ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗಿದ ಶುದ್ಧೀಕರಣ ಘಟಕದ ಸಾಮರ್ಥ್ಯ

ಸಮರ್ಪಕ ರೀತಿಯಲ್ಲಿ ಶುದ್ಧೀಕರಣಗೊಳ್ಳದ ನೀರು; ಘಟಕದಲ್ಲಿ ಹೆಚ್ಚಿದ ದುರಸ್ತಿ ಕಾರ್ಯ
Last Updated 14 ಫೆಬ್ರುವರಿ 2017, 9:43 IST
ಅಕ್ಷರ ಗಾತ್ರ
ಯಾದಗಿರಿ: ಐದು ವರ್ಷವಾದರೂ ಬದಲಾಯಿಸದ ಮರಳು... ಪಾಚಿಕಟ್ಟಿದ ಸಂಸ್ಕರಣ ತೊಟ್ಟಿ... ಕಿತ್ತು ಹೋಗಿರುವ ವಾಲ್‌... ಒಡೆದಿರುವ ಪೈಪ್‌ಗಳು... ಶಿಥಿಲಗೊಂಡಿರುವ ಶುದ್ಧ ನೀರು ಸಂಗ್ರಹ ತೊಟ್ಟಿ...ನಗರಕ್ಕೆ ನೀರು ಪೂರೈಕೆ ಮಾಡುವ ನೀರು ಶುದ್ಧೀಕರಣ ಘಟಕದಲ್ಲಿನ ಸಮಸ್ಯೆಗಳ ಅನಾವರಣ ಇದು.
 
1992ರ ಮೇ, 3ರಂದು ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿದ್ದರು. ಅಲ್ಲಿಂದ ನಾಲ್ಕೈದು ವರ್ಷ ಕಾಲ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಈ ಘಟಕದ ನಿರ್ವಹಣೆ ನೋಡಿಕೊಂಡಿತು. ನಂತರ 1997ರಲ್ಲಿ ನಗರಸಭೆಗೆ ಅದರ ನಿರ್ವಹಣೆ ವಹಿಸಿಕೊಟ್ಟ ಮೇಲೆ ನೀರು ಶುದ್ಧೀಕರಣ ಘಟಕ ನಿರ್ವಹಣೆಯ ಕೊರತೆಯಿಂದಾಗಿ ನಿಧಾನವಾಗಿ ಶುದ್ಧೀಕರಣ ಸಾಮರ್ಥ್ಯ ವನ್ನು ಕಳೆದುಕೊಳ್ಳುತ್ತಾ ಸಾಗಿದೆ.
 
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆಯಲ್ಲಿ ಈ ಘಟಕ 10 ಲಕ್ಷ ಗ್ಯಾಲನ್‌ ನೀರು ಶುದ್ಧೀಕರಿಸುತ್ತಿತ್ತು. ಆಗ ನಗರದ ಕೇವಲ 30 ಸಾವಿರ ಜನಸಂಖ್ಯೆ ಗುರಿಯಾಗಿತ್ತು. ನಗರದ ಎಲ್ಲಾ ಪ್ರದೇಶಗಳಿಗೆ 10 ಲಕ್ಷ ಗ್ಯಾಲನ್‌ ನೀರು ನಿತ್ಯ ಪೂರೈಕೆ ಮಾಡಲಾಗುತ್ತಿತ್ತು. ಈಗ ನಗರದಲ್ಲಿ ಗುರಿಮೀರಿ ಜನಸಂಖ್ಯೆ ಹೆಚ್ಚಿದೆ. ಪರಿಣಾಮ ಕುಡಿಯುವ ನೀರಿಗಾಗಿ ನಗರದಲ್ಲಿ ಶೋಚನೀಯ ಸ್ಥಿತಿ ಇದೆ. ಪಕ್ಕದಲ್ಲಿ ಭೀಮಾ ನದಿ ಹರಿಯುತ್ತಿದ್ದೂ, ಗುರಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ 0.568 ಟಿಎಂಸಿ ನೀರಿನ ಸಂಗ್ರಹ ಇದ್ದೂ ನಗರದ ನಾಗರಿಕರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ.
 
ಸೀಮಿತ ಪ್ರದೇಶಕ್ಕೆ ನೀರಿನ ಸೌಲಭ್ಯ: 25 ವರ್ಷಗಳ ಹಿಂದೆ 30 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಅಳವಡಿಸಿರುವ ಶುದ್ಧೀಕರಣ ಘಟಕದಿಂದ ಸೀಮಿತ ಪ್ರದೇಶಗಳಿಗಷ್ಟೇ ನೀರು ಪೂರೈಕೆ ಮಾಡಲಾಗುತ್ತಿದೆ. 
 
ವಿಶ್ವಾರಾಧ್ಯ ನಗರ, ಮಾತಾ ಮಾಣಿಕೇಶ್ವರಿ ನಗರ, ದುರ್ಗಾ ನಗರ, ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಸುತ್ತಮುತ್ತಲಿನ ಪ್ರದೇಶ, ಗಂಜ್‌ ಹಾಗೂ ಎಪಿಎಂಸಿ ಸುತ್ತಮುತ್ತಲಿನ ಕಾಲೊನಿಗಳಲ್ಲಿನ ನಾಗರಿಕರಿಗೆ ಶುದ್ಧೀಕರಿಸಿದ ನದಿನೀರಿನ ಪೂರೈಕೆ ಇಲ್ಲ.  ಈ ನೂತನ ಪ್ರದೇಶಗಳಿಗೆ ಕನಿಷ್ಠ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗಳನ್ನು ಸಹ ನಗರಸಭೆ ಕೈಗೆತ್ತಿಕೊಂಡಿಲ್ಲ. ಹೀಗಾಗಿ ಇಲ್ಲಿನ ನಾಗರಿಕರು ಇತರೆ ಜಲ ಮೂಲಗಳ ಆಸರೆ ಪಡೆದಿದ್ದಾರೆ. ಕೊಳವೆ ಬಾವಿಗಳಲ್ಲಿ ‘ಆರ್ಸೆನಿಕ್‌’ ವಿಷಕಾರಿ ಅಂಶ ಕಾಣಿಸಿಕೊಂಡಿರುವುದು ನಾಗರಿಕರ ಆತಂಕವನ್ನು ಮತ್ತಷ್ಟೂ ಹೆಚ್ಚಿಸಿದೆ.
 
ನಗರದಲ್ಲಿ 74 ಸಾವಿರ ಮತದಾರರಿದ್ದಾರೆ. ಒಟ್ಟು ಸಂಖ್ಯೆ 1ಲಕ್ಷ 10 ಸಾವಿರ ಮೀರುತ್ತದೆ. ಇಷ್ಟು ಜನಸಂಖ್ಯೆಗೆ ಒಂದು ಶುದ್ಧೀಕರಣ ಘಟಕದಿಂದ ನಿತ್ಯ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನಗರಸಭೆ ತಾಂತ್ರಿಕ ವರ್ಗದ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಸರ್ಕಾರ ಈ ನಿಟ್ಟಿನಲ್ಲಿ 50 ಲಕ್ಷ ಗ್ಯಾಲನ್‌ ಸಾಮರ್ಥ್ಯದ ಶುದ್ಧೀಕರಣ ಘಟಕ ಅಳವಡಿಸಬೇಕಿದೆ ಎಂಬುದಾಗಿ ನಗರ ಸಭೆ ಉಪಾಧ್ಯಕ್ಷ ಸ್ಯಾಂಸನ್‌ ಮಾಳಿಕೇರಿ ಹೇಳುತ್ತಾರೆ. ಘಟಕದಲ್ಲಿನ ನೀರೆತ್ತುವ ಪಂಪ್‌ ಸೆಟ್‌ ಯಂತ್ರಕ್ಕೆ 140 ಎಚ್‌ಪಿ ಸಾಮ ರ್ಥ್ಯ ವಿದ್ಯುತ್‌ ಪೂರೈಕೆ ಬೇಕಾಗುತ್ತದೆ. 
 
ನಗರಸಭೆ ಜೆಸ್ಕಾಂಗೆ ನೀಡಬೇಕಿರುವ ಬಾಕಿಯಲ್ಲಿ ಶುದ್ಧೀಕರಣ ಘಟಕಕ್ಕೆ ಪೂರೈಕೆ ಮಾಡಿರುವ ವಿದ್ಯುತ್‌ ಶುಲ್ಕ ಬಾಕಿಯೇ ಹೆಚ್ಚಿದೆ. ಒಟ್ಟಾರೆ ಇದ್ದ ₹ 11 ಕೋಟಿ ಬಾಕಿಯಲ್ಲಿ ನಗರಸಭೆ ಇದೀಗ ₹ 9 ಕೋಟಿ ಜಮಾ ಮಾಡಿದೆ. ಉಳಿದಂತೆ ಇನ್ನೂ ₹ 2 ಕೋಟಿ ಬಾಕಿ ಇದೆ ಎಂದು ಜೆಸ್ಕಾಂ ಮೂಲಗಳಿಂದ ತಿಳಿದು ಬಂದಿದೆ.
 
ಕುಡಿಯುವ ನೀರಿಗಾಗಿ ₹35 ಕೋಟಿ ವೆಚ್ಚ
 
ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ನಗರದ ಕುಡಿಯುವ ನೀರಿಗಾಗಿ ₹ 35 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಗುರಸಣಗಿ ಬ್ರಿಜ್‌ಕಂ ಬ್ಯಾರೇಜ್ ಬಳಿ ₹ 15ಕೋಟಿ ವೆಚ್ಚದಲ್ಲಿ ಜಾಕ್‌ವೆಲ್‌ ಅಳವಡಿಸುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು.
 
₹ 6 ಕೋಟಿ ವೆಚ್ಚದಲ್ಲಿ ಲಕ್ಷ್ಮಿ ನಗರದಲ್ಲಿ,  ಗಂಜ್‌ ಪ್ರದೇಶ, ಹತ್ತಿಕುಣಿ ಕ್ರಾಸ್ ಬಳಿ ತಲಾ ಒದೊಂದು ಸೇರಿದಂತೆ ಒಟ್ಟು ಮೂರು ಓವರ್‌ಹೆಡ್ ಟ್ಯಾಂಕ್‌ ಮತ್ತು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಾರ್ಚ್‌ ಆರಂಭಕ್ಕೆ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಶಶಿಧರರೆಡ್ಡಿ ಹೊಸಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
 
ನೀರು ಪೂರೈಕೆಯಾಗದ ನೂತನ ಬಡಾವಣೆಗಳು
 
- ವಿಶ್ವಾರಾಧ್ಯ ನಗರ
- ಮಾತಾ ಮಾಣಿಕೇಶ್ವರಿ ನಗರ
- ದುರ್ಗಾ ನಗರ
- ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಸುತ್ತಮುತ್ತಲಿನ ಪ್ರದೇಶ
- ಎಪಿಎಂಸಿ ಸುತ್ತಮುತ್ತಲಿನ ಕಾಲೊನಿ
 
ಅಂಕಿ–ಅಂಶ
 
₹35 - ಕುಡಿಯುವ ನೀರಿನ ಕಾಮಗಾರಿ ಅನುದಾನ
₹15 - ನೂತನ ಜಾಕ್‌ವೆಲ್ ನಿರ್ಮಾಣದ ವೆಚ್ಚ
₹6   - ಓವರ್‌ಹೆಡ್‌ ಟ್ಯಾಂಕ್, ಪೈಪ್‌ಲೈನ್‌ ಅಳವಡಿಸಲು ಅನುದಾನದ ವೆಚ್ಚ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT