ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೆಲ್‌ಬೀಯಿಂಗ್‌’ ಸ್ಟಾರ್ಟ್‌ಅಪ್‌ ಸಮಗ್ರ ಆರೋಗ್ಯ ಸೇವೆ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹೋಮಿಯೋಪಥಿ, ಆಲೋಪಥಿ, ಆಯುರ್ವೇದವನ್ನೂ ಒಳಗೊಂಡು  ಕುಟುಂಬಕ್ಕೆ ಸಮಗ್ರ ಔಷಧ ಪದ್ಧತಿಯನ್ನು ಒದಗಿಸುವ ಉದ್ದೇಶದಿಂದ ‘ವೆಲ್‌ ಬೀಯಿಂಗ್‌’ ಸ್ಟಾರ್ಟ್‌ಅಪ್‌ ಸಂಸ್ಥೆ ಬೆಂಗಳೂರಿನಲ್ಲಿ ಆರಂಭವಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ರೂಪಾ ಮಹೀಂದರ್‌ ಅವರು 2013ರಲ್ಲಿಯೇ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸಹಕಾರ ನಗರದಲ್ಲಿ ಸಂಸ್ಥೆಯ ಮೊದಲ ಕೇಂದ್ರ ಆರಂಭವಾಗಿದೆ.

‘ಸಾಮಾನ್ಯ ಜನರಿಗೆ ಕಡಿಮೆ ಬೆಲೆಗೆ ಉತ್ತಮ ಸೇವೆ ನೀಡುವುದು ನಮ್ಮ ಮೊದಲ ಆದ್ಯತೆ. ಇಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳೂ ಲಭ್ಯ ಇವೆ. ರೋಗಿಗಳನ್ನು ಯಾವುದೇ ರೀತಿಯ ಪರೀಕ್ಷೆ ಅಥವಾ ಚಿಕಿತ್ಸೆಗಾಗಿ ಈ ಕೇಂದ್ರದಿಂದ ಹೊರಕ್ಕೆ ಕಳುಹಿಸುವುದಿಲ್ಲ. ಯಾವುದೇ ತಜ್ಞ ವೈದ್ಯರು ಬೇಕಿದ್ದರೂ ಇಲ್ಲಿಯೇ ಸಿಗುತ್ತಾರೆ.   ಇಂತಹ ವ್ಯವಸ್ಥೆ ಭಾರತದಲ್ಲಿ ಇದೇ ಮೊದಲು’ ಎಂದು ರೂಪಾ ಹೇಳುತ್ತಾರೆ.

‘ಒಮ್ಮೆ ಆಸ್ಪತ್ರೆಗೆ ಕಾಲಿಟ್ಟರೆ ಪದೇ ಪದೇ ಹೋಗಬೇಕಾಗುತ್ತದೆ. ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಲು, ಕಡಿಮೆ ಬೆಲೆಗೆ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಈ ಸಂಸ್ಥೆ ಸ್ಥಾಪಿಸಿದ್ದೇವೆ’ ಎನ್ನುತ್ತಾರೆ ಅವರು.

ರಾಜ್ಯದಲ್ಲಿ ವಿಸ್ತರಣೆ
‘ಮುಂದಿನ ವರ್ಷದೊಳಗೆ ಬೆಂಗಳೂರಿನಲ್ಲಿ ಇನ್ನೂ ಆರು ಕೇಂದ್ರಗಳನ್ನು  ಸ್ಥಾಪಿಸುವ ನಿರೀಕ್ಷೆ ಇಟ್ಟು ಕೊಂಡಿದ್ದೇವೆ.  ನಂತರ ರಾಜ್ಯದಲ್ಲಿ ವಿಸ್ತರಣೆ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಆ ನಂತರ ಫ್ರಾಂಚೈಸಿ ಮಾದರಿ ಅಳವಡಿಸಿಕೊಳ್ಳಲಾಗುವುದು.

‘ಐದು ಜನ ನಿರ್ದೇಶಕರಿದ್ದಾರೆ. ಇವರಲ್ಲಿ ಇಬ್ಬರು ಬಂಡವಾಳ ತೊಡಗಿಸಿ ದ್ದಾರೆ. ಸದ್ಯ, ಒಟ್ಟು 80 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸೇವೆ ವಿಸ್ತರಿಸಲು ತಂತ್ರಜ್ಞಾನದ ಅಳವಡಿಕೆ ಮತ್ತು ತಜ್ಞ ವೈದ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ಇದಕ್ಕಾಗಿ ಹೆಚ್ಚಿನ ಬಂಡವಾಳದ ಅಗತ್ಯವಿದೆ.

‘ಸಮಗ್ರ ಔಷಧ ವ್ಯವಸ್ಥೆಯ ಬಗ್ಗೆ ಅಥವಾ ವೈದ್ಯಕೀಯ ಕ್ಷೇತ್ರದ ಬಗ್ಗೆ ತಿಳಿದಿರುವವರೇ ಬಂಡವಾಳ ಹೂಡಿಕೆ ಮಾಡಿದರೆ ಒಳ್ಳೆಯದು ಎನ್ನುವ ಭಾವನೆ ಇದೆ. ಹೂಡಿಕೆ ಮಾಡಿದ ಕೆಲವೇ ವರ್ಷದಲ್ಲಿ ಲಾಭ ಬರಬೇಕು ಎನ್ನುವವ ರಿಂದ ಬಂಡವಾಳ ಪಡೆಯುವ ಆಸೆ ಇಲ್ಲ. ಸಂಸ್ಥೆಯ ಬೆಳವಣಿಗೆ ಆಗುವವರೆಗೂ ತಾಳ್ಮೆಯಿಂದ ಕಾಯುವಂತಹ ಹೂಡಿಕೆ ದಾರರನ್ನು ಎದುರು ನೋಡುತ್ತಿದ್ದೇವೆ’ ಎಂದು ರೂಪಾ ಹೇಳುತ್ತಾರೆ.

‘ಆರೋಗ್ಯ ಎಂದಾಕ್ಷಣ ದೇಹಕ್ಕೆ ಸಂಬಂಧಿ ಕಾಯಿಲೆ ಎಂದು ಭಾವಿಸು ವುದು ಸಹಜ. ಹೀಗಾಗಿ, ಅಂತಹ ಸಮಸ್ಯೆಗಳಿದ್ದರೆ ಮಾತ್ರವೇ ವೈದ್ಯರ ಬಳಿ ಹೋಗುತ್ತೇವೆ. ಆದರೆ ಮನಸ್ಸೂ ಆರೋಗ್ಯವಾಗಿರಬೇಕು. ಮಾನಸಿಕ ಒತ್ತಡವೂ ಹಲವು ರೀತಿಯ ಅನಾರೋಗ್ಯಗಳಿಗೆ ಕಾರಣ ವಾಗುತ್ತದೆ ಎನ್ನುವುದನ್ನು ಗಮನಿಸುವುದೇ ಇಲ್ಲ.

‘ನಮ್ಮಲ್ಲಿ ವೈದ್ಯಕೀಯ ವ್ಯವಸ್ಥೆಯೂ ಇದೇ ರೀತಿ ಇದೆ. ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳಿಗೇ ಒಂದು ಆಸ್ಪತ್ರೆ, ಮಾನಸಿಕ ಕಾಯಿಲೆಗಳಿಗೇ ಒಂದು ಆಸ್ಪತ್ರೆ ಇದೆ. ಇದು ತಪ್ಪು ಅಂತಲ್ಲ. ಆದರೆ ಒಬ್ಬ ರೋಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆಗ ಆತ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಬೇಕಾಗು ತ್ತದೆ. ಇದಕ್ಕಾಗಿಯೇ ಹೆಚ್ಚಿನ ಸಮಯ ಮೀಸಲಿಡಬೇಕು.

‘ವೆಲ್‌ಬೀಯಿಂಗ್‌ ಎಂದರೆ ಆರೋಗ್ಯ ಕ್ಕಿಂತಲೂ ಮಿಗಿಲಾದದ್ದು. ಮನಸ್ಸು, ದೇಹ ಮತ್ತು ಹವ್ಯಾಸಕ್ಕೆ ಸಂಬಂಧಿಸಿದ್ದು. ನಮ್ಮ ಜೀವನಕ್ರಮ, ನಡವಳಿಕೆ ಮತ್ತು ಒಬ್ಬರ ಯೋಚನಾ ಕ್ರಮ ಅಥವಾ ಹವ್ಯಾಸಗಳ ಮೇಲೆ ಪ್ರಭಾವ ಬೀರುವುದು ವೆಲ್‌ಬೀಯಿಂಗ್‌ನ ಪ್ರಮುಖ ಉದ್ದೇಶವಾಗಿದೆ.

‘ನಮ್ಮಲ್ಲಿ ಯಾವುದೇ ರೋಗಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯ ವಿಲ್ಲ. ದಿನಕ್ಕೆ 1 ಗಂಟೆ ಅವರಿಗೆ ಅಗತ್ಯ ವಾದ ವ್ಯಾಯಾಮ, ಏರೋಬಿಕ್ಸ್‌, ಯೋಗ ಹೇಳಿಕೊಡುವುದು ಮತ್ತು ಜೀವನ ಕ್ರಮದಲ್ಲಿ ಬದಲಾವಣೆ ತರಲಾಗುವುದು. ಮಧುಮೇಹ, ರಕ್ತ ದೊತ್ತಡ ಇತ್ಯಾದಿ ಜೀವನ ಶೈಲಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬಹುಪಾಲು ಜನರು ಗಮನ ನೀಡುವುದೇ ಇಲ್ಲ.

ಆರಂಭದ ಹಂತದಲ್ಲಿಯೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದರೆ ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬಹುದು. ಆದರೆ, ಪರಿಸ್ಥಿತಿ ತೀರಾ ವಿಪರೀತಕ್ಕೆ ಹೋಯಿತು ಎಂದಾಗ ಮಾತ್ರವೇ ವೈದ್ಯರ ಬಳಿ ಹೋಗುತ್ತಾರೆ. ಇಂತಹ ರೋಗಿಗಳಲ್ಲಿ ಅರಿವು ಮೂಡಿಸುವ ಮೂಲಕ ಅವರ ಆರೋಗ್ಯ ಸುಧಾರಿಸಲು ವೆಲ್‌ಬೀಯಿಂಗ್ ಸನ್ನದ್ಧವಾಗಿದೆ.

‘ಜೀವನ ಕ್ರಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಲು ಆಹಾರ ಕ್ರಮ, ಒತ್ತಡ ಮತ್ತು ದೈಹಿಕ ಸದೃಢತೆ ಇಲ್ಲದೇ ಇರುವುದು ಕಾರಣ. ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆರೋಗ್ಯಕ್ಕೆ ಅಗತ್ಯವಾದಂತಹ ಆಹಾರ ಸೇವನೆ ಮಾಡುತ್ತಿಲ್ಲ.

ಕುರುಕಲು ತಿಂಡಿಗಳನ್ನೇ ಹೆಚ್ಚಾಗಿ ತಿನ್ನುತ್ತಿದ್ದೇವೆ. ಭಾವನೆಗಳನ್ನು ನಿಯಂತ್ರಿಸಲು ಸಾಧ್ಯ ವಾಗದೇ ಇರುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ದೈಹಿಕ ವಾಗಿ ಸದೃಢವಾಗಿರುವುದು (ಫಿಟ್‌ನೆಸ್‌) ಸಹ ಹಲವು ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ’ ಎಂದು ರೂಪಾ ಹೇಳುತ್ತಾರೆ.

90 ದಿನಗಳ ಕಾರ್ಯಕ್ರಮ: ಮಾನಸಿಕ ಒತ್ತಡ ನಿಯಂತ್ರಣ, ದೈಹಿಕ ವ್ಯಾಯಾಮ, ಯೋಗ ಹೀಗೆ ವಿವಿಧ ರೀತಿಯ ಕಾರ್ಯಕ್ರಮಗಳು ಇರುತ್ತವೆ. ಮಧು ಮೇಹಿಗಳಿಗೆ ವಿಶೇಷವಾದ ಯೋಗ ಸೇರಿದಂತೆ ಇನ್ನೂ ಹಲವು ವಿಧದ ಚಿಕಿತ್ಸೆ ನೀಡಲಾಗುತ್ತದೆ.  
ಮಾಹಿತಿಗೆ : http://wellbeeing.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT