ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹವ್ಯಾಸ ಪಾಲನೆಗೆ ನೆರವಾಗುವ ಆ್ಯಪ್‌ಗಳು

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹೊಸ ವರ್ಷದ ಆರಂಭದಲ್ಲಿ ಎಲ್ಲರೂ ಹಲವು ಗುರಿ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಒಂದೆರಡು ತಿಂಗಳು ಕಳೆಯುವುದರೊಳಗೆ ಗುರಿ ಈಡೇರಿಸುವ ಆಸಕ್ತಿ ಕಳೆದುಕೊಂಡು ಕೈಚೆಲ್ಲಿ ಕುಳಿತುಕೊಳ್ಳುವವರ ಸಂಖ್ಯೆಯೇ ಹೆಚ್ಚು. ಯಾವುದಕ್ಕೂ ಸಮಯ ಸಿಗುತ್ತಿಲ್ಲ ಎಂಬ ಕಾರಣ ನೀಡುತ್ತಾರೆ. ಸ್ಮಾರ್ಟ್‌ಫೋನ್‌ ಜತೆ ಅಧಿಕ ಸಮಯ ವ್ಯಯಿಸುವುದರಿಂದ ಇತರ ಅಗತ್ಯ ಕೆಲಸಗಳೆಡೆಗೆ ಗಮನ ಕೇಂದ್ರೀಕರಿಸಲು ಹಲವರಿಗೆ ಆಗುತ್ತಿಲ್ಲ. ಅಂತಹ ಮಂದಿಗೆ ನೆರವಾಗಲು ‘ಫಾರೆಸ್ಟ್’ ಆ್ಯಪ್ ಇದೆ.

ವಾಟ್ಸ್ಆ್ಯಪ್,  ಫೇಸ್‌ಬುಕ್‌ ಸಂದೇಶ ಆಥವಾ ಇ–ಮೇಲ್‌ ನೋಡಲು ಆಗಿಂದಾಗ್ಗೆ ಮೊಬೈಲ್ ಮೇಲೆ ಕಣ್ಣಾಡಿಸುವುದು ಸಹಜ. ಆದರೆ  ನೀವು ಪದೇ ಪದೇ ಮೊಬೈಲ್ ನೋಡುವುದನ್ನು ಈ ಆ್ಯಪ್‌ ತಡೆಯುತ್ತದೆ.

ಆ್ಯಪ್‌ ತೆರೆದೊಡನೆ ಗಿಡ ನೆಡುವಂತೆ ನಿಮಗೆ ಸೂಚನೆ ದೊರೆಯುತ್ತದೆ. ಮೊಬೈಲ್‌ ಪರದೆ ಮೇಲೆ ಕ್ಲಿಕ್‌ ಮಾಡಿ ನೀವು ಗಿಡ ನೆಡಬೇಕು. ಆ ಬಳಿಕ ನಿರ್ದಿಷ್ಟ ಸಮಯವನ್ನು (30 ನಿಮಿಷ ಆಥವಾ ಒಂದು ಗಂಟೆ) ಸೂಚಿಸಬೇಕು. ನೀವು ಸೂಚಿಸಿದ ಸಮಯ ಪೂರ್ಣಗೊಳ್ಳುವವರೆಗೆ ಮೊಬೈಲ್ ಬಳಸಲೇಬಾರದು.  ಗಿಡ ನೆಟ್ಟೊಡನೆ ‘ಮೊಬೈಲ್ ಕೆಳಗಿಟ್ಟು ನಿನ್ನ ಕೆಲಸದತ್ತ ಹೋಗು' ಎಂಬ ಸಂದೇಶ ಪರದೆಯಲ್ಲಿ ಮೂಡುತ್ತದೆ.

ನೀವು ಸೂಚಿಸಿದಷ್ಟು ಅವಧಿಯವರೆಗೆ ಮೊಬೈಲ್‌ ಬಳಸದೇ ಇದ್ದರೆ ಆ ಗಿಡ ಮರವಾಗಿ ಬೆಳೆಯುತ್ತದೆ. ನಿಮಗೆ ಪಾಯಿಂಟ್ ಕೂಡಾ ದೊರೆಯುತ್ತದೆ. ಆದರೆ ನಿರ್ದಿಷ್ಟ ಅವಧಿ ಕೊನೆಗೊಳ್ಳುವ ಮುನ್ನ ಮೊಬೈಲ್‌ ಬಳಕೆ ಮಾಡಿದರೆ ಗಿಡ ಮುರುಟಿ ಹೋಗುತ್ತದೆ.

ಹೆಚ್ಚು ಸಮಯ ಮೊಬೈಲ್‌ನಿಂದ ದೂರವಿದ್ದರೆ ನಿಮ್ಮ ಇತರ ಕೆಲಸಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವುದರಲ್ಲಿ ಅನುಮಾನವಿಲ್ಲ. ಇತರ ಹಲವು ಆಕರ್ಷಕ ಫೀಚರ್‌ಗಳೂ ಈ ಆ್ಯಪ್‌ನಲ್ಲಿದೆ.

ಸ್ಮಾರ್ಟ್‌ಫೋನ್‌  ಮರೆತು ಇತರ ಕೆಲಸಗಳತ್ತ ಗಮನ ನೀಡಲು ಈ ಆ್ಯಪ್ ನೆರವಾಗಬಲ್ಲದು. ಐಒಎಸ್‌ ಸೆಟ್‌ ಇದ್ದವರು ಎರಡು ಡಾಲರ್ ನೀಡಿ (ಅಂದಾಜು ₹ 134), ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಹೊಂದಿರುವವರು ಉಚಿತವಾಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

*
‘ಹ್ಯಾಬಿಟ್ ಬುಲ್’ (HabitBull)
ಮದ್ಯಪಾನ, ಧೂಮಪಾನ ಮುಂತಾದ ಕೆಟ್ಟ ಚಟಗಳನ್ನು ಬಿಟ್ಟು ಫಿಟ್‌ನೆಸ್‌, ಓದು, ಧ್ಯಾನ ಸೇರಿದಂತೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ‘ಹ್ಯಾಬಿಟ್ ಬುಲ್’ ಆ್ಯಪ್   ನೆರವಿಗೆ ಬರುತ್ತದೆ. ಒಂದು ನಿರ್ದಿಷ್ಟ ಗುರಿಯೆಡೆಗೆ ನಿಮ್ಮನ್ನು ಮುನ್ನಡೆಸುವ ಮಾರ್ಗದರ್ಶಕನ ಕೆಲಸವನ್ನು ಈ ಆ್ಯಪ್‌ ಮಾಡುತ್ತದೆ.

ನೂರಕ್ಕೂ ಅಧಿಕ ಹವ್ಯಾಸಗಳ ಪಟ್ಟಿ ಇದರಲ್ಲಿದೆ. ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಅದನ್ನು ಪ್ರತಿದಿನ ರೂಢಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ಮಾಹಿತಿ ಇದೆ.  ದೈನಂದಿನ ಕೆಲಸದ ಮಾಹಿತಿ ದಾಖಲಿಸಿಡಲು ಅವಕಾಶವಿದೆ.  ಯಶಸ್ಸನ್ನು ಗ್ರಾಫ್‌ಗಳ ಮೂಲಕವೂ ಅಳೆಯಬಹುದು.

ಒಂದು ಹವ್ಯಾಸದ ಬಗ್ಗೆ ಮತ್ತೆ ಮತ್ತೆ ನೆನಪಿಸುತ್ತಾ ನಿಮ್ಮನ್ನು ಎಚ್ಚರಿಸುತ್ತಾ ಇರುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್‌ ಸೆಟ್‌ಗಳಲ್ಲಿ ಕೆಲವೊಂದು ಫೀಚರ್‌ಗಳು ಉಚಿತವಾಗಿ ದೊರೆಯುತ್ತವೆ. ಐದು ಡಾಲರ್ (ಅಂದಾಜು ₹ 335) ನೀಡಿದರೆ ಆ್ಯಪ್‌ನಲ್ಲಿರುವ ಎಲ್ಲ ಸೇವೆಗಳನ್ನು ಪಡೆದುಕೊಳ್ಳಬಹುದು.

*


‘ಬ್ಲಿಂಕಿಸ್ಟ್‌’ (Blinkist)
ಹೆಚ್ಚಿನ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವ ಆ್ಯಪ್‌ ‘ಬ್ಲಿಂಕಿಸ್ಟ್‌’. ವಿವಿಧ ಪುಸ್ತಕಗಳ ಸಾರಾಂಶಗಳನ್ನು ಅಥವಾ ಅದರಲ್ಲಿರುವ ಮಹತ್ವದ ಮಾಹಿತಿಗಳನ್ನು ನಿಮ್ಮ ಮೊಬೈಲ್ ಪರದೆಯಲ್ಲಿ ಮೂಡುವಂತೆ ಮಾಡುತ್ತದೆ. ಆ ಮೂಲಕ ಇಡೀ ಪುಸ್ತಕ ಓದುವಂತೆ ಉತ್ತೇಜಿಸುತ್ತದೆ. ಜೀವನ ಚರಿತ್ರೆ ಅಥವಾ ಪರಾಮರ್ಶನ ಗ್ರಂಥವನ್ನು (ನಾನ್‌ ಫಿಕ್ಷನ್‌ ಪುಸ್ತಕಗಳು) ಕೆಲವೇ ನಿಮಿಷಗಳಲ್ಲಿ   ಓದಬಹುದು.

ಐಒಎಸ್ ಮತ್ತು ಆಂಡ್ರಾಯ್ಡ್‌ ಸೆಟ್‌ಗಳಲ್ಲಿ ಲಭ್ಯ. ಡೌನ್‌ಲೋಡ್‌ ಮಾಡಿದ ಮೊದಲ ಮೂರು ದಿನ ಉಚಿತವಾಗಿ ಇದರ ಪ್ರಯೋಜನ ಪಡೆಯಬಹುದು. ಆ ಬಳಿಕವೂ ಬಳಸಬೇಕೆಂದರೆ ವರ್ಷಕ್ಕೆ 45 ಡಾಲರ್ (ಅಂದಾಜು ₹ 3 ಸಾವಿರ) ಶುಲ್ಕ ಪಾವತಿಸಬೇಕು. ಇದು ದುಬಾರಿ ಅನಿಸಬಹುದು. ಆದರೆ ಸಾವಿರಕ್ಕೂ ಅಧಿಕ ನಾನ್‌ ಫಿಕ್ಷನ್‌ ಪುಸ್ತಕಗಳು ಇಲ್ಲಿ ಲಭ್ಯ ಇವೆ.

*


‘ಟೂನ್‌ಟಾಸ್ಟಿಕ್‌ 3ಡಿ’ (Toontastic 3D)
ಅನಿಮೇಷನ್ ಬಗ್ಗೆ ಮಾಹಿತಿ ನೀಡುವ ‘ಟೂನ್‌ಟಾಸ್ಟಿಕ್‌’ ಆ್ಯಪ್‌ ಈಗಾಗಲೇ ಜನಪ್ರಿಯತೆ ಪಡೆದಿದೆ. ಇದು ಇನ್ನೂ ಸುಧಾರಿತ ರೀತಿಯಲ್ಲಿ ‘ಟೂನ್‌ಟಾಸ್ಟಿಕ್‌ 3ಡಿ’ ಹೆಸರಿನಲ್ಲಿ ಲಭ್ಯ. ತಮ್ಮ ಕಲ್ಪನೆಗಳನ್ನು 3ಡಿ ಕಾರ್ಟೂನ್‌ಗಳಾಗಿ ಪರಿವರ್ತಿಸಲು ಬಯಸುವ ಎಲ್ಲರಿಗೂ ಇದು ಉಪಯುಕ್ತ ಆ್ಯಪ್‌. ಐಒಎಸ್‌ ಮತ್ತು ಆಂಡ್ರಾಯ್ಡ್‌ನಲ್ಲಿ ಉಚಿತವಾಗಿ ದೊರೆಯುತ್ತದೆ.
ಕಿಟ್ ಈಟನ್ ನ್ಯೂಯಾರ್ಕ್‌ ಟೈಮ್ಸ್‌


***
ಯೂಟ್ಯೂಬ್ ಲೈವ್ ವಿಡಿಯೊ ಲಭ್ಯ
ಭಾರತದಲ್ಲಿ ವಿಡಿಯೊ ತಯಾರಿಕರಿಗೆ ಯೂಟ್ಯೂಬ್ ತಂಡ ಒಂದು ಸಿಹಿ ಸುದ್ದಿ  ನೀಡಿದೆ. ಫೇಸ್‌ಬುಕ್‌ ಲೈವ್ ವಿಡಿಯೊ ಮಾದರಿಯಲ್ಲೆ ‘ಯೂಟ್ಯೂಬ್ ಲೈವ್ ‘ ವಿಡಿಯೊ ಮಾಡಬಹುದು. ಇದರಿಂದ ಸಾಕಷ್ಟು   ಹಣವನ್ನು ಸಂಪಾದಿಸಬಹುದು.

ಲೈವ್ ಸ್ಟ್ರೀಂ ವೆಬ್‌ಸೈಟ್‌ಗಳು ಮತ್ತು ಚಾನೆಲ್‌ಗಳು ಮಾತ್ರ ಇಷ್ಟು ದಿನ ಯೂಟ್ಯೂಬ್‌ನಲ್ಲಿ  ಲೈವ್ ವಿಡಿಯೊವನ್ನು ಬಿತ್ತರಿಸುತ್ತಿದ್ದವು! ಇದೀಗ ಜನ ಸಾಮಾನ್ಯರು ಕೂಡ ಲೈವ್ ವಿಡಿಯೊ ಬಿತ್ತರಿಸುವ ಅವಕಾಶವನ್ನು ಯೂಟ್ಯೂಬ್‌ನಲ್ಲಿ ಕಲ್ಪಿಸಲಾಗಿದೆ. ಯೂಟ್ಯೂಬ್‌ನಲ್ಲಿ  ಲೈವ್ ವಿಡಿಯೊ ಮಾಡುವ ಮೊದಲು ಬಳಕೆದಾರರು ‘ಯೂಟ್ಯೂಬ್ ಮೊಬೈಲ್ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರಬೇಕು.

ಅದರಲ್ಲಿ  ಲೈವ್ ವಿಡಿಯೊ ಎಂಬ ಟೂಲ್ ಅನ್ನು ಆನ್ ಮಾಡಿದ ಕೂಡಲೇ ಮೊಬೈಲ್ ಕ್ಯಾಮೆರಾ ಆನ್ ಆಗುತ್ತದೆ. ನಂತರ ವಿಡಿಯೊ ಲೈವ್ ಆಗಿ ಯೂಟ್ಯೂಬ್‌ನಲ್ಲಿ  ಪ್ರಸಾರವಾಗುತ್ತದೆ.

ಯೂಟ್ಯೂಬ್ ಲೈವ್ ವಿಡಿಯೊ ಮಾಡಬೇಕಾದರೆ ಬಳಕೆದಾರರು ಯೂಟ್ಯೂಬ್ ಚಾನೆಲ್ ಅಕೌಂಟ್ ಹೊಂದಿರಬೇಕು. ಹಾಗೇ ಆ ಚಾನೆಲ್ ಅನ್ನು ಹತ್ತು ಸಾವಿರ ಜನ ಸಬ್‌ಸ್ಕ್ರೈಬ್‌ ಮಾಡಿದ್ದರೆ  ಮಾತ್ರ ಲೈವ್ ವಿಡಿಯೊ ಮಾಡಲು ಸಾಧ್ಯ!
ಗೂಗಲ್ ಪ್ಲೆಸ್ಟೋರ್: youtube live

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT