ ಬಿಡದೆ ಕಾಡುತ್ತವೆ. ರಕ್ತವನ್ನು ಹೀರುತ್ತವೆ. ಇದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕುರಿಗಾರನಿಗಿದು ನಷ್ಟದ ಬಾಬತ್ತು. ಅದಕ್ಕೆ ರಾಮಪ್ಪ ಕಂಡುಕೊಂಡಿರುವ ಉಪಾಯ ಸೊಳ್ಳೆ ಪರದೆ.

‘ನೀಲಿ ನಾಲಗೆ ರೋಗವಂತೆ, ಸಾರ್. ಆರೇಳು ವರ್ಷಗಳ ಹಿಂದೆ ಈ ರೋಗದಿಂದ ನನ್ನ 70–80 ಕುರಿಗಳು ಸತ್ತೋದ್ವು. ಡಾಕ್ಟ್ರು, ಗುಂಗಾಡ ಒಂದರಿಂದ ಈ ರೋಗ ಬರುತ್ತೆ ಅಂದ್ರು. ಅವುಗಳು ಕಚ್ಚದಂತೆ ಏನಾರು ವ್ಯವಸ್ಥೆ ಮಾಡ್ಕಳಿ ಅಂತಂದ್ರು. ಇಷ್ಟೊಂದು ಕುರಿಗಳಿಗೆ ಸೊಳ್ಳೆ ಕಚ್ಚದಂಗೆ ಮಾಡಾದಾದ್ರೂ ಏನ್ ಹೇಳ್ರಿ. ಆ ವರ್ಷ ಐದಾರು ಲಕ್ಷ ಕೈ ಬಿಟ್ವು.

ವಯಸ್ಸಿನ ಎಷ್ಟೋ ಹೆಣ್ಣು ಕುರಿಗಳು, ಒಂದೊಳ್ಳೆ ಟಗರೂ ಹೋದ್ವು. ಈ ರೋಗಕ್ಕೆ ಚುಚ್ಚು ಮದ್ದೂ ಇಲ್ವಂತೆ. ಅಂದೇ ನಿರ್ಧಾರ ಮಾಡ್ದೆ, ಏನಾರ ವ್ಯವಸ್ಥೆ ಮಾಡ್ಕಬೇಕಂತ. ಸೊಳ್ಳೆ ಪರದೇನೆ ಸರಿ ಅನಿಸ್ತು’ ಎನ್ನೋ ರಾಮಪ್ಪ ಈಗ ನಿಶ್ಚಿಂತೆಯಿಂದ ಇದ್ದಾರೆ.

ಸುತ್ತಮುತ್ತಲ ಅನೇಕ ಕುರಿಗಾರರ ಕುರಿಗಳು ಈ ರೋಗಕ್ಕೆ ತುತ್ತಾಗಿದ್ದರೂ ರಾಮಪ್ಪನ ಕುರಿಗಳಿಗೆ ಅಂದಿನಿಂದ ಇಂದಿನವರೆವಿಗೂ ಈ ರೋಗದ ಬಾಧೆ ಕಾಡಿಲ್ಲ. ಬೋನಸ್ ಎಂಬಂತೆ, ಕುರಿಗಳು ರಾತ್ರಿ ನೆಮ್ಮದಿಯಿಂದ ನಿದ್ರಿಸಿ, ಬೆಳಿಗ್ಗೆ ಲವಲವಿಕೆಯಿಂದ ಅಲೆದಾಡುತ್ತ ಮೇಯುತ್ತಿವೆ. ಕುರಿ ಮರಿಗಳೂ ಆರೋಗ್ಯದಿಂದ ಚೆನ್ನಾಗಿ ಕೊಬ್ಬುತ್ತಿವೆ. ಕುರಿಗಳ ಖರೀದಿಗೆಂದು ಬಂದವರಿಂದ ಹೆಚ್ಚಿನ ಹಣವೂ ದೊರೆಯುತ್ತಿದೆ.

ವರ್ಷದುದ್ದಕ್ಕೂ ಸೊಳ್ಳೆ ಪರದೆಯ ರಕ್ಷಣೆಯನ್ನು ನೀಡುವುದು ಸಾಧ್ಯವಾಗದ ಮಾತು ಎಂಬುದನ್ನೂ ರಾಮಪ್ಪ ಇದೇ ವೇಳೆ ಒಪ್ಪಿಕೊಳ್ಳುತ್ತಾರೆ. ಪ್ರತಿ ವರ್ಷವೂ ಶಿವರಾತ್ರಿ ಕಳೆದು, ಮುಂದಿನ ಹಂಗಾಮು ಶುರುವಾಗುವವರೆಗೂ ಕುರಿಗಳನ್ನು ರೈತರ ಬೇಡಿಕೆಯಂತೆ ಹೊಲಗಳಲ್ಲಿ ತರುಬುವ ಕೆಲಸವಿರುತ್ತದೆ. ಈ ನಾಲ್ಕೈದು ತಿಂಗಳ ಅವಧಿಯಲ್ಲಿ ಪ್ರತಿ ಎರಡು-ಮೂರು ದಿನಕ್ಕೊಮ್ಮೆ ಹೊಲಗಳನ್ನು ಬದಲಾಯಿಸ ಬೇಕಾದ್ದರಿಂದ ಸೊಳ್ಳೆ ಪರದೆಯನ್ನು ಒಂದೆಡೆ ಸ್ಥಾಪಿಸಿ ಬಳಸಲಾಗದು. ಆದರೆ ಈ ಅವಧಿಯಲ್ಲಿ ಸೊಳ್ಳೆಗಳ ಕಾಟವೂ ಕಡಿಮೆಯಾಗಿರುವ ಕಾರಣ ಅಷ್ಟೆಲ್ಲಾ ತೊಂದರೆ ಆಗುವುದಿಲ್ಲ.

ಮುಂಗಾರು ಶುರುವಾಗಿ, ಅಲ್ಲಲ್ಲಿ ನೀರು ನಿಂತು, ಪೊದೆಗಳು ದಟ್ಟವಾಗುತ್ತಿದ್ದಂತೆ ಸೊಳ್ಳೆಗಳೂ ಹೆಚ್ಚಾಗುತ್ತವೆ. ಜೂನ್ ತಿಂಗಳ ಕೊನೆಯಿಂದ ಮತ್ತೆ ಕುರಿಗಳಿಗೆ ಸೊಳ್ಳೆ ಪರದೆಯ ಮರೆ. ಮುಂದೆ, ಚಳಿ ಬೀಳುವ ಮಾಗಿಯ ತಿಂಗಳುಗಳಲ್ಲೂ ಪರದೆಯು ಕುರಿಗಳನ್ನು ಭಾಗಶಃ ಬೆಚ್ಚಗಿಟ್ಟು ಕಾಪಾಡುತ್ತದೆ.

‘ರಾತ್ರಿ, ಕುರಿ ಕಾವಲಿಗಾಗಿ ಪರದೆಯ ನಾಲ್ಕೂ ದಿಕ್ಕಿಗೆ ಒಬ್ಬೊಬ್ಬರಂತೆ ಮಲಗುವ ನಾವು, ಚುಕ್ಕಾಡಿ ಕಾಟಕ್ಕೆ ಬೆಳಗಾಗುವುದರಲ್ಲಿ ಜಾಗ ಮಾಡಿಕೊಂಡು ಕುರಿಗಳೊಟ್ಟಿಗೆ ಪರದೆಯ ಒಳಗೆ ಸೇರಿಕೊಂಡಿರುತ್ತೇವೆ. ಇದ್ರಿಂದ ನಮ್ಗೂ ಒಳ್ಳೆ ನಿದ್ದೆ’ ಎನ್ನುತ್ತ, ರಾಮಪ್ಪ ಮೀಸೆಯ ತುದಿಯಲ್ಲೇ ನಗುತ್ತಾರೆ.

ಪ್ರತಿದಿನವೂ ಮುಂಜಾನೆ ನಾಲ್ಕೂವರೆಗೇ ಸೊಳ್ಳೆ ಪರದೆಯಿಂದ ಹೊರಬರುವ ಕುರಿಗಳು, ಅಲ್ಲೇ ಮುಂಭಾಗದಲ್ಲಿ ಕೂತು ಅಲೆದಾಟಕ್ಕೆ ಮೈ ಮುರಿದು ಅಣಿಯಾಗತೊಡಗುತ್ತವೆ. ತಾಯಿ ಕುರಿಗಳು ತಮ್ಮ ಕಂದಮ್ಮಗಳಿಗೆ ಹಾಲುಣಿಸುತ್ತವೆ. ಆ ಸಮಯದಲ್ಲಿ ಸೊಳ್ಳೆ ಪರದೆಯೊಳಗಿನ ಅಂಗಳವನ್ನೆಲ್ಲ ಗುಡಿಸಿ, ಹಿಕ್ಕೆಯನ್ನು ಹೊರಗೆ ಒಂದೆಡೆ ಗುಡ್ಡೆ ಮಾಡುತ್ತಾರೆ.

ಸ್ವಚ್ಛತೆಯ ಈ ಕಾರ್ಯ ಕುರಿಗಳ ಆರೋಗ್ಯ ಕಾಪಾಡುವಲ್ಲಿ ಅತೀ ಜರೂರು. ಸ್ವಲ್ಪ ಎಚ್ಚರ ತಪ್ಪಿದರೂ ಅದೇ ರೋಗ ಮೂಲವಾಗಬಹುದು ಎಂದು ರಾಮಪ್ಪ ಎಚ್ಚರಿಸುತ್ತಾರೆ. ಸೊಳ್ಳೆ ಪರದೆಯ ಅನುಕೂಲತೆಗಳನ್ನು ಹೀಗೆ ಹತ್ತಿರದಿಂದ ಗಮನಿಸಿರುವ ರಾಮಪ್ಪನ ಕುರಿಗಾರ ಸ್ನೇಹಿತರೂ ಒಂದೆರಡು ವರ್ಷಗಳಿಂದ ಇದರ ಮೊರೆ ಹೋಗಿದ್ದಾರೆ. 
ಲೇಖಕರು ಪಶುವಿಜ್ಞಾನಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT