ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿ: 15 ದಿನದಲ್ಲಿ ಹಣ ಪಾವತಿಸಿ

ರಾಯಚೂರು: ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸಿಇಒ ಎಂ.ಕೂರ್ಮಾರಾವ್‌ ಸೂಚನೆ
Last Updated 14 ಫೆಬ್ರುವರಿ 2017, 9:21 IST
ಅಕ್ಷರ ಗಾತ್ರ
ರಾಯಚೂರು: ತೊಗರಿ ಖರೀದಿ ಕೇಂದ್ರದಲ್ಲಿ 15 ದಿನದೊಳಗೆ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂ. ಕೂರ್ಮಾರಾವ್‌ ಸೂಚಿಸಿದರು.
 
ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ನಡೆದ ಚರ್ಚೆ ವೇಳೆಯಲ್ಲಿ ಅವರು ಈ ಸೂಚನೆ ನೀಡಿದರು.
 
ತೊಗರಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ ರೈತರಿಗೆ ತಿಂಗಳುಗಳಾದರೂ ಹಣ ಪಾವತಿ ಆಗುತ್ತಿಲ್ಲ. ಅಧಿಕಾರಿಗಳು ಬಿಲ್‌ ಪಾಸ್‌ ಮಾಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಅತ್ತನೂರು ದೂರಿದರು.
 
ಇದಕ್ಕೆ ಉತ್ತರಿಸಿದ ಅಧಿಕಾರಿ, ಭಾರತೀಯ ಆಹಾರ ನಿಗಮ ಖರೀದಿ ಕೇಂದ್ರಗಳಲ್ಲಿ ಜನವರಿ ಅಂತ್ಯದವರೆಗೆ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿಸಲಾಗಿದೆ. ನಾಫೆಡ್‌ ಖರೀದಿ ಕೇಂದ್ರಗಳಲ್ಲಿ ವಿಳಂಬ ಆಗಿದೆ ಎಂದರು.
 
ಕುಡಿಯುವ ನೀರು ಯೋಜನೆ: ಅತ್ತನೂರು, ಕಲ್ಲೂರುಗಳಲ್ಲಿ 2007–08ರಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿ ಆಯಿತು. ಒಂದು ದಶಕವಾದರೂ ಪೂರ್ಣಗೊಂಡಿಲ್ಲ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಹಾಂತೇಶ ಪಾಟೀಲ್‌ ಅತ್ತನೂರು ದೂರಿದರು.
 
ಅತ್ತನೂರಿನಲ್ಲಿ ಜಮೀನು ಖರೀದಿಸದೆ ಕಾಮಗಾರಿ ನಡೆಸಲಾಗಿದೆ. ಇದರಿಂದ ಜಮೀನು ಮಾಲೀಕರು ತಗಾದೆ ತೆಗೆದಿದ್ದಾರೆ. ಈಗ ನಾಲ್ಕು ಪಟ್ಟು ಹೆಚ್ಚಿನ ಹಣ ನೀಡಬೇಕು. ಸರ್ಕಾರದ ಹಣ ಈ ರೀತಿ ಪೋಲು ಆಗಲು ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಕಿಡಿಕಾರಿದರು. 
 
ತಿಂಗಳಲ್ಲಿ ಅತ್ತನೂರಿನ ಯೋಜನೆ ಪೂರ್ಣಗೊಳಿಸುವಂತೆ ಸಿಇಒ ಸೂಚಿಸಿದರು.  ಕುಡಿಯುವ ನೀರಿನ ಪೂರೈಕೆ ಆದ್ಯತೆ ವಿಷಯವಾಗಿರುವ ಕಾರಣ ನೀರು ಪೂರೈಕೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಇನ್ನೊಂದು ವಾರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಅಧಿಕಾರಿಗಳು ಅಂಕಿಅಂಶ ಸಹಿತ ಸಿದ್ಧರಾಗಬೇಕು ಎಂದು  ಸೂಚಿಸಿದರು.
 
ಶಾಲೆಗಳಿಗೆ ಕುಡಿಯುವ ನೀರು: ಜಿಲ್ಲೆಯಲ್ಲಿ 250 ಶಾಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ನಡೆಯುತ್ತಿದೆ. ಶಿಕ್ಷಣ ಇಲಾಖೆಯವರು ಗ್ರಾಮೀಣ ನೀರು ಪೂರೈಕೆ ಇಲಾಖೆಯ ಅಧಿಕಾರಿಗಳು ಈ ಯೋಜನೆಯನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಸಿಇಒ ಕೂರ್ಮಾರಾವ್‌ ನಿರ್ದೇಶನ ನೀಡಿದರು.
 
ಶಿಥಿಲವಾಗಿರುವ ಶಾಲಾ ಕಟ್ಟಡಗಳನ್ನು ಕೆಡವಬೇಕು, ಶಾಲಾ ಆವರಣಕ್ಕೆ ಸುತ್ತುಗೋಡೆ ನಿರ್ಮಾಣದ ಕಾರ್ಯ ನಡೆಯಬೇಕು. ಈ ಕಾರ್ಯಗಳಿಗೆ ತಗುಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಯಿಂದ ಭರಿಸಬೇಕು. ಜೊತೆಗೆ ದುರಸ್ತಿ ಕಾರ್ಯಗಳು ಚುರುಕಿನಿಂದ ನಡೆಯಬೇಕು ಎಂದು ಅವರು ತಾಕೀತು ಮಾಡಿದರು.
 
ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ₹ 15 ಸಾವಿರ ಅನುದಾನದ ಜೊತೆಗೆ  ಗ್ರಾಮ ಪಂಚಾಯಿತಿಯಿಂದ ಇನ್ನೊಂದಿಷ್ಟು ಹಣ ಸೇರಿಸಿ ಅಂಗನವಾಡಿ ಕೇಂದ್ರಗಳಲ್ಲಿ ಒಂದಾದರೂ ಶೌಚಾಲಯ ನಿರ್ಮಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಬಸಮ್ಮ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಗೌಡ, ಉಪಕಾರ್ಯದರ್ಶಿ ಮಹಮದ್‌ ಯೂಸುಫ್‌ ಭಾಗವಹಿಸಿದ್ದರು.
 
ಅಧ್ಯಕ್ಷೆ ಸೂಚನೆ: ಮಾಸಿಕ ಕೆಡಿಪಿ ಸಭೆಗೆ ಗೈರು ಆಗಿರುವ ಅಥವಾ ಅಧೀನ ಅಧಿಕಾರಿಗಳನ್ನು ಕಳುಹಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಸೋಮವಾರ ನಡೆದ ಸಭೆಯಲ್ಲೂ ಸೂಚಿಸಿದರು. ಈ ಹಿಂದಿನ ಹಲವು ಸಭೆಗಳಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದರೂ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ ಇದು ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
 
ಮಾತೃ ಭೋಜನ: ಮಾಹಿತಿ ಇಲ್ಲಮಾನ್ವಿ ತಾಲ್ಲೂಕಿನಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃ ಭೋಜನ ಯೋಜನೆ ಜಾರಿಯಲ್ಲಿದೆ. 5189 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವರಲ್ಲಿ ಅರ್ಧದಷ್ಟು ಮಂದಿ ಮಾತ್ರ ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸೇವಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಹಾಂತೇಶ ಪಾಟೀಲ್‌ ಅತ್ತನೂರು, ಇಂತಹದೊಂದು ಯೋಜನೆ ಇದೆ ಎಂದು ತಿಳಿದಿದ್ದೇ ಈಗ. ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಸಿಇಒ ಕೂರ್ಮಾರಾವ್‌, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಈ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯ ನಡೆಸಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
 
ಅಸಮಾಧಾನ : ಕೆಡಿಪಿ ಸಭೆ ವೇದಿಕೆಗೆ ತಮ್ಮನ್ನು ವೇದಿಕೆಗೆ ಕರೆಯದೆ ಅಗೌರವ ತೋರಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾತೇಂಶ ಪಾಟೀಲ್‌ ಅತ್ತನೂರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕೂರ್ಮಾರಾವ್‌, ಕೆಡಿಪಿ ಸಭೆಯ ಶಿಷ್ಟಾಚಾರದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಸದಸ್ಯರಂತೆ ನೋಡಲಾಗುತ್ತದೆ.  ಹೀಗಾಗಿ ವೇದಿಕೆಗೆ ಆಹ್ವಾನಿಸಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT