ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಸಾಕಣೆ; ನಂದನಾ ನೆರವು

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೊಟ್ಟೆ ಉತ್ಪಾದನೆಯಲ್ಲಿ ವಿಶ್ವದ 3ನೇ ಅತಿದೊಡ್ಡ ಮತ್ತು ಬ್ರಾಯ್ಲರ್ ಕೋಳಿ  ಉತ್ಪಾದನೆಯಲ್ಲಿ 4ನೆ ಅತಿದೊಡ್ಡ ದೇಶವಾಗಿರುವ ಭಾರತದಲ್ಲಿ, ಕೋಳಿ ಸಾಕಣೆಗೆ ಕುಶಲ ಮಾನವ ಸಂಪನ್ಮೂಲದ ತೀವ್ರ ಕೊರತೆ ಇದೆ. ಅಸಂಘಟಿತ ಮತ್ತು ಸಂಘಟಿತ ಸ್ವರೂಪದಲ್ಲಿ ಕೋಳಿಗಳ ಸಾಕಾಣಿಕೆ, ಜೊತೆಗೆ ಮೊಟ್ಟೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದರೂ ಈ ಉದ್ದಿಮೆಯಲ್ಲಿ ದುಡಿಯುವ ವರ್ಗದ ಕೌಶಲ್ಯ ಹೆಚ್ಚಿಸುವ ವ್ಯವಸ್ಥಿತ ಪ್ರಯತ್ನ ತುಂಬ ಕಡಿಮೆ ಮಟ್ಟದಲ್ಲಿ ಇದೆ.

ಅಂತಹ ಕೊರತೆಯನ್ನು ಸಮರ್ಥವಾಗಿ ತುಂಬಿಕೊಡುವ ನಿಟ್ಟಿನಲ್ಲಿ ‘ನಂದನಾ ಸಂಶೋಧನೆ ಮತ್ತು ತರಬೇತಿ ಸಂಸ್ಥೆ’ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಬೆಂಗಳೂರು – ಹಾಸನ ಹೆದ್ದಾರಿಯಲ್ಲಿ ಕುಣಿಗಲ್ ತಾಲ್ಲೂಕಿನ ಸಿದ್ದಾಪುರದ   ಐದು ಎಕರೆ ಭೂಮಿಯಲ್ಲಿ ಈ ಸುಸಜ್ಜಿತ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಕೋಳಿ ಸಾಕಣೆ ಉದ್ಯಮ ವರ್ಷ ವರ್ಷವೂ ಬೆಳೆಯುತ್ತಲೇ ಇದೆ. ಇದಕ್ಕೆ ಪೂರಕವಾಗಿ, ವೈಜ್ಞಾನಿಕ ಮಾಹಿತಿ ಕರಗತ ಮಾಡಿಕೊಂಡಿರುವ ಕೌಶಲ ಹೊಂದಿರುವ ವೃತ್ತಿಪರರ ಅವಶ್ಯಕತೆ ಇದೆ. ಉದ್ದಿಮೆಯಲ್ಲಿಯೂ ಅವರಿಗೆ ಸಾಕಷ್ಟು ಬೇಡಿಕೆಯೂ ಹೆಚ್ಚುತ್ತಿದೆ.  ಉದ್ಯೋಗಾವಕಾಶ ಕೊರತೆಯಿಂದಾಗಿ ಜನ ಬೇರೆಡೆಗೆ ಗುಳೆ ಹೋಗುವ ಸ್ಥಿತಿ  ಇರುವಾಗ  ವೃತ್ತಿಪರ ತರಬೇತಿಯು ಜೀವನ ನಿರ್ವಹಣೆಗೆ ಉತ್ತಮ ಮಾರ್ಗ ಕಲ್ಪಿಸಿಕೊಡಲಿದೆ.

ಸ್ವಂತ ಭೂಮಿ ಇದ್ದವರು ಅಥವಾ ಭೂಮಿ ಗುತ್ತಿಗೆ ಪಡೆದುಕೊಂಡವರು ಕೋಳಿ ಸಾಕಣೆ ನಡೆಸಲು ಅಗತ್ಯವಾದ ತರಬೇತಿಯನ್ನು ಇಲ್ಲಿ ಪಡೆದುಕೊಳ್ಳಬಹುದು. ಪ್ರಾಣಿಗಳ ಆಹಾರ ಮತ್ತು ಔಷಧ ತಯಾರಿಕಾ ಸಂಸ್ಥೆ ವರ್ಷಾ ಗ್ರೂಪ್ ತನ್ನ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ (ಸಿಎಸ್‌ಆರ್‌) ಅಂಗವಾಗಿ ಈ ಸಂಸ್ಥೆ ಸ್ಥಾಪಿಸಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್‌. ಕೆ. ನಂಜಯ್ಯ ಅವರ ಕನಸಿನ ಕೂಸು ಇದು.  ಇದನ್ನು ದೇಶದಲ್ಲಿಯೇ ಅತಿ ದೊಡ್ಡ ಸಂಸ್ಥೆಯನ್ನಾಗಿ ಬೆಳೆಸುವ ಮಹದಾಸೆ ಇವರಿಗೆ ಇದೆ.

‘ವರ್ಷಾ ಸಮೂಹವು ತರಬೇತಿ ಉದ್ದೇಶಕ್ಕೆ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಕನಿಷ್ಠ ಶುಲ್ಕ ವಿಧಿಸಿ, ಸಮಗ್ರ ತರಬೇತಿ ನೀಡಿ ಉದ್ಯೋಗಾವಕಾಶಕ್ಕೆ ಹಾಗೂ ಸ್ವಾವಲಂಬನೆಯ ದಾರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ. ಸ್ವಯಂ ಉದ್ಯೋಗ ನಡೆಸಲು ಇಚ್ಛಿಸುವವರು ಇದರ ಪ್ರಯೋಜನ ಪಡೆದುಕೊಂಡರೆ ನಮ್ಮ ಪ್ರಯತ್ನ ಸಾರ್ಥಕವಾಗಲಿದೆ’ ಎಂದು ನಂಜಯ್ಯ ಅವರು ಹೇಳುತ್ತಾರೆ.

ಕೋಳಿ ಸಾಕಣೆಗೆ ಸಂಬಂಧಿಸಿದಂತೆ  ಶಿಕ್ಷಣ ನೀಡಿ ಅವರ ಕೌಶಲ ಹೆಚ್ಚಿಸಲು ಇಲ್ಲಿನ ತರಬೇತಿ ನೆರವಾಗಲಿದೆ. 21 ದಿನಗಳವರೆಗೆ ನಡೆಯುವ ತರಬೇತಿ ಅವಧಿಯಲ್ಲಿ  ಶಿಕ್ಷಣಾರ್ಥಿಗಳಿಗೆ ಊಟ, ವಸತಿಯ ಸೌಕರ್ಯ ಇದೆ.

 ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದರೂ ಅವರಿಗೆ ಪ್ರತ್ಯೇಕವಾಗಿಯೇ ತರಬೇತಿ ನೀಡಲಾಗುವುದು. ಒಂದು ಬಾರಿಗೆ ಕನಿಷ್ಠ 5   ಗರಿಷ್ಠ  25 ಜನರಿಗೆ ಇಲ್ಲಿ ತರಬೇತಿಗೆ ಅವಕಾಶ ಇದೆ.  ಹೀಗಾಗಿ ಪ್ರತಿಯೊಬ್ಬರ ಕೌಶಲ ವೃದ್ಧಿಗೆ ಗಮನ ನೀಡಲು ಸಾಧ್ಯವಾಗಲಿದೆ.

ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ಜತೆ ಜತೆಯಲ್ಲಿಯೇ ಇರುವುದು ಇಲ್ಲಿನ ವಿಶೇಷತೆಯಾಗಿದೆ. ಕಂಪ್ಯೂಟರ್, ಧ್ವನಿ ಮತ್ತು ದೃಶ್ಯ ಮಾಧ್ಯಮದ ಬೋಧನೆಯು ಕಲಿಕಾರ್ಥಿಗಳು ವಿಷಯವನ್ನು ಸಮರ್ಪಕವಾಗಿ ಗ್ರಹಿಸಲು ನೆರವಾಗಲಿದೆ. ಸುಸಜ್ಜಿತ ಗ್ರಂಥಾಲಯವೂ ಇಲ್ಲಿದೆ.

ವರ್ಷಾ ಗ್ರೂಪ್‌ನ ಮಾರುಕಟ್ಟೆ ವಿಭಾಗದ ಜನರಲ್‌ ಮ್ಯಾನೇಜರ್‌ ಡಾ. ಬಿ. ಪಿ. ಮಂಜುನಾಥ ಅವರು ಈ ಕೇಂದ್ರದ ನಿರ್ದೇಶಕರಾಗಿದ್ದಾರೆ, ಅವರ ಸಮರ್ಥ ನಿರ್ದೇಶನದಲ್ಲಿ ಈ ತರಬೇತಿ ಕೇಂದ್ರವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ತರಬೇತಿ ಕೇಂದ್ರದಲ್ಲಿಯೇ ನೆಲೆಸಿರುವ ಡಾ. ವಿನಾಯಕ ವಿಲಾಸ್‌ ಆಠವಲೆ ಅವರು ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ತರಬೇತಿ ನೀಡುತ್ತಾರೆ.

‘ಇಲ್ಲಿ  ಪಠ್ಯಕ್ರಮದ ಬೋಧನೆ ಜತೆಗೆ ಪ್ರಾಯೋಗಿಕ ಅನುಭವಕ್ಕಾಗಿ ಕೋಳಿ   ಫಾರಂ ಇದೆ. ಅಭ್ಯರ್ಥಿಗಳು ಕೋಳಿ ಸಾಕಣೆ, ಅವುಗಳ ಆಹಾರ, ರೋಗರುಜಿನ, ನಿವಾರಣೆಯ ಕ್ರಮಗಳು ಇತ್ಯಾದಿ ಕುರಿತು ನೇರ ಅನುಭವ ಪಡೆಯಲು ಅವಕಾಶವಿದೆ’ ಎಂದು ಡಾ. ಮಂಜುನಾಥ ಹೇಳುತ್ತಾರೆ.
‘ಕೃಷಿ ಚಟುವಟಿಕೆಯ ಜತೆಯಲ್ಲಿ ವೈಜ್ಞಾನಿಕವಾಗಿ ಕೋಳಿ ಸಾಕಣೆ   ನಡೆಸಿ ಆದಾಯ ವೃದ್ಧಿಸಿಕೊಳ್ಳಲು ಬಯಸುವವರು ಇಲ್ಲಿ ತರಬೇತಿ ಪಡೆದು ಯಶಸ್ವಿ ಉದ್ಯಮಿಯಾಗಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಕೋಳಿ ಸಾಕಣೆ ಉದ್ದಿಮೆಯ ಪಿತಾಮಹ ಬಿ. ವಿ. ರಾವ್‌ ಅವರು ಪುಣೆಯಲ್ಲಿ ಸ್ಥಾಪಿಸಿರುವ ತರಬೇತಿ ಕೇಂದ್ರ ಹೊರತುಪಡಿಸಿದರೆ ಖಾಸಗಿ ವಲಯದಲ್ಲಿ ಇಂತಹ ಪ್ರಯತ್ನ ನಡೆದಿರುವುದು ದೇಶದಲ್ಲಿಯೇ ಇದು ಮೂರನೆಯದು. ಬೋಧನೆ, ಪ್ರಾಯೋಗಿಕ ತರಬೇತಿಯು ವೇಳಾಪಟ್ಟಿ ಪ್ರಕಾರವೇ ಇಲ್ಲಿ ನಡೆಯುತ್ತದೆ.  ಕೇಂದ್ರದ ಫಾರಂನಲ್ಲಿ ಕೋಳಿ ಮರಿಗಳನ್ನು ಸಾಕುವುದರ ಜತೆ ಜತೆಯಲ್ಲಿಯೇ ತರಬೇತಿ ಸಂಘಟಿಸಿಕೊಂಡು ಬರಲಾಗುತ್ತಿದೆ.

ಸುಗುಣ ಸಂಸ್ಥೆಯು ಕೊಯಿಮತ್ತೂರಿನಲ್ಲಿ ತನ್ನ ಉದ್ಯಮದ ಅನುಕೂಲಕ್ಕೆ ಇಂತಹ ತರಬೇತಿ ಕೇಂದ್ರ ಹೊಂದಿದೆ. ಆದರೆ, ನಮ್ಮಲ್ಲಿ ತರಬೇತಿ ಜತೆ ಸಂಶೋಧನೆಯೂ ನಡೆಯುತ್ತದೆ. ಚೀನಾದಲ್ಲಿ ನಡೆದ ವಿಶ್ವ ಕೋಳಿ ಸಾಕಾಣಿಕೆ ಸಮಾವೇಶದಲ್ಲಿ ನಾನು ಮಂಡಿಸಿದ ಎರಡು ಪ್ರಬಂಧಗಳಿಗೆ ಮನ್ನಣೆ ಸಿಕ್ಕಿದೆ’ ಎಂದು ಡಾ. ಮಂಜುನಾಥ್‌ ಅವರು ಹೆಮ್ಮೆಯಿಂದ ಹೇಳುತ್ತಾರೆ.

ಸ್ವಯಂ ಸೇವಾ ಸಂಸ್ಥೆಗಳಿಂದ ಬರುವ ಕಲಿಕಾರ್ಥಿಗಳಿಗೂ  ಇಲ್ಲಿ   ತರಬೇತಿ ನೀಡಲಾಗುವುದು. ಕೋಳಿ ಉದ್ಯಮದವರೂ ತಮ್ಮ ಸಿಬ್ಬಂದಿಗೆ ತರಬೇತಿ ನೀಡಲು ಇಲ್ಲಿಗೆ ಕಳಿಸಿಕೊಡುತ್ತಾರೆ. 5 ವರ್ಷಗಳಿಂದ ಇದು ಕಾರ್ಯನಿರ್ವಹಿಸುತ್ತಿದೆ. 

ಕೋಳಿ ಸಾಕಾಣಿಕೆ ಉದ್ದಿಮೆಯ ವಿವಿಧ ಹಂತದ ಹುದ್ದೆಗಳ ತರಬೇತಿ ವಿಷಯದಲ್ಲಿ ಪಠ್ಯಕ್ರಮವೇ ಇದ್ದಿರಲಿಲ್ಲ. ಅಂತಹ ಪ್ರಮುಖ ಕೊರತೆಯನ್ನು ಡಾ. ಮಂಜುನಾಥ್‌ ಅವರು ದೂರ ಮಾಡಿದ್ದಾರೆ. ತಮ್ಮೆಲ್ಲ ಅನುಭವ ಬಳಸಿ ಪಠ್ಯಕ್ರಮ ರಚಿಸಿದ್ದಾರೆ. ಇದಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅನುಮೋದನೆ ನೀಡಿದೆ.

ವೈಜ್ಞಾನಿಕ ರೀತಿಯಲ್ಲಿ  ಕೋಳಿ ಸಾಕಾಣಿಕೆ ಕೈಗೊಳ್ಳಲು ತರಬೇತಿ ನೀಡಿ ಆರ್ಥಿಕವಾಗಿ ಸಶಕ್ತರನ್ನಾಗಿಸುವುದು ಈ ಕೇಂದ್ರದ ಉದ್ದೇಶವಾಗಿದೆ.
ಸುಸಜ್ಜಿತ ಕಾಲೇಜ್‌ ರೀತಿಯಲ್ಲಿ ಈ ತರಬೇತಿ ನಡೆಸಿ ಪ್ರಮಾಣ ಪತ್ರ ನೀಡಲಾಗುವುದು. ಇದು ಸ್ವಯಂ ಉದ್ಯೋಗ ಆರಂಭಿಸಲು, ಬ್ಯಾಂಕ್‌ ಸಾಲ ಪಡೆಯಲು ನೆರವಾಗಲಿದೆ.

‘ಕೋಳಿ ಸಾಕಾಣಿಕೆಯು ಲಾಭದಾಯಕ ದೊಡ್ಡ ಉದ್ದಿಮೆಯಾಗಿದೆ. ಕೋಳಿ ಮರಿ, ಮಾಂಸದ ಕೋಳಿ, ಮೊಟ್ಟೆ ಕೋಳಿ ಹೀಗೆ ಮೂರು ಬಗೆಯಲ್ಲಿ ಉದ್ದಿಮೆ ಆರಂಭಿಸಬಹುದು. ಮಾಂಸದ ಕೋಳಿ ಸಾಕಣೆಯಲ್ಲಿ  40 ದಿನಗಳಲ್ಲಿ ₹ 1 ಲಕ್ಷದವರೆಗೆ ಲಾಭ ಬರಲಿದೆ. ರೈತರು  ಬೆಳೆಯುವ ಫಸಲಿನಂತೆ ಇಲ್ಲಿಯೂ ಬೆಲೆ ಏರುಪೇರು ಇರುವುದನ್ನು ಮರೆಯಬಾರದು’ ಎಂದೂ ಮಂಜುನಾಥ್‌ ಅವರು ಕಿವಿಮಾತು ಹೇಳುತ್ತಾರೆ.

ಇದೊಂದು ಪರಿಪೂರ್ಣ ಮತ್ತು ಸಮಗ್ರ ತರಬೇತಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಮಾಹಿತಿಗೆ 080–2330 5425 / 98456 12198 ಸಂಪರ್ಕಿಸಿ. ಅರ್ಜಿ ನಮೂನೆಗಳನ್ನು www.varshagroup.com ನಿಂದ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT