ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವೇದಿಕೆಯಲ್ಲಿ ದಕ್ಷಿಣಾದಿ ಗಾಯಕಿ...

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

*ವಿಶ್ವಸಂಸ್ಥೆಯ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಸಂಗೀತ ಕಛೇರಿ ನೀಡಿದ ಹೆಗ್ಗಳಿಕೆ ನಿಮ್ಮದು. ಈ ಅವಕಾಶ ಸಿಕ್ಕಿದ್ದು ಹೇಗೆ?
ಅದು ಅಕ್ಟೋಬರ್ 2, 2016. ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ. ಜತೆಗೆ ಸಂಗೀತ ಸಾಮ್ರಾಜ್ಞಿ ಎಂ.ಎಸ್‌.ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವ ಸಮಾರಂಭ. ವಿಶ್ವಸಂಸ್ಥೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್ಲ ದೇಶಗಳಿಂದ ಪ್ರತಿನಿಧಿಗಳು ಬಂದಿದ್ದರು. ಇಂಥ ಪ್ರತಿಷ್ಠಿತ ವೇದಿಕೆಯಲ್ಲಿ ಕಛೇರಿ ನೀಡುವ ಸೌಭಾಗ್ಯ ನನಗೆ ಒಲಿಯಿತು. ಇದೇ ವೇದಿಕೆಯಲ್ಲಿ 50 ವರ್ಷಗಳ ಹಿಂದೆ ಎಂ.ಎಸ್‌.ಸುಬ್ಬುಲಕ್ಷ್ಮಿ ಅವರು ಕಛೇರಿ ನೀಡಿದ್ದರು. ಕರ್ನಾಟಕ ಸಂಗೀತದಲ್ಲಿ ಎಂ.ಎಸ್‌. ಅವರನ್ನು ಬಿಟ್ಟರೆ ನನ್ನೊಬ್ಬಳಿಗೆ ಇಂಥ ಅವಕಾಶ ಸಿಕ್ಕಿದ್ದು. ನಿಜಕ್ಕೂ ನಾನು ಧನ್ಯಳು.

*ಸಂಗೀತದಲ್ಲಿ ‘ಮನೋಧರ್ಮ’ವನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸುವ ಚಾಕಚಕ್ಯತೆ ನಿಮ್ಮದು. ಈ ಬಗ್ಗೆ ವಿವರಿಸಿ...
ಕರ್ನಾಟಕ ಸಂಗೀತದಲ್ಲಿ ‘ಮನೋಧರ್ಮ’ದ ಪರಿಕಲ್ಪನೆ ಇದೆ. ಇದು ಕರ್ನಾಟಕ ಸಂಗೀತದ ಬಹು ಮುಖ್ಯ ಭಾಗ ಅಥವಾ ಆಯಾಮ. ಮನೋಧರ್ಮ ಎನ್ನುವುದು ಸಂಗೀತಗಾರನ ಕಲಾಕೌಶಲ್ಯ, ಚಾಕಚಕ್ಯತೆ ಮತ್ತು ಸೃಜನಶೀಲತೆಯಿಂದ ಬರುವಂಥದ್ದು.

ಕಲಾಕಾರ ಒಂದು ನಿರ್ದಿಷ್ಟ ಪರಿಧಿಯೊಳಗೆ ರಾಗದ ಮತ್ತು ತಾಳದ ಎಲ್ಲೆಯನ್ನು ಮೀರದೆ ಸಂಗೀತ ಸ್ವರಗಳನ್ನು ವಿಸ್ತರಿಸಬೇಕು. ಇದಕ್ಕೆ ಸಾಧನೆ ಬೇಕು, ಸೃಜನಶೀಲ ಮನಸ್ಸು ಮೇಲಾಗಿ ಅಪರಿಮಿತ ಶ್ರದ್ಧೆ, ಆಸಕ್ತಿ ಇರಬೇಕು. ಮನೋಧರ್ಮ ಎನ್ನುವುದು ಸಂಗೀತದ ‘ಜೀವ’.

ಒಬ್ಬ ಕಲಾವಿದನ ಮನೋಧರ್ಮ ಸಂಗೀತ ಕೇಳುಗನನ್ನು ಸೆಳೆಯಿತೆಂದರೆ ಆ ಕಛೇರಿ ಗೆದ್ದಂತೆ. ರಾಗ ವಿಸ್ತಾರ, ಸ್ವರ ಪ್ರಸ್ತಾರ, ರಾಗಂ ತಾನಂ ಪಲ್ಲವಿ... ಹೀಗೆ ಎಲ್ಲದರಲ್ಲೂ ಕಲಾವಿದನ ಸೃಜನಶೀಲತೆಗೆ ವಿಪುಲ ಅವಕಾಶಗಳಿವೆ. ಮನೋಧರ್ಮವು ಸಂಗೀತಕ್ಕೆ ಜೀವಂತ ಕಳೆ ತರುತ್ತದೆ.

*ವಿದುಷಿ ಎಂ.ಎಲ್‌. ವಸಂತಕುಮಾರಿ ಕರ್ನಾಟಕ ಸಂಗೀತದ ಅಮೂಲ್ಯ ರತ್ನ ಆಗಿದ್ದವರು. ಅವರ ಪಟ್ಟಶಿಷ್ಯೆ ನೀವು. ನಿಮ್ಮ ಮತ್ತು ಅವರೊಂದಿಗಿನ ಒಡನಾಟ ಹೇಗಿತ್ತು?
ನನ್ನ ಸಂಗೀತ ಪಯಣ ಇಷ್ಟು ಮುಂದೆ ಬರಲು ಎಂಎಲ್‌ವಿ ಅಮ್ಮ ಅವರೇ ಮುಖ್ಯ ಕಾರಣ. ಒಂದು ಗಿಡ ಚಿಗುರಿ, ಮೊಗ್ಗು ಮೂಡಿ, ಹೂ ಅರಳುವಂತೆ ನನ್ನಲ್ಲಿರುವ ಕಲೆಯನ್ನು ನೀರೆರೆದು ಪೋಷಿಸಿದ ‘ಮಹಾತಾಯಿ’ ಎಂಎಲ್‌ವಿ ಅಮ್ಮ. ನನ್ನಲ್ಲಿ ಸಂಗೀತದ ಬೀಜ ಬಿತ್ತಿದವರು ಅವರು. ಧೈರ್ಯ, ನಿರಂತರತೆ, ಕಛೇರಿ ನಿರ್ವಹಣೆಯ ಪರಿಯನ್ನು ನನಗೆ ಹೇಳಿಕೊಡುವಲ್ಲಿ ಅವರ ಶ್ರಮ ಅಪಾರ. ಅವರೊಂದಿಗೆ ನಡೆಸಿದ ಸಹಗಾಯನ ‘ಸಂಗೀತ ಸ್ವಂತಿಕೆ’ (ಮ್ಯೂಸಿಕಲ್‌ ಐಡೆಂಟಿಟಿ) ಬೆಳೆಸಿಕೊಳ್ಳಲು ಪ್ರೇರೇಪಿಸಿದೆ.

*ಫ್ಯೂಷನ್‌ ಮತ್ತು ಸಿನಿಮಾ ಸಂಗೀತದಲ್ಲೂ ನೀವು ತೊಡಗಿಸಿಕೊಂಡಿದ್ದೀರಿ. ನಿಮ್ಮ ಆಸಕ್ತಿ ಮತ್ತು ಅಭಿರುಚಿಯ ವೈವಿಧ್ಯಮಯ ಆಯಾಮಗಳಿವು ಎನ್ನಬಹುದೇ?
ನಾನು ಫ್ಯೂಷನ್‌ ಮತ್ತು ಸಿನಿಮಾ ಸಂಗೀತವನ್ನೂ ಹಾಡುತ್ತೇನೆ. ಹೆಸರಾಂತ ಜಾಸ್‌ ಕಲಾವಿದರಾದ ಅಮಿತ್‌ ಹೇರಿ ಮತ್ತು ಬಾಸ್‌ ಗಿಟಾರ್‌ ಕಲಾವಿದ ಕೈತ್‌ ಪೀಟರ್‌ ಅವರ ಜತೆಗೆ ಹಾಡಿದ್ದೇನೆ. ‘ಗ್ಲೋಬಲ್‌ ಮ್ಯೂಸಿಕ್‌’ ಪ್ರಾಜೆಕ್ಟ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇದರಲ್ಲಿ ವಿಶ್ವದ ಎಲ್ಲ ಸಂಗೀತವನ್ನೂ ಒಂದೆಡೆ ತರುವ ಪ್ರಯತ್ನ ಮಾಡಿದ್ದೇವೆ. ಹಿಂದೂಸ್ತಾನಿ ಸಂಗೀತಗಾರರ ಜತೆಗೆ ಅನೇಕ ಜುಗಲ್‌ಬಂದಿ ಕಛೇರಿ ನೀಡಿದ್ದೇನೆ. ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಹಾಡಿದ್ದೇನೆ. ಸದ್ಯ ತಮಿಳು ಸಿನಿಮಾಕ್ಕಾಗಿ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದೇನೆ.

*ಶಾಸ್ತ್ರೀಯ ಸಂಗೀತವಲ್ಲದೆ ನಿಮ್ಮ ಇತರ ಆಸಕ್ತಿಯ ವಿಷಯಗಳೇನು?
ಶಾಸ್ತ್ರೀಯ ಸಂಗೀತವಲ್ಲದೆ ನಾನು ಎಲ್ಲ ರೀತಿಯ ಸಂಗೀತವನ್ನು ಬಹಳ ಕೇಳುತ್ತೇನೆ. ಪಾಶ್ಚಾತ್ಯ ಸಂಗೀತವನ್ನು ಆಸ್ವಾದಿಸುತ್ತೇನೆ. ಕಥೆ, ಕಾದಂಬರಿ ಓದುವ ಹವ್ಯಾಸವಿದೆ. ಶಾಪಿಂಗ್, ಅಡುಗೆ ಮಾಡುವುದು, ಡಿಸೈನಿಂಗ್‌ ಎಲ್ಲವೂ ಇಷ್ಟ. ಸಿನಿಮಾ ನೋಡುತ್ತೇನೆ. ಗಣೇಶನ ಮೂರ್ತಿ ಸಂಗ್ರಹ ಮತ್ತೊಂದು ಪ್ರಿಯವಾದ ಹವ್ಯಾಸ. ನನ್ನ ಬಳಿ 700 ಬಗೆಯ ಗಣೇಶ ಪ್ರತಿಮೆಗಳಿವೆ. ಬೇರೆ ಬೇರೆ ದೇಶಗಳಿಂದ ಸಂಗ್ರಹಿಸಿದ 35 ವಿಭಿನ್ನ ಮುಖವಾಡಗಳು ನನ್ನ ಸಂಗ್ರಹದಲ್ಲಿದೆ.

*ಚೆನ್ನೈಯಲ್ಲಿ ಚಾರಿಟೆಬಲ್‌ ಟ್ರಸ್ಟ್‌ ಸ್ಥಾಪಿಸಿ ಸಂತ್ರಸ್ತರ ನೋವಿಗೆ ಸಂಗೀತದ ಮೂಲಕ ಸ್ಪಂದಿಸಿದ ಹೆಚ್ಚುಗಾರಿಕೆ ನಿಮ್ಮದು. ಈ ಕುರಿತು ಹೇಳಿ...
1999ರಲ್ಲಿ ಚೆನ್ನೈಯಲ್ಲಿ ‘ಸಮುದಾಯ ಪ್ರತಿಷ್ಠಾನ’ ಆರಂಭಿಸಿದೆ. ಆಗ ಕಾರ್ಗಿಲ್‌ ಸಮರದ ಬಗ್ಗೆ ಸಾಕಷ್ಟು ಓದಿದ್ದೆ. ಸಂತ್ರಸ್ತರ ವೇದನೆ, ನೋವು ನಿವಾರಣೆಗಾಗಿ ಏನಾದರೂ ಮಾಡಬೇಕು ಎಂಬ ತುಡಿತದಿಂದಾಗಿ ಇಂಥವರಿಗೆ ಸಹಾಯ ಮಾಡಿದೆ. ಟ್ರಸ್ಟ್‌ಗಾಗಿ ಕೆಲ ದಾನಿಗಳು ಮತ್ತು ಸಂಘಟನೆಗಳು ನೀಡಿದ ಹಣವನ್ನು ಬಳಸಿದೆ. ನಾನೂ ಸಂಗೀತ ಕಛೇರಿಗಳನ್ನು ಏರ್ಪಡಿಸಿ ನಿಧಿ ಸಂಗ್ರಹ ಮಾಡಿದೆ. ಇದರಲ್ಲಿ ಏನೋ ಒಂದು ವಿಧದ ಸಂತೃಪ್ತಿ ಕಂಡಿದ್ದೇನೆ. 

*ಪ್ರತಿಷ್ಠಿತ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಲಿದ್ದೀರಿ. ಈ ಸಂತಸದ ಕ್ಷಣದಲ್ಲಿ ನಿಮ್ಮ ಅನಿಸಿಕೆ ಏನು?
ನಾನು ಹುಟ್ಟಿ, ಶಾಲೆಗೆ ಹೋದ ಊರಿನಲ್ಲಿ ಇಂಥ ಪ್ರತಿಷ್ಠಿತ ಪ್ರಶಸ್ತಿ ಪಡೆಯುವುದು ಹೆಮ್ಮೆ ಎನಿಸಿದೆ. ಇಲ್ಲಿ ಕಳೆದ ಪ್ರತಿಕ್ಷಣವೂ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದೆ. ಕಳೆದ ಕೆಲ ವರ್ಷಗಳಿಂದ ಈ ಪ್ರಶಸ್ತಿಯನ್ನು ಅನೇಕ ಸಂಗೀತ ವಿದ್ವಾಂಸರು ಪಡೆದಿದ್ದಾರೆ. ಈ ವರ್ಷ ನನಗೆ ಬಂದಿರುವುದು ‘ವೆರಿ ಸ್ಪೆಷಲ್‌...’ ಎನಿಸಿದೆ.

ಸಾಮಗಾನ ಮಾತಂಗ ಪ್ರಶಸ್ತಿ
ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿಯನ್ನು ಶಾಸ್ತ್ರೀಯ ಸಂಗೀತದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ವಾಂಸರಿಗೆ ನೀಡಲಾಗುತ್ತದೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಡಾ.ಬಾಲಮುರಳಿಕೃಷ್ಣ ಅವರು ಮೊದಲ ಪ್ರಶಸ್ತಿಗೆ (2011) ಭಾಜನರಾಗಿದ್ದರು. ಆರ್‌.ಕೆ.ಶ್ರೀಕಂಠನ್‌ (2012), ಜಸ್‌ರಾಜ್‌ (2013), ನೇದನೂರಿ ಕೃಷ್ಣಮೂರ್ತಿ (2014), ಕದ್ರಿ ಗೋಪಾಲನಾಥ್‌ (2015) ಹರಿಪ್ರಸಾದ್‌ ಚೌರಾಸಿಯಾ (2016) ಈ ಹಿಂದೆ ‘ಸಾಮಗಾನ’ ಗೌರವಕ್ಕೆ ಪಾತ್ರರಾದವರು. ಈ ಪ್ರಶಸ್ತಿ ಮುಡಿಗೇರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಸುಧಾ ರಘುನಾಥನ್‌ (2017) ಅವರದು.

ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್‌ಬಂದಿ: ಚಿತ್ರವೀಣಾ– ಎನ್‌.ರವಿಕಿರಣ್‌, ಕೊಳಲು– ಶಶಾಂಕ್‌ ಸುಬ್ರಹ್ಮಣ್ಯ, ಮೃದಂಗ– ಪತ್ರಿ ಸತೀಶ್‌ ಕುಮಾರ್‌, ತಬಲಾ– ಶುಭಾಂಕರ್‌ ಬ್ಯಾನರ್ಜಿ, ಆಯೋಜನೆ– ಭಾರತೀಯ ಸಾಮಗಾನ ಸಭಾ, ಸ್ಥಳ: ಚೌಡಯ್ಯ ಮೆಮೊರಿಯಲ್‌ ಸಭಾಂಗಣ, ವೈಯಾಲಿಕಾವಲ್‌, ಬುಧವಾರ (ಫೆ.15) ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT