ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸುಜಯ್ ಕೆ.ಎಸ್., ಹಾಸನ
*ನಾನು 2013 ರಲ್ಲಿ ಬಿಇ ಓದಲು  ಕಾರ್ಪೋರೇಷನ್ ಬ್ಯಾಂಕಿನಿಂದ  ₹ 95 ಸಾವಿರದಷ್ಟು ಶಿಕ್ಷಣ ಸಾಲ ಪಡೆದಿದ್ದೆ. ನನ್ನ ಹೆತ್ತವರ ವಾರ್ಷಿಕ ಆದಾಯ ₹ 1.80 ಲಕ್ಷ . ಈ ವಿಚಾರದಲ್ಲಿ ಬ್ಯಾಂಕಿಗೆ ಸರ್ಟಿಫಿಕೇಟು ನಿಲ್ಲಿಸಿದ್ದೆ.  2016 ರಿಂದ ಕಂತು ₹ 7ಸಾವಿರ ಕಟ್ಟುವಂತೆ ಹೇಳುತ್ತಿದ್ದಾರೆ. ಬಡ್ಡಿಯನ್ನು ಒಂದನೇ ದಿನದಿಂದಲೇ ಆಕರಣೆ ಮಾಡುತ್ತಿದ್ದಾರೆ. ಈಗ ಅಸಲು ಬಡ್ಡಿ ಸೇರಿ ಸಾಲದ ಮೊತ್ತ ₹ 1.38 ಲಕ್ಷವಾಗಿದೆ. ಇದರಲ್ಲಿ  ₹ 23,000 ಬಡ್ಡಿ ಅನುದಾನಿತ ಲಾಭ ನನಗೆ ಕೊಟ್ಟಿದ್ದಾರೆ. ಬ್ಯಾಂಕ್ ಸಾಲ ತೆಗೆದುಕೊಂಡ ತಾರೀಕಿನಿಂದ ಬಡ್ಡಿ ವಿಧಿಸಬಹುದೇ?

ಉತ್ತರ: ಬಡ್ಡಿ ಅನುದಾನಿತ ಶಿಕ್ಷಣ ಸಾಲದ ಅವಧಿ, ವಿದ್ಯಾರ್ಥಿಯ ಅಧ್ಯಯನದ ಕೋರ್ಸಿನ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳು (ಇವುಗಳಲ್ಲಿ ಯಾವುದು ಮೊದಲೋ ಅದನ್ನು ಆರಿಸಿ ಕೊಳ್ಳಬೇಕು) ಈ ಅವಧಿಗೆ ಮಾತ್ರ ಸೀಮಿತವಾಗಿದ್ದು, ನಂತರ ಈ ಸಾಲಕ್ಕೆ ಅಸಲು, ಬಡ್ಡಿ ಸೇರಿಸಿ ಕಂತು ತುಂಬಬೇಕಾಗುತ್ತದೆ. ಒಟ್ಟಿನಲ್ಲಿ ಬಡ್ಡಿ ಅನುದಾನಿತ ಶಿಕ್ಷಣ ಸಾಲದಲ್ಲಿ, ವಿದ್ಯಾರ್ಥಿ ಸಾಲ ಪಡೆದ ತಾರೀಕಿನಿಂದ ವಿದ್ಯಾರ್ಥಿಯಿಂದ ಬಡ್ಡಿ ವಸೂಲು ಮಾಡುವಂತಿಲ್ಲ. ನಿಮ್ಮ ಪ್ರಶ್ನೆಯಲ್ಲಿ ₹ 23,000 ಅನುದಾನಿತ ಬಡ್ಡಿ ನಿಮಗೆ ದೊರತಿದೆ ಎಂದು ಹೇಳಿದ್ದಾರೆ. ಪ್ರಾಯಶ ಬ್ಯಾಂಕಿನವರು, ಅವಧಿ ಮುಗಿದ ನಂತರವೇ ಬಡ್ಡಿ ಆಕರಣೆ ಮಾಡಿದಂತಿದೆ.

ತಿಪ್ಪೇಸ್ವಾಮಿ, ಚಿತ್ರದುರ್ಗ
*ನಾನು ನಿವೃತ್ತ ಶಿಕ್ಷಕ. ನಿವೃತ್ತಿಯಾಗಿ 12 ವರ್ಷಗಳಾಗಿವೆ. ನಿವೃತ್ತಿಯಿಂದ ಬಂದ ಹಣ ಠೇವಣಿ ಇರಿಸಿ ಅದು ಬೆಳೆದು ಈಗ ₹ 24 ಲಕ್ಷವಾಗಿದೆ. ನನಗೆ ವಾರ್ಷಿಕ ಪಿಂಚಣಿ ₹ 1,20,156 ಬರುತ್ತದೆ. ನನಗೆ ತೆರಿಗೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ.
ಉತ್ತರ:
ನೀವು ಹಿರಿಯ ನಾಗರಿಕರಾದ್ದರಿಂದ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ಹಾಗೂ ಪಿಂಚಣಿ ಇವೆರಡರಿಂದ ವಾರ್ಷಿಕವಾಗಿ ಬರುವ ಒಟ್ಟು ಆದಾಯದಲ್ಲಿ ₹ 3 ಲಕ್ಷಗಳ ತನಕ ತೆರಿಗೆ ಬರುವುದಿಲ್ಲ. ನಿಮ್ಮ ₹ 24 ಲಕ್ಷ ಠೇವಣಿಗೆ ಶೇ 8 ರಂತೆ ವಾರ್ಷಿಕವಾಗಿ ₹ 1.92 ಲಕ್ಷ ಬಡ್ಡಿ ಬರುತ್ತದೆ. ನಿಮ್ಮ ವಾರ್ಷಿಕ ಪಿಂಚಣಿ ₹ 1,20,156. ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ಹಾಗೂ ಪಿಂಚಣಿ ಸೇರಿ, ವಾರ್ಷಿಕ ಆದಾಯ ₹ 3,12,156 ಆಗುತ್ತದೆ. ₹ 3 ಲಕ್ಷಗಳ ಆದಾಯದವರೆಗೆ ವಿನಾಯಿತಿ ಇದ್ದು, ಉಳಿದ ₹ 12,156ಕ್ಕೆ ಶೇ  10 ರಷ್ಟು ತೆರಿಗೆ ಹಾಗೂ ತೆರಿಗೆ ಮೇಲೆ ಶೇ  3 ಎಜ್ಯುಕೇಷನ್ ಸೆಸ್ ತೆರಬೇಕಾಗುತ್ತದೆ. ತೆರಿಗೆ ಉಳಿಸಲು ₹ 15,000, 5 ವರ್ಷಗಳ, ತೆರಿಗೆಗೋಸ್ಕರ ಸಾದರಪಡಿಸಿದ  ಬ್ಯಾಂಕ್ ಠೇವಣಿಯಲ್ಲಿ ಇರಿಸಿ. ನೀವು ಹೀಗೆ ಮಾಡಿದಲ್ಲಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆದಂತಾಗುತ್ತದೆ. ತೆರಿಗೆ ವಿನಾಯಿತಿ ಬಂದರೂ, ತೆರಿಗೆ ರಿಟರ್ನ್ ಜುಲೈ 31 ರೊಳಗೆ ಸಲ್ಲಿಸಬೇಕಾಗುತ್ತದೆ.

ನಾರಾಯಣಸ್ವಾಮಿ, ಶಿರಾ
*ಖಾಸಗಿ ಕಂಪನಿಯಿಂದ ಸ್ವಯಂ ನಿವೃತ್ತಿ ಪಡೆದು  ₹ 31 ಲಕ್ಷ ಪಡೆದಿದ್ದೇನೆ. ಈ ಹಣದಲ್ಲಿ ₹ 7 ಲಕ್ಷ ಭೋಗ್ಯಕ್ಕೆ ಮನೆ ಹಾಗೂ ಹಿರೆಹಳ್ಳಿಯಲ್ಲಿ
₹ 24 ಲಕ್ಷಕ್ಕೆ 3 ನಿವೇಶನ ಕೊಂಡಿದ್ದೇನೆ. ಈಗಾಗಲೇ ನನ್ನೊಡನೆ ಒಂದು ನಿವೇಶನ ಹಿರೆಹಳ್ಳಿಯಲ್ಲಿ ಇದೆ. (ಒಟ್ಟು 4 ನಿವೇಶನ) ನನಗೆ ಸಂಸ್ಥೆಯಿಂದ ₹ 3 ಲಕ್ಷ ಬರಲಿದೆ. 2015 ರಲ್ಲಿ ಮಾರುತಿ ಕೆ–10 ಕಾರು ಕೊಂಡಿದ್ದೇನೆ. ₹ 2,000 ಸಾವಿರ ಪಿಂಚಣಿ ಬರುತ್ತದೆ. ನನಗೆ ಒಬ್ಬಳೇ ಮಗಳು. ಕೃಷಿ ವಿಜ್ಞಾನ ಪದವಿ, ಹಾಸನದಲ್ಲಿ ಓದುತ್ತಿದ್ದಾಳೆ. ಅವಳ ತಿಂಗಳ ಖರ್ಚು  ₹ 3 ಸಾವಿರ. ತಾಯಿ, ಹೆಂಡತಿ, ಮಗಳು ಸೇರಿ ಮನೆಯಲ್ಲಿ 4 ಜನ ಇದ್ದೇವೆ.  ಮನೆ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿ.
ಉತ್ತರ:
ನಿಮ್ಮ ಪ್ರಕಾರ ನಿಮಗೆ ಬಂದಿರುವ ನಿವೃತ್ತಿಯ ಹಣ ನಿವೇಶನ, ಭೋಗ್ಯಕ್ಕೆ ವ್ಯಯವಾಗಿದೆ. ನಿಮ್ಮ ವಯಸ್ಸಿಗೆ ಹಾಗೂ ಆದಾಯದ ಪರಿಮಿತಿಯಲ್ಲಿ ನಿಮಗೆ ಬ್ಯಾಂಕುಗಳಿಂದ ಗೃಹಸಾಲ ದೊರೆಯುವುದಿಲ್ಲ. ನಿಮ್ಮೊಡನಿರುವ 4 ನಿವೇಶನಗಳಲ್ಲಿ, ಎರಡನ್ನು ಮಾರಾಟ ಮಾಡಿ, ಅಲ್ಲಿ ಬರುವ ಹಣದಿಂದ ಮನೆ ಕಟ್ಟಿಸಿಕೊಳ್ಳಿ. ನಿಮ್ಮ ಮಗಳಿಗೆ ಉತ್ತಮ ಭವಿಷ್ಯವಿದೆ. ಅವಳ ಮದುವೆಗೆ ಹೆಚ್ಚಿನ ವೆಚ್ಚ ಮಾಡಬೇಡಿ. ಅವಳಿಗೆ ಎಲ್ಲಿ ಕೆಲಸ ಸಿಗುತ್ತದೆ ಎನ್ನುವುದನ್ನು ತಿಳಿದು, ಮದುವೆ ವಿಚಾರ ಕೂಡಾ ಗಮನದಲ್ಲಿ ಇರಿಸಿ, ನಂತರವೇ ಮನೆ ಕಟ್ಟಿಸಲು ನಿವೇಶನ ಮಾರಾಟ ಮಾಡಬಹುದು.

ಕೆ.ಎಂ.ವಿ., ಹರಿಹರ
*ಖಾಸಗಿ ಸಂಸ್ಥೆಯಲ್ಲಿ ಕಾರ್ಮಿಕನಾಗಿ ನಿವೃತ್ತನಾದೆ. ನನಗೆ ₹ 18 ಲಕ್ಷ ಪಿ.ಎಫ್. ನಿಂದ ಬಂದಿದೆ. ಈ ಹಣ ಹೆಚ್ಚಿನ ವರಮಾನ ಹಾಗೂ ಭದ್ರತೆಯ ದೃಷ್ಟಿಯಿಂದ ಎಲ್ಲಿ ತೊಡಗಿಸಲಿ?
ಉತ್ತರ:
ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರಿಂದ ನಿಮಗೆ ಪಿಂಚಣಿ ಇರಲಿಕ್ಕಿಲ್ಲ. ನಿಮ್ಮ ತಿಂಗಳ ಖರ್ಚಿಗೆ ಹಣ ಬೇಕಾಗುವುದರಿಂದ ₹ 18 ಲಕ್ಷ ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ 5 ವರ್ಷಗಳ ಠೇವಣಿಯಾಗಿರಿಸಿ. ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ಅಂಚೆ ಕಚೇರಿಯಲ್ಲಿ ಮಾಸಿಕ ಬಡ್ಡಿ ಬರುವ ಠೇವಣಿಯಲ್ಲಿ ಜಂಟಿಯಾಗಿ ಗರಿಷ್ಠ ₹ 9 ಲಕ್ಷ  ಮಾತ್ರ ಇಡಬಹುದು. ಈ ಕಾರಣದಿಂದ ಬ್ಯಾಂಕ್ ಠೇವಣಿಯೇ ಲೇಸು. ₹ 18 ಲಕ್ಷ ಒಂದೇ ಕಡೆ ಇಟ್ಟು ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ.  ಅಭದ್ರತೆ  ಇರುವ ಕಡೆ ಹಣ ಹೂಡಿ ಅಸಲನ್ನೇ ಕಳೆದು ಕೊಳ್ಳಬೇಡಿ.

ವಿಜಯ, ಮೈಸೂರು
*ಸ್ಟಾರ್ ಹೆಲ್ತ್‌ ಮತ್ತು ಎಲೈಟ್ ಇನ್ಶುರನ್ಸ್ ಕಂಪೆನಿ ಲಿಮಿಟೆಡ್ ಪಾಲಿಸಿ ಮಾಡಿಸಿ, ಮೂರು ವರ್ಷಗಳಿಂದ ವಾರ್ಷಿಕ ₹ 6698 ತುಂಬುತ್ತಾ ಬಂದು, ಕಾರಣಾಂತರದಿಂದ ಮುಂದೆ ಕಟ್ಟದೆ ನಿಲ್ಲಿಸಬೇಕಾಯಿತು. ಈ ಹಣ ವಾಪಸ್ ಪಡೆಯಬಹುದೇ, ಹಾಗೆ ಪಡೆಯಲು ಏನು ಮಾಡಬೇಕು?
ಉತ್ತರ:
ನೀವು ಜೀವ ವಿಮೆ ಅಥವಾ ಆರೋಗ್ಯ ವಿಮೆ ಇವೆರಡಲ್ಲಿ ಯಾವುದು ಮಾಡಿರುವುದು ತಿಳಿಸಿಲ್ಲ. ಪ್ರಾಯಶ ನೀವು ಜೀವ ವಿಮೆ ಮಾಡಿಸಿರಬೇಕು. ಆರೋಗ್ಯ ವಿಮೆಯಾದಲ್ಲಿ ಕಟ್ಟಿದ ಹಣ ವಾಪಸು ಪಡೆಯುವಂತಿಲ್ಲ. ಜೀವವಿಮೆಯಲ್ಲಿ ಮೂರು ವರ್ಷ ತುಂಬಿದ ನಂತರ ಕಟ್ಟಿದ ಮೊತ್ತದ ಅಂದಾಜು ಶೇ 30 ವಾಪಸು ಪಡೆಯಬಹುದು. ಇದನ್ನು ಸರೆಂಡರ್ ವ್ಯಾಲ್ಯೂ ಎನ್ನುತ್ತಾರೆ. ನೀವು ಜೀವ ವಿಮೆ ಇಳಿಸಿದ ಏಜಂಟರನ್ನು ವಿಚಾರಿಸಿ, ಹೀಗೆ ಹಣ ಪಡೆಯುವಾಗ, ಪಾಲಿಸಿ ಪತ್ರ ಜೀವ  ವಿಮಾ ಕಂಪನಿಗೆ ಹಿಂದಿರುಗಿಸಬೇಕು.

ಕೆ. ಲಕ್ಷ್ಮಿ, ಹೊಸಪೇಟೆ
*ಗಂಡ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ತಿಂಗಳ ಸಂಬಳ ₹ 31 ಸಾವಿರ. ಎಲ್ಲಾ ಖರ್ಚು, ಬಾಡಿಗೆ ಹೋಗಿ ₹ 13,500 ಮನೆ ಖರ್ಚಿಗೆ ಬೇಕಾಗುತ್ತದೆ. ನಿಮ್ಮ ಪ್ರೇರಣೆಯಂತೆ ₹ 5000 ಆರ್.ಡಿ. ಮಾಡಿದ್ದೇನೆ. ₹ 1,000 ಆರ್.ಡಿ. ಮೇ 2017ಕ್ಕೆ ಮುಕ್ತಾಯವಾಗುತ್ತದೆ. ₹ 2 ಲಕ್ಷ ನಗದು ಇದೆ. ಮೂರು ವರ್ಷದ ಹೆಣ್ಣು ಮಗು ಇದೆ. ಅವಳ ಭವಿಷ್ಯ ಹಾಗೂ ನಿವೇಶನ ಕೊಳ್ಳಲು ಸಲಹೆ ನೀಡಿರಿ. ಸುಕನ್ಯಾ ಸಮೃದ್ಧಿ ಯೋಜನೆಗಿಂತ ಉತ್ತಮ ಯೋಜನೆ ಇದ್ದರೆ ತಿಳಿಸಿ.
ಉತ್ತರ:
ನನ್ನ ಸಲಹೆ ಮೇರೆಗೆ ನೀವು ₹ 5,000 ಆರ್.ಡಿ. ಮಾಡಿರುವುದಕ್ಕೆ ಅಭಿನಂದನೆಗಳು. ಮೇ ತಿಂಗಳ ಆರ್.ಡಿ. ಮುಗಿಯುತ್ತಲೇ, ಅದೇ ಮೊತ್ತಕ್ಕೆ ಇನ್ನೊಂದು ಆರ್.ಡಿ. ಪ್ರಾರಂಭಿಸಿ. ಹೀಗೆ ನೀವು ಮಾಡುವ ಉಳಿತಾಯದಿಂದ 10 ವರ್ಷಗಳೊಳಗೆ ನಿವೇಶನ ಕೊಳ್ಳಲು ಸಹಾಯವಾಗುತ್ತದೆ. ಆರ್.ಡಿ. ಕ್ರಮಬದ್ಧವಾದ ಉಳಿತಾಯ, ಜೊತೆಗೆ ಬೇಡವಾದ ಖರ್ಚಿಗೆ ಕಡಿವಾಣವಾಗುತ್ತದೆ. ಪುಟ್ಟ ಕಂದನ ಸಲುವಾಗಿ ಎಷ್ಟಾದರಷ್ಟು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿ. ಇದೊಂದು ದೀರ್ಘಾವಧಿ ಯೋಜನೆ. ವಿದ್ಯಾಭ್ಯಾಸ, ಮದುವೆ ಸಮಯದಲ್ಲಿ ತುಂಬಾ ಅನುಕೂಲವಾಗುತ್ತದೆ. ಈ ಯೋಜನೆ ಹೊರತುಪಡಿಸಿ ವಾರ್ಷಿಕ  ಕನಿಷ್ಠ 10 ಗ್ರಾಂ ಬಂಗಾರದ ನಾಣ್ಯ ಈ ಮಗುವಿನ ಹುಟ್ಟು ಹಬ್ಬದ ಸಮಯದಲ್ಲಿ ಕೊಳ್ಳಿ. ಕನಿಷ್ಠ ಮಗುವಿನ ಮದುವೆ ತನಕ ನಿಲ್ಲಿಸಬೇಡಿ. ಹೀಗೆ ಬಂಗಾರಕೊಳ್ಳಲು ಪ್ರತ್ಯೇಕ ಒಂದು ವರ್ಷದ ಆರ್.ಡಿ. ಮಾಡುತ್ತಾ ಬನ್ನಿ.

ಎಸ್‌.ವಿ. ಭಟ್‌, ಸಿರ್ಸಿ
*ನಾನು ಪಿ.ಎಸ್‌.ಯು.ದಲ್ಲಿ ಕೆಲಸ ಮಾಡುತ್ತೇನೆ. ತಿಂಗಳಿಗೆ ಎಲ್ಲಾ ಕಡಿತದ ನಂತರ ₹ 51ಸಾವಿರ ಕೈಗೆ ಸಿಗುತ್ತದೆ.  ಕಡಿತ ಜಿಪಿಎಫ್‌ ₹ 15ಸಾವಿರ, ಎಲ್‌ಐಸಿ ₹ 1,900 ಆದಾಯ ತೆರಿಗೆ ₹ 8 ಸಾವಿರ. ಆರ್‌.ಡಿ. ₹ 10,000. ನನ್ನ ತಿಂಗಳ ಖರ್ಚು ₹ 14ಸಾವಿರ ವಯಸ್ಸು 45. ಅವಿವಾಹಿತ (ಮದುವೆ ಆಗುವ ಆಲೋಚನೆ ಇಲ್ಲ) ನನ್ನ ಅಪ್ಪ ಪಾರ್ಶ್ವವಾಯು ಪೀಡಿತರು ಹಾಗೂ ನನ್ನ ತಾಯಿ ಕೂಡಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾನು ₹ 25000 ಹೇಗೆ ಉಳಿತಾಯ ಮಾಡಲಿ. ನನ್ನೊಡನೆ ₹ 4 ಲಕ್ಷ ಇದೆ. ₹ 1 ಲಕ್ಷ ತಂದೆ ತಾಯಿಗಳಿಗೆ ಇಟ್ಟು, ಉಳಿದ ₹ 3 ಲಕ್ಷ ಎಲ್ಲಿ ಹೇಗೆ ಇರಿಸಲಿ. ಆದಾಯ ತೆರಿಗೆ ಉಳಿತಾಯ ಹೇಗೆ?
ಉತ್ತರ
: ₹ 10,000 ಆರ್‌.ಡಿ. ಎಂದಿನಂತೆ ಮುಂದುವರಿಸಿ. ₹ 3 ಲಕ್ಷದಲ್ಲಿ ₹ 1.50 ಲಕ್ಷ, ಪಿಪಿಎಫ್‌ ಖಾತೆ ತೆರೆದು ಅಲ್ಲಿ ಹೂಡಿರಿ. ಇಲ್ಲಿ ಇರಿಸಿದ ಹಣದ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಸೆಕ್ಷನ್‌ 80ಸಿ ಆಧಾರದ ಮೇಲೆ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಜೊತೆಗೆ ಸೆಕ್ಷನ್‌ 10(11) ಆಧಾರದ ಮೇಲೆ ಇಲ್ಲಿ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯತಿ ಇದೆ. ಇನ್ನು ಮುಂದೆ ನೀವು ಉಳಿಸಬಹುದಾದ ₹ 25,000ದಲ್ಲಿ ವಾರ್ಷಿಕ ₹ 1.50 ಲಕ್ಷ ಪಿಪಿಎಫ್‌ಗೆ ಮುಡುಪಾಗಿಡಿ.  ತಿಂಗಳಿಗೆ ₹ 10,000 ಇನ್ನೊಂದು ಆರ್‌ಡಿ ಮಾಡಿರಿ. ಈ ಎರಡು ಮಾರ್ಗದಿಂದ ನೀವು ಉಳಿಸಬಹುದಾದ ₹ 25000 ಸರಿಯಾದ ಹೂಡಿಕೆಯಾಗುತ್ತದೆ, ಜೊತೆಗೆ ತೆರಿಗೆ ವಿನಾಯತಿ ಪಡೆದಂತೂ ಆಗುತ್ತದೆ.

ಜಯಲಕ್ಷ್ಮಿ. ಕೆ.ಎನ್‌., ಕ್ಯಾತ್‌ಸಂದ್ರ, ತುಮಕೂರು
*ನಮ್ಮ ತಂದೆ ನಮಗಾಗಿ ಕಷ್ಟಪಟ್ಟು ಕೂಡಿಟ್ಟ
₹ 3 ಲಕ್ಷ ಹಣ ಠೇವಣಿಯಾಗಿರಿಸಿ, ತ್ರೈಮಾಸಿಕ ಬಡ್ಡಿ ಪಡೆಯುತ್ತಿದ್ದೇವೆ. ಇದರಿಂದ ಈವರೆಗೆ
₹ 50ಸಾವಿರ ಠೇವಣಿ ಮಾಡಿದ್ದೇವೆ. ನಮ್ಮ ಶಕ್ತಿಗೆ ಅನುಸಾರವಾಗಿ ₹ 600 ಆರ್‌.ಡಿ. ಮಾಡಿದ್ದೇವೆ. ಇನ್ನು ಒಂದು ವರ್ಷದಲ್ಲಿ ತಾಯಿಯ ಹೆಸರಿಗೆ  ಎರಡು ನಿವೇಶನ ತಾಯಿಯ ಹೆಸರಿಗೆ ದೊರೆಯುತ್ತದೆ. ನನ್ನ ಹಾಗೂ ತಂಗಿಯ ಮದುವೆ ಸಲುವಾಗಿ ನಿವೇಶನ ಮಾರಾಟ ಮಾಡುವ ಮನಸ್ಸಿಲ್ಲ. ನಮಗೆ ಚಿನ್ನದ ಹೂಡಿಕೆ ಇಲ್ಲ. ನನ್ನ ತಮ್ಮ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಮಗೆ ಹಾಗೂ ತಮ್ಮನ ಭದ್ರತೆಗಾಗಿ ನಾವು ಏನು ಮಾಡಬೇಕು. ನಮಗೆ ಬ್ಯಾಂಕ್‌ ಸಾಲ ದೊರೆಯಬಹುದೇ? ನಮಗೆ ಕೃಷಿ ಆದಾಯ ವಾರ್ಷಿಕ ₹ 1.50 ಲಕ್ಷ ಇದೆ.
ಉತ್ತರ:
ನಿಮಗೆ ಠೇವಣಿ ಮೇಲಿನ ಬಡ್ಡಿ ಹಾಗೂ ಕೃಷಿ ಆದಾಯದ ಹೊರತು ಬೇರಾವ ಆದಾಯ ಬರಲಿಕ್ಕಿಲ್ಲ. ನೀವು ಹಾಗೂ ನಿಮ್ಮ ತಂಗಿ ಏನು ಉದ್ಯೋಗ ಮಾಡುತ್ತಿದ್ದೀರಿ ಹಾಗೂ ಬರುವ ಸಂಬಳ, ಇವೆರಡರ ಆಧಾರದ ಮೇಲೆ, ವೈಯಕ್ತಿಕ ಸಾಲ ಬ್ಯಾಂಕಿನಲ್ಲಿ ದೊರೆಯುತ್ತದೆ. ಈ ವಿಚಾರ ನೀವು ಪ್ರಶ್ನೆಯಲ್ಲಿ ತಿಳಿಸಿಲ್ಲ. ಬ್ಯಾಂಕಿನಲ್ಲಿ ಸಾಲ ಕೊಡುವ ಮುನ್ನ ಮರುಪಾವತಿಸುವ ಸಾಮರ್ಥ್ಯ ಮುಖ್ಯವಾಗಿ ನೋಡುತ್ತಾರೆ. ನಿವೇಶನ ಮಾರಾಟ ಮಾಡುವುದು ಸರಿಯಲ್ಲ. ಅವುಗಳನ್ನು ಹಾಗೆಯೇ ಇರಿಸಿಕೊಳ್ಳಿ. ಎಫ್‌.ಡಿ. ಮಾಡಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆದು, ಬಡ್ಡಿಯಿಂದ ಬಂದ ಹಣದಿಂದ ₹ 50000 ಠೇವಣಿ ಮಾಡಿರುವುದು ತಿಳಿಯಿತು. ಇದರ ಬದಲಾಗಿ ಠೇವಣಿಯನ್ನೇ, ಒಮ್ಮೆಲೇ ಬಡ್ಡಿಬರುವ, ಮರು ಹೂಡಿಕೆ ಠೇವಣಿಯಲ್ಲಿ ಇರಿಸಿ. ನಿಮ್ಮ ತಮ್ಮ ಚೆನ್ನಾಗಿ ಓದಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಲ್ಲಿ, ವೃತ್ತಿಪರ ಶಿಕ್ಷಣ ಪಡೆಯುವಲ್ಲಿ (ಬಿಇ–ಎಂಬಿಬಿಎಸ್‌–ಇಟಿಸಿ.) ಬ್ಯಾಂಕುಗಳಲ್ಲಿ ಗರಿಷ್ಠ ₹ 10 ಲಕ್ಷಗಳ ತನಕ ಬಡ್ಡಿ ಅನುದಾನಿತ ಸಾಲ ದೊರೆಯುತ್ತದೆ. ಹೀಗೆ ಪಡೆದ ಸಾಲ, ನಿಮ್ಮ ತಮ್ಮ ಕೆಲಸಕ್ಕೆ ಸೇರಿದ ನಂತರ ಮಾಸಿಕ ಕಂತುಗಳಲ್ಲಿ ಮರು ಪಾವತಿಸಬಹುದು.

ಚಿರಂತನ ಗೌಡ, ಯಲಹಂಕ
*ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕಾರು ಸಾಲ 2 ವರ್ಷಗಳ ಹಿಂದೆ ಪಡೆದಿದ್ದೆ. ಕಂತು ಸರಿಯಾಗಿ ಕಟ್ಟುತ್ತಿದ್ದೇನೆ. ಅವಧಿಗೆ ಮುನ್ನ ಸಾಲ ತೀರಿಸುವುದಾದಲ್ಲಿ ಶೇ 2 ರಷ್ಟು ಹಚ್ಚಿಗೆ ದಂಡ ಪಾವತಿಸಬೇಕು ಎನ್ನುತ್ತಾರೆ. ನೀವು ಹಿಂದೆ ತಿಳಿಸಿದಂತೆ ಮಾಧವನ್‌ ಕಮಿಟಿ ರಿಪೋರ್ಟಿ ನಲ್ಲಿ, ದಂಡದ ಬಡ್ಡಿ ಕಟ್ಟುವ ಅವಶ್ಯವಿದೆಯೇ?
ಉತ್ತರ:
ದಾಮೋದರನ್‌ ಸಮಿತಿ ವರದಿಯಲ್ಲಿ ಗೃಹಸಾಲ (ಹೌಸಿಂಗ್‌ ಲೋನ್‌)ದ ಅವಧಿಗೆ ಮುನ್ನ, ಸಾಲ ಪಡೆದ ವ್ಯಕ್ತಿ, ಮರುಪಾವತಿಸುವಲ್ಲಿ, ದಂಡದ ಬಡ್ಡಿ ಬ್ಯಾಂಕುಗಳು ವಿಧಿಸುವಂತಿಲ್ಲ ಎಂಬುದಾಗಿ ನಮೂದಿಸಲಾಗಿದೆ. ಕಾರಿನ ಮೇಲಿನ ಸಾಲ ಅಥವಾ ಇನ್ನಿತರ ಸಾಲಗಳ ವಿಚಾರದಲ್ಲಿ ದಂಡ ವಿಧಿಸಬಾರದು ಎನ್ನುವ ಪ್ರಸ್ತಾಪ ಮಾಡಿಲ್ಲ. ಯಾವುದೇ ಸಾಲ ಪಡೆದ ವ್ಯಕ್ತಿ ಅವಧಿಗೆ ಮುನ್ನ ಮರುಪಾವತಿಸುವುದು ನಿಜವಾಗಿ ಒಂದು ಒಳ್ಳೆಯ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ದಂಡ ವಿಧಿಸುವ ಕ್ರಮ, ಭಾರತೀಯ ರಿಸರ್ವ್‌ ಬ್ಯಾಂಕ್‌ ತಪ್ಪಿಸಬೇಕಾಗಿದೆ. ಬ್ಯಾಂಕುಗಳಲ್ಲಿ ಸಾಲ ಪಡೆದು, ಅವಧಿಗೆ ಮುನ್ನ ಹಣ ಕಟ್ಟುವವರ ಸಂಖ್ಯೆ ವಿರಳವಾಗುತ್ತಿದ್ದು, ಬ್ಯಾಂಕಿನ ಅನುತ್ಪಾದಿಕ ಆಸ್ತಿ (ಎನ್‌ಪಿಎ) ದಿನೇ ದಿನೇ ಹೆಚ್ಚಾಗುವುದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಹೀಗಿರುವಾಗ ಇನ್ನಾದರೂ ಕೇಂದ್ರ ಸರ್ಕಾರ ಹಾಗೂ ಆರ್‌.ಬಿ.ಐ. ಅವಧಿಗೆ ಮುನ್ನ ಸಾಲ ತಿರಿಸುವವರಿಗೆ ದಂಡ ತೆರದ ಹಾಗೆ ಕ್ರಮ ಕೈಕೊಳ್ಳಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT