ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಅಮಾನ್ಯ: ಪರಿಹಾರಕ್ಕೆ ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ
Last Updated 14 ಫೆಬ್ರುವರಿ 2017, 5:06 IST
ಅಕ್ಷರ ಗಾತ್ರ

ಕೋಲಾರ: ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯದಿಂದ ತೊಂದ ರೆಗೆ ಒಳಗಾದವರಿಗೆ ಪರಿಹಾರ ನೀಡ ಬೇಕು ಎಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ದೇಶದ ಅರ್ಥ ವ್ಯವಸ್ಥೆ ಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಆತುರದ ನಿರ್ಧಾರದಿಂದ ಚಿಲ್ಲರೆ ಸಮಸ್ಯೆ ಸೃಷ್ಟಿಯಾಗಿದೆ. ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಿಗಳು ಬವಣೆ ಪಡುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ‘ನೋಟು ಅಮಾನ್ಯದ ನಂತರ ಜನರು ₹15.44 ಲಕ್ಷ ಕೋಟಿಯನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿದ್ದಾರೆ. ಆದರೆ, ಆರ್‌ಬಿಐ ಈವರೆಗೆ ಜನರಿಗೆ ₹ 6 ಲಕ್ಷ ಕೋಟಿ ಮಾತ್ರ ವಿತರಿಸಿದೆ. ಉಳಿದ ಹಣವನ್ನು ಜನರಿಗೆ ತಲುಪಿಸಲು ಸರ್ಕಾರಕ್ಕೆ ಇನ್ನು ಎಷ್ಟು ಕಾಲಾವಕಾಶಬೇಕು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಪದೇ ಪದೇ ಹೊಸ ಆದೇಶಗಳನ್ನು ಹೊರಡಿಸಿ ಜನಸಾಮಾನ್ಯರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಕೆಲವು ಎಟಿಎಂ ಕೇಂದ್ರಗಳಲ್ಲಿ ಈಗಲೂ ಸಕಾಲಕ್ಕೆ ಹಣ ಸಿಗುತ್ತಿಲ್ಲ. ಬಡವರು ತಮ್ಮ ಹಣ ಪಡೆಯಲು ಬ್ಯಾಂಕ್‌ಗಳಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಆದರೆ, ಶ್ರೀಮಂತರು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಸಲೀಸಾಗಿ ಕಪ್ಪು ಹಣವನ್ನು ಹೊಸ ನೋಟುಗಳಾಗಿ ಬದಲಿಸಿಕೊಂಡಿದ್ದಾರೆ’ ಎಂದು ದೂರಿದರು.

‘ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಹಳೆ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಎದುರು ದಿನಗಟ್ಟಲೆ ಕಾದು ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರದ ದುಡುಕು ನಿರ್ಧಾರದಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕು. ಎಲ್ಲಾ ಎಟಿಎಂ ಕೇಂದ್ರಗಳಲ್ಲಿ ಹಣ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರು ಠೇವಣಿ ಇಟ್ಟಿರುವ ಹಣ ಹಿಂಪಡೆಯಲು ವಿಧಿಸಿರುವ ನಿಬಂಧನೆಗಳನ್ನು ಹಿಂಪಡೆಯಬೇಕು. ಚಿಲ್ಲರೆ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ. ವೆಂಕ ಟೇಶ್, ಸದಸ್ಯರಾದ ಎಂ.ಎನ್. ಶ್ರೀರಾ ಮ್, ಸುಶೀಲಾ, ಗಂಗಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಗದು ರಹಿತ ವಹಿವಾಟು: ಎಂಎನ್‌ಸಿಗಳಿಗೆ ಲಾಭ

ಮಾಲೂರು: ನೋಟು ಅಮಾನ್ಯದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರ ನೀಡುವಂತೆ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ರಾಜ್ಯ ಸರ್ಕಾರ ಕೂಡಲೇ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಎಂ ತಾಲ್ಲೂಕು ಘಟಕದ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ಚಲಪತಿ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮೂರು ವರ್ಷ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 4 ವರ್ಷಗಳನ್ನು ಪೂರೈಸುತ್ತಿದೆ. ಆದರೆ ಈ ಎರಡು ಸರ್ಕಾರಗಳ ಬಗ್ಗೆ ಜನರಿಗೆ ಇದ್ದ ನಿರೀಕ್ಷೆಗಳು ಹುಸಿಯಾಗಿವೆ’ ಎಂದರು.

‘ನಗದು ರಹಿತ ವಹಿವಾಟಿನ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಗರಿಷ್ಠ ಮುಖಬೆಲೆ ನೋಟುಗಳ ಅಮಾನ್ಯದಿಂದ ಸಾಮಾನ್ಯ ಜನರು ತಮ್ಮ ದುಡಿಮೆಯ ಹಣವನ್ನು ಪಡೆಯಲು ಪರಿತಪಿಸುವಂ ತಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಕೂಡಲೇ ಹಣ ಪಡೆಯಲು ಇರುವ ನಿರ್ಬಂಧಗಳನ್ನು ರದ್ದುಗೊಳಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು. ತಹಶೀಲ್ದಾರ್ ಗಿರೀಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ  ಮುಖಂಡ ಸಿ. ಮುನಿಶ್ವಾಮಿ ಗೌಡ, ಶ್ರೀನಿವಾಸ್, ಬಿ.ಎನ್. ನಾರಾ ಯಣಮ್ಮ, ಅರುಣ್ ಕುಮಾರ್, ಚಂದ್ರಪ್ಪ, ಬೈರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* ನೋಟು ಅಮಾನ್ಯದ ಸಾಧಕ ಬಾಧಕಗಳ ಬಗ್ಗೆ ಪ್ರಧಾನಿ ಚಿಂತನೆ ನಡೆಸದೆ ತರಾತುರಿಯಲ್ಲಿ ನಿರ್ಣಯ ಕೈಗೊಂ ಡರು. ಅವರ ಆತುರದ ನಿರ್ಧಾರದಿಂದ ಬಡವರು ತೊಂದರೆ ಅನುಭವಿಸುವಂತಾಗಿದೆ.
ನಾರಾಯಣಸ್ವಾಮಿ, ಸಿಪಿಎಂ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT