ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊತ್ತಿ ಉರಿಯುತ್ತಿದೆ ಪಶ್ಚಿಮಘಟ್ಟ

Last Updated 14 ಫೆಬ್ರುವರಿ 2017, 11:04 IST
ಅಕ್ಷರ ಗಾತ್ರ

ನಮ್ಮ ರಾಜ್ಯದ ಪ್ರಮುಖ ನದಿಗಳ ಮೂಲ ಪಶ್ಚಿಮಘಟ್ಟವನ್ನು ಬೆಂಕಿಯಿಂದ ರಕ್ಷಿಸುವುದು ಸರ್ಕಾರದ ಬಳಿ ಯಾವುದೇ ಕ್ರಮಗಳಿಲ್ಲದೇ ಪಶ್ಚಿಮಘಟ್ಟದ ಹಲವು ಬೆಟ್ಟಗಳು ಒಂದರ ಮೇಲೊಂದರಂತೆ ಸುಟ್ಟು ಭಸ್ಮವಾಗುತ್ತಿವೆ. ಸಾಮಾನ್ಯವಾಗಿ ಏಪ್ರಿಲ್‌ – ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ ಘಟನೆಗಳು ಡಿಸೆಂಬರ್‌ನಲ್ಲೇ ಶುರುವಾಗಿವೆ.

ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಪಶ್ಚಿಮ ಘಟ್ಟದ ಮಹತ್ವ ದಿನೇ ದಿನೇ ಹೆಚ್ಚುತ್ತಿದೆ. ‘ಯಾವ ದೇಶಗಳಲ್ಲಿ, ಅಥವಾ ರಾಜ್ಯಗಳಲ್ಲಿ ಹೆಚ್ಚು ಹಸಿರು ಕಾಡು ಪ್ರದೇಶವಿದೆಯೋ, ಅಲ್ಲಿನ ನಾಗರಿಕರಿಗೆ ಹೆಚ್ಚಿನ ಅನುದಾನಗಳನ್ನು ಕೊಡಬೇಕು.

ಯಾಕೆಂದರೆ ಅಂತಹ ದೇಶ ಅಥವಾ ರಾಜ್ಯ ಮನುಕುಲಕ್ಕೆ ಉಸಿರನ್ನು ದಾನ ಮಾಡುವ ಉನ್ನತ ಕೆಲಸ ಮಾಡುತ್ತಿರುವುದನ್ನು ಗುರುತಿಸಬೇಕು’ ಎಂಬುದಾಗಿ ಭಾರತೀಯ ಪರಿಸರವಾದಿಗಳು ಜಾಗತಿಕ ವೇದಿಕೆಗಳಲ್ಲಿ ಆಗ್ರಹಗಳನ್ನು ಮಂಡಿಸುತ್ತಿದ್ದಾರೆ. ಆದರೆ ಅದೇ ವೇಳೆಗೆ ನಮ್ಮಲ್ಲಿರುವ ಅಪರೂಪದ ಪಶ್ಚಿಮಘಟ್ಟವನ್ನು ಹೇಗೆ ಹಣವನ್ನಾಗಿ ಪರಿವರ್ತಿಸಬಹುದು ಎಂಬ ಲೆಕ್ಕಾಚಾರಗಳನ್ನು ಸರ್ಕಾರಗಳು ಮಾಡುತ್ತಿರುವುದು ವಿಪರ್ಯಾಸ.

ಕರ್ನಾಟಕದಲ್ಲಿ ವಿಶಾಲವಾಗಿ ಹಬ್ಬಿಕೊಂಡಿರುವ ಪಶ್ಚಿಮಘಟ್ಟವನ್ನು ರಕ್ಷಿಸುವಂತೆ ಪರಿಸರವಾದಿಗಳು ಇಡುತ್ತಿರುವ ಮೊರೆ ಪ್ರಸ್ತುತ ಅರಣ್ಯರೋದನವಾಗಿದೆ. ಯೋಜನೆಗಳ ವಿರುದ್ಧ ಏಳುವ ಧ್ವನಿಯನ್ನು ನಿರ್ಲಕ್ಷಿಸುವುದಷ್ಟೇ ಅಲ್ಲ, ಇರುವ ಸಂಪತ್ತನ್ನು ರಕ್ಷಿಸಿಕೊಳ್ಳುವ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ  ನಿಷ್ಕ್ರಿಯತೆಯ ಬಗ್ಗೆಯೂ ಬೇಸರ ವ್ಯಕ್ತವಾಗುತ್ತಿದೆ.

ಪಶ್ಚಿಮಘಟ್ಟ ಹಲವು ನದಿಗಳಿಗೆ ಮೂಲ. ರಾಜ್ಯದಲ್ಲಿ ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಹರಿವ ನದಿಗಳಿಗೆ ಪಶ್ಚಿಮಘಟ್ಟದ ಹಸಿರು ಪ್ರದೇಶವೇ ಆಕರ. ಕರಾವಳಿಯತ್ತ ಹರಿಯುವ ಪ್ರಮುಖ ನದಿ ನೇತ್ರಾವತಿ ಮೂಲದ ವ್ಯಾಪ್ತಿಯನ್ನು ಗಮನಿಸುವುದಾದರೆ, ಸಂಸೆಯ ಬಂಗ್ರಬಳಿಕೆಯಿಂದ ಪುಷ್ಪಗಿರಿಯವರೆಗೆ ಹಬ್ಬಿಕೊಂಡಿರುವ ವಿವಿಧ ಬೆಟ್ಟಗಳ ಇಳುಕಲುಗಳಲ್ಲಿ ನೇತ್ರಾವತಿಯ ನದಿಮೂಲಗಳಿವೆ.

ಒಂಬತ್ತು ಬೆಟ್ಟಗಳೆಡೆಯಿಂದ ಹರಿದು ಬರುವ ಝರಿಗಳು ಸೇರಿ ನದಿಯೊಂದು ರೂಪುಗೊಳ್ಳುತ್ತದೆ. ಹೀಗೆ ಒಂದೊಂದು ನದಿಯ ಉಗಮವೂ ವೈವಿಧ್ಯಮಯವಾಗಿ, ವಿಶಾಲ ಕಾಡನ್ನು ಆವರಿಸಿಕೊಂಡು ಉಂಟಾಗುತ್ತದೆ.

2016ರ ಮಳೆಗಾಲದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಗಿಡ ಮರ ಹುಲ್ಲು ಬೇಗನೇ ಒಣಗಿನಿಂತಿವೆ. ಮಧುಗುಂಡಿಯ ದುರ್ಗದಹಳ್ಳಿಯಲ್ಲಿ ಮಳೆಗಾಲದಲ್ಲಿ ಸರಾಸರಿ 87 ಇಂಚು ಮಳೆಯಾಗುತ್ತಿದ್ದು, ಈ ಬಾರಿ ಕೇವಲ 54 ಇಂಚು ಮಾತ್ರ ಮಳೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಇನ್ನು ಸಕಲೇಶಪುರ, ಚಾರ್ಮಾಡಿ, ಶಿರಾಡಿ, ಗುಂಡ್ಯ, ಎಳನೀರು ಘಾಟಿ, ಕಡ್ತಕಲ್‌ ಘಾಟಿ, ಬಿಸಿಲೆ, ಭೈರಾಪುರ, ಪುಷ್ಪಗಿರಿಯಲ್ಲಿ ಸಾಮಾನ್ಯವಾಗಿ ಫೆಬ್ರುವರಿಯವರೆಗೆ ಪ್ರಕೃತಿ ಹಸಿರು ಹೊದ್ದು ನಳನಳಿಸುತ್ತಿರುತ್ತಾಳೆ.

ಈ ಬಾರಿ ಮಳೆಗಾಲ ಬೇಗನೇ ಮುಗಿದಿರುವುದರಿಂದ ಡಿಸೆಂಬರ್‌ ತಿಂಗಳೇ ಒಣಗಿದ ಮರಗಳು, ನೆಲಕಚ್ಚಿದ ಹುಲ್ಲು ಕಾಳ್ಗಿಚ್ಚನ್ನು ಆಹ್ವಾನಿಸುವಂತೆ ನಿಂತಿದೆ. ಶೋಲಾಕಾಡುಗಳು ಒಣಗಿದ ತಕ್ಷಣವೇ ಸಣ್ಣ ನೆಪವೊಂದಕ್ಕೂ ಬೆಂಕಿಯನ್ನು ಆಕರ್ಷಿಸಿ ಭಗ್ಗನೆ ಹೊತ್ತಿ ಉರಿಯಲಾರಂಭಿಸುತ್ತವೆ. ಇದರಿಂದ ನೀರಿನ ಒರತೆ ಒಣಗಿ ನದಿ ಮೂಲ ಬರಡಾಗುತ್ತದೆ.

ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಬೆಂಕಿ ಬಿದ್ದರೆ ಉಂಟಾಗುವ ಬೂದಿ ಮೇ ಅಥವಾ ಜೂನ್‌ನಲ್ಲಿ ಬರುವ ಮಳೆಯಲ್ಲಿ ಕರಗಿ ಗೊಬ್ಬರದ ಮಾದರಿಯಲ್ಲಿ ಗಿಡಗಳಿಗೆ ನೆರವಾಗುತ್ತದೆ. ಪಶ್ಚಿಮ ಘಟ್ಟದ ಹಸಿರು ಹೊದಿಕೆ ದಟ್ಟವಾಗಿ ಮತ್ತಷ್ಟು ಮಳೆಯ ಆಕರ್ಷಣೆಗೆ ಕಾರಣವಾಗುತ್ತದೆ. ಆದರೆ ನಾಲ್ಕೈದು ಸಾರಿ ಬೆಂಕಿ ಬಿದ್ದರೆ ಗಿಡಮರಗಳ ಬೇರು ಸುಟ್ಟುಹೋಗಿ ಕಾಡು ಬರಿದಾಗುತ್ತದೆ. ಮತ್ತೆ ಮಳೆಗಾಲದಲ್ಲಿ ಬರುವ ಮಳೆಗೆ ಮಣ್ಣು ಕರಗಲಾರಂಭಿಸುತ್ತದೆ. ಕಣಿವೆಯಲ್ಲಿ ಒರತೆಯ ಕಿಂಡಿಗಳನ್ನೆಲ್ಲ ಈ ಮಣ್ಣು ಮುಚ್ಚುತ್ತದೆ.

ಹೊತ್ತಿ ಉರಿದ ಬೆಟ್ಟ ಸಾಲು: ಈ ಬಾರಿ ಅರೆಕಲ್‌ ಕಣಿವೆಯಿಂದ ಹೊರಟ್ಟಿಯವರೆಗೆ ರಾಮನಬೆಟ್ಟ, ಸೊಪ್ಪಿನ ಬೆಟ್ಟ ಸೇರಿದಂತೆ ಹೊಸಮನೆ ಬೆಟ್ಟದಲ್ಲಿಯೂ ಈಗಾಗಲೇ ಕಾಳ್ಗಿಚ್ಚು ಉಂಟಾಗಿ, ಗಿಡಗಳು ಹೊತ್ತಿ ಉರಿದು ಭಸ್ಮವಾಗಿವೆ. ಬಾಳೆಗುಡ್ಡ, ಬಾರಿಮಲೆ, ದೇವರ ಮಲೆ ಮತ್ತು ಮಿಂಚುಕಲ್ಲು ಸುಡು ಸುಡು ಬೆಂಕಿಯಲ್ಲಿ ಧಗಧಗಿಸಿದೆ. ಮತ್ತೆ ಬೆಂಕಿ ಬಿದ್ದರೆ ಕಾಡು ಬೋಳಾಗುವುದು ನಿಚ್ಚಳ. ಇದರಿಂದ ನದಿ ಮೂಲಗಳಿಗೆ ಹಾನಿಯಾಗುತ್ತದೆ ಎನ್ನುತ್ತಾರೆ ಹೊರಟ್ಟಿಯ ರಮೇಶ್‌ ಗೌಡ.

ಕುಮಾರಧಾರಾ ನದಿ ಮೂಲವಾದ ಕನ್ನಡಿ ಕಲ್ಲು, ಏಣಿಕಲ್ಲು, ಪಟ್ಲಬೆಟ್ಟ, ಕುಮಾರ ಪರ್ವತಕ್ಕೂ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದರೆ ಆಗುವ ಪ್ರಾಕೃತಿಕ ಅನಾಹುತ ಒಂದೆಡೆಯಾದರೆ, ಬೇಕೆಂದೇ ಬೆಂಕಿ ಹಚ್ಚಿ ಅಕ್ರಮ ಚಟುವಟಿಕೆಗಳಿಗೆ, ಅತಿಕ್ರಮಣಗಳಿಗೆ ರಹದಾರಿ ನಿರ್ಮಿಸುವ ಮಾಫಿಯಾ ಮತ್ತೊಂದು ಕಡೆ ಕೆಲಸ ಮಾಡುತ್ತದೆ. ಈ ವಿಷಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.

ಆದ್ದರಿಂದ ಬೆಂಕಿ ಹತ್ತಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವ, ಬೆಂಕಿ ಬಿದ್ದಾಗ ನಂದಿಸಲು ಬೇಕಾದ ಸೌಲಭ್ಯಗಳನ್ನು ಮಾಡಿಕೊಳ್ಳುವ ಮತ್ತು ಕಾಡಿನ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿದೆ. ಆ ಮೂಲಕ ಹಸಿರು ಸಂಪತ್ತನ್ನು ಸರ್ಕಾರ ರಕ್ಷಿಸಬೇಕು ಎಂದು ಆಗ್ರಹಿಸುತ್ತಾರೆ ಪರಿಸರವಾದಿ ದಿನೇಶ್‌ ಹೊಳ್ಳ.

ಪ್ರಾಣಿಗಳನ್ನು ಅಟ್ಟಾಡಿಸುವ ಮನುಷ್ಯರು: ಪಶ್ಚಿಮಘಟ್ಟದಲ್ಲಿ ಬೆಂಕಿ ಬಿದ್ದಾಗ ಮರಗಿಡ, ಅಮೂಲ್ಯ ಸಸ್ಯ ಸಂಪತ್ತು ಮಾತ್ರ ನಾಶವಾಗುವುದಲ್ಲ. ಕೀಟಗಳಿಂದ ಹಿಡಿದು, ಹಕ್ಕಿ ಪಕ್ಕಿ, ಕಡವೆ, ಆನೆ ಸೇರಿದಂತೆ ಸಾವಿರಾರು ಜೀವಿಗಳ ನಾಶವಾಗುತ್ತದೆ. ಆನೆ, ಹುಲಿ, ಹಂದಿಯಂಥ ಪ್ರಾಣಿಗಳು ತಮ್ಮ ಕೈಲಾದಷ್ಟು ದೂರ ಓಡಿ ಹೋಗುತ್ತವೆ. ಬಳಿಕ ಹೊಟ್ಟೆಪಾಡಿಗಾಗಿ ಪಕ್ಕದ ಊರಿಗೆ ನುಗ್ಗುತ್ತವೆ. ಅಷ್ಟರಲ್ಲಿ ‘ಕಾಡುಪ್ರಾಣಿಗಳ ಹಾವಳಿ’ ಎಂಬ ಮತ್ತೊಂದು ಕೂಗು ಎದ್ದೇಳುತ್ತದೆ.

ವಾಸ್ತವವಾಗಿ ಯಾರು ಯಾರನ್ನು ಕಾಡಿಸುತ್ತಿದ್ದಾರೆ ಎನ್ನುವುದನ್ನು ಸಾವಧಾನವಾಗಿ ಯೋಚಿಸುವವರು ಅರ್ಥ ಮಾಡಿಕೊಳ್ಳಬಹುದು ಎನ್ನುತ್ತಾರೆ ಹಾಸನ ಪರಿಸರವಾದಿ ಕಿಶೋರ್‌ ಕುಮಾರ್‌.

ಕಾಫಿ, ರಂಬುಟಾನ್‌, ರಬ್ಬರ್‌ ಎಸ್ಟೇಟ್‌ಗಳು ವಿಸ್ತಾರವಾಗುತ್ತಿದ್ದಂತೆ ಆನೆಗಳು ಪದೇ ಪದೇ ಬಿಡಾರ ಬದಲಾಯಿಸಬೇಕಾಗುತ್ತದೆ. ಬಾರಿಮಲೆ, ಬಾಂಜಾರು ಮಲೆಗಳಲ್ಲಿ ಈಗಾಗಲೇ ಆನೆಗಳ ದಾಳಿಯ ಸುದ್ದಿ ಪದೇ ಪದೇ ಕೇಳಿಬರುತ್ತದೆ. ಬಾರಿಮಲೆ, ಕಂಬಕಲ್‌, ಬಾಂಜಾರು ಮಲೆ, ಇಳಿಮಲೆ, ಅಂಬಟಿ ಮಲೆ, ಸೋಮನಕಾಡು, ಅಣಿಯೂರು, ದೇವಗಿರಿ, ಮೃತ್ಯುಂಜಯ ಕಣಿವೆಗಳು ಆನೆಗಳ ದಾರಿಯಾದರೂ, ಎಸ್ಟೇಟ್‌ಗಳು ದರ್ಬಾರಿನ ನಡುವೆ, ಅವುಗಳನ್ನು ಒಂದು ಕಣಿವೆಯಿಂದ ಮತ್ತೊಂದು ಕಣಿವೆಗೆ ಓಡಿಸಲಾಗುತ್ತದೆ.

ಬೆಂಕಿಯ ಭಯಕ್ಕೋ, ಮತ್ತೇನೋ ಸಮಸ್ಯೆ ಎದುರಾಗಿಯೋ, ಚಾರ್ಮಾಡಿ ಕಡೆಯಿಂದ ಓಡಲು ಶುರು ಮಾಡುವ ಆನೆಗಳು ಅತ್ತ ಮೂಡಿಗೆರೆಯತ್ತ ತೆರಳಿದರೆ, ಕಾಫಿ ತೋಟದ ಮಾಲೀಕರು ಮತ್ತೆ ಓಡಿಸಲಾರಂಭಿಸುತ್ತಾರೆ.  ಓಡಿಓಡಿ ದಣಿವ ಆನೆಗಳ ಪಾಡು ಊಹಿಸಲು ಅಸಾಧ್ಯ. ‘ಓಡಿ ಸುಸ್ತಾಗುವ ಆನೆಗಳು ರೊಚ್ಚಿಗೇಳುತ್ತವೆ. ಹೊಟ್ಟೆಗಿಲ್ಲದೇ ಹಸಿವಿನಿಂದ ಸಿಕ್ಕಸಿಕ್ಕಲ್ಲಿ ರಂಪ ಮಾಡುತ್ತವೆ’ ಎನ್ನುತ್ತಾರೆ ಚಾರ್ಮಾಡಿಯ ಶಿವಪ್ಪ.

ಶಿವಪ್ಪ ಅವರ ತಂದೆ ಆನೆ ತುಳಿತಕ್ಕೇ ಬಲಿಯಾದವರು. ‘ಅರಣ್ಯ ಇಲಾಖೆ ಕೃಷಿ ಬೆಳೆಗೆ ಹಾನಿ ಮಾಡುವ ಕಾಡು ಹಂದಿಗಳನ್ನು ಕೊಲ್ಲಲು ಅನುಮತಿ ನೀಡಿರುವುದರಿಂದ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ. ಹಂದಿಯನ್ನು ಕೊಲ್ಲುವ ನೆಪದಲ್ಲಿ ಕಾಡಿನ ಪ್ರಾಣಿಗಳನ್ನೆಲ್ಲಾ ಕೊಂದು ಹಾಕುವ ಸಂಭವ ಇದೆ’ ಎಂದು ದಿನೇಶ್‌ ಹೊಳ್ಳ ಆತಂಕ ವ್ಯಕ್ತಪಡಿಸುತ್ತಾರೆ. 

ಒಟ್ಟಿನಲ್ಲಿ, ಆನೆಗಳ ಅಸಹಾಯಕ ಓಟ ಕಣ್ಣಿಗೆ ಕಾಣಿಸಬಲ್ಲುದು. ಆದರೆ ಇತರ ಸಣ್ಣ ಪುಟ್ಟ ಅತ್ಯಮೂಲ್ಯ ಪ್ರಾಣಿಗಳು ಮನುಷ್ಯರ ಅಭಿವೃದ್ಧಿಗೆ ಬಲಿಯಾಗಿ ಅಸಹಾಯಕವಾಗಿ ಓಡುತ್ತಿರುವುದು, ನಾಶವಾಗುತ್ತಿರುವುದು ಗೋಚರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುವವರು ಪರಿಸರವಾದಿ ಶಶಿಧರ ಶೆಟ್ಟಿ.
ರೆಸಾರ್ಟ್‌, ಹೋಮ್‌ಸ್ಟೇಗಳು ಕಾಡಿನಲ್ಲಿ ತ್ಯಾಜ್ಯ ಎಸೆಯುವುದರಿಂದ, ಹರಿಯುವ ನೀರಿನ ಝರಿಯನ್ನು ತಮ್ಮ ವಾಣಿಜ್ಯ ಬಳಕೆಗೆ ತಿರುಗಿಸಿಕೊಳ್ಳುವುದರಿಂದ ಆಗುವ ಅಸಮತೋಲನವನ್ನೂ ಗಮನಿಸಬೇಕು ಎಂಬುದು ಅವರ ಆಶಯ.

ಮುಖ್ಯವಾಗಿ ಪ್ರಕೃತಿ ವಿಕೋಪಗಳಾದಾಗ ನಗರ ಅಥವಾ ಊರನ್ನು ಉಳಿಸಿಕೊಳ್ಳಲು ಆಡಳಿತ ವ್ಯವಸ್ಥೆಯ ಬಳಿ ಹಲವಾರು ತಯಾರಿಗಳಿರುತ್ತವೆ. ಅದೇ ರೀತಿ ಪಶ್ಚಿಮಘಟ್ಟದ ಕಾಡಿಗೆ ಬೆಂಕಿ ಬೀಳುವ ಸಂಭವವನ್ನು ನಿರೀಕ್ಷಿಸಿಕೊಂಡು, ಆಡಳಿತ ಹೆಲಿಕಾಪ್ಟರ್‌ಗಳಲ್ಲಿ ನೀರು ಚಿಮುಕಿಸಿ ಬೆಂಕಿ ನಂದಿಸುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡುತ್ತಾರೆ ಶಶಿಧರ ಶೆಟ್ಟಿ. ಈ ಕುರಿತು ಸರ್ಕಾರಕ್ಕೆ ಮನವಿಯನ್ನೂ ಅವರು ಸಲ್ಲಿಸಿದ್ದಾರೆ. ಈ ಆಗ್ರಹಕ್ಕೆ ಪರಿಸರವಾದಿಗಳೆಲ್ಲರೂ ದನಿಗೂಡಿಸುತ್ತಾರಾದರೂ, ಸರ್ಕಾರದ ನಿರ್ಲಕ್ಷ್ಯ ಬೇಸರ ತರಿಸುತ್ತದೆ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಮುನ್ನೆಚ್ಚರಿಕೆ ವಹಿಸಲಾಗಿದೆ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡರೆ ಹತೋಟಿಗೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ. ಟಿ. ಹನುಮಂತಪ್ಪ ಹೇಳುತ್ತಾರೆ. ‘ಬೆಂಕಿ ರಕ್ಷಣಾ ರೇಖೆಗಳನ್ನು ನಿರ್ಮಿಸಲಾಗಿದೆ. ಅಂದರೆ ತರಗೆಲೆಗಳನ್ನು ಮುಂಚಿತವಾಗಿ ಎಚ್ಚರಿಕೆಯಿಂದ ಸುಡಲಾಗುವುದು. ಒಂದು ವೇಳೆ ಬೆಂಕಿ ಹತ್ತಿಕೊಂಡಾಗ ಅದು ಮುಂದುವರೆಯಲು ಕಸಕಡ್ಡಿ ಸಿಗದಂತೆ ರೇಖೆಗಳನ್ನು ನಿರ್ಮಿಸಲಾಗುವುದು.

ಬೆಂಕಿ ಹೊತ್ತಿಕೊಳ್ಳಬಹುದಾದ ಪ್ರದೇಶವನ್ನು ಗಮನಿಸಿ  ಕಾವಲುಗಾರರ ತಂಡ ನಿಯೋಜಿಸಲಾಗುವುದು. ಅಲ್ಲದೆ ದೂರದಲ್ಲಿ ಬೆಂಕಿ ಬಿದ್ದಾಗ ಕಾಣಿಸುವಂತೆ ಎತ್ತರದಲ್ಲಿರುವ ವೀಕ್ಷಣಾ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗ್ರಾಮಸ್ಥರಿಗೆ ಮಾಹಿತಿ ನೀಡಿ, ಅವರಲ್ಲಿ ಜಾಗೃತಿ ನೀಡಿ, ಬೆಂಕಿ ಬಿದ್ದಾಗ ನಂದಿಸಲು ಅವರ ನೆರವು ಪಡೆಯಲು ಸಿದ್ಧತೆ ಮಾಡಲಾಗಿದೆ’ ಎನ್ನುವ ಅವರು ಪಶ್ಚಿಮಘಟ್ಟದ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಯಾವುದೇ ಕಡೆಯಲ್ಲಿ ಕಾಡಿಗೆ ಬೆಂಕಿ ಬಿದ್ದಿಲ್ಲ ಎಂದು ಹೇಳುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಕುಣಬಿ ಸಮುದಾಯದ ಬಗ್ಗೆ ಕಳೆದ ವಾರ (ಫೆ.7) ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಗೊಂಡ ‘ಅಡವಿಯ ಮಡಿಲು ಜೊಯಿಡಾ’ ಲೇಖನ ಬರೆದವರು ಸಂಧ್ಯಾ ಹೆಗಡೆ ಆಲ್ಮನೆ. ಲೇಖಕರ ಹೆಸರು ಕಣ್ತಪ್ಪಿನಿಂದ ಬಿಟ್ಟುಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT