ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಾರಿಗೆಯ ಬೆಳ್ಳಿಹಬ್ಬ ಸಂಭ್ರಮ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿರುವ ‘ಸಹಕಾರ ಸಾರಿಗೆ’ ಇತ್ತೀಚೆಗೆ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿದೆ. ನೌಕರರೇ ನಡೆಸುವ ಏಷ್ಯಾದ ವಿಶಿಷ್ಟ ಸಾರಿಗೆ ಸಂಸ್ಥೆ ಎಂಬ ಹೆಮ್ಮೆ ಇದರದು. ಇಷ್ಟು ವರ್ಷ ಗಳಿಂದಲೂ ‘ಎ’ ಶ್ರೇಣಿಯಲ್ಲಿ ಸಾಗಿರುವುದೇ ಇದರ ಸಾಧನೆಗೆ ಸಾಕ್ಷಿ. 

1956–57ರಲ್ಲಿ  ಕೊಪ್ಪದಲ್ಲಿ  ‘ಮೇ. ಶಂಕರ್‌ ಟ್ರಾನ್ಸ್‌ಪೋರ್ಟ್‌ ಕಂಪೆನಿ ಪ್ರೈವೇಟ್‌ ಲಿಮಿಟೆಡ್‌’ ಸಾರಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು.   ಇದರಲ್ಲಿ 73 ಬಸ್‌ ಹಾಗೂ ಸುಮಾರು 300 ಕಾರ್ಮಿ ಕರು ಇದ್ದರು. 1984ರಲ್ಲಿ  ವೇತನ ಏರಿಕೆ ಸಂಬಂಧ ಕಾರ್ಮಿಕರ ಮುಷ್ಕರ ಆರಂಭವಾಗಿತ್ತು.

1990ರ  ಹೊತ್ತಿಗೆ ಈ ಮುಷ್ಕರ ಇನ್ನಷ್ಟು ತೀವ್ರವಾಯಿತು. 1991ರ ಫೆಬ್ರುವರಿಯಲ್ಲಿ ಸಂಸ್ಥೆಗೆ ಬೀಗಮುದ್ರೆ ಘೋಷಿಸಲಾಯಿತು. ಸಂಸ್ಥೆಯಲ್ಲಿದ್ದ 123   ಕಾರ್ಮಿಕರು ಸೇರಿ ಶಂಕರ್ ಟ್ರಾನ್ಸ್‌ಪೋರ್ಟ್‌ನಿಂದ ಪಡೆದ ₹12 ಲಕ್ಷ ಪರಿಹಾರ ಹಣದಲ್ಲಿ  ಬಸ್‌ ಖರೀದಿಸಿ 1991ರ ಮಾರ್ಚ್‌ 8 ರಂದು ‘ಸಹಕಾರ ಸಾರಿಗೆ’ ಹೆಸರಿನಲ್ಲಿ ಬಸ್‌ ಓಡಿಸಲು ಆರಂಭಿಸಿದರು.

ಮುಷ್ಕರ ತೀವ್ರಗೊಂಡಾಗ ಇರಾಕ್‌ನಲ್ಲಿ ಯುದ್ಧ ನಡೆಯುತ್ತಿತ್ತು. ಇದರಿಂದಾಗಿ ಡೀಸೆಲ್ ಕೊರತೆ ಆಗಿತ್ತು.  ಆದ್ದರಿಂದ ಹೆಚ್ಚಿನ ವೇತನ ನೀಡಿ ಬಸ್‌ ಓಡಿಸಲು ಆಗುವುದಿಲ್ಲ ಎಂದು ಮಾಲೀಕರು ಕಾರ್ಮಿಕರಿಗೆ ತಿಳಿಸಿದ್ದರು. ಆನಂತರವೂ  ಕೆಲವು ಬಸ್‌ಗಳ ಸಂಚಾರ ನಡೆಯತ್ತಿತ್ತು. ಕೊನೆಗೆ ಮೂರು ವರ್ಷಗಳಲ್ಲಿ ಸಂಸ್ಥೆ ಪೂರ್ಣ ಮುಚ್ಚಿಹೋಯಿತು.

1991ರ ಮೇ 16 ರಂದು  ಸಹಕಾರ ಕಾಯಿದೆ ಪ್ರಕಾರ ನೋಂದಣಿಯಾಗಿ ಆರು ಬಸ್‌ಗಳೊಂದಿಗೆ ‘ಸಹಕಾರ ಸಾರಿಗೆ’ ಹೆಸರಿನಲ್ಲಿ ಸಂಸ್ಥೆ  ಆರಂಭವಾಯಿತು.  2000ರಲ್ಲಿ ದಶಮಾನೋತ್ಸವ ಆಚರಿಸಿಕೊಂಡಿತು. 1998ರಲ್ಲಿ ಕೊಪ್ಪ ಸಮೀಪ ಸ್ವಂತ ನಿವೇಶನದಲ್ಲಿ ಸಂಸ್ಥೆಯ ಆಡಳಿತ ಕಚೇರಿ ಆರಂಭವಾಯಿತು. ಶೃಂಗೇರಿಯಲ್ಲೂ ಜಾಗ ಖರೀದಿಸಲಾಯಿತು.

17 ವಿಭಾಗಗಳು
ಸಂಸ್ಥೆಯಲ್ಲಿ ಸಿಬ್ಬಂದಿ, ಉಗ್ರಾಣ, ಟ್ರಾಫಿಕ್, ಲೆಕ್ಕಪತ್ರ, ತಾಂತ್ರಿಕ, ಟ್ರಾನ್ಸ್‌ಪೋರ್ಟ್‌, ಡೀಸೆಲ್‌, ಹಣಕಾಸು, ಟೈರ್‌, ಗೇಟ್‌ಪಾಸ್‌, ನೇಮಕಾತಿ ಚೆಕಿಂಗ್‌ ಸೇರಿದಂತೆ 17 ವಿಭಾಗಗಳಿವೆ.  ಆಡಳಿತ ಮಂಡಳಿಯ ನಿರ್ದೇಶಕರು ಈ ವಿಭಾಗಗಳ ಸಂಚಾಲಕರಾಗಿರುತ್ತಾರೆ. 

ಜಪಾನ್‌ವರೆಗೂ ಹಬ್ಬಿದ ಕೀರ್ತಿ 
ಸಹಕಾರ ಸಾರಿಗೆಯ ಕಾರ್ಯನಿರ್ವಹಣೆಯ  ಏಷ್ಯಾ ಖಂಡದಲ್ಲೇ ಹೆಸರು ಮಾಡಿದೆ.  1998ರಲ್ಲಿ ಜಪಾನ್‌ನ ಕಯಾಟೊ ನಗರದ ರಿಟ್ಸುಮೆಕಿನ್ ವಿಶ್ವವಿದ್ಯಾಲಯದ  21 ಜನರ ಅಧ್ಯಯನ ತಂಡ  ಸಂಸ್ಥೆಗೆ ಭೇಟಿ ನೀಡಿ  ಕಾರ್ಮಿಕರೇ ಮಾಲೀಕರಾಗಿ ಹೇಗೆ ಆಡಳಿತ ನಡೆಸುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿತ್ತು.

ಸಂಸ್ಥೆಯ ಹಿರಿಮೆಗಳು
ಕೊಪ್ಪದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಸಿ. ದುಗ್ಗಪ್ಪಗೌಡ ಅವರು 2005ರಲ್ಲಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯಕ್ಕೆ ಸಂಸ್ಥೆ ಬಗ್ಗೆ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಪಡೆದಿದ್ದಾರೆ.   ಸುಮಾರು 40 ಕ್ಕೂ ಹೆಚ್ಚು ಕಾಲೇಜುಗಳ ಎಂಬಿಎ ವಿದ್ಯಾರ್ಥಿಗಳು ಸಂಘದ ಬಗ್ಗೆ ಅಧ್ಯಯನ ನಡೆಸಿದ್ದಾರೆ. 

ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಪಿ. ಸುರೇಶ ರಮಣಮಯ್ಯ ಅವರೂ 2 ವರ್ಷಗಳ ಕಾಲ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿದ್ದು,  ಅವರಿಗೆ ವಿವಿ  ಡಾಕ್ಟರೇಟ್ ಪದವಿ ನೀಡಿದೆ.

ಮಣಿಪಾಲದ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ  ರಮಣ ರೆಡ್ಡಿ ಅವರ ಸಂಶೋಧನೆ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಪದವಿಯ ವ್ಯಾಸಂಗದಲ್ಲಿ ಪಠ್ಯ ವಿಷಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮವಾಗಿ ಗಣಕಯಂತ್ರ ಅಳವಡಿಸಿದ ಸಹಕಾರ ಸಂಘವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ
ಸಂಸ್ಥೆಯ ಬಸ್‌ಗಳು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದರೂ ತವರು ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸರ್ಕಾರಿ  ಬಸ್‌ಗಳು ಸಂಚರಿಸದ  ಕಡೆ ಬಸ್‌ಗಳನ್ನು ಓಡಿಸುತ್ತಿದೆ. ಲಾಭಕ್ಕಿಂತ ಸೇವೆ ಮುಖ್ಯ ಎಂಬುದನ್ನು ಈ ಮೂಲಕ  ತೋರಿಸಿಕೊಟ್ಟಿದೆ. ಮಲೆನಾಡು ಭಾಗದಲ್ಲಿ  ಅದರಲ್ಲೂ ಘಾಟಿ, ವಿಪರೀತ ಮಳೆ ಬೀಳುವ ಪ್ರದೇಶಗಳಲ್ಲಿನ ನಾಗರಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ.

ಆಡಳಿತ ಮಂಡಳಿ
ಸಹಕಾರ ಸಾರಿಗೆಯಲ್ಲಿ 14 ನಿರ್ದೇಶ ಕರು ಮತ್ತು ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುತ್ತದೆ. ನಿರ್ದೇಶಕರು, ಕಾರ್ಮಿಕರು  ಸಂಸ್ಥೆಯ ಷೇರುದಾರರಾಗಿದ್ದಾರೆ. ಕಾರ್ಮಿಕರಲ್ಲದವರು ಆಡಳಿತ ಮಂಡಳಿಯಲ್ಲಿ ಯಾವುದೇ ಹುದ್ದೆ ಅಲಂಕರಿಸುವಂತಿಲ್ಲ. ಇಲ್ಲಿ ಚಾಲಕ, ನಿರ್ವಾಹಕ, ಗ್ಯಾರೇಜ್‌ ಕ್ಲೀನರ್‌ ಸಹ ನಿರ್ದೇಶಕರಾಗಿದ್ದಾರೆ. ಯಾವ ಯಾವ ವಿಭಾಗದಿಂದ ನಿರ್ದೇಶಕರಾಗಬೇಕೊ ಅಲ್ಲಿಂದ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಒಮ್ಮೆ ನಿರ್ದೇಶಕರಾದರೆ ಅವರ ಅಧಿಕಾರಾವಧಿ 5 ವರ್ಷ.

ಇದಲ್ಲದೆ ನೇಮಕಾತಿ, ನ್ಯಾಯ ನಿರ್ಣಯ ಹಾಗೂ ನೀತಿ ನಿರೂಪಣೆ, ತಾಂತ್ರಿಕ ಸಲಹೆ, ಸಾರಿಗೆ ಸಲಹೆ, ಖರೀದಿ ಮತ್ತು ಮಾರಾಟ ಸಲಹಾ ಸಮಿತಿ ಮತ್ತು ಆಂತರಿಕ ವ್ಯವಹಾರ ಪರಿಶೀಲನಾ  ಸಮಿತಿಗಳೂ ಕಾರ್ಯನಿರ್ವಹಿಸುತ್ತಿವೆ.

ಸಮಾಜಸ್ನೇಹಿ ಸೌಲಭ್ಯಗಳು
ನೌಕರರಿಗೆ ಉತ್ತಮ ವೇತನ, ದಿನಭತ್ಯೆ, ಭವಿಷ್ಯನಿಧಿ, ಗ್ರ್ಯಾಚುಟಿ, ವೈದ್ಯಕೀಯ ಭತ್ಯೆ, ಸಮವಸ್ತ್ರ ಇನ್ನಿತರೆ ಸೇವಾ ಸೌಲಭ್ಯ ನೀಡುತ್ತಿದೆ. ಅಲ್ಲದೆ ಸದಸ್ಯರ/ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಅವರ ಕುಟುಂಬದವರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಲು ಉಚಿತ  ಪಾಸ್ ವ್ಯವಸ್ಥೆ ಕಲ್ಪಿಸಿದೆ.

ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಂಘದ ಬಸ್‌ಗಳಲ್ಲಿ  ಪ್ರಯಾಣಿಸುವ  ವಿದ್ಯಾರ್ಥಿ ಗಳಿಗೆ, ವಯೋವೃದ್ಧರಿಗೆ, ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ, ಮಾಧ್ಯಮ ಉದ್ಯೋಗಿಗಳಿಗೆ, ಅಂಗವಿ ಕಲರಿಗೆ ಶೇ 50 ರಿಯಾಯಿತಿ, ಹಿರಿಯ ನಾಗರಿಕರಿಗೆ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಶೇ 25 ರಿಯಾಯಿತಿ, ಅಂಗವಿಕಲ ವಿದ್ಯಾರ್ಥಿಗಳಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಪೂರ್ಣ ರಿಯಾಯಿತಿ ಪಾಸುಗಳನ್ನು ನೀಡಲಾಗುತ್ತಿದೆ.

ರಾಷ್ಟ್ರೀಯ  ವಿಕಾಸ್ ರತನ್ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,  ಜಿಲ್ಲಾ ಉತ್ತಮ ಸಹಕಾರ ಸಂಘ’ ಚೌಡಯ್ಯ ಸಹಕಾರ  ಪ್ರಶಸ್ತಿ,  ಸನ್ಮಾನಗಳು ಸಂದಿವೆ.

ಸರ್ಕಾರಕ್ಕೆ ಮನವಿ
ಸರಿಯಾದ ಸಮಯದಲ್ಲಿ ವಾಹನ ತೆರಿಗೆ ಮತ್ತು ವಿಮೆ ಪಾವತಿ ಸರಿದೂಗಿಸಿಕೊಂಡು ಹೋಗುವುದು ಸವಾಲಾಗಿದೆ.  ಆದ್ದರಿಂದ  ಸರ್ಕಾರವು  ಸಂಸ್ಥೆಗೆ ಕನಿಷ್ಠ ₹8  ಕೋಟಿ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಮತ್ತು ಗರಿಷ್ಠ  ಅವಧಿಯ ಕಂತುಗಳೊಂದಿಗೆ ಮಂಜೂರು ಮಾಡಲು ಕೋರಲಾಗಿದೆ.

₹1.30 ಕೋಟಿ ವಾಹನ ತೆರಿಗೆ
‘ಸಂಸ್ಥೆ ಪ್ರತೀ ವರ್ಷ ₹1.30 ಕೋಟಿಗೂ ಹೆಚ್ಚು ವಾಹನ ತೆರಿಗೆಯನ್ನು   ಸರ್ಕಾರಕ್ಕೆ ಪಾವತಿಸುತ್ತಿದೆ. ಇದು ಸ್ವಲ್ಪ ಮಟ್ಟಿನ  ಹೊರೆಯಾಗಿರುವುದರಿಂದ  ಮುಂದಿನ ದಿನಗಳಲ್ಲಿ ವಿಶೇಷ ಆದ್ಯತೆಯ ಮೇರೆಗೆ ಕೆಎಸ್ಆರ್‌ಟಿಸಿ ಮಾದರಿಯಲ್ಲಿ ಪ್ರತಿ ವಾಹನದ ದೈನಂದಿನ ಸಂಗ್ರಹದ  ಆಧಾರದ ಮೇಲೆ ವಾಹನ ತೆರಿಗೆ ಪಾವತಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು  ಅಧ್ಯಕ್ಷ ಇ.ಎಸ್‌.ಧರ್ಮಪ್ಪ ಅವರು ತಿಳಿಸಿದ್ದಾರೆ.
ಸಹಕಾರ ಸಾರಿಗೆ ಸಂಪರ್ಕ ಸಂಖ್ಯೆ: 9483812344
 

*
ಪ್ರಾಮಾಣಿಕತೆ  ಯಶಸ್ವಿನ ಗುಟ್ಟು
ಸಂಸ್ಥೆ  ದೇಶ ವಿದೇಶಗಳಲ್ಲಿ ಹೆಸರು ಮಾಡಲು ಕಾರ್ಮಿಕರು, ನಿರ್ದೇಶಕರು, ವಿಭಾಗಗಳ ಮುಖ್ಯಸ್ಥರ ಪರಿಶ್ರಮವೇ ಕಾರಣ. ನೌಕರರಿಂದ ನೌಕರರ ನಡುವಿನ ನಂಬಿಕೆ ಮತ್ತು ಪ್ರಾಮಾಣಿಕತೆಯೇ  ಸಂಸ್ಥೆಯ ಯಶಸ್ಸಿನ ಗುಟ್ಟು. ಒಂದು ಪೈಸೆ ಲಾಭ ಬಂದರೂ ಅದರ ಭಾಗ ಎಲ್ಲ ಕಾರ್ಮಿಕರಿಗೆ ಸಲ್ಲುತ್ತದೆ.
-ಇ.ಎಸ್.ಧರ್ಮಪ್ಪ, ಅಧ್ಯಕ್ಷರು ಸಹಕಾರ ಸಾರಿಗೆ

*
ಸಹಕಾರ ಸಾರಿಗೆ ರೂಪುಗೊಳ್ಳುವಲ್ಲಿ ಪ್ರಮುಖ ಕಾರಣಕರ್ತರಾದವರು ಕಾರ್ಮಿಕ ಮುಖಂಡರಾಗಿದ್ದ ದಿವಂಗತ ಬಿ.ಕೆ.ಸುಂದ ರೇಶ್‌. ಶಂಕರ್ ಟ್ರಾನ್ಸ್‌ಪೋರ್ಟ್‌ನಿಂದ ಪಡೆದ ಹಣವನ್ನು  ಮತ್ತೊಂದು ಸಂಸ್ಥೆ ಆರಂಭಿಸಲು ಯೋಜನೆ ರೂಪಿಸಿ ಕಾರ್ಮಿಕರ ಹಣ ಸದ್ವಿನಿಯೋಗ ಆಗುವ ಹಾಗೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT