ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ಇತಿಹಾಸ ತಿರುಚುವುದು ಸಲ್ಲದು

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಅಭಿಮತ
Last Updated 14 ಫೆಬ್ರುವರಿ 2017, 6:06 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ಬಹುಸಂಸ್ಕೃತಿಯ ದೇಶವೊಂದರ ಸೌಹಾರ್ದತೆ ಕಾಪಾಡುವಲ್ಲಿ ಇತಿಹಾಸ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇತಿಹಾಸವನ್ನೇ ತಿರುಚುವ ಕೆಲಸ ಮಾಡುವ ಮೂಲಕ ಸಮಾಜದ ಶಾಂತಿ ಕದಡುತ್ತಿದ್ದಾರೆ.

ಇತಿಹಾಸ ಅಧ್ಯಯನದ ಉದ್ದೇಶ ಭವಿಷ್ಯದ ಏಳಿಗೆಗೆ ಪೂರಕವಾಗಿರಬೇಕೇ ವಿನಾ ದ್ವೇಷ ಬಿತ್ತುವುದಾಗಬಾರದು’ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಅಭಿಪ್ರಾಯಪಟ್ಟರು. 
 
‘ಭಾರತದಲ್ಲಿ ಮಹಿಳಾ ಸಬಲೀಕರಣ, ಜಲ ಸಂಪನ್ಮೂಲ ನಿರ್ವಹಣೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮಗಳಲ್ಲಿನ ಅಂತರ್‌ಶಿಸ್ತೀಯ ಸಂಶೋಧನೆಗಳು’ ಎಂಬ ವಿಷಯದ ಮೇಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 
 
‘ಪ್ರಸ್ತುತ ಎನಿಸುವ ಪ್ರತಿ ಸಮಾಜದ ಮೇಲೆ ಅದರದೇ ಆದ ಇತಿಹಾಸದ ಪ್ರತಿಬಿಂಬ ಇರುತ್ತದೆ. ಆದ್ದರಿಂದ ಇತಿಹಾಸದ ಭಾಗವಾಗಿರುವ ನಾವೆಲ್ಲರೂ ಮುಂದಿನ ಪೀಳಿಗೆಗೆ ಉತ್ತಮವಾದದ್ದನ್ನೇ ನೀಡುವ ಹಂಬಲದೊಂದಿಗೆ ಜೀವಿಸೋಣ. ನಮ್ಮ ಒಳ್ಳೆಯ ನಡುವಳಿಕೆ ಮುಂದಿನ ಹಲವಾರು ತಲೆಮಾರುಗಳಿಗೆ ನೀತಿಯನ್ನು ಭೋದಿಸುತ್ತದೆ’ ಎಂದರು. 
 
‘ಅಧ್ಯಾಪಕನೊಬ್ಬ ಬೋಧನೆ ಎಂಬ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವ ಜತೆಗೆ ವೃತ್ತಿ ಬದ್ಧತೆ ಕುರಿತು ಆತ್ಮ ವಿಮರ್ಶೆ ಮಾಡಿಕೊಂಡಾಗ ಮಾತ್ರ ಒಬ್ಬ ಯಶಸ್ವಿ ಬೋಧಕನಾಗಬಲ್ಲ. ಶಿಕ್ಷಕನ ಮೇಲೆ ಗುರುತರ ಜವಾಬ್ದಾರಿಯಿದೆ. ಅದನ್ನು ಅರಿತು ಕೆಲಸ ಮಾಡಿದಾಗ ಸಮಾಜದ ಉನ್ನತಿ ಸಾಧ್ಯ. ಇವತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಮೇಲುಕೀಳಿನ ವ್ಯವಸ್ಥೆ ತೊಲಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವಂತಾಗಬೇಕು. ಪ್ರತಿಯೊಂದು ವಿಷಯಕ್ಕೆ ಸಮಾನ ಆದ್ಯತೆ ನೀಡುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. 
 
ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಉಷಾದೇವಿ ಮಾತನಾಡಿ, ‘ಇತಿಹಾಸ ಎಂಬುದು ಬಹು ವಿಷಯಗಳ ಕುರಿತು ಬೆಳಕು ಚೆಲ್ಲುವ ಪ್ರಮುಖ ಅಧ್ಯಯನ ವಿಭಾಗ. ಸಮಾಜದಲ್ಲಿ ನಡೆಯಬಹುದಾದ ಹಲವಾರು ದುರಂತಗಳನ್ನು ತಡೆದು ನಿಲ್ಲಿಸುವ ಶಕ್ತಿ ಅದಕ್ಕಿದೆ. ಆದ್ದರಿಂದ ಇತಿಹಾಸವನ್ನು ಸರಿಯಾಗಿ ಅರಿತು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಪ್ರಯತ್ನ ಮಾಡಬೇಕಿದೆ’ ಎಂದರು.
 
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್.ನಾರಾಯಣಸ್ವಾಮಿ, ಕೆಂಪೇಗೌಡ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಶೋಭಾ, ಗೌರಿಬಿದನೂರಿನ ಎಪಿಎಸ್ ಕಾಲೇಜಿನ ಪ್ರಾಧ್ಯಾಪಕಿ ನಾಗರತ್ನಮ್ಮ, ಪ್ರಸನ್ನಕುಮಾರ್, ಮನು, ಅಬ್ದುಲ್‌ ಹಮೀದ್, ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. 
 
* ಗುರುಪರಂಪರೆಗೆ ದೇಶದ ಇತಿಹಾಸದಲ್ಲಿ ಉನ್ನತ ಸ್ಥಾನವಿದೆ. ಬೋಧಕನಿಗೆ ಮಾತ್ರ ದೆೇಶವೊಂದರ ಉತ್ತಮ ಭವಿಷ್ಯ ರೂಪಿಸುವ ಶಕ್ತಿ ಇರುತ್ತದೆ.
ಎನ್.ಎಸ್.ರಂಗರಾಜು, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT