ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಮಂಪರು ಪರೀಕ್ಷೆ ನಡೆಸಿ

ಸೌಜನ್ಯ ಕೊಲೆ ಪ್ರಕರಣ: ಪೋಷಕರ ಆಗ್ರಹ l ನ್ಯಾಯ ಸಿಗುವ ಆಶಾಭಾವ
Last Updated 14 ಫೆಬ್ರುವರಿ 2017, 19:52 IST
ಅಕ್ಷರ ಗಾತ್ರ
ಮಂಗಳೂರು: ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಹೆಚ್ಚಿನ ತನಿಖೆ ನಡೆಸುವಂತೆ ನಿಯೋಜಿತ ಸಿಬಿಐ ನ್ಯಾಯಾಲಯ ನಿರ್ದೇಶಿಸಿದ್ದು, ಶಂಕಿತ ಆರೋಪಿಗಳ ಮಂಪರು ಪರೀಕ್ಷೆ ನಡೆಸುವಂತೆ ಸೌಜನ್ಯಳ ಪೋಷಕರು ಆಗ್ರಹಿಸಿದ್ದಾರೆ. 
 
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ತಂದೆ ಚಂದಪ್ಪಗೌಡ, ಸಿಬಿಐ ನ್ಯಾಯಾಲಯ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳಿದೆ. ಈ ಮೂಲಕ ನ್ಯಾಯಾಲಯದಿಂದ ನ್ಯಾಯ ಸಿಗುವ ಆಶಾಭಾವನೆ ಇದೆ ಎಂದರು. 
 
ಸೌಜನ್ಯ ನಾಪತ್ತೆಯಾದ ದಿನ ಸಂಜೆಯಿಂದ ಮಧ್ಯರಾತ್ರಿಯವರೆಗೂ ಧರ್ಮಸ್ಥಳದಲ್ಲಿ ಭಾರಿ ಮಳೆ ಸುರಿದಿತ್ತು. ಆದರೆ, ಸೌಜನ್ಯಳ ಶವದ ಬಳಿ ಇದ್ದ ಶಾಲಾ ಬ್ಯಾಗ್‌, ಪುಸ್ತಕಗಳು, ಧರಿಸಿದ ಬಟ್ಟೆಗಳು ಒದ್ದೆಯಾಗಿರಲಿಲ್ಲ. ಅವಳ ಬಳಿ ಇದ್ದ ಕೊಡೆ ಈವರೆಗೂ ಪತ್ತೆಯಾಗಿಲ್ಲ. ಇಂತಹ ಹಲವಾರು ಸಂಶಯಗಳು ಇನ್ನೂ ನಿವಾರಣೆ ಆಗಿಲ್ಲ ಎಂದು ಹೇಳಿದರು.  ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಶಂಕಿತ ಆರೋಪಿಗಳೇ, ಮಾನಸಿಕ ಅಸ್ವಸ್ಥನೊಬ್ಬನನ್ನು ಹಿಡಿದು, ಆತನೇ ಆರೋಪಿ ಎಂದು ಬಿಂಬಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು, ವೈದ್ಯಾಧಿಕಾರಿಗಳು, ಎಲ್ಲ ಸಾಕ್ಷಿ ನಾಶ ಮಾಡಿದ್ದಾರೆ. ಆದರೆ, ಈ ರೀತಿ ಸಾಕ್ಷಿ ನಾಶ ಮಾಡಲು ಒತ್ತಡ ತಂದವರು ಯಾರು ಮತ್ತು ಯಾರನ್ನು ರಕ್ಷಣೆ ಮಾಡಲು ಈ ರೀತಿ ಮಾಡಲಾಗಿದೆ ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ ಎಂದು ದೂರಿದರು. 
 
ಸೌಜನ್ಯ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ನಿಯೋಜಿತ ಸಿಬಿಐ ನ್ಯಾಯಾಲಯದಲ್ಲಿ ಈವರೆಗೆ ನಮ್ಮ ನೋವಿಗೆ ಸ್ಪಂದನೆ ಸಿಕ್ಕಿದೆ.
 
ಇಲ್ಲಿ ನ್ಯಾಯ ಸಿಗುವ ಆಶಾಭಾವನೆ ಮೂಡಿದೆ ಎಂದ ಅವರು, ಹೆಚ್ಚಿನ ತನಿಖೆಗೆ ಸಿಬಿಐ ನ್ಯಾಯಾಲಯ ಆದೇಶಿಸಿದ್ದು, ಈಗಲಾದರೂ ಶಂಕಿತ ಆರೋಪಿಗಳ ಮಂಪರು ಪರೀಕ್ಷೆ ನಡೆಸಿದಲ್ಲಿ, ನಿಜವಾದ ಆರೋಪಿಗಳು ಯಾರು ಎಂಬುದು ಸ್ಪಷ್ಟವಾಗಲಿದೆ ಎಂದರು.  ಎಷ್ಟೇ ಬೆದರಿಕೆ ಹಾಕಿದರೂ ಅದೆಲ್ಲವನ್ನು ಎದುರಿಸಿ, ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT