ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆಯನ್ನು ನಿರ್ವಹಿಸುವುದು ಆರ್ಥಿಕತೆ

ಸಂಗತ
Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪ್ರಧಾನಿಯವರು ಪದೇ ಪದೇ ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ವಿರೋಧ ಪಕ್ಷಗಳು, ‘ಪ್ರಧಾನಿಯವರು ಅವರದೇ  ಪಕ್ಷ ಪ್ರತಿಪಾದಿಸುವ ರಾಷ್ಟ್ರೀಯತೆಗೆ ವಿರುದ್ಧವಾಗಿದ್ದಾರೆ’ ಎಂದು ಟೀಕಿಸುತ್ತವೆ. ಅವರದೇ ಪಕ್ಷದವರಿಗೆ ‘ಇದು ಯಾಕೋ ಸರಿಯಾಗಿಲ್ಲ’ ಅನಿಸಿದರೂ ‘ನಾವು ಮತೀಯ ರಾಷ್ಟ್ರೀಯವಾದಿಗಳಲ್ಲ; ಉದಾರವಾದಿಗಳು, ಸಂವಿಧಾನಕ್ಕೆ ನಿಷ್ಠರು’ ಎಂದು ಅವರು ಸಮರ್ಥಿಸಿಕೊಳ್ಳಬಲ್ಲರು.
 
ಪೇಜಾವರ ಸ್ವಾಮಿಗಳು ಈಚೆಗೆ ಒಮ್ಮೆ, ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ಸುಲಭವಲ್ಲ, ವಿಷಯ ನ್ಯಾಯಾಲಯದಲ್ಲಿದೆ’ ಎಂದರು. ರಾಮ ಮಂದಿರ ಕಟ್ಟುವುದು ಸುಲಭ ಅಲ್ಲ ಎಂಬುದು ನಿಜ. ಆದರೆ ಅದಕ್ಕೆ ನ್ಯಾಯಾಲಯದ ಮೇಲಿನ ಅಪಾರ ಗೌರವ ಕಾರಣವಲ್ಲ. ಏಕೆಂದರೆ 1992ರಲ್ಲಿ ಬಾಬ್ರಿ ಮಸೀದಿಯನ್ನು ಉರುಳಿಸಿದಾಗ ನ್ಯಾಯಾಲಯವೇನೂ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ! ದೇಶವಾಸಿಗಳು ಪ್ರತಿಭಟನೆ ಮಾಡುತ್ತಾರೆಂಬುದೂ ಮಂದಿರ ನಿರ್ಮಿಸದಿರಲು ಕಾರಣವಲ್ಲ. ನಿಜವಾದ ಕಾರಣ ‘ರಾಷ್ಟ್ರೀಯತೆ, ಮತ–ಧರ್ಮ, ಸಂವಿಧಾನ, ಉದಾರವಾದ’ ಇವು ಯಾವುವೂ ಅಲ್ಲ. ನಿಜವಾದ ಕಾರಣವಿರುವುದು ಆರ್ಥಿಕತೆಯಲ್ಲಿ. 
 
ಇಂದು ರಾಷ್ಟ್ರೀಯತೆ ಮತ್ತು ಅಂತರರಾಷ್ಟ್ರೀಯತೆಯ ನಡುವೆ ಸಮತೋಲನ ತರುತ್ತಿರುವುದು ಆರ್ಥಿಕತೆಯೇ. ಎಲ್ಲಿಯವರೆಗೆ ಅರಬ್ ರಾಷ್ಟ್ರಗಳ ಪೆಟ್ರೋಲಿಯಂ ಉತ್ಪನ್ನಗಳು ನಮಗೆ ಬೇಕಾಗುತ್ತವೆಯೋ ಅಲ್ಲಿಯವರೆಗೆ ರಾಮಮಂದಿರ ಕಟ್ಟಲು ಆಗುವುದಿಲ್ಲ. 
 
ಆರ್ಥಿಕ ಒತ್ತಡಗಳು ಅಂತರರಾಷ್ಟ್ರೀಯ ಸದ್ಭಾವನೆಗೆ ಹೇಗೆ ಕಾರಣವಾಗುತ್ತವೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಅಮೆರಿಕ. ಕೈಗಾರಿಕೀಕರಣದಿಂದಾಗಿ ಉತ್ಪಾದನೆ ಅತಿಯಾಗಿ, ಕೊಂಡುಕೊಳ್ಳುವವರಿಲ್ಲದೆ 1929ರಲ್ಲಿ ಕುಸಿದ ಅಮೆರಿಕದ ಆರ್ಥಿಕತೆಯನ್ನು ಪ್ಯಾಕೇಜ್ ಕಾರ್ಯಕ್ರಮದ ಮೂಲಕ 1939ರ ವೇಳೆಗೆ ಹತೋಟಿಗೆ ತರಲಾಯಿತು. ಅಮೆರಿಕದ ಅಧಿಕ ಉತ್ಪಾದನೆಯನ್ನು ವ್ಯಯಿಸುವುದರಲ್ಲಿ ಹಿಟ್ಲರ್ ಎಂಬ ರಾಷ್ಟ್ರೀಯತಾವಾದಿಯ ಕಾರಣದಿಂದ ಉಂಟಾದ ಎರಡನೇ ಮಹಾಯುದ್ಧದ ಪಾತ್ರ ಬಲು ದೊಡ್ಡದು. ಒಂದನೆಯ ಮಹಾಯುದ್ಧದಲ್ಲಿ ಅಪಾರ ಪ್ರಮಾಣದಲ್ಲಿ ಸಂಪನ್ಮೂಲ ಕಳೆದುಕೊಂಡ ಜರ್ಮನಿ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ರಾಷ್ಟ್ರೀಯತೆಯನ್ನು ಬಳಸಿಕೊಂಡಿತು. ಹಿಟ್ಲರ್ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದ. ಇದರಿಂದಾಗಿ ಮಾನವ ಶ್ರಮದ ಅಗತ್ಯ ಕಡಿಮೆಯಾಯಿತು. ರಾಷ್ಟ್ರೀಯತೆಯ ಇನ್ನೊಂದು ಕಾರ್ಯಕ್ರಮವಾದ ಯಹೂದಿಗಳ ಹತ್ಯೆ  ಮೂಲಕ ಜರ್ಮನಿಯ ಸಂಪನ್ಮೂಲವನ್ನು ಉಳಿಸಿ ನಿರುದ್ಯೋಗದ ಸಮಸ್ಯೆಯನ್ನು ನಿರ್ವಹಿಸಿದ. ಅದಕ್ಕಾಗಿ ರಾಷ್ಟ್ರೀಯತೆಯು ಅತೀ ಕ್ರೂರ ರೂಪದಲ್ಲಿ ಬಳಕೆಯಾಯಿತು. ಜರ್ಮನಿಯ ಆರ್ಥಿಕತೆಯನ್ನು ವಿಸ್ತರಿಸುವ ಯೋಜನೆಯ ಫಲವಾಗಿಯೇ ಎರಡನೆಯ ಮಹಾಯುದ್ಧ ಪ್ರಾರಂಭವಾದದ್ದು.
 
ಅಮೆರಿಕಕ್ಕೂ ಯುದ್ಧ ಬೇಕಿತ್ತು. ಜರ್ಮನಿಗೆ ‘ಗಳಿಸಿಕೊಳ್ಳುವುದಕ್ಕಾಗಿ’ ಯುದ್ಧ ಬೇಕಾಗಿದ್ದರೆ, ಅಮೆರಿಕಕ್ಕೆ ‘ಕಳೆದುಕೊಳ್ಳುವುದಕ್ಕಾಗಿ’ ಯುದ್ಧ ಬೇಕಿತ್ತು. ಅಮೆರಿಕದ ಅಧಿಕ ಉತ್ಪಾದನೆಯನ್ನು ವ್ಯಯಿಸದೆ ಇದ್ದರೆ ಇನ್ನಷ್ಟು ಉತ್ಪಾದನೆ ಮಾಡಲು ಅವಕಾಶವಿರಲಿಲ್ಲ. ಉತ್ಪಾದನೆ ಆಗದಿದ್ದರೆ ಉದ್ಯೋಗವಿಲ್ಲ. ಆರ್ಥಿಕತೆಯೇ ಇಲ್ಲ. ಎರಡನೇ ಮಹಾಯುದ್ಧ ಅಮೆರಿಕವನ್ನು ಉತ್ಪನ್ನಗಳ ಬಿಕರಿ, ನಿರುದ್ಯೋಗ ಸಮಸ್ಯೆಗಳಿಂದ ಪಾರು ಮಾಡಿತು. ಅದಾಗಲೇ ಸೋತಿದ್ದ ಜಪಾನ್ ಮೇಲೆ ಅಣು ಬಾಂಬ್ ಹಾಕುವುದರ ಹಿಂದೆ ಅಣ್ವಸ್ತ್ರ ಪರೀಕ್ಷೆಯ ಉದ್ದೇಶ ಎಷ್ಟು ಮುಖ್ಯವಾಗಿತ್ತೋ, ತನ್ನ ಅಧಿಕ ಉತ್ಪಾದನೆಯನ್ನು ಕರಗಿಸಿಕೊಳ್ಳುವುದೂ ಅಮೆರಿಕಕ್ಕೆ ಅಷ್ಟೇ ಮುಖ್ಯವೂ ಆಗಿತ್ತು. ಜಪಾನನ್ನು ನಾಶ ಮಾಡಿದ ನಂತರ ಆ ದೇಶದ ಪುನರ್‌ ನಿರ್ಮಾಣಕ್ಕಾಗಿ ಅಮೆರಿಕ ತನ್ನ ಉತ್ಪಾದನೆಯನ್ನು ವಿನಿಯೋಗಿಸಿ ಅಂತರರಾಷ್ಟ್ರೀಯ ಸದ್ಭಾವನೆಯನ್ನೂ ಸಾಧಿಸಿಕೊಂಡಿತು. ತನ್ನ ಆರ್ಥಿಕತೆಯನ್ನೂ ರಕ್ಷಿಸಿಕೊಂಡಿತು.
 
ರಾಷ್ಟ್ರೀಯತೆ ಎಂಬುದೇ ಭಾವನಾತ್ಮಕ ವಿಷಯ. ಭಾವನೆಗಳನ್ನು ಪ್ರೇರೇಪಿಸುವ ಜಾತಿ, ಧರ್ಮ, ಜನಾಂಗ, ಭಾಷೆ, ಸಂಸ್ಕೃತಿ ಎಲ್ಲವೂ ರಾಷ್ಟ್ರೀಯತೆಯ ಸಾಧನಗಳಾಗುತ್ತವೆ. ಆದರೆ ಯಾವುದೇ ರಾಷ್ಟ್ರದ ಸರ್ಕಾರಕ್ಕೆ ಅಸ್ತಿತ್ವ ಇರುವುದು ಆರ್ಥಿಕತೆ ಎಂಬ ವಾಸ್ತವದಲ್ಲಿ. ಆ ವಾಸ್ತವಕ್ಕೆ ಪೂರಕವಾಗಿ ಭಾವನಾತ್ಮಕ ಅಂಶಗಳು ಜೊತೆಯಾದಾಗ ಸರ್ಕಾರಗಳು ತಾವು ಮಾತನಾಡುವ ರಾಷ್ಟ್ರೀಯತೆಗೆ ತಕ್ಕಂತೆ ವರ್ತಿಸುತ್ತಿವೆ ಅನಿಸುತ್ತದೆ ಅಷ್ಟೆ. 
 
ಈಗ ಡೊನಾಲ್ಡ್ ಟ್ರಂಪ್ ‘ಅಮೆರಿಕನ್ನರಿಗಾಗಿ ಅಮೆರಿಕ’ ಎನ್ನುತ್ತಿದ್ದಾರೆ. ಹಾಗಿದ್ದರೆ ಮೊದಲು ಅಮೆರಿಕ ಯಾರಿಗಾಗಿ ಇದ್ದದ್ದು? ವಿಶ್ವದ ಜನರ ಉದ್ಧಾರಕ್ಕಾಗಿಯೇನು? ಅಮೆರಿಕಕ್ಕೆ ಕಡಿಮೆ ವೇತನದ ಶ್ರಮಿಕರ ಅಗತ್ಯವಿದ್ದಾಗ ಜಾಗತೀಕರಣ ಬಂತು. ಈಗ ಬೇರೆ ಬೇರೆ ದೇಶದವರೆಲ್ಲ ಅಮೆರಿಕಕ್ಕೆ ಹೋಗಿ ಉತ್ಪಾದನೆ ಹೆಚ್ಚಿಸಿದ್ದಾರೆ. ಈಗ ಅಮೆರಿಕಕ್ಕೆ ಉತ್ಪಾದನೆಯ ಮೇಲೆ ನಿಯಂತ್ರಣ ತರಬೇಕಾಗಿದೆ. ಅದಕ್ಕಾಗಿ ಬೇರೆ ದೇಶಗಳಿಂದ ಬಂದ ಶ್ರಮಿಕರನ್ನು ಹಿಂದಕ್ಕೆ ಕಳಿಸಬೇಕಿದೆ. ಆದ್ದರಿಂದ ಟ್ರಂಪ್ ಅಮೆರಿಕನ್ನರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿದ್ದಾರೆ. ಉತ್ಪಾದನೆ ಮತ್ತು ವಿತರಣೆಯ ಸಂಬಂಧವನ್ನು ಅರ್ಥ ಮಾಡಿಕೊಳ್ಳದಿದ್ದರೆ ರಾಷ್ಟ್ರೀಯತೆಯ ಪರಿಕಲ್ಪನೆಗೆ ಸರ್ಕಾರಗಳು ಏಕೆ ಹೀಗೆ ಸ್ಪಂದಿಸುತ್ತವೆ ಎನ್ನುವುದು ಅರ್ಥವಾಗುವುದಿಲ್ಲ.
 
ಭಾರತದಲ್ಲಿ ರಾಷ್ಟ್ರೀಯತೆಯು ಹೆಚ್ಚು ಬಳಕೆಯಾಗುವುದು ಸರ್ಕಾರಗಳ ಬರುವಿಕೆ ಮತ್ತು ನಿರ್ಗಮನಕ್ಕಾಗಿ. ಆರ್ಥಿಕ ನೀತಿಯಲ್ಲಿ ರಾಷ್ಟ್ರೀಯತೆಯ ಪ್ರಭಾವ ಕಡಿಮೆ. ಅದಕ್ಕೆ ಮುಖ್ಯ ಕಾರಣ ಬಹು ಸಂಸ್ಕೃತಿಗಳಿಂದ ರಚನೆಯಾಗಿರುವ ಭಾರತದ ಸಮಾಜ ಬಹುರೂಪಿ ಆರ್ಥಿಕ ಉತ್ಪಾದನೆ ಮತ್ತು ವಿತರಣೆಯನ್ನು ನೆಚ್ಚಿಕೊಂಡಿರುವುದು. ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ತೆಗೆದುಕೊಂಡಾಗಿನಿಂದ ಭಾರತದ ಉತ್ಪಾದನೆಯನ್ನು ಏಕರೂಪಿಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. 2000ದ ನಂತರ ಈ ಪ್ರಕ್ರಿಯೆ ತೀವ್ರವಾಗಿದೆ. ಸಿ.ಬಿ.ಎಸ್.ಇ. ಪಠ್ಯ ಅಳವಡಿಕೆ, ಜಿ.ಎಸ್.ಟಿ. ತೆರಿಗೆ ಪದ್ಧತಿಗಳೆಲ್ಲ ಭಾರತದ ಬಹುರೂಪಿ ಉತ್ಪಾದನಾ ಘಟಕಗಳನ್ನು ನಾಶಪಡಿಸುವ ವಿವಿಧ ಉಪಕರಣಗಳೇ. ದೇಶಿ ಬಹುರೂಪಿ ಘಟಕಗಳನ್ನು ಪ್ರೋತ್ಸಾಹಿಸುವುದನ್ನು ತನ್ನ ತತ್ವವಾಗಿ ಹೊಂದಿರುವ ಪಕ್ಷದ ಸರ್ಕಾರ ಆ ತತ್ವಕ್ಕೆ ವಿರುದ್ಧವಾಗಿ ಜಿ.ಎಸ್.ಟಿ. ಕಡೆಗೆ ಹೋಗುವ ವಿಡಂಬನೆ ಹೀಗೆ ಸೃಷ್ಟಿಯಾಗುತ್ತದೆ.
 
ಉತ್ಪಾದನಾ ಘಟಕಗಳು ಏಕರೂಪಕ್ಕೆ ಬಂದಂತೆಲ್ಲ ಸಮಾಜವು ಸರ್ಕಾರದ ಮೇಲೆ ಅವಲಂಬಿಯಾಗುತ್ತಾ ಹೋಗುತ್ತದೆ. ರಾಜಕೀಯಕ್ಕೆ ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸುಲಭವಾಗುತ್ತದೆ. ರಾಷ್ಟ್ರೀಯತೆಯು ಸಮಾಜವನ್ನು ನಿಯಂತ್ರಿಸಲು ರಾಜಕೀಯದ ಕೈಯಲ್ಲಿರುವ ಆಯುಧವಾಗುತ್ತದೆ. ಆದರೆ ಆಗಲೂ ಕೂಡ ರಾಷ್ಟ್ರೀಯತೆಯನ್ನು ನಿರ್ವಹಿಸುವುದು ಆರ್ಥಿಕತೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT