ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೆ ಬೇಕಿದೆ ಇಂಥ ಪ್ರಯೋಗ...

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆರನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಸಂಬಂಧಿಯ ಮಗನಿಗೆ ತೊಗರಿ ಗಿಡದ ಚಿತ್ರ ತೋರಿಸಿ ಇದೇನೆಂದು ಕೇಳಿದರೆ ಅವನಿಗೆ ಗೊತ್ತಾಗಲಿಲ್ಲ. ಮನೆಯಲ್ಲಿ ಊಟ ಮಾಡುವ ಸಾರಿನಲ್ಲಿ ತೊಗರಿ ಬೇಳೆ ಇರುತ್ತದೆ ಎಂಬುದೂ ಗೊತ್ತಿರಲಿಲ್ಲ. ಈ ಹುಡುಗ ಶಾಲೆಯ ಎಲ್ಲ ಪರೀಕ್ಷೆಗಳಲ್ಲೂ ಉತ್ತಮ ಗ್ರೇಡಿನಲ್ಲಿ ಪಾಸಾಗುತ್ತಾನೆ.

ಬೇರೆ ಬೇರೆ ದೇಶಗಳ ಹೆಸರುಗಳು, ಆ ದೇಶಗಳ ಪ್ರಧಾನಮಂತ್ರಿಗಳ ಹೆಸರುಗಳು, ಆ ದೇಶಗಳ ರಾಷ್ಟ್ರೀಯ ಧ್ವಜಗಳ ವಿವರ, ಕ್ರಿಕೆಟ್ ಆಟಗಾರರ ಹೆಸರುಗಳು, ಇವೆಲ್ಲ ಇವನ ನಾಲಗೆಯ ತುದಿಯಲ್ಲಿಯೇ ಇವೆ.

ಆಕಾಶದಲ್ಲಿ ಹಾರಾಡುವ ವಿಮಾನಗಳನ್ನೂ ಯಾವ ದೇಶದವೆಂದು ಇವನಿಗೆ ಗುರುತಿಸಲು ಬರುತ್ತದೆ. ಹಾಗಾದರೆ ಇವನಿಗೆ ತೊಗರಿ ಗಿಡವನ್ನು ಗುರುತಿಸಲು ಯಾಕೆ ಸಾಧ್ಯವಾಗಲಿಲ್ಲ...? ಯಾಕೆಂದರೆ ಇವನಿಗೆ ಇದರ ಕುರಿತು ಯಾರೂ ಹೇಳಿಕೊಟ್ಟಿಲ್ಲ ಅಷ್ಟೆ.

ನಗರ ಪ್ರದೇಶಗಳಲ್ಲಿರುವ ಅನೇಕ ಮಕ್ಕಳ ಪಾಡು ಹೀಗಿರುತ್ತದೆ. ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಪ್ಯಾಕೆಟ್‌ನಿಂದ ಎಂದು ಹೇಳುತ್ತಾರೆ. ಮಗುವೊಂದು ರಸ್ತೆಯಲ್ಲಿ ಬಿದ್ದ ಸೆಗಣಿಯನ್ನು ನೋಡಿ ಇದೇನೆಂದು ಕೇಳಿದರೆ, ‘ಛಿ, ಹೀಗೆಲ್ಲ ಕೇಳಬಾರದು, ಗಲೀಜು...’ ಎಂದು ಅವರಮ್ಮ ಉತ್ತರಿಸಿದ್ದನ್ನು ನಾನು ನೋಡಿದ್ದೇನೆ. ನಮ್ಮ ದಿನಬಳಕೆಯ ವಸ್ತುಗಳು, ಸುತ್ತಲಿನ ಪರಿಸರದ ಕುರಿತು ಮಕ್ಕಳಿಗೆ ತಿಳಿಹೇಳಬೇಕೆಂದು ಪಾಲಕರಿಗಾಗಲಿ, ಶಿಕ್ಷಕರಿಗಾಗಲಿ ಅನ್ನಿಸುವುದೇ ಇಲ್ಲವೆ? ಎಂಜಿನಿಯರಿಂಗ್, ಮೆಡಿಕಲ್ ಅಥವಾ ಎಂ.ಬಿ.ಎ ಮಾಡಲು ಇದರ ಅಗತ್ಯ ಬೀಳುವುದಿಲ್ಲ ಎಂಬ ಕಾರಣಕ್ಕಿರಬಹುದು.

ಆದರೆ ಗ್ರಾಮಮಟ್ಟದ ಕೆಲ ಶಾಲೆಗಳಲ್ಲಿ ಚಿತ್ರಣ ಬೇರೆ ರೀತಿಯದ್ದಾಗಿದೆ. ಇದಕ್ಕೆ ಒಂದು ಉದಾಹರಣೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊಸಟ್ಟಿ ಗ್ರಾಮದ ಪ್ರಾಥಮಿಕ ಶಾಲೆ. ಈ ಶಾಲೆಗೆ ಹೋಗಿದ್ದೆ. ಶಾಲೆಯ ಆವರಣಕ್ಕೆ ಕಾಲಿಡುತ್ತಲೇ ನಳನಳಿಸುವ ತರಕಾರಿ ಮಡಿಗಳನ್ನು ಕಂಡು ತುಂಬಾನೇ ಖುಷಿಯಾಯಿತು. ಇದು ಕೇವಲ 19 ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆ. ಇಬ್ಬರು ಶಿಕ್ಷಕರಿದ್ದಾರೆ.

ಊಟಕ್ಕೆ ಮೊದಲು ಪುಸ್ತಕದ ಪಾಠವಾದರೆ, ಮಧ್ಯಾಹ್ನದ ಹೊತ್ತು ಮಕ್ಕಳಿಗೆ ಆಟದೊಂದಿಗೆ ನೆಲದ ಪಾಠವಾಗುತ್ತದೆ. ಶಿಕ್ಷಕರಾದ ಎ.ಎಂ. ನಿರಡಿ ಮತ್ತು ಟಿ.ಬಿ. ಹಿರೇಮಠ ಇವರ ಮಾರ್ಗದರ್ಶನದಲ್ಲಿ ಮಕ್ಕಳು, ಆ ವಾತಾವರಣಕ್ಕೆ ಹೊಂದುವ ಬಹಳಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

‘ಏನೇನು ಬೆಳೆದಿದ್ದೀರಿ?’ ಎಂದು ಕೇಳುವುದೇ ತಡ, ಗವಾರ ಕಾಯಿ, ಬೆಂಡಿಕಾಯಿ, ಬದನಿಕಾಯಿ, ಬೀನ್ಸ್, ಟೊಮೆಟೊ, ಮೂಲಂಗಿ, ಪಾಲಕ, ಸಬ್ಬಸಿಗೆ, ಹರವಿ ಭಾಜಿ, ಮೆಂತೆ, ಕೊತ್ತಂಬರಿ, ಮೆಣಸಿನಕಾಯಿ, ಲಿಂಬಿಹಣ್ಣು...’ ಎಂಬ ಉದ್ದನೆಯ ಪಟ್ಟಿಯನ್ನೇ ಮುಂದಿಡುತ್ತವೆ ಮಕ್ಕಳು. ಇವರು ಬೆಳೆಯುವ ತರಕಾರಿ ಶಾಲೆಯ ಬಿಸಿಯೂಟಕ್ಕೆ ಸಾಕಾಗಿ, ಸರದಿಯಂತೆ ಮಕ್ಕಳ ಮನೆಗಳಿಗೂ ಪೂರೈಕೆಯಾಗುತ್ತವೆ. ತಾವೇ ಬೆಳೆದವಾದ್ದರಿಂದ ಮಕ್ಕಳೆಲ್ಲ ತರಕಾರಿಗಳನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ನಾಲ್ಕನೇ ಮತ್ತು ಐದನೇ ತರಗತಿಯ ಮಕ್ಕಳಿಗೆ ನೆಲ ಹದ ಮಾಡುವುದರಿಂದ ಹಿಡಿದು ಕಟಾವು ಮಾಡುವವರೆಗಿನ ಜವಾಬ್ದಾರಿ ವಹಿಸಲಾಗಿದೆ. ಈ ತರಗತಿಗಳ ಒಂದೊಂದು ಮಗುವಿಗೂ ಒಂದೊಂದು ತರಕಾರಿ ಮಡಿಯ ಜವಾಬ್ದಾರಿ ಕೊಡಲಾಗಿದೆ. ಉಳಿದ ಮಕ್ಕಳು, ಕಳೆ ತೆಗೆಯುವ, ನೀರು ಹಾಯಿಸುವ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.

ಎಲ್ಲ ಕೆಲಸಗಳಲ್ಲಿಯೂ ಶಿಕ್ಷಕರ ಭಾಗವಹಿಸುವಿಕೆ ಇದೆ. ಮಡಿ ಮಾಡುವುದು, ಗಿಡ ನೆಡುವುದು, ಗೊಬ್ಬರಕ್ಕಾಗಿ ರಸ್ತೆಯಲ್ಲಿ ಬಿದ್ದ ಸೆಗಣಿ ಹೆಕ್ಕಿ ತರುವುದು, ನೀರು ಹಾಯಿಸುವುದು, ಅಗತಿ ಮಾಡುವುದು ಈ ಎಲ್ಲ ಕೆಲಸಗಳನ್ನೂ ಮಕ್ಕಳು ಪ್ರೀತಿಯಿಂದ ಮಾಡುತ್ತಾರೆ. ಪಾಲಕರೂ ಅಷ್ಟಿಷ್ಟು ಗೊಬ್ಬರ ಕಳುಹಿಸಿಕೊಟ್ಟು ಮಕ್ಕಳ ಕೆಲಸಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. 

ಕೋಳಿ ಫಾರಂ ನಡೆಸುತ್ತಿರುವ ಪಾಲಕರೊಬ್ಬರು ಕೋಳಿ ಗೊಬ್ಬರ ಪೂರೈಸುತ್ತಿದ್ದಾರೆ. ಶಾಲೆಯ ಹಿಂದಿರುವ ನೀರಿನ ಟ್ಯಾಂಕ್‌ ತುಂಬಿದ ನಂತರ ಹೆಚ್ಚಿನ ನೀರು ತರಕಾರಿ ತೋಟಕ್ಕೆ ಹರಿದುಬರುವಂತೆ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಮಕ್ಕಳು ಕ್ರಿಕೆಟ್ ಬ್ಯಾಟು ಮತ್ತು ಚೆಂಡನ್ನು ತೆಗೆದುಕೊಂಡು ಹೋದರೆ ಹೊಸಟ್ಟಿ ಗ್ರಾಮದ ಮಕ್ಕಳು ಗುದ್ದಲಿ, ಸನಿಕೆ, ತೆಗೆದುಕೊಂಡು ಶಾಲೆಗೆ ಹೋಗುತ್ತಾರೆ. ತರಕಾರಿ ನೋಡಲೆಂದು ಹೋದವರು, ದೂರದಿಂದ ನೋಡಿದರೆ ಸರಿ. ಹತ್ತಿರ ಹೋದರೆ ಸಾಕು, ಎಲ್ಲಿ ತಾವು ಬೆಳೆದ ಗಿಡಗಳಿಗೆ ಧಕ್ಕೆ ಮಾಡುತ್ತಾರೋ ಎಂಬ ಆತಂಕ ಮಕ್ಕಳ ಮುಖದಲ್ಲಿ ಮೂಡುತ್ತದೆ.

ಓದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಈ ಮಕ್ಕಳು ಮುಂದು. ಮಕ್ಕಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಧೈರ್ಯದಿಂದ ತಮ್ಮ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಎರಡನೆಯ ತರಗತಿಯಲ್ಲಿ ಕಲಿಯುವ ರಾಹುಲ್ ಮತ್ತು ಅಜಯ್ 50ರವರೆಗಿನ ಯಾವ ಮಗ್ಗಿಯನ್ನು ಕೇಳಿದರೂ ತಡವರಿಸದೇ ಬಾಯಿಪಾಠ ಹೇಳುತ್ತಾರೆ. ಪಂಚಾಯಿತಿ, ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಈ ಶಾಲೆಯ ಮಕ್ಕಳು ಒಂದಿಲ್ಲೊಂದು ಬಹುಮಾನ ತರದೇ ಇರುವುದಿಲ್ಲ.  

ಗರಿಗರಿಯಾದ ಸಮವಸ್ತ್ರ ತೊಟ್ಟು, ಕಾಲಿಗೆ ಫಳಫಳ ಹೊಳೆಯುವ ಬೂಟು, ಕೊರಳಿಗೆ ಟೈ ಹಾಕಿ ಮಣಭಾರದ ಪಾಟಿಚೀಲವನ್ನು ಹೊತ್ತು ಪಟ್ಟಣದ ಮಕ್ಕಳು ಶಾಲೆಗೆ ಹೋಗುವುದನ್ನು ನೋಡುವಾಗ ನಮ್ಮ ಹಳ್ಳಿಯ ಪಾಲಕರಲ್ಲಿ ನಮ್ಮ ಮಕ್ಕಳೂ ಹೀಗಿದ್ದರೆ ಚೆನ್ನಲ್ಲವೆ ಎಂಬ ಭಾವನೆ ಬರುತ್ತದೇನೋ. ಆದರೆ ಹೊಸಟ್ಟಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ನೋಡಿದಾಗ ನಮ್ಮ ಪಟ್ಟಣದ ಮಕ್ಕಳಿಗೆ ಈ ಭಾಗ್ಯ ಸಿಗಬಾರದೇ ಎಂದೆನಿಸಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT