ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತನೆ ಮತ್ತು ಯೋಗ್ಯತೆಯ ಅನನ್ಯತೆ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅದೊಂದು ಸರ್ಕಾರಿ ಕಾಲೇಜು. ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರು ವಯಸ್ಸು ಹಾಗೂ ವ್ಯಕ್ತಿತ್ವದಲ್ಲಿ ತುಂಬ ಹಿರಿಯರು. ಅವರು ಈಗ ತಾನೇ ಕೆಲಸಕ್ಕೆ ಸೇರಿದ ಯುವ ಉಪನ್ಯಾಸಕರಿಂದ ಹಿಡಿದು ತಮ್ಮ ವಾರಿಗೆಯ ಹಿರಿಯ ಪ್ರಾಧ್ಯಾಪಕರಿಗೂ ‘ಬನ್ನಿ’, ‘ಹೋಗಿ’ -  ಎಂಬ ಬಹುವಚನವನ್ನೇ ಬಳಸುತ್ತಾರೆ.

ಬೆನ್ನ ಹಿಂದೆಯೂ ಕೂಡ ‘ಅವನಾ?’ ‘ಇವನಾ?’ ಎಂಬ ಏಕವಚನವನ್ನು ಬಳಸುವುದಿಲ್ಲ. ಆದ್ದರಿಂದ ಅವರ ಈ ಶ್ರೀಮಂತ ವ್ಯಕ್ತಿತ್ವಕ್ಕೆ ಮಾರುಹೋದ ಕೆಲವರು ‘ಇದ್ದರೆ ಆ ಸರ್ ತರಹ ಇರಬೇಕು. ಅವರಿಗೆಷ್ಟು ನಯ, ವಿನಯ, ಗೌರವ!’ ಎನ್ನುತ್ತಲೇ ದಿನಕ್ಕೊಂದು ಸಲ ಅವರ ದರ್ಶನಕ್ಕಾಗಿ ಹಂಬಲಿಸುತ್ತಾರೆ.

ಸಾಧ್ಯವಾದರೆ ಸಮಯ ಮಾಡಿಕೊಂಡು ಅವರ ಛೇಂಬರ್ ಕಡೆಗೆ ಹೋಗಿ ‘ನಮಸ್ಕಾರ ಸರ್!’ ಎಂದು ಗೌರವ ಸಲ್ಲಿಸುತ್ತಾರೆ. ಜೊತೆಗೆ ನಿರೀಕ್ಷಿಸಿದಂತೆ ಪ್ರತಿಗೌರವವನ್ನು ಪಡೆದು ಪ್ರಪುಲ್ಲಚಿತ್ತರಾಗಿ ಹಸನ್ಮುಖರಾಗುತ್ತಾರೆ. ಆಗ ಆನಂದಬಾಷ್ಪ ಕಣ್ಣಂಚಲ್ಲಿ ಒಡಮೂಡುತ್ತದೆ. ಆಗ ಅವರ ಮನದ ತೋಟದಲ್ಲಿ ಹೂವೊಂದು ಅರಳಿ ಸುವಾಸನೆ ದೊರಕಿದಂಥ ಅನುಭವ ಮನಸ್ಸಿಗಾಗುತ್ತದೆ.

ಆದರೆ ಇದೇ ವಿಭಾಗದಲ್ಲಿ ಎಂ.ಎ. ಪದವಿಯ ಜೊತೆಗೆ ಎಂ.ಫಿಲ್., ಪಿಎಚ್‌.ಡಿ. ಪದವಿ ಮಾಡಿಕೊಂಡಿರುವ ಅಧ್ಯಾಪಕರೊಬ್ಬರಿದ್ದಾರೆ. ಅವರು ಬೇರೊಂದು ಕಾಲೇಜಿನಿಂದ ಇಲ್ಲಿನ ಕಾಲೇಜಿಗೆ ವರ್ಗವಾಗಿ ಬಂದಿದ್ದಾರೆ. ಆದರೆ ಅವರಿಗೆ ವಿದ್ಯೆ, ಬುದ್ಧಿಯ ಜೊತೆಗೆ ಕಾಮನ್ ಸೆನ್ಸ್ ಕೂಡ ಅನ್ನುವುದು ಇಲ್ಲವಲ್ಲ! ಎಂಬುದೇ ಅಲ್ಲಿನ ಇತರೆ ಬೋಧಕವರ್ಗಕ್ಕೆ ಬಂದಿರುವ ತಲೆನೋವು. ಪ್ರಾರಂಭದಲ್ಲಿ ಎಲ್ಲರನ್ನು ಗೌರವ ಸಂಬೋಧನೆಯಿಂದಲೇ ಕರೆದು ಮೆಚ್ಚುಗೆಗೆ ಪಾತ್ರರಾಗಿದ್ದ ಇವರು ಈಗ ಒಬ್ಬೊಬ್ಬರನ್ನೆ ಸರದಿ ಎಂಬಂತೆ ‘ಬಾರೋ’, ‘ಹೋಗೋ!’ ಎಂಬ ಒಕ್ಕಣೆಯಿಂದ ಕರೆಯಲು ಪ್ರಾರಂಭಿಸಿದ್ದಾರೆ.

ಮೊನ್ನೆ ಒಂದು ದಿನ ಹೀಗೆ ಆಯಿತು. ಓರ್ವ ಮೇಡಂ ಅವರನ್ನು ಪಕ್ಕದ ಛೇಂಬರಿನಿಂದ ಹೆಸರಿಡಿದು ಏಕವಚನದಲ್ಲಿ ‘ಇಲ್ಲಿ ಸ್ವಲ್ಪ ಬಾ!’ ಎಂದು ಅಧಿಕಾರದ ಧ್ವನಿಯಿಂದ ಕೂಗಿ ಕರೆದಿದ್ದಾರೆ. ಅಷ್ಟರಲ್ಲೇ ಮೇಡಂ ಅವರ ಯಜಮಾನರು ಏನೋ ತುರ್ತುಕಾರ್ಯದ ನಿಮಿತ್ತ ತನ್ನ ಹೆಂಡತಿಯನ್ನು ಮಾತನಾಡಿಸಲು ಆ ಆಫೀಸಿಗೆ ಬಂದಿದ್ದಾರೆ. ಆಗ ಈ ಅಧ್ಯಾಪಕರು ಸದರದಿಂದ ತಮ್ಮ ಶ್ರೀಮತಿಯನ್ನು ಕರೆಯುತ್ತಿರುವ ಪರಿ ಕಂಡು ಬೇಸರಗೊಂಡಿದ್ದಾರೆ. ಹೀಗಾಗಿ ‘ಏನ್ರೀ ಸರ್, ಮೇಡಂ ಅವರನ್ನು ಹಾಗೆ ಕರೆಯುತ್ತಿದ್ದಿರಲ್ಲ! ಅವರೊಬ್ಬಳು ಮಹಿಳೆ ಎಂಬ ಗೌರವನೂ ಬೇಡ್ವಾ?’ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭ ಸಂಭಾವಿತರಂತೆ ತೋರಿಸಿಕೊಳ್ಳುತ್ತಿದ್ದ ಅಧ್ಯಾಪಕರಿಗೆ ತನ್ನನ್ನು ಹೀಗೆ ಏಕಾಏಕಿ ತರಾಟೆಗೆ ತೆಗದುಕೊಳ್ಳುತ್ತಿರುವ ವ್ಯಕ್ತಿ ಮೇಡಂ ಅವರ ಪತಿರಾಯ ಎಂಬ ಅರಿವಿಗೆ ಬಾರದೆ, ‘ನಾನು ಅವಳನ್ನು ಹೇಗಾದರೂ ಕರೆಯುತ್ತೇನೆ. ಕೇಳೋದಕ್ಕೆ ನೀನು ಯಾರು?’ ಎಂಬುದಾಗಿ ಬಾಯಿಗೆ ಬಂದಹಾಗೆ ಕೂಗಾಡಿದ್ದಾರೆ. ಇದರಿಂದ ಮತ್ತಷ್ಟೂ ಕುಪಿತರಾದ ಮೇಡಂ ಅವರ ಗಂಡ ಆ ಅಧ್ಯಾಪಕರ ಕಾಲರ್‌ಪಟ್ಟಿ ಹಿಡಿದು ಜಗ್ಗಿದ್ದಾರೆ. 

‘ಅವಳು ನನ್ನ ಹೆಂಡತಿ’ ಎಂದು ಕೂಗಾಡಿ ಕೆರಳಿ ಅಧ್ಯಾಪಕರನ್ನು ಬೈಯ್ದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತನೆ ತೋರಬೇಕೆಂದು ಇನ್ನೂ ಕಲಿತುಕೊಳ್ಳಬೇಕಾದ ಅಧ್ಯಾಪಕರ ಮುಖ ಇಂಗು ತಿಂದ ಮಂಗನಂತೆ ಬಸವಳಿದು ತಳಮಳಿಸುತ್ತಿರುವಾಗ ಅವರ ಪದವಿ–ಅಧಿಕಾರವೆಲ್ಲ ಗೌಣವಾಗಿ ಗೌರವ ಕಳೆದುಕೊಂಡು ತಲೆಬಾಗಿ ನರಳಿದೆ.

ಇಂತಹ ಘಟನೆಗಳು ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತವೆ. ಆದರೆ ಪರಿಸ್ಥಿತಿ ನಮ್ಮನ್ನು ಆ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಮಾರ್ಗ ತೋರಿಸದೆ ಸತಾಯಿಸಿಬಿಟ್ಟಿರುತ್ತದೆ. ಆಗ ನಾವು ಧರ್ಮಸಂಕಟದ ಪರಿಸ್ಥಿತಿಗೆ ಸಿಕ್ಕಿ ಯಾತನೆಯನ್ನು ಅನುಭವಿಸಿರುತ್ತೇವೆ. ನನ್ನೊಂದಿಗೆ ಕೆಲಸಕ್ಕೆ ಸೇರಿದ್ದ ಉಪನ್ಯಾಸಕರೊಬ್ಬರು ವಯಸ್ಸಿನ ಲೆಕ್ಕಾಚಾರದಲ್ಲಿ ನನಗಿಂತಲೂ ಒಂದೆರಡು ವರ್ಷಗಳಿಗೆ ದೊಡ್ಡವರು. ಪ್ರಾರಂಭದಲ್ಲಿ ಅಪರಿಚಿತರಾಗಿದ್ದ ನಾವುಗಳು ವೃತ್ತಿನಿರ್ವಹಣೆಯೊಂದಿಗೆ ಆಪ್ತರಾದೆವು.

ಅವರು ಪ್ರಾರಂಭದ ಪರಿಚಯದಿಂದ ಈಗಿನ ಗೆಳೆತನದವರೆಗೂ ‘ಬನ್ನಿ, ಹೋಗಿ!’ ಎಂಬ ಗೌರವದ ಭಾಷೆಯನ್ನೆ ಬಳಸುತ್ತಿದ್ದರು. ಆದರೆ ಒಂದು ದಿನ ಎಲ್ಲ ಅಧ್ಯಾಪಕರ ಎದುರಿನಲ್ಲೇ ಏಕ್‌ದಂ ‘ಬಾರೋ, ಹೋಗೋ!’ ಎಂಬುದಾಗಿ ಕರೆದು ತಾವು ದೊಡ್ಡವರು ಎಂಬುದನ್ನು ತಮ್ಮ ಹಾವಭಾವದಲ್ಲೇ ಅಭಿವ್ಯಕ್ತಿಸಿ ಮೀಸೆಯಡಿ ತಣ್ಣಗೆ ನಗಾಡಿದರು. ನನಗೆ ಆ ಸಂದರ್ಭದಲ್ಲಿ ಆ ಕಹಿಕ್ಷಣವನ್ನು ಹೇಗೆ ನಿಭಾಯಿಸಬೇಕೆಂಬುದೇ ತೋಚಲಿಲ್ಲ. ತದನಂತರದ ದಿನಗಳಲ್ಲಿ ಅವರ ಅಂತರಂಗದ ‘ಹೋಗೋ, ಬಾರೋ’ ಮಾತು ಖಾಯಂ ಆಗಿಬಿಟ್ಟಿತು.

ಒಂದುದಿನ ನಾನು, ಗೆಳೆತನದ ಆಪ್ತತೆಯಿಂದ ಅವರು ನನ್ನನ್ನು ಹಾಗೇ ಕರೆಯುತ್ತಿರಬಹುದೆಂದುಕೊಂಡು ‘ನಿಮ್ಮನ್ನು ಏಕವಚನದಲ್ಲೇ ಕರೆಯಬಹುದೇ?’ ಎಂದು ಪ್ರೀತಿಯಿಂದ ಮುಖವನ್ನು ಅರಳಿಸಿ ಕೇಳಿದೆ. ಅದಕ್ಕವರು ‘ನೀನು ನನಗಿಂತಲೂ ಸಣ್ಣವನು. ನೀನು ಹೇಗೆ, ಹಾಗೆ ಕರೆಯಲು ಸಾಧ್ಯ ಹೇಳು?’ಎಂದು ಮುಖ ಸೊಟ್ಟಮಾಡಿಕೊಂಡರು.

ಅಂದಿನಿಂದ ಮಾತೇ ಬಿಟ್ಟು ಸಿಟ್ಟಾದರು. ಹೀಗೆ ಅವರಿಗಾದರೆ ಭಾವನಾತ್ಮಕವಾಗಿ ನೋವು ಕಾಡುತ್ತದೆ. ಆದರೆ ಅವರು ನಮ್ಮನ್ನು ಹೇಗೆ ಬೇಕಾದರೂ ಬೇಕಾಬಿಟ್ಟಿ ಉದ್ದೇಶಪೂರ್ವಕವಾಗಿ ಹೀಯಾಳಿಸಬಹುದಾ? ಎಂಬ ಸಣ್ಣದೊಂದು ವ್ಯಥೆ ಎದೆಯೊಳಗೆ ಹಾಗೆ ಸುಳಿದಾಡುತ್ತಿರುತ್ತದೆ.

ನಮ್ಮೂರಿಗೆ ಹೊಸದಾಗಿ ವೃತ್ತಿ ಅರಸಿ ಬಂದಿದ್ದ ವೈದ್ಯರೊಬ್ಬರು ತಮಗಿಂತಲೂ ವಯಸ್ಸು ಹಾಗೂ ವೃತ್ತಿಯಲ್ಲಿ ಕಿರಿಯರಾಗಿದ್ದ ಅಟೆಂಡರವರನ್ನು ‘ಬನ್ನಿ, ಹೋಗಿ!’ ಎಂದೇ ಸಂಬೋಧಿಸುತ್ತಿದ್ದರು. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಏಕವಚನ ಬಳಸಿ ಕರೆದರೂ ’ಅವರೇನೂ ನಿಮ್ಮ ಹತ್ತಿರದ ನೆಂಟನೇ? ಅಥವಾ ಬಾಲ್ಯದ ಗೆಳೆಯನೇ? ನೆಟ್ಟಗೆ ಕರೆಯಿರಿ!’ ಎಂದು ತಿಳಿ ಹೇಳುತ್ತಿದ್ದರು. ಆಹಾ! ಎಂತಹ ಚೆಂದದ ವ್ಯಕ್ತಿತ್ವವಲ್ಲವೆ ಇದು!

ವರ್ತನೆ ಹೀಗಿರಲಿ
*ಜೀವನದಲ್ಲಿ ಪ್ರತಿ ವ್ಯಕ್ತಿಯನ್ನೂ ಗೌರವಿಸಿ. ಆಗ ಗೌರವ ಎನ್ನುವುದು ತಾನಾಗೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
*ಮಾತಿನಲ್ಲಿ ವಿನಯತೆ ಇರಬೇಕು. ನಡೆ – ನುಡಿಗಳು  ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ.
*ನಮಗಿಂತ ವಯಸ್ಸಿನಲ್ಲಿ ಕಿರಿಯವರಾದರೂ ಹೋಗಿ, ಬನ್ನಿ ಎಂದು ಮಾತನಾಡಿಸಿ. ಇದರಿಂದ ಕಿರಿಯರಿಗೆ ನಿಮ್ಮ ಮೇಲೆ ಇನ್ನಷ್ಟು ಗೌರವ ಹೆಚ್ಚುತ್ತದೆ.
*ಮಹಿಳೆಯರನ್ನು ಗೌರವಿಸಲು ಕಲಿಯಿರಿ.
*ಇನ್ನೊಬ್ಬರ ವಿಷಯದಲ್ಲಿ ತಲೆ ಹಾಕುವುದು ನಿಲ್ಲಿಸಿ. ನಿಮಗೆ ಸಂಬಂಧ ಪಡದ ವ್ಯಕ್ತಿಗಳ ವಿಷಯದಲ್ಲಿ ತಲೆ ಹಾಕುವುದು ನಿಲ್ಲಿಸಿ.
*ಇನ್ನೊಬ್ಬರ ಬಗ್ಗೆ ಕುಹಕದ ಮಾತುಗಳನ್ನಾಡದಿರಿ. ಅದು ನಿಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.
*ಯಾವುದೇ ವ್ಯಕ್ತಿಯ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಮಾತನಾಡುವುದಕ್ಕಿಂತ ಎದುರಿಗೆ ‘ನಿಮ್ಮ ಈ ವರ್ತನೆ ಸರಿಯಿಲ್ಲ’ ಎಂದು ಹೇಳಿ. ಆ ಕ್ಷಣದಲ್ಲಿ ಅವರಿಗೆ ಬೇಸರವಾದರೂ, ಅದನ್ನು ತಿದ್ದಿಕೊಳ್ಳಲು ಪ್ರಯ್ನತಿಸುತ್ತಾರೆ.
*ಬೇರೆಯವರ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡಬೇಡಿ; ಗಾಳಿಸುದ್ದಿಗಳನ್ನು ಹಬ್ಬಿಸಬೇಡಿ.
*ಜನ ನಿಮ್ಮ ಬಗ್ಗೆ ಆಡಿಕೊಳ್ಳದಂತೆ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ.
*ಇನ್ನೊಬ್ಬರ ಸೋಲನ್ನು ನೋಡಿ ಹೀಯಾಳಿಸಬೇಡಿ, ಗೆಲುವು ಎಂದಿಗೂ ಶಾಶ್ವತವಲ್ಲ. ನಾಳೆ ಸೋಲು ನಿಮ್ಮದಾಗಬಹುದು.
*ಇಳಿ ವಯಸ್ಸಿನವರ ಅವರ ಮೇಲೆ ಗೌರವ – ಕಾಳಜಿ, –ಪ್ರೀತಿಗಳನ್ನು ತೋರಿಸಿ. ನಾಳೆ ನಾವು ಕೂಡ ಅವರಂತಾಗುತ್ತೇವೆ.
*ಗೌರವ ಕೊಡುವುದು ನಮ್ಮ ಪ್ರಾಮಾಣಿಕ ಸ್ವಭಾವ ಆಗಬೇಕೇ ಹೊರತು ಅದು ತೋರಿಕೆಯ ಕಪಟವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT