ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧ ವಿಧ ಗೋಧಿ!

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾವೆಲ್ಲ ಒಂದೆರಡು ತಳಿ ಮಾತ್ರ ನೋಡಿದ್ವಿ. ಇಲ್ಲೆಲ್ಲ ಅವೇ ಬೆಳೀತಿದ್ವು. ಆದ್ರ ಇಷ್ಟ್ ತಳಿ ನಮಗಂತೂ ಗೊತ್ತೇ ಇರ್ಲಿಲ್ಲ ಎಂದು ಕಲ್ಮೇಶ ಹೇಳುವಾಗ ಅಚ್ಚರಿ ಅವರ ಮೊಗದಲ್ಲಿ ಕಾಣುತ್ತದೆ. ಕಾಲಿನಡಿ ಪೈರು ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸುತ್ತ ಹೊಲದಲ್ಲಿ ಓಡಾಡುತ್ತ ‘ಇದು ಪಂಜಾಬ್, ಮತ್ತೆ ಅದು ಗುಜರಾತ್... ಆ ಕಡೆ ಇರೋದು ನಮ್ಮದೇ ತಳಿ ಎಂದು ಸಂಭ್ರಮದಿಂದ ತೋರಿಸುತ್ತಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಬೆಟಸೂರು ಗ್ರಾಮದ ಯುವ ಕೃಷಿಕ ಕಲ್ಮೇಶ ಮಲ್ಲಾಡ ಅವರ ಹೊಲದಲ್ಲಿನ ಗೋಧಿ ತಳಿ ವೈವಿಧ್ಯ, ರೈತರನ್ನು ಸೆಳೆಯುತ್ತಿದೆ. ಅವರು ಬೆಳೆಸಿರುವ ಒಟ್ಟು 11 ತಳಿ ಗೋಧಿಯಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಗಟ್ಟಿಮುಟ್ಟಾದ ತೆನೆಗಳಿಂದ ತೂಗಾಡುತ್ತಿವೆ. ಒಂದೊಂದೂ ವಿಶಿಷ್ಟ; ರುಚಿಯಷ್ಟೇ ಅಲ್ಲ, ತೆನೆಗಳ ಗಾತ್ರ- ಆಕಾರದಲ್ಲೂ.

ಕಲ್ಮೇಶ ಅವರ ಕುಟುಂಬವಿಡೀ ಕೃಷಿಯಲ್ಲಿ ತೊಡಗಿಕೊಂಡಿದ್ದು, ಹತ್ತಿ, ಜೋಳ, ಈರುಳ್ಳಿ, ಮೆಣಸಿನಕಾಯಿ ಜತೆಗೆ ಗೋಧಿಯನ್ನೂ ಬೆಳೆಯುತ್ತದೆ. ಕಪ್ಪುಮಣ್ಣಿನ ಹೊಲದಲ್ಲಿ ಹಿಂಗಾರು ಹಂಗಾಮಿಗೆ ಗೋಧಿ ಬೆಳೆಯುವುದು ಸಾಮಾನ್ಯ. ಕಳೆದ ವರ್ಷ ಸ್ನೇಹಿತ ಪ್ರವೀಣ ಹೆಬ್ಬಳ್ಳಿ 13 ತಳಿ ನವಣೆಯನ್ನು ಯಶಸ್ವಿಯಾಗಿ ಬೆಳೆದಿದ್ದನ್ನು ನೋಡಿದ ಕಲ್ಮೇಶ ಅವರಿಗೆ ತಾವೂ ತಳಿ ಸಂರಕ್ಷಣೆ ಮಾಡುವ ಹುಮ್ಮಸ್ಸು ಮೂಡಿತು.

ಆಗಷ್ಟೇ ಹಿಂಗಾರು ಹಂಗಾಮು ಶುರುವಾಗುತ್ತಿರುವುದನ್ನು ಗಮನಿಸಿ, ಅದಕ್ಕೆ ಪೂರಕವಾದ ಬೆಳೆಯನ್ನು ಆಯ್ಕೆ ಮಾಡಲು ಮುಂದಾದರು. ಕಡಿಮೆ ಮಳೆಯಲ್ಲೂ ಬೆಳೆಯಬಹುದಾದ ಗೋಧಿಯ ತಳಿ ಸಂರಕ್ಷಣೆ ಮಾಡಲು ನಿರ್ಧರಿಸಿದರು.

ಕೃಷಿಕರ ಜತೆಗೂಡಿ ಅವರ ಹೊಲದಲ್ಲೇ ತಳಿ ಸಂರಕ್ಷಣೆ ಮಾಡುತ್ತಿರುವ ‘ಸಹಜ ಸಮೃದ್ಧ ಬಳಗವು ಕಲ್ಮೇಶ ಅವರಿಗೆ ಹತ್ತು ದೇಸಿ ತಳಿ ಗೋಧಿಯ ಬಿತ್ತನೆ ಬೀಜಗಳನ್ನು ತರಿಸಿಕೊಟ್ಟಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಕಡೆಯಿಂದ ಬಿತ್ತನೆ ಬೀಜಗಳು ಕಲ್ಮೇಶ ಅವರನ್ನು ತಲುಪಿದವು. ಸುಸ್ಥಿರ ಕೃಷಿ ಉತ್ತೇಜನಕ್ಕಾಗಿ ಶ್ರಮಿಸುತ್ತಿರುವ ಸವದತ್ತಿಯ ಸ್ಪ್ರೆಡ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಲ್ಮೇಶ, ಹತ್ತು ತಳಿಗಳ ಜತೆಗೆ ಈ ಭಾಗದಲ್ಲಿ ಬೆಳೆಯುವ ಜವಾರಿ ತಳಿಯನ್ನೂ ಬಿತ್ತಿದರು. ಆದರೆ ಅದು ರೈತರು ಈಗ ಅನುಸರಿಸುತ್ತಿರುವ ಮಾಮೂಲು ವಿಧಾನ ಆಗಿರಲಿಲ್ಲ...

ಗುಳಿ ವಿಧಾನ
ಭತ್ತ ಬೆಳೆಯಲು ಗದ್ದೆಯಲ್ಲಿ ನೀರು ನಿಲ್ಲಿಸಲೇಬೇಕು ಎಂಬ ಪರಿಪಾಠ ರೈತರಲ್ಲಿ ಅದು ಹೇಗೋ ಬೆಳೆದುಕೊಂಡು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ‘ಶ್ರೀ (ಮಡಗಾಸ್ಕರ್) ವಿಧಾನ ಜನಪ್ರಿಯವಾಗುತ್ತಿದೆ. ನಿರ್ದಿಷ್ಟ ಅಂತರದಲ್ಲಿ ಸಸಿ ನಾಟಿ ಮಾಡಿ, ಕಳೆ ನಿಯಂತ್ರಿಸುವ ಈ ಪದ್ಧತಿಯಲ್ಲಿ ಒಳಸುರಿ ಕಡಿಮೆ; ಇಳುವರಿ ಹೆಚ್ಚು. ಕಲ್ಮೇಶ ಅವರು ಗೋಧಿ ಬೆಳೆಯಲು ಮುಂದಾದಾಗ, ಈ ವಿಧಾನವನ್ನು ಇಲ್ಲಿಯೂ ಪಾಲಿಸಲು ಮುಂದಾದರು.

ಉಳುಮೆ ಮಾಡಿ, ಎರೆಗೊಬ್ಬರ ಬೆರೆಸಿ ನೆಲವನ್ನು ಬಿತ್ತನೆಗೆ ಸಿದ್ಧಪಡಿಸಲಾಯಿತು. ಸ್ಥಳೀಯವಾಗಿ ರೂಪಿಸಿದ್ದ ಕೂರಿಗೆಯಿಂದ ಮುಕ್ಕಾಲು ಅಡಿ (9 ಇಂಚು) ಅಂತರದಲ್ಲಿ ಗುಳಿ (ತಗ್ಗು) ಮಾಡಿ, ಪ್ರತಿ ಸಾಲಿಗೆ ಎರಡೇ ಎರಡು ಬಿತ್ತನೆ ಬೀಜ ನಾಟಿ ಮಾಡಲಾಯಿತು. ತಳಿಗಳ ಮಧ್ಯೆ ಎರಡು ಅಡಿ ಸ್ಥಳಾವಕಾಶ ಕೊಡಲಾಯಿತು. ಮಳೆ ಸಂಪೂರ್ಣ ನಾಪತ್ತೆಯಾದ ಕಾರಣ, ಬಿತ್ತನೆಯಿಂದ ಹಿಡಿದು ಈವರೆಗೆ ನಾಲ್ಕು ಸಲ ಕೊಳವೆಬಾವಿಯಿಂದ ನೀರು ಹರಿಸಲಾಯಿತು.

ಎರಡು ಸಲ ಕಳೆ ತೆಗೆಯಲಾಯಿತು. ಸಾಲುಗಳ ಮಧ್ಯೆ ಸಾಕಷ್ಟು ಅಂತರವಿದ್ದುದರಿಂದ, ಬೇರುಗಳು ಸುತ್ತಲಿನ ಪೋಷಕಾಂಶಗಳನ್ನು ಚೆನ್ನಾಗಿ ಹೀರಲು ಅವಕಾಶ ಸಿಕ್ಕಿತು. ನಮಗಂತೂ ಎಲ್ಲ ತಳಿಗಳೂ ಇಷ್ಟೊಂದು ಚೆನ್ನಾಗಿ ಬರುತ್ತವೆ ಎಂಬುದೇ ಗ್ಯಾರಂಟಿ ಇರಲಿಲ್ಲ. ಈಗ ನೋಡಿದರೆ ಒಂದೊಂದು ತೆನೆಯೂ ವಿಶಿಷ್ಟ ನೋಟದಿಂದ ಆಕರ್ಷಿಸುತ್ತಿದೆ ಎನ್ನುತ್ತಾರೆ, ಈ ಕಾರ್ಯಕ್ಕೆ ಸಹಕಾರ ನೀಡಿರುವ ‘ಸ್ಪ್ರೆಡ್ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕಿ ಶ್ರೀದೇವಿ ಭೂತಪಳ್ಳಿ.

ಹತ್ತಕ್ಕೂ ಹೆಚ್ಚು ಗೋಧಿ ತಳಿಗಳ ಪೈಕಿ ಒಂದೊಂದರದ್ದೂ ವಿಶೇಷ. ಅತ್ಯಧಿಕ ಇಳುವರಿ ಕೊಡುವ ‘ಕುದರತ್ (ವಾರಣಸಿ ರೈತ ವಿಜ್ಞಾನಿ ರಘುವಂಶಿ ಅಭಿವೃದ್ಧಿಪಡಿಸಿದ ತಳಿ), ಸಕ್ಕರೆ ಅಂಶ ಕಡಿಮೆ ಇರುವ ಪೈಗಂಬಾರಿ (ಮಧ್ಯಪ್ರದೇಶ ಮೂಲ), ಒತ್ತೊತ್ತಾಗಿ ಕಾಳು ಒಳಗೊಂಡ ‘ಸಾಯಿಪುರಿ, ಗಾಢ ಕೆಂಪು ವರ್ಣದ ‘ಕಾಲಿಬಾಲ್ (ಪಂಜಾಬ್ ಮೂಲ), ಹೆಚ್ಚು ಪೋಷಕಾಂಶಗಳಿರುವ ಜವೆ (ಕಪಲಿ) ಗೋಧಿ ಸೇರಿದಂತೆ ಎರಡು ಸ್ಥಳೀಯ ತಳಿಗಳು ಇಲ್ಲಿವೆ.

‘ನಾನು ಮೂವತ್ತು ವರ್ಷಗಳಿಂದಲೂ ಗೋಧಿ ಬೆಳೆಯುತ್ತಿದ್ದೇನೆ. ಆದರೆ ಇಷ್ಟೊಂದು ವೈವಿಧ್ಯಮಯ ತಳಿಗಳನ್ನು ಯಾವತ್ತೂ ನೋಡಿರಲಿಲ್ಲ ಎಂದು ಕಲ್ಮೇಶ ಅವರ ತಂದೆ ಈರಪ್ಪ ಮಲ್ಲಾಡ ಸಂತಸದಿಂದ ಹೇಳುತ್ತಾರೆ.

‘ದೇಸಿ ಗೋಧಿ ಆರೋಗ್ಯಕ್ಕೆ ಪೂರಕ. ಆದರೆ ಸಿರಿಧಾನ್ಯಗಳ ಪ್ರಚಾರದ ಭರಾಟೆಯಲ್ಲಿ ಇದಕ್ಕೆ ಖಳನಾಯಕನ ಪಟ್ಟ ಕಟ್ಟಲಾಗಿದೆ! ನೂರಾರು ವರ್ಷಗಳಿಂದ ನಮ್ಮ ಅನ್ನದ ಭಾಗವಾಗಿರುವ ದೇಸಿ ಗೋಧಿಗಳನ್ನು ಮತ್ತೆ ಊಟದ ತಟ್ಟೆಗೆ ತರುವ ಅಗತ್ಯವಿದೆ. ಕಲ್ಮೇಶ್ ಮಾಡುತ್ತಿರುವ ಕೆಲಸ ಈ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆ ಎಂದು ಸಹಜ ಆರ್ಗಾನಿಕ್ಸ್‌ನ ಮುಖ್ಯಸ್ಥ ಸೋಮೇಶ್ ಶ್ಲಾಘಿಸುತ್ತಾರೆ.

ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡಿ, ಮುಂದಿನ ಹಂಗಾಮಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಬಿತ್ತುವ ಗುರಿ ಕಲ್ಮೇಶ ಅವರದು. ಪ್ರಸ್ತುತ ಕಟಾವಿನ ಹಂತಕ್ಕೆ ಬಂದಿರುವ ಎಲ್ಲ ಗೋಧಿ ತಳಿಗಳನ್ನು ರೈತರ ಸಹಭಾಗಿತ್ವದಲ್ಲಿ ಮೌಲ್ಯಮಾಪನಕ್ಕೆ ಒಳಪಡಿಸುವ ಕಾರ್ಯಕ್ರಮವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫೆ. 19ರಂದು ಕಲ್ಮೇಶ ಅವರ ಗೋಧಿ ಹೊಲದಲ್ಲಿಯೇ ನಡೆಯಲಿದೆ. 

ಔಷಧೀಯ ಗೋಧಿ
ಕಲ್ಮೇಶ ಹೊಲದಲ್ಲಿ ಬೆಳೆದಿರುವ ‘ಪೈಗಂಬಾರಿ ತಳಿ ಮಧ್ಯಪ್ರದೇಶ ಮೂಲದ್ದು. ಸ್ಥಳೀಯ ಮಾಲ್ವಿ ಭಾಷೆಯಲ್ಲಿ ಇದಕ್ಕೆ ಜುವಾರಿಯಾ ಗೇಹೂ ಎನ್ನುತ್ತಾರೆ. ಔಷಧೀಯ ಗುಣ ಹೊಂದಿರುವ ಈ ಗೋಧಿಯ ಹುಲ್ಲು ಪಶುಗಳಿಗೆ ಉತ್ಕೃಷ್ಟ ಆಹಾರವಂತೆ. ಸಕ್ಕರೆ ಅಂಶ ಕಡಿಮೆ ಇರುವ ಗೋಧಿಯನ್ನು ಸಿರಿವಂತರ ಸಮಾರಂಭಗಳಲ್ಲಿ ಪ್ರಮುಖ ಅಡುಗೆಗಳಿಗೆ ಬಳಸುತ್ತಾರೆ.

ಪೈಗಂಬಾರಿ ಗೋಧಿಯಿಂದ ತಯಾರಿಸಿದ ಚಪಾತಿ ಎಂಟರಿಂದ ಹತ್ತು ಗಂಟೆಗಳ ಕಾಲ ಮೃದುವಾಗಿರುತ್ತದೆ. ರಾತ್ರಿಯಿಡೀ ಗೋಧಿ ನೆನೆಸಿಟ್ಟು, ಬೆಳಿಗ್ಗೆ ಇದರ ಹಾಲನ್ನು ಸೇವಿಸುವುದು ಕೂಡ ರೂಢಿಯಲ್ಲಿದೆ.

ಇದಲ್ಲದೇ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಬನ್ಸಿ ಗೋಧಿ, ಗುಜರಾತ್‌ನ ರಾಜಕೋಟ್, ಉತ್ತರ ಕರ್ನಾಟಕದ ಕೆಂಪು ಗೋಧಿ, ಚಿಕ್ಕಮಗಳೂರು ಜವೆ ಗೋಧಿ ಹಾಗೂ ಗುಲ್ಬರ್ಗದ ಕಪಲಿ ಗೋಧಿ ಇಲ್ಲಿವೆ.

ಮಾಹಿತಿಗೆ: ಕಲ್ಮೇಶ ಮಲ್ಲಾಡ  8748074073.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT