ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಮಾನಿಕ ಲೋಕ’ದಲ್ಲಿ ದೇಸಿ ಪಾರುಪತ್ಯ

ನೀಲಗಗನದಲಿ ಉಕ್ಕಿನ ಹಕ್ಕಿಗಳ ಕರಾಮತ್ತು *ಮೈನವಿರೇಳಿಸಿದ ತೇಜಸ್ ಕಸರತ್ತು *ಸಾರಂಗ್‌ ಪಡೆಯ ರಂಗಿನಾಟ
Last Updated 15 ಫೆಬ್ರುವರಿ 2017, 4:51 IST
ಅಕ್ಷರ ಗಾತ್ರ
ADVERTISEMENT
ಬೆಂಗಳೂರು: ಯಲಹಂಕದಲ್ಲಿ ಮಂಗಳವಾರ ಆರಂಭಗೊಂಡ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ ಉಕ್ಕಿನ ಹಕ್ಕಿಗಳು ನೀಲಿ ಬಾನಿನಲ್ಲಿ ತೋರಿದ ಕಸರತ್ತು ವಾಯುಪಡೆಯಲ್ಲಿ ದೇಸಿ ಸಾಮರ್ಥ್ಯ ವರ್ಧನೆಗೆ ಕನ್ನಡಿ ಹಿಡಿಯಿತು. 
 
ಈ ಬಾರಿಯ ಪ್ರದರ್ಶನದ ಮೊದಲ ದಿನ ವಿದೇಶಿ ವಿಮಾನಗಳಿಗಿಂತ  ದೇಸಿ  ತಂತ್ರಜ್ಞಾನ ಬಳಸಿ ನಿರ್ಮಿಸಿದ ವಿಮಾನ ಹಾಗೂ ಹೆಲಿಕಾಪ್ಟರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದವು. 
 
ನಗರದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಂಸ್ಥೆ ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಲಘು  ಉಪಯೋಗಿ ಹೆಲಿಕಾಪ್ಟರ್‌ (ಎಲ್‌ಯುಎಚ್‌), ವಾಯುಪಡೆಗೆ ಸೇರ್ಪಡೆಗೊಂಡ ಏರ್‌ಬೋರ್ನ್‌ ಅರ್ಲಿ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಮ್‌ (AEW&CS) ಅಳವಡಿಸಿದ ಎಂಬ್ರಿಯರ್‌ ವಿಮಾನ ಮೊದಲ ಬಾರಿಗೆ  ಪ್ರದರ್ಶನದಲ್ಲಿ ಪಾಲ್ಗೊಂಡವು.
 
ಅಡ್ಡ ಚಲಿಸುವ ಎಲ್‌ಯುಎಚ್‌: ಎಲ್‌ಯುಎಚ್‌ಗಳಿಗೆ  ದೇಸಿ ತಂತ್ರಜ್ಞಾನ ಬಳಸಿ ತಯಾರಿಸಿದ ಸಿಂಗಲ್‌ ಟರ್ಬೊ ಶಾಫ್ಟ್‌ ಎಂಜಿನ್‌ ಅಳವಡಿಸಲಾಗಿದೆ. ಸೀಮಿತ ಸ್ಥಳಾವಕಾಶದಲ್ಲೂ ನಿಲುಗಡೆ ಮಾಡಲು ಯೋಗ್ಯವಾಗುವಂತೆ ಹಾಗೂ  ಸರಕು ಸಾಗಣೆಗೆ ಅನುಕೂಲವಾಗುವಂತೆ ಈ ಹೆಲಿಕಾಪ್ಟರ್‌ಗಳನ್ನು ರೂಪಿಸಲಾಗಿದೆ. ತೊಟ್ಟಿಲು ತೂಗುವಂತೆ ಅಡ್ಡವಾಗಿ ಚಲಿಸುವುದು ಈ ಹೆಲಿಕಾಪ್ಟರ್‌ಗಳ ವಿಶೇಷ. ಮೊದಲ ಪ್ರದರ್ಶನದಲ್ಲೇ  ಈ ಹೆಲಿಕಾಪ್ಟರ್‌ಗಳ ಚಮತ್ಕಾರ ಗಮನ ಸೆಳೆಯುವಂತಿತ್ತು. 
 
ಉಕ್ಕಿನ ಹಕ್ಕಿಗಳ ಕಸರತ್ತು: ಎಲ್‌ಸಿಎಚ್‌: ರಾಕೆಟ್‌ ಪುಲ್ಲರ್‌ ತಂತ್ರಜ್ಞಾನದಿಂದ ಚಲಿಸುವ ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌) ಹೊಗೆಯುಗುಳುತ್ತಾ ನೀಡಿದ ಪ್ರದರ್ಶನ ಮನಮೋಹಕವಾಗಿತ್ತು. ಆಕಾಶದಲ್ಲೇ ನಿಂತು, ಒಮ್ಮೆ ಮೂತಿ ಕೆಳಗೆ ಮಾಡಿ ಮೇಲ್ಮುಖವಾಗಿ ಜಿಗಿದು, ಎಡಕ್ಕೆ ಸರಿದು, ಇನ್ನೊಮ್ಮೆ ಬಲಕ್ಕೆ ಚಲಿಸಿ, ಮಗದೊಮ್ಮೆ ಕೆಳಕ್ಕೆ ಇಳಿಯುವ ಮೂಲಕ ಈ ಹೆಲಿಕಾಪ್ಟರ್‌ ನಾನಾ ರೀತಿಯ ಕಸರತ್ತು ಪ್ರದರ್ಶಿಸಿತು.  
 
ಎಚ್‌ಎಎಲ್‌ ಇದರ ಸುಧಾರಿತ ಆವೃತ್ತಿಯಾದ  ಇಂಡಿಯನ್‌ ಮಲ್ಟಿ ರೋಲ್‌ ಹೆಲಿಕಾಪ್ಟರ್‌ (ಇಎಂಆರ್‌ಎಚ್‌) ಸಿದ್ಧಪಡಿಸುತ್ತಿದೆ. 
 
ಮೂರು ಲಘು ಸಮರ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್‌) ಮೂರು ಸಾಲುಗಳಲ್ಲಿ ಸಮಾನಾಂತರವಾಗಿ  ಸಾಗಿಬಂದ ಬೆನ್ನಲ್ಲೇ ಡಾರ್ನಿಯರ್‌ ವಿಮಾನ, ಲಘು ಯುದ್ಧ ವಿಮಾನ ತೇಜಸ್‌  ಸಾಗಿ ಬಂತು.
 
ಹಾಕ್‌ ಮಾರ್ಕ್‌ 1 ಯುದ್ಧ ವಿಮಾನಗಳು ತಾಸಿಗೆ 400  ಕಿ.ಮೀ ವೇಗದಲ್ಲಿ ಹಾರಿ ಬಂದು ನೆಲವನ್ನು ಸ್ಪರ್ಶಿಸಿತು. 
 
ಎಚ್‌ಎಎಲ್‌ ಅಭಿವೃದ್ಧಿಪಡಿಸಿದ ಟರ್ಬೊ ಟ್ರೈನರ್‌–40 ತರಬೇತಿ  ವಿಮಾನ ಒಮ್ಮೆಲೆ ಮೇಲಕ್ಕೆ ಹಾರಿ ಗಿರಕಿ ಹೊಡೆಯುತ್ತಾ ಸಾಗಿತು.
 
ತೆರೆದ ಕಾಕ್‌ಪಿಟ್‌ ಹೊಂದಿರುವ ಟೈಗರ್‌ ಮಾತ್‌ ವಿಮಾನದ ಪೈಲೆಟ್‌ ಪ್ರೇಕ್ಷಕರತ್ತ ಕೈಬೀಸುತ್ತಲೇ ಕಸರತ್ತು ಪ್ರದರ್ಶಿಸಿದರು.
 
**
ಶರವೇಗದ ಕಸರತ್ತು
ಸೂಪರ್‌ ಸಾನಿಕ್‌ ಲಘು ಯುದ್ಧ ವಿಮಾನಗಳು ಶರವೇಗದಲ್ಲಿ ಸಾಗುತ್ತಾ ಪ್ರದರ್ಶಿಸಿದ ಪಟ್ಟುಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
 
ಸಂಪೂರ್ಣ ದೇಸಿ ತಂತ್ರಜ್ಞಾನವನ್ನು ಆಧರಿಸಿ ರೂಪುಗೊಂಡ ಲಘು ಯುದ್ಧ ವಿಮಾನ ‘ತೇಜಸ್‌’  ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ ಅರೆಕ್ಷಣದಲ್ಲಿ ನಭದೆತ್ತರಕ್ಕೆ ಹಾರಿತು. ಒಮ್ಮೆ ಶರವೇಗದಲ್ಲಿ ಸಾಗಿ, ಮಗದೊಮ್ಮೆ ನಿಧಾನವಾಗಿ ಸಾಗುತ್ತಾ, ಬುಡಮೇಲಾಗಿ ಚಲಿಸುತ್ತಾ, ಬಿಳಿ ಮೋಡಗಳ ನಡುವೆ ಮರೆಯಾಗಿ, ಆಗಸದಲ್ಲೇ ಉರುಳು ಸೇವೆ ಮಾಡುತ್ತಾ ಈ ವಿಮಾನ ಪ್ರದರ್ಶಿಸಿದ ಕರಾಮತ್ತು ಪ್ರೇಕ್ಷಕರ ಎದೆ ಝಲ್‌ ಎನ್ನುವಂತೆ ಮಾಡಿತು.  
 
ರಷ್ಯಾ ನಿರ್ಮಿತ ಸುಖೋಯ್‌, ಸ್ವೀಡನ್‌ನ  ಗ್ರಿಪೆನ್‌, ಹಾಗೂ ಫ್ರಾನ್ಸ್‌ನ ರಫೇಲ್‌ ವಿಮಾನಗಳು ಭಾರಿ ಸದ್ದು ಮೊಳಗಿಸುತ್ತಾ, ಶರವೇಗದಲ್ಲಿ ಸಾಗುತ್ತಾ ಪ್ರದರ್ಶಿಸಿದ ಕಸರತ್ತುಗಳು   ಚೇತೋಹಾರಿಯಾಗಿದ್ದವು. 
 
ಒಮ್ಮೆಲೇ ರಾಕೆಟ್‌ನಂತೆ ಎತ್ತರಕ್ಕೆ ಚಲಿಸಿ ಏಕಾಏಕಿ ಕೆಳಕ್ಕೆ ಹಾರಿ,  ತಕ್ಷಣ ಗಿರಕಿ ಹೊಡೆಯುತ್ತಾ ಕೆಳಕ್ಕೆ ಹಾರಿ, ಇನ್ನೊಮ್ಮೆ ತಲೆ ಕೆಳಗಾಗಿ ಚಲಿಸುವ ಮೂಲಕ ವೈವಿಧ್ಯಮಯ ಚಿತ್ರ ಬಿಡಿಸಿದ ಈ ವಿಮಾನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
 
**
‘ಸೂರ್ಯಕಿರಣ’ಗಳ ಮೆರವಣಿಗೆ 
ಕಳೆದ ಎರಡು ಪ್ರದರ್ಶನಗಳನ್ನು ತಪ್ಪಿಸಿಕೊಂಡ ಭಾರತೀಯ ವಾಯುಪಡೆಯ ‘ಸೂರ್ಯಕಿರಣ’ ತಂಡ ಈ ಬಾರಿ ಆಗಸದಲ್ಲಿ ಮತ್ತೆ ಮೆರವಣಿಗೆ ನಡೆಸಿದವು.  
 
ಒಟ್ಟಾಗಿ ಸಾಗಿ ಬಂದ ಆರು ವಿಮಾನಗಳು ಬಾನಂಗಳದಲ್ಲಿ ವಿವಿಧ ವಿನ್ಯಾಸಗಳನ್ನು ರೂಪಿಸುವ ಮೂಲಕ ಮೈನವಿರೇಳಿಸುವ ಪ್ರದರ್ಶನ ನೀಡಿದವು.  ಒಮ್ಮೆ ಒಂದು ವಿಮಾನ ಮುಂದೆ, ಐದು ವಿಮಾನಗಳು ಹಿಂದೆ, ಮಗದೊಮ್ಮೆ ಮೂರು ಸಾಲುಗಳಲ್ಲಿ  ಸಾಗಿದವು. ಈ ತಂಡದ 500ನೇ ಪ್ರದರ್ಶನ ಇದಾಗಿದೆ.
 
ರಂಗುರಂಗಿನ ಸಾರಂಗಗಳ ನರ್ತನ: ಭಾರತೀಯ ವಾಯುಪಡೆಯ ಸಾರಂಗ್‌ ತಂಡದ ಹೆಲಿಕಾಪ್ಟರ್‌ಗಳ ರಂಗಿನಾಟ ಚಿತ್ತಾಕರ್ಷಕವಾಗಿತ್ತು. ನಾಲ್ಕು ವರ್ಣರಂಜಿತ ಹೆಲಿಕಾಪ್ಟರ್‌ಗಳು ಒಮ್ಮೆ ಸಾಲಾಗಿ ಸಾಗಿ, ಮಗದೊಮ್ಮೆ ಜೋಡಿಯಾಗಿ ವಿರುದ್ಧ ದಿಕ್ಕಿನಲ್ಲಿ ಸಾಗಿ ಕೌತುಕ ಸೃಷ್ಟಿಸಿದವು. 
 
ತಿರಂಗದ ರಂಗವಲ್ಲಿ: ಆಗಸದಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ಹೊಗೆಯುಗುಳುತ್ತಾ ಸಾಗಿದ ಸ್ಕ್ಯಾಂಡಿನೇವಿಯನ್‌ ಏರೋಬ್ಯಾಟಿಕ್ಸ್‌ ತಂಡದ ವಿಮಾನಗಳು ಆಗಸದಲ್ಲಿ ತಿರಂಗದ ರಂಗವಲ್ಲಿಯನ್ನೂ ಬರೆದವು.  
 
**
ಉದ್ಘಾಟನೆ ವೇಳೆ ಕೈಕೊಟ್ಟ ವಿದ್ಯುತ್‌
ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದಾಗ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. 51 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ  ಈ ಕಾರ್ಯಕ್ರಮದಲ್ಲಿ  ಉಂಟಾದ ಈ ಲೋಪ ಪೂರ್ವಸಿದ್ಧತೆಯ  ಕೊರತೆಯನ್ನು ಜಾಹೀರು ಮಾಡಿತು.  ಕಾರ್ಯಕ್ರಮ ಆರಂಭವಾಗುತ್ತಲೇ ಮೈಕ್‌ ವ್ಯವಸ್ಥೆಯೂ ಕೈಕೊಟ್ಟಿತು. ರಕ್ಷಣಾ ಸಚಿವರ ಸಮ್ಮುಖದಲ್ಲೇ ಎದುರಾದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ, ಕಾರ್ಯಕ್ರಮದ ಉಸ್ತುವಾರಿ ಹೊತ್ತ ಅಧಿಕಾರಿಗಳು ಗಲಿಬಿಲಿಗೊಳಗಾದರು.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT