ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನುನೊಣದ ರಕ್ಷಣೆಯಲ್ಲಿ ನಮ್ಮ ಹಿತ

ಚರ್ಚೆ
Last Updated 14 ಫೆಬ್ರುವರಿ 2017, 20:15 IST
ಅಕ್ಷರ ಗಾತ್ರ
ಜೇನುನೊಣಗಳ  ಮಹತ್ವ ಕುರಿತು ಡಾ. ರಾಜೇಗೌಡ ಹೊಸಹಳ್ಳಿ ಅವರು ಪ್ರಸ್ತಾಪಿಸಿರುವುದು (ಸಂಗತ, ಜ. 27) ಇಂದಿನ ಸಂದರ್ಭದಲ್ಲಿ ಹೆಚ್ಚು ಸೂಕ್ತ. ವಿವಿಧ ಕಾರಣಗಳಿಂದ ಜೇನುನೊಣಗಳನ್ನು ಕೊಲ್ಲುವ ಪ್ರವೃತ್ತಿ ಹೆಚ್ಚುತ್ತಿದೆ. ಕೃಷಿಯಲ್ಲಿ ಬಳಸುವ ಅಗಾಧವಾದ ರಾಸಾಯನಿಕ ಸಿಂಪಡಣೆಯಿಂದ ಅವು ಸಾವನ್ನಪ್ಪುತ್ತಿವೆ.
 
ಜೇನು ಕುಟುಂಬಗಳಿಗೆ ಬೆಂಕಿ ಇಟ್ಟು ಜೇನು ಕೀಳುವ ಅವೈಜ್ಞಾನಿಕ ಪದ್ಧತಿ ಅನುಸರಿಸುವವರಿಗೆ ಆ ಜ್ವಾಲೆಯಲ್ಲಿ ಜೇನುನೊಣ ಮತ್ತು ಅವುಗಳ ಮರಿಗಳು ಸಾಯುವುದು ಅರಿವಿಗೇ ಬರುವುದಿಲ್ಲ. ಪಟ್ಟಣಗಳಲ್ಲಿ ಕಟ್ಟಡಗಳ ಆಶ್ರಯದಲ್ಲಿ ಗೂಡು ಕಟ್ಟುವ ಹೆಜ್ಜೇನುಗಳನ್ನು ರಾಸಾಯನಿಕ ಸಿಂಪಡಿಸಿ ಕೊಲ್ಲುತ್ತಾರೆ. ಕೆಲವು ವರದಿಗಳ ಪ್ರಕಾರ, ಮೊಬೈಲ್ ತರಂಗಗಳು ಅನೇಕ ಪ್ರಾಣಿ-ಪಕ್ಷಿಗಳ ಸಂತತಿ  ಮೇಲೆ, ಮುಖ್ಯವಾಗಿ ಗುಬ್ಬಚ್ಚಿಗಳು ಮತ್ತು ಜೇನುನೊಣಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ವಿಜ್ಞಾನಿ ಐನ್‌ಸ್ಟೀನ್ ಹೇಳಿದಂತೆ ‘ಜೇನುನೊಣಗಳ ಸಂತತಿ ನಶಿಸಿ, ಮನುಕುಲ ತನ್ನ ನಾಶಕ್ಕೆ ಸ್ವತಃ ಮುನ್ನುಡಿ ಬರೆದುಕೊಂಡಂತೆ’.
 
ಕೀಟ ಪ್ರಭೇದಗಳಲ್ಲಿ ಅತ್ಯಂತ ಕ್ರಿಯಾಶೀಲ ಕರ್ಮಜೀವಿಗಳೆಂದರೆ ಜೇನುನೊಣಗಳು. ಅವು ಸಂಘಜೀವಿಗಳು. ಕುಟುಂಬ ಬಂಧನದಲ್ಲಿ ರಾಣಿ ನೊಣ ತಾಯಿಯಂತೆ ಉಸ್ತುವಾರಿ ವಹಿಸಿಕೊಂಡು, ಕೆಲಸಗಾರ ನೊಣಗಳು ಮತ್ತು ಗಂಡು ನೊಣಗಳ ಜೊತೆ ಸಹಬಾಳ್ವೆ ನಡೆಸುತ್ತದೆ. ಕುಟುಂಬ ಶುಚಿತ್ವ, ಗೂಡು ಕಟ್ಟುವುದು, ಆಹಾರ ಸಂಗ್ರಹ, ಮರಿ ಹುಳುಗಳ ಆರೈಕೆ, ಶತ್ರುಗಳ ಮೇಲೆ ದಾಳಿ... ಹೀಗೆ ಕುಟುಂಬದ ಎಲ್ಲ ಕೆಲಸ ಕಾರ್ಯಗಳು ಕೆಲಸಗಾರ ನೊಣಗಳದ್ದೇ.
 
ಅನೇಕರು ತಿಳಿದುಕೊಂಡಂತೆ ಜೇನುನೊಣಗಳೆಂದರೆ ಕೇವಲ ಒಂದೇ ಜಾತಿಯವಲ್ಲ. ಅವುಗಳಲ್ಲಿ ಅನೇಕ ಪ್ರಭೇದಗಳಿದ್ದು ಭಾರತದಲ್ಲಿ ಹೆಜ್ಜೇನು, ಕಡ್ಡಿಜೇನು, ತುಡುವೆ ಜೇನು, ಮೆಲ್ಲಿಪೆರಾ ಜೇನು ಮತ್ತು ನಸರು ಜೇನುನೊಣಗಳನ್ನು ಕಾಣಬಹುದು. ಹೆಜ್ಜೇನು ಮತ್ತು ಕಡ್ಡಿಜೇನನ್ನು ಹೊರತುಪಡಿಸಿ ಉಳಿದ ಜೇನುನೊಣಗಳು ಸಾಕಲು ಯೋಗ್ಯವಾದವು. ಎತ್ತರದ ಕಟ್ಟಡಗಳು, ಟವರ್, ದೊಡ್ಡ ಮರಗಳ ರೆಂಬೆಗಳಲ್ಲಿ ಹೆಜ್ಜೇನು ಗೂಡು ಕಟ್ಟಿದರೆ, ಬೇಲಿಯ ಪೊದೆ, ಕಿರಿದಾದ ಗಿಡ ಮರಗಳಲ್ಲಿ ಕಡ್ಡಿ ಜೇನಿನ ಗೂಡುಗಳನ್ನು ಕಾಣಬಹುದು. ತುಡುವೆ ಮತ್ತು ನಸರು ಜೇನುಗಳು ಹುತ್ತ, ಪೊಟರೆಗಳು, ಕಲ್ಲು ಸಂದುಗಳಲ್ಲಿ, ಕತ್ತಲಿನ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ. ಮೆಲ್ಲಿಪೆರಾ ಜೇನುನೊಣ ವಿದೇಶದಿಂದ ಆಮದು ಮಾಡಿಕೊಂಡಿರುವ ಪ್ರಭೇದ. ತುಡುವೆ, ಮೆಲ್ಲಿಪೆರಾ ಮತ್ತು ನಸರು ಪ್ರಭೇದಗಳು ಪೆಟ್ಟಿಗೆಯಲ್ಲಿಟ್ಟು ಸಾಕಬಹುದಾದ ‘ರೈತಸ್ನೇಹಿ’ ಜೇನುನೊಣಗಳು.
 
ಜೇನುನೊಣಗಳಿಂದ ಹಲವು ಬಗೆಯ ಉಪಯೋಗಗಳನ್ನು ಕಾಣಬಹುದಾಗಿದೆ. ಜೇನುತುಪ್ಪ ಪ್ರಮುಖವಾದ ಉತ್ಪನ್ನವಾದರೆ, ಜೇನುವಿಷ, ರಾಜಶಾಯಿ ರಸ, ಜೇನು ಪರಾಗ, ಜೇನು ಅಂಟು, ಮೇಣದಂಥ  ಉತ್ಪನ್ನಗಳನ್ನು ಸಹ ಪಡೆಯಬಹುದು. ಇವು ತಮ್ಮಲ್ಲಿರುವ ಔಷಧೀಯ ಗುಣಗಳಿಂದ ಹೆಚ್ಚಿನ ಮೌಲ್ಯ ಹೊಂದಿವೆ. ಆದರೆ ಭಾರತದಲ್ಲಿ ಜನ ಕೇವಲ ಜೇನುತುಪ್ಪಕ್ಕೆ ಜೋತು ಬಿದ್ದಿದ್ದು, ಇತರ ಉತ್ಪನ್ನಗಳ ಮೇಲೆ ಅಸಡ್ಡೆಯ ಧೋರಣೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಜೇನುನೊಣಗಳು ನಡೆಸುವ ಪರಾಗಸ್ಪರ್ಶದ ಸೇವೆಯನ್ನು ಸಹ ಮರೆತಿದ್ದಾರೆ!
 
ಜೇನುನೊಣಗಳು ಹೂಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ ಗೂಡಿನಲ್ಲಿ ಶೇಖರಿಸುತ್ತವೆ. ಈ ರೀತಿ ಹೂಗಳಿಂದ ಹೂಗಳನ್ನು ಅವು ಸಂದರ್ಶಿಸುವಾಗ ತಮಗೆ ತಿಳಿಯದಂತೆಯೇ ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುತ್ತವೆ. ಈ ರೀತಿಯ ಪರಕೀಯ ಪರಾಗಸ್ಪರ್ಶದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚು ಇಳುವರಿ ಸಾಧ್ಯ. ಕಾಯಿ ಕಟ್ಟುವಿಕೆ, ಹಣ್ಣುಗಳ ಗಾತ್ರ, ಬೀಜಗಳ ಸಂಖ್ಯೆ, ಬೀಜಗಳ ತೂಕ, ಸದೃಢ ಆಕಾರದಂಥ ಫಲಿತಾಂಶವನ್ನು ಕಾಣಬಹುದು.
 
ಸೌತೆ, ಕುಂಬಳ, ಕಾಫಿ, ಸೂರ್ಯಕಾಂತಿ, ನೇರಳೆ, ಸೇಬು, ಹುಚ್ಚೆಳ್ಳು, ಎಳ್ಳು, ಮಾವು, ತೆಂಗು, ಏಲಕ್ಕಿ, ಸಾಸಿವೆಯಂಥ ಬೆಳೆಗಳ ಪರಾಗಸ್ಪರ್ಶಕ್ಕಾಗಿ ಜೇನುನೊಣಗಳು ಬೇಕು. ಇದನ್ನು ತಿಳಿದ ಕೆಲವು ರೈತರು ಜೇನು ಪೆಟ್ಟಿಗೆಗಳನ್ನು ತಮ್ಮ ಹೊಲ, ತೋಟಗಳಲ್ಲಿಟ್ಟು ಜೇನುಕೃಷಿ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಪ್ರಪಂಚದಲ್ಲಿ ಸುಮಾರು 3.52 ಲಕ್ಷ ಸಸ್ಯ ಸಂಪತ್ತಿದ್ದು ಅವುಗಳಲ್ಲಿ ಶೇ 87.5ರಷ್ಟು ಸಸ್ಯ ಪ್ರಭೇದಗಳು ಪರಾಗಸ್ಪರ್ಶಕ್ಕಾಗಿ ಜೇನುನೊಣ ಮತ್ತು ಇತರ ಕೀಟಗಳ ಮೇಲೆ ಅವಲಂಬಿತವಾಗಿವೆ. ಇವುಗಳಲ್ಲಿ 107 ಬಗೆಯ ಆಹಾರ ಸಸ್ಯ ಪ್ರಭೇದಗಳಿದ್ದು, 91 ಪ್ರಭೇದಗಳ ಪರಾಗಸ್ಪರ್ಶಕ್ಕೆ ಜೇನುನೊಣಗಳು ಅವಶ್ಯ.
 
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ)  ಆವರಣದಲ್ಲಿರುವ ದೊಡ್ಡ ಆಲದಮರವು 300ಕ್ಕೂ ಹೆಚ್ಚು ಹೆಜ್ಜೇನು ಕುಟುಂಬಗಳಿಗೆ ಆಶ್ರಯ ನೀಡುತ್ತಿದ್ದ ಕಾಲವೊಂದಿತ್ತು. ಈ ಪ್ರದೇಶದ ಸುತ್ತಮುತ್ತ ಬೆಳೆದಿದ್ದ ಸಾವಿರಾರು ಎಕರೆಯ ನೀಲಗಿರಿ ಹೂವುಗಳಿಗಾಗಿ ಅವು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೂ ಜಿಕೆವಿಕೆಗೆ ಮುತ್ತಿಗೆ ಹಾಕುತ್ತಿದ್ದವು. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ, ನೀಲಗಿರಿ ತೋಪುಗಳನ್ನು ಕತ್ತರಿಸಿದ್ದರಿಂದ ಹಾಗೂ ಸುತ್ತಮುತ್ತಲ ಪ್ರದೇಶ ಕಟ್ಟಡಗಳಿಂದ ಆಕ್ರಮಿಸಿದ ಪರಿಣಾಮವಾಗಿ ಈ ಆಲದ ಮರದಲ್ಲಿ ಸದ್ಯ ಇರುವ ಹೆಜ್ಜೇನು ಗೂಡುಗಳ ಸಂಖ್ಯೆ ಕೇವಲ 20. ಅದೇ ರೀತಿ ಹೊಸಕೋಟೆ ಬಳಿಯ ರಾಮಗೋವಿಂದಪುರ ಹಳ್ಳಿಯು ಸೆಪ್ಟೆಂಬರ್- ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಹೆಜ್ಜೇನು ಕುಟುಂಬಗಳಿಂದ ಕೂಡಿರುತ್ತಿತ್ತು. ಈಗ ಅಲ್ಲಿಯೂ ಇವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ. ಜೇನುನೊಣಗಳ ಸಂಖ್ಯೆ ಇಳಿಮುಖವಾಗುವುದಕ್ಕೆ ಕಾರಣಗಳನ್ನು ಬಿಡಿಸಿ ಹೇಳಬೇಕಾಗಿಲ್ಲ. 
 
ದೇಶದ ಕಾನೂನು, ಜೇನುನೊಣಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. ಜೇನುನೊಣಗಳಿಗೆ ಆಶ್ರಯ ನೀಡುವ ಮತ್ತು ಆಹಾರ ಒದಗಿಸುವ ಸಸ್ಯ ಸಂಪತ್ತನ್ನು ಸಂರಕ್ಷಿಸಬೇಕು. ಅದಲ್ಲದೆ ಜೇನುನೊಣಗಳ ಮೇಲೆ ಹೆಚ್ಚೆಚ್ಚು ಸಂಶೋಧನೆಗೆ ಒತ್ತು ನೀಡುವ ಯೋಜನೆಗಳು ಸರ್ಕಾರದಿಂದ ಪ್ರಕಟಗೊಳ್ಳಬೇಕು. ಯಾವ ಭಯವೂ ಇಲ್ಲದೆ ಜೇನು ಕುಟುಂಬಗಳನ್ನು ಬೆಂಕಿ ಇಟ್ಟು ಸುಡುವ ಜನರಿಗೆ ಶಿಕ್ಷೆಯಾಗಬೇಕು. 
 
ಜನರಲ್ಲಿ ಜೇನುನೊಣಗಳ ಬಗ್ಗೆ ಅರಿವು ಮೂಡಿಸುವ ಆಂದೋಲನ ಕಟ್ಟಬೇಕಾದ ತುರ್ತು ಈಗ ರೈತರು ಮತ್ತು ವಿಜ್ಞಾನಿಗಳ ಮುಂದಿದೆ. ‘ಜೇನುನೊಣಗಳ ಸಂರಕ್ಷಣೆಯಲ್ಲಿದೆ ಮನುಕುಲದ ರಕ್ಷಣೆ’ ಎಂಬ ಧ್ಯೇಯ ಎಲ್ಲೆಡೆ ಪಸರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT