ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯದ ಅಗತ್ಯಕ್ಕೆ ಹೊಸ ಹೊಸ ಆ್ಯಪ್‌

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚಿಂತನೆ  ವಿಸ್ತರಿಸುವ ಮೈಂಡ್ ಮ್ಯಾಪಿಂಗ್ 
ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ವೇಗ ಪಡೆದುಕೊಳ್ಳುವ ಮೂಲಕ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಮ್ಮ ದೈನಂದಿನ ಬದುಕು ಆರಂಭವಾಗಿ, ಮುಕ್ತಾಯವಾಗುವವರೆಗೂ ನಾವು ಶೇ 80 ರಷ್ಟು ತಂತ್ರಜ್ಞಾನ ಅಥವಾ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿದ್ದೇವೆ.

ಸಣ್ಣ ಸಣ್ಣ ಮಾಹಿತಿ ಹುಡುಕಾಟಕ್ಕೂ ಗೂಗಲ್ ತಾಣದಲ್ಲಿ ಹುಡುಕಾಟ ನಡೆಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದೇವೆ. ಇದೀಗ ಅಮೆರಿಕದ ವಿಜ್ಞಾನಿಗಳು ಮತ್ತು ಸಾಫ್ಟ್‌ವೇರ್‌ ತಂತ್ರಜ್ಞರು ಸೇರಿ ನಮ್ಮ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸುವಂತಹ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

*
ಏನಿದು ಮೈಂಡ್ ಮ್ಯಾಪಿಂಗ್ ಆ್ಯಪ್?
ನಮ್ಮ ಮನಸ್ಸಿನಲ್ಲಿರುವ ಯೋಚನೆಗಳು ಮತ್ತು ಚಿಂತನೆಗಳಿಗೆ ವೇಗ ಕೊಡುವ ಆ್ಯಪ್ ಇದಾಗಿದೆ. ಇದಕ್ಕೆ ವಿಜ್ಞಾನಿಗಳು ‘ಮೈಂಡ್‌ನೋಡ್’ ಎಂಬ ಹೆಸರನ್ನು ಇಟ್ಟಿದ್ದಾರೆ. ಬಳಕೆದಾರರು ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್ ಫೋನ್‌ಗಳಲ್ಲಿ ಈ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಚಿಂತನೆಗಳನ್ನು ಮ್ಯಾಪಿಂಗ್ ಮಾಡಬಹುದು.

ಉದಾಹರಣೆಗೆ ಒಬ್ಬ ಮೈಂಡ್‌ನೋಡ್ ಆ್ಯಪ್ ಬಳಕೆದಾರರಿಗೆ 50 ಲಕ್ಷ ರೂಪಾಯಿ ಬಂಡವಾಳದಲ್ಲಿ ಒಂದು ಮನೆ ಕಟ್ಟುವ ಯೋಚನೆ ಹೊಳೆಯುತ್ತದೆ! ಕೂಡಲೇ ಆ ಬಳಕೆದಾರರು ಡೌನ್ ಲೋಡ್ ಮಾಡಿಕೊಂಡಿರುವ ಆ್ಯಪ್‌ನಲ್ಲಿ 50 ಲಕ್ಷ ರೂಪಾಯಿ ಬಂಡವಾಳದಲ್ಲಿ ಮನೆ ಕಟ್ಟಬೇಕು’ ಎಂದು ದಾಖಲಿಸಬೇಕು. ನಂತರ ಈ ಆ್ಯಪ್ ಬಳಕೆದಾರರ ಮುಂದಿನ ಹಂತದ ಯೋಚನೆಗಳನ್ನು ಮ್ಯಾಪಿಂಗ್ ಮಾಡಲು ಆರಂಭಿಸುತ್ತದೆ.

ಮೊದಲು ನಿವೇಶನಕೊಳ್ಳಬೇಕು, ಅದರ ಬಜೆಟ್ ಇಷ್ಟೆ ಮಿತಿಯಲ್ಲಿ ಇರಬೇಕು, ನಿವೇಶನ ನೋಂದಣಿ ಮಾಡಿಸಬೇಕು, ಮನೆ ಕಟ್ಟಲು ಬ್ಯಾಂಕ್ ಸಾಲ ಪಡೆಯಬೇಕು, ಇಂತಿಷ್ಟೇ ಖರ್ಚು ಮಾಡಬೇಕು ಎಂಬ ಮಾಹಿತಿಯನ್ನು ಮೈಂಡ್‌ನೋಡ್ ಆ್ಯಪ್ ಮ್ಯಾಪಿಂಗ್ ಮಾಡುತ್ತ ಹೋಗುತ್ತದೆ.

ಸಾಮಾನ್ಯವಾಗಿ ಈ ಆ್ಯಪ್ ಅನ್ನು ಸಣ್ಣ ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು, ಚಿಲ್ಲರೆ ಮಾರಾಟಗಾರರು ಬಳಕೆ ಮಾಡಿಕೊಂಡು ತಮ್ಮ ವಹಿವಾಟನ್ನು ವೃದ್ಧಿಸಿಕೊಳ್ಳಬಹುದು ಎಂದು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರು ಹೇಳುತ್ತಾರೆ. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದ್ದು  650 ರೂಪಾಯಿ ಪಾವತಿಸಿ ಇದನ್ನು ಖರೀದಿಸಬಹುದು.
ಗೂಗಲ್ ಪ್ಲೆಸ್ಟೋರ್: mind node app

*


ಫುಡ್‌ ಆ್ಯಪ್‌
ಸಾಮಾನ್ಯವಾಗಿ ನಾವು ಹಾಪ್‌ಕಾಮ್ಸ್, ಮಾರುಕಟ್ಟೆ ಅಥವಾ ಮಾಲ್‌ಗಳಿಗೆ ಹೋಗಿ ತರಕಾರಿ ಅಥವಾ ಹಣ್ಣುಗಳನ್ನು ಖರೀದಿಸುವಾಗ ಯಾವ ಹಣ್ಣು  ಖರೀದಿಸುವುದು, ಯಾವ ತರಕಾರಿ ಕೊಳ್ಳುವುದು ಎಂಬ ಗೊಂದಲಕ್ಕೆ ಒಳಗಾಗುವುದು ಸಹಜ. ಯಾವ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ, ಯಾವ ತರಕಾರಿಯಲ್ಲಿ ಖನಿಜಾಂಶಗಳು ಸಿಗುತ್ತವೆ ಎಂಬುದು ನಮಗೆ ಗೊತ್ತೆ ಇರುವುದಿಲ್ಲ! ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಹಣ್ಣುಗಳು ಮತ್ತು ತರಕಾರಿಯಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡುವ ಹೊಸ ಆ್ಯಪ್ ಮಾರುಕಟ್ಟೆಗೆ ಬಂದಿದೆ.

ಜರ್ಮನಿ ದೇಶದ ಸಾಫ್ಟ್‌ವೇರ್‌ ತಂತ್ರಜ್ಞರು ಈ ಫುಡ್ ಆ್ಯಪ್ ಅನ್ನು ವಿನ್ಯಾಸ ಮಾಡಿದ್ದು ಇದಕ್ಕೆ ‘ಹಾವಾಕ್ ಸ್ಪೆಕ್ಸ್ ಮೊಬೈಲ್ ಆ್ಯಪ್’ ಎಂದು ಹೆಸರಿಟ್ಟಿದ್ದಾರೆ. ಇದನ್ನು ‘ಫ್ಯಾಕ್ಟರಿ ಅಪರೇಷನ್ ಆ್ಯಂಡ್ ಆಟೊಮೋಷನ್ ಜರ್ಮನಿ’ ಎಂಬ ಕಂಪೆನಿ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗ್ರಾಹಕರು ಮೊದಲು ತಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗೆ ಈ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಮಾರುಕಟ್ಟೆಗೆ ತೆರಳಿ ಹಣ್ಣುಗಳು ಮತ್ತು ತರಕಾರಿಯಲ್ಲಿರುವ ಜೀವಸತ್ವಗಳನ್ನು ಪರೀಕ್ಷಿಸಿ ಹೆಚ್ಚು ಪೋಷಕಾಂಶಗಳಿರುವ ಹಣ್ಣುಗಳು, ತರಕಾರಿಯನ್ನು ಮನೆಗೆ ತರಬಹುದು.

ಉದಾಹರಣೆಗೆ ಬಳಕೆದಾರರು ಮಾರುಕಟ್ಟೆಯಲ್ಲಿರುವ ಸೇಬು ಹಣ್ಣನ್ನು ಸ್ಕ್ಯಾನ್ ಮಾಡಿದ ಕೂಡಲೇ ಸೇಬು ಹಣ್ಣಿನಲ್ಲಿ ಯಾವ ಜೀವಸತ್ವಗಳಿವೆ, ಯಾವ ಪೋಷಕಾಂಶಗಳಿವೆ ಎಂಬ ಮಾಹಿತಿ ನಮ್ಮ ಮೊಬೈಲ್ ಫೋನ್‌ ಪರದೆಯಲ್ಲಿ ಬರುತ್ತದೆ. ಈ ಹಣ್ಣನ್ನು ಸೇವಿಸಿದರೆ ನಮ್ಮ ದೇಹಕ್ಕೆ ಯಾವ ರೀತಿಯ ಅನುಕೂಲಗಳು ಅಥವಾ ಅನಾನುಕೂಲಗಳಾಗುತ್ತವೆ ಎಂಬ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ.

ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ತಮಗೆ ಬೇಕಾದ ಹಣ್ಣು ಅಥವಾ ತರಕಾರಿಯ ಮೇಲೆ ಸ್ಕ್ಯಾನ್ ಮಾಡಿದರೆ ಮಾಹಿತಿ  ಬರುತ್ತದೆ.  ಈಗಾಗಲೇ ಈ ಆ್ಯಪ್ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.  ಮುಂದಿನ ದಿನಗಳಲ್ಲಿ ಏಷ್ಯಾ ಮಾರುಕಟ್ಟೆಯಲ್ಲೂ ಬಿಡುಗಡೆ ಮಾಡಲಾಗುವುದು ಎಂದು ಆ್ಯಪ್ ತಯಾರಕ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಗೂಗಲ್ ಪ್ಲೆಸ್ಟೋರ್:  ‘HawkSpex mobile’ app

*


ರೈಲ್ ಆ್ಯಪ್‌ನಲ್ಲಿ 2 ಹೊಸ ವೈಶಿಷ್ಟ್ಯಗಳು…
ರೈಲ್ವೆ ಇಲಾಖೆಯು ಪ್ರಯಾಣಿಕರು ಆನ್‌ಲೈನ್‌ನಲ್ಲಿ ಸುಲಭವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾದ ಯುಟಿಎಸ್ (ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ)ಮೊಬೈಲ್ ಆ್ಯಪ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಪ್ರಯಾಣಿಕ ಸ್ನೇಹಿ ಆ್ಯಪ್ ಎಂದೇ ಜನಪ್ರಿಯವಾಗಿದ್ದ ಈ ಆ್ಯಪ್‌ಗೆ ಮತ್ತೆ ಎರಡು ನೂತನ ವೈಶಿಷ್ಟ್ಯ(ಟೂಲ್)ಗಳನ್ನು ಸೇರಿಸಲಾಗಿದೆ.

ಒಂದು ಹಣಪಾವತಿಯನ್ನು ಮತ್ತಷ್ಟು ಸುಲಭವಾಗಿಸುವ ಟೂಲ್ ಮತ್ತು ಬುಕಿಂಗ್ ಟಿಕೆಟ್ ಅನ್ನು ಪ್ರಿಂಟ್ ಮಾಡಿಕೊಳ್ಳುವ ಸೌಕರ್ಯವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

ಪ್ರಯಾಣಿಕರು ನೆಟ್‌ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ತ್ವರಿತವಾಗಿ ಟಿಕೆಟ್ ಬುಕ್ ಮಾಡಬಹುದು ಹಾಗೆಯೇ ಬುಕ್ ಮಾಡಿದ ಟಿಕೆಟ್ ಅನ್ನು ಎಲ್ಲಿಬೇಕಾದರೂ ಪ್ರಿಂಟ್ ಪಡೆಯಬಹುದು.

ಈ ಯುಟಿಎಸ್ ಮೊಬೈಲ್ ಆ್ಯಪ್ ಅನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆ ಮಾಡಿದ ಯುಟಿಎಸ್  ಆ್ಯಪ್‌ನಲ್ಲಿ ಈ ಎರಡು ಸೌಲಭ್ಯಗಳು ಇರಲಿಲ್ಲ. ಮುಂದಿನ ದಿನಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.
ಗೂಗಲ್ ಪ್ಲೆಸ್ಟೋರ್:  UTS mobile app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT