ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗಿಂತ ಹೆಚ್ಚಲ್ಲ ಗುಲಾಬಿ ಬೆಲೆ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರೇಮದ ಸಂಕೇತವಾದ ಕೆಂಗುಲಾಬಿಗೆ ಫೆಬ್ರುವರಿ ತಿಂಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಪ್ರೇಮಿಗಳ ದಿನದಂದು ಗುಲಾಬಿಗೆ ಬೆಲೆ ಏರಿಕೆಯ ಖುಷಿ.  ಸಾಮಾನ್ಯ ದಿನಗಳಲ್ಲಿ ಮೂರರಿಂದ ಐದು ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ, ಈ ದಿನ  25ರಿಂದ 50 ರೂಪಾಯಿಗೆಲ್ಲ ಮಾರಾಟವಾಗುತ್ತದೆ.

ಪ್ರೀತಿಗೆ ಅಷ್ಟೊಂದು  ಬೆಲೆ ಕೊಡುವಾಗ ಪ್ರೀತಿಯ ಸಂಕೇತವಾದ ಗುಲಾಬಿಗೆ ಎಷ್ಟು ಬೆಲೆ ಕೊಟ್ಟರೂ ಕಡಿಮೆಯೇ ಎಂಬುದು ಯುವ ಪ್ರೇಮಿಗಳ ನಿಲುವು.
ಬೆಂಗಳೂರಿಗೂ ಗುಲಾಬಿಗೂ ಹತ್ತಿರದ ನಂಟು.

ಬೆಂಗಳೂರು, ದೇಶದ ಪ್ರಮುಖ ಗುಲಾಬಿ ಮಾರುಕಟ್ಟೆ ಎನಿಸಿದೆ. ಬೆಂಗಳೂರಿನ ಹೊರವಲಯ ಹೊಸಕೋಟೆಯ ಸುತ್ತಮುತ್ತಲ ಹಳ್ಳಿಗಳು ಗುಲಾಬಿ ಕೃಷಿಗೆ ಪ್ರಸಿದ್ಧ. ಹೀಗಾಗಿ ಪ್ರತಿ ದಿನ ನಗರಕ್ಕೆ ತಾಜಾ ಹೂಗಳ ಪೂರೈಕೆಯಾಗುತ್ತದೆ.

ಹೊಸಕೋಟೆ ಮತ್ತು ಸುತ್ತಲಿನ ಗುಲಾಬಿ ಬೆಳೆಯುವ ರೈತರು ಪ್ರತಿದಿನ ರಾತ್ರಿಯೇ ಗಿಡಗಳಿಂದ ಹೂಗಳನ್ನು ಕತ್ತರಿಸಿ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕೆ. ಆರ್‌. ಮಾರುಕಟ್ಟೆಗೆ  ಬರುತ್ತಾರೆ. ಬೆಳಿಗ್ಗೆ 8ರೊಳಗೆ ವ್ಯಾಪಾರ ಮುಗಿಸಿ ಮರಳುತ್ತಾರೆ. ಇಲ್ಲಿಂದ ನಗರದ ವ್ಯಾಪಾರಿಗಳು ಹೋಲ್‌ಸೇಲ್‌ ದರದಲ್ಲಿ ಗುಲಾಬಿ ಬಂಡಲ್‌ ಕೊಂಡು ವ್ಯಾಪಾರ ಮಾಡುತ್ತಾರೆ.

‘ದಿನವೂ 10 ಸಾವಿರ ಹೂವಿನ ಬಂಡಲ್‌ಗಳು  ಕೆ.ಆರ್‌. ಮಾರುಕಟ್ಟೆಗೆ ಬರುತ್ತವೆ. ಒಂದು ಬಂಡಲ್‌ನಲ್ಲಿ 20 ಹೂಗಳಿರುತ್ತವೆ. ಬಂಡಲ್‌ಗೆ ₹40 ಸಾಮಾನ್ಯ ದರ.  ಆದರೆ, ಬೇಡಿಕೆಗೆ ಅನುಗುಣವಾಗಿ ಅಂದರೆ, ಮದುವೆ ಸೀಸನ್‌, ಹಬ್ಬಗಳು, ಪ್ರೇಮಿಗಳ ದಿನ ಬಂಡಲ್‌ಗೆ ಹೆಚ್ಚೆಂದರೆ 10ರಿಂದ 15 ರೂಪಾಯಿ  ಹೆಚ್ಚಾಗುತ್ತದೆ. ಆದರೆ, ಇಲ್ಲಿಂದ ಕೊಂಡೊಯ್ದ ವ್ಯಾಪಾರಿಗಳು ಸಾಮಾನ್ಯ ದಿನಗಳಲ್ಲಿ 3 ರಿಂದ 5 ರೂಪಾಯಿಗೆ ಒಂದರಂತೆ ಗುಲಾಬಿ ಮಾರಾಟ ಮಾಡುತ್ತಾರೆ. ಪ್ರೇಮಿಗಳ ದಿನದಂದು ಒಂದು ಹೂವಿಗೆ ಕನಿಷ್ಠ ₹25 ಇರುತ್ತದೆ’ ಎನ್ನುತ್ತಾರೆ ಕೆ.ಆರ್‌. ಮಾರ್ಕೆಟ್‌ನ ಹೋಲ್‌ಸೇಲ್‌ ವ್ಯಾಪಾರಿಗಳು.

ಇನ್ನು ಎರಡು ತಿಂಗಳು ಮದುವೆ ಮುಹೂರ್ತ ಇರುವುದಿಲ್ಲ. ಹಾಗಾಗಿ ಫೆ. 14ರಂದು ಹೆಚ್ಚು ಮದುವೆ ಇದೆ. ಹಾಗಾಗಿ  ಮಂಗಳವಾರ ಗುಲಾಬಿಗೆ ಇನ್ನಿಲ್ಲದ ಬೇಡಿಕೆ ಇರುತ್ತದೆ ಎಂದು ಹೂವಿನ ವ್ಯಾಪಾರಿ ಕೃಷ್ಣ ಹೇಳುತ್ತಾರೆ. ಪ್ರೇಮಿಗಳ ದಿನದ ಮುನ್ನಾದಿನ ಸೋಮವಾರವೂ ಕೆ.ಆರ್. ಮಾರುಕಟ್ಟೆಯಲ್ಲಿ 20 ಗುಲಾಬಿಗಳ ಗುಚ್ಛದ ಬೆಲೆ ₹40 ಇತ್ತು.

‘ಮಂಗಳವಾರ ಹೋಲ್‌ಸೇಲ್‌ ದರ ಹೆಚ್ಚೆಂದರೆ ₹50 ಇರುತ್ತದೆ. ಆದರೆ, ಬಿಡಿ ಹೂ ಮಾರುವ ವ್ಯಾಪಾರಿಗಳು ಮಾತ್ರ ದುಬಾರಿ ದರದಲ್ಲಿ ಮಾರುತ್ತಾರೆ’ ಎಂದು  ವ್ಯಾಪಾರಿಗಳು  ಹೇಳುತ್ತಾರೆ. ಕಾಲೇಜು ಕ್ಯಾಂಪಸ್‌, ಮಾಲ್‌ಗಳ ಬಳಿ ಪ್ರೇಮಿಗಳ ದಿನದಂದು ಗುಲಾಬಿ ಹೂಗಳ ದರ ಕೊಂಚ ಹೆಚ್ಚೇ ಇರುತ್ತದೆ.   ಏನೇ ಆದರೂ ಪ್ರೀತಿಗಿಂತ ಹೆಚ್ಚಲ್ಲ ಬಿಡಿ.

*
ಕೆ.ಆರ್‌. ಮಾರುಕಟ್ಟೆಯಿಂದ  ಮುಂಬೈ, ದೆಹಲಿಗಳಿಗೆ ಹೂವುಗಳು  ರಫ್ತಾಗುತ್ತವೆ. ಬೇಡಿಕೆ ಹೆಚ್ಚು ಇದ್ದಾಗ ಬೆಲೆ ಕೊಂಚ ಹೆಚ್ಚಾಗುತ್ತದೆ. ಅದು ಬಿಟ್ಟರೆ ಹೋಲ್‌ಸೇಲ್‌ ದರದಲ್ಲಿ ಅಂಥಾ ವ್ಯತ್ಯಾಸವೇನೂ ಆಗುವುದಿಲ್ಲ.
-ಕೃಷ್ಣ, ಗುಲಾಬಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT